Untitled Document
Sign Up | Login    
Dynamic website and Portals
  
Home >> Movie Home >> Reviews >> ಅಪ್ಪಯ್ಯ
Movie Review
ಅಪ್ಪಯ್ಯ
ಹಳೆ ಬಾಟಲಿ ಹೊಸ ಮದ್ಯದ ಅಂಗಡಿಯಲ್ಲಿ ಏರಿದ ನಶೆ ಇಳಿಸುವ ಕಾಯಕ
Rating :
Hero :
ಶ್ರೀನಗರ ಕಿಟ್ಟಿ
Heroine :
ಭಾಮ
Other Cast :
ಇಂದುಕುಮಾರ್, ಆಶಾರಾಣಿ, ಸುರೇಶ್ ಚಂದ್ರ. ಮುಂತಾದವರು.
Director :
ಎಸ್ ನಾರಾಯಣ್
Music Director :
ಎಸ್ ನಾರಾಯಣ್
Producer :
ಭಾಗ್ಯವತಿ ನಾರಾಯಣ್
Release Date :
13-09-2013
ಹಲವು ಚಿತ್ರಗಳ ನಂತರ ಎಸ್. ನಾರಾಯಣ್‌ರವರು ಒಂದು ಉತ್ತಮ ಚಿತ್ರ ಕೊಡಲು ಪ್ರಯತ್ನಿಸಿದ್ದಾರೆ. ಪ್ರೇಕ್ಷಕರನ್ನು ಚಿತ್ರದ ಮೊದಲ ಫ಼್ರೇಮ್‌ನಿಂದಲೇ ಇನ್ನೊಂದು ಕರಾಳ ದುನಿಯಾದ ಬರಡು ಲೋಕಕ್ಕೆ ಕರೆದೊಯ್ಯುತ್ತಾರೆ. ಅಲ್ಲಿನ ಒಣ ನೆಲದಲ್ಲಿ ಅರಳುವ ಹಸಿ ಪ್ರೇಮವೇ ಅಪ್ಪಯ್ಯ ಚಿತ್ರದ ಕಥಾ ಹಂದರ.

ತಮಿಳಿನ ಪರುತ್ತಿವೀರನ್ ಹಾಗೂ ಕಾದಲ್ (ಕನ್ನಡದ ಚೆಲುವಿನ ಚಿತ್ತಾರ) ಚಿತ್ರದ ಛಾಯೆ ಅಲ್ಲಲ್ಲಿ ಕಂಡರೂ ನೈಜ ನಿರೂಪಣಾ ಶೈಲಿ ಜೊತೆಗೆ ಇಲ್ಲಿನ ಮಣ್ಣಿನ ಸೊಗಡು, ಗ್ರಾಮ್ಯ ಭಾಷೆ ಚಿತ್ರವನ್ನು ಪರಿಣಾಮಕಾರಿಯಾಗಿ ಮೂಡಲು ಸಹಾಯ ಮಾಡುತ್ತವೆ.

ಕಥೆ ಮಾಮೂಲು..ದೇವರಾಜ್ ಮತ್ತು ಜುಂಜೀರಯ್ಯ ಎಂಬ ಎರಡು ಕುಟುಂಬಗಳ ವಂಶ ಪಾರಂಪರ್ಯ ದ್ವೇಷ, ಜಗಳ, ಹೊಡಿಬಡಿ, ಕಡಿದಾಟ. ಅನಾಥನಾಗಿ ಬಿದ್ದಿದ್ದ ಅಪ್ಪಯ್ಯನನ್ನು ಸಾಕಿ ಜೀತದಾಳಾಗಿ ದುಡಿಸಿಕೊಳ್ಳುವ ಮಾಲೀಕ ಜುಂಜೀರಯ್ಯ ಒಂದೆಡೆಯಾದರೆ, ನನ್ನನ್ನು ಸಾಕಿ ಸಲುಹಿದ ಎಂಬ ಒಂದೇ ಕಾರಣಕ್ಕಾಗಿ ಅವನ ಬಳಿ ನಿಯತ್ತಾಗಿ ದುಡಿಯುವ.. ಅವನಿಗಾಗಿ ಪ್ರಾಣ ನೀಡುವ.. ಅವಶ್ಯಕತೆ ಇರಲಿ ಇಲ್ಲದಿರಲಿ ಮಾಲೀಕನಿಗಾಗಿ ವೈರಿ ದೇವರಾಜ ತಂಡದವರ ಪ್ರಾಣ ತೆಗೆಯಲು ಸದಾ ಸಿದ್ದನಾಗಿರುವ ನಾಯಕ ಅಪ್ಪಯ್ಯ ಇನ್ನೊಂದೆಡೆ.

ಒಮ್ಮೆ ಪ್ರಾಣ ಹೋಗುತ್ತಿರುವ ಸಮಯದಲ್ಲಿ ಕಾಪಾಡಿದ ಗೌರಿ ಮೇಲೆ ಪ್ರೀತಿ ಮೂಡುತ್ತದೆ.. ಅವಳಿಗೂ ಇವನ ಪೆದ್ದುತನ ಹಾಗೂ ಅದರ ಜೊತೆಯಲ್ಲಿನ ಒಳ್ಳೆಯತನ ಇಷ್ಟವಾಗಿ ಇವಳೂ ಪ್ರೀತಿಸ ತೊಡಗುತ್ತಾಳೆ. ಅಪ್ಪಯ್ಯನ ಮಾಲೀಕ ಜುಂಜೀರಯ್ಯನ ಕೊಲೆಯಾಗುತ್ತದೆ. ಬದ್ದ ವೈರಿಯಾದ ದೇವರಾಜನೇ ತಾನು ಪ್ರೀತಿಸುತ್ತಿರುವ ಹುಡುಗಿಯ ತಂದೆ ಹಾಗೂ ಅವನೇ ತನ್ನ ಒಡೆಯನನ್ನು ಕೊಲೆಮಾಡಿದವನು ಎಂಬುದು ತಿಳಿದು ನಾಯಕ ಸಂದಿಗ್ಧ ಪರಿಸ್ಥಿತಿಗೆ ಸಿಲುಕುತ್ತಾನೆ. ಅಪ್ಪಯ್ಯನನ್ನು ಸರಿದಾರಿಗೆ ತರಲು ಪ್ರಯತ್ನಿಸುತ್ತಾ ಗೌರಿ. ಪ್ರೀತಿಯ ಕಾರಣ ನೀಡಿ ಎಲ್ಲಾ ದ್ವೇಷ ಹೊಡೆದಾಟಗಳಿಗೆ ಗುಡ್ ಬಾಯ್ ಹೇಳುವನೆ..? ಅಪ್ಪಯ್ಯ.. ಮಗಳನ್ನು ತುಂಬ ಪ್ರೀತಿಸುವ ದೇವರಾಜ್, ಅಪ್ಪಯ್ಯ-ಗೌರಿ ಪ್ರೀತಿಯನ್ನು ಒಪ್ಪಿಕೊಳ್ಳುವರೆ..ಇವರಿಬ್ಬರೂ ಮದುವೆಯಾಗುವರೇ ಎಂಬುದು ಚಿತ್ರದಲ್ಲಿನ ಸಸ್ಪೆನ್ಸ್.

ಚಿತ್ರದಲ್ಲಿ ಮೈನಸ್ ಅಂಶಗಳು ಇಲ್ಲವೆಂದೇನಿಲ್ಲ..
ಮನಕಲಕುವ ದೃಶ್ಯಗಳು ಮನದಾಳಕ್ಕೆ ಇಳಿಯಬೇಕೆನ್ನುವಷ್ಟರಲ್ಲಿ ಧುತ್ತನೆ ಹಾಡು ಪ್ರತ್ಯಕ್ಷವಾಗಿ ಬೇಸರಮೂಡಿಸುತ್ತವೆ. ಹಾಡು ಮತ್ತು ಹಾಸ್ಯ ದೃಶ್ಯಗಳು ಕಥೆಯ ಓಟಕ್ಕೆ ಕಡಿವಾಣ ಹಾಕುತ್ತವೆ.
ಅಪಹಾಸ್ಯ ದೃಶ್ಯಗಳನ್ನು ತುರುಕಿ ನಿರ್ದೇಶಕ ನಾರಾಯಣ್‌ರವರು ಸಕುಟುಂಬ ವರ್ಗದ ಪ್ರೇಕ್ಷಕರನ್ನು ದೂರವಿರಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಕೆಲವು ಕಡೆ ಮಾತ್ರ ಗ್ರಾಮ್ಯ ಭಾಷೆ ಮಾತನಾಡಿ ನಂತರ ಬೆಂಗಳೂರು ಮಾತುಗಳಿಗೆ ಹೊರಳುತ್ತಾರೆ. ಸಂಭಾಷಣೆಯಲ್ಲಿ ಮೊನಚಿರಬೇಕಿತ್ತು.
ಹಿನ್ನೆಲೆ ಸಂಗೀತ ಇನ್ನೂ ಪರಣಾಮಕಾರಿಯಾಗಿ ಬಳಸಬಹುದಿತ್ತು. ಸಂಕಲನ ಚಿತ್ರಕ್ಕೆ ತಕ್ಕಂತಿದೆ. ಹಾಡುಗಳಲ್ಲಿ ಎರಡು ಗುನುಗುವಂತಿದೆ.. ಸಾಹಿತ್ಯವೂ ಚೆನ್ನಾಗಿದೆ.

ಇನ್ನು ನಟನಾ ವಿಭಾಗಕ್ಕೆ ಬಂದರೆ ಭಾಮಾಳ ಅಭಿನಯ ಸೂಪರ್. ಶ್ರೀನಗರ ಕಿಟ್ಟಿಯವರ ಪ್ರಯತ್ನ ಚೆನ್ನಾಗಿದೆ. ಅಪರೂಪಕ್ಕೆ ಎಸ್.ನಾರಾಯಣ್‌ರವರು ನೈಜ ಅಭಿನಯ ತೋರಿದ್ದಾರೆ. ಇಡೀ ಚಿತ್ರದ ಅಚ್ಚರಿಯೆಂದರೆ ಪೋಷಕ ವರ್ಗ. ತಮ್ಮ ಜೀವನ ಕ್ರಮವೇ ಹೀಗೇ ಎನ್ನುವಂತೆ ಇಡೀ ಪೋಷಕ ತಂಡ ಅಧ್ಭುತವಾಗಿ ನಟಿಸಿದ್ದಾರೆ. ಪೋಷಕ ಪಾತ್ರಗಳನ್ನು ಹೇಗೆ ದುಡಿಸಿಕೊಂಡಿದ್ದಾರೆ.

ಛಾಯಾಗ್ರಹಣವೂ ಚಿತ್ರದ ಪ್ಲಸ್ ಪಾಯಿಂಟ್.. ಶಾಟ್ ಡಿವಿಷನ್ ಮತ್ತು ಲೈಟಿಂಗ್ ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಿದೆ. ಬರಡು ನೆಲ ಮತ್ತು ಹಸಿರು ಪ್ರೀತಿಯನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ.

ನಿರ್ದೇಶನದ ಬಗ್ಗೆ ಹೇಳುವುದಾರೆ ಎಸ್. ನಾರಾಯಣ್ ಅವರ ಅಭಿರುಚಿಗೆ ಬದಲಾದ ನೈಜ ಕಥೆಯನ್ನು ಆಯ್ಕೆ ಮಾಡಿ ಅದನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಅಪ್‌ಡೇಟ್ ಆಗಿದ್ದಾರೆ.

ಒಟ್ಟಾರೆಯಾಗಿ ಖಂಡಿತವಾಗಿಯೂ ಈ ಚಿತ್ರ ಒಮ್ಮೆ ನೋಡಲಡ್ಡಿಯಿಲ್ಲ.
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited