Untitled Document
Sign Up | Login    
ನಿಗೂಢ ( 2 )

ಅದೊಂದು ದಿನ, ಆ ದಿನವನ್ನು ನೆನಸಿಕೊಂಡರೇ ಈಗಲೂ ಅವಳ ಮೈ ಜುಂ ಎನ್ನುತ್ತದೆ. ಅದು ಅವಳಿಉ ಬಯಸಿದ್ದಲ್ಲವೆಂದೇನೂ ಅಲ್ಲ. ಆದರೆ ಹಿಂದೆಯೂ ಹಾಗೆ ಮಾಡಿಲ್ಲ ಮುಂದೆಯೂ ಹಾಗೆ ಮಾಡಲಾರೆ ಎಂಬ ಪ್ರಜ್ಞೆಗೆ ಬದ್ಧಳಾಗಿಯೇ ಅವಳಂದು ಸಮ್ಮತಿಸಿದ್ದು. ಆಸೆದ ಪೂರೈಸಿದರೆ ಪೂರೈಸಿಲಿ. ಇಲ್ಲವಾದರೆ ಹೇಗೂ ಮೊದಲಿನ ಬಾಳು. ಇದ್ದಂತೆಯೇ ಇದೆಯಲ್ಲ ಎಂದು.

ಅವಳ ಮಾಸಿಕ ಋತುಚಕ್ರದ ಹನ್ನೆರಡೋ ಹದಿಮೂರನೆಯದೊ ದಿನ ನಾರಾಯಣ ಪೇಟೆಗೆ ಅಡಿಕೆ ತೆಗೆದುಕೊಂಡು ಹೋದದ್ದು ಮರಳುವದು ಮರುದಿನವೆಂದು ಖಚಿತವಾಗಿ ಗೊತ್ತಿತ್ತು. ಕುಂತಿ ಪಾಂಡವರನ್ನು ಪಡೆದದ್ದಾಗಲಿ, ವೇದವ್ಯಾಸರಿಂದ ಚಿತ್ರವೀರ್ಯ, ವಿಚಿತ್ರವೀರ್ಯ, ವಿದುರರು ಜನಿಸಿದ್ದಾಗಲಿ ನಿಯೋಗ ಪದ್ಧತಿಯಿಂದಲೇ ಎಂಬುದು ಭಾರತ ರಾಮಾಯಣಗಳನ್ನು ಚಿಕ್ಕಂದಿನಲ್ಲಿಯೇ ಓದಿದ ಅವಳಿಗೆ ಗೊತ್ತಿದ್ದದ್ದೇ. ಅಲ್ಲದೇ ಯಕ್ಷಗಾನ ಬಯಲಾಟ, ಜಾಗರಣೆಗಳ ತವರೂರಾದ ಬಡಗು-ತೆಂಕುನಾಡಿನಲ್ಲಿ ಅದನ್ನು ರಾತ್ರಿಯಿಡೀ ಕುಳಿತು ನೋಡದ- ಕೇಳದ ಜನ ಕಮ್ಮಿಯೇ. ತಾನು ಮಾಡುತ್ತಿರುವ ಕೆಲಸಕ್ಕೆ ನಿಯೋಗ ಪದ್ಧತಿಯ ಆತ್ಮಸಾಕ್ಷಿಯೊಂದು ಅವಳಲ್ಲಿ ತಾಯ್ತನದ ಹೆಬ್ಬಯಕೆಯ ಅನಿವಾರ್ಯ ಹಂತದಲ್ಲಿ ನೆಲೆಗೊಂಡಿತ್ತು. ಬಂಜೆಯೆನ್ನುವ ಅವಹೇಳನ ಕೀಳು – ಸ್ಥಾನಮಾನಗಳಿಂದಾಗಿ ಬೆಂದು ಹೋದ ಮನಸ್ಸು ತನ್ನನ್ನು ತಾನು ತೆರೆದುಕೊಳ್ಳಲು ಸಿದ್ಧವಾಗಿತ್ತು. ರಸಿಕನಾದ ಶಂಕರಭಾವನಂತೂ ಒಂಚೂರು ಅವಕಾಶವಿತ್ತರೆ- ಗೇಣುಕೊಟ್ಟರೆ ಮೊಳನುಂಗುವ ಹಾಗೆ – ಯಾವಾಗಲೂ ವರ್ತಿಸುತ್ತಿರುವುದು ಅವಳಿಗೆ ಗೊತ್ತಿದ್ದದ್ದೇ. ಸಮಾಜದಲ್ಲಿ ತಾನು ಎಲ್ಲರಂತೆ ತಲೆಯೆತ್ತಿ ಬಾಳಬಹುದೆಂಬ ಆಸೆ, ಪತಿಗೆ ತಾನು ವಂಚಿಸುತ್ತಿರುವೆನೆಂಬ ಅಪರಾಧೀ ಪ್ರಜ್ಞೆಯನ್ನು ಒಳಗೇ ಅದುಮಿಬಿಟ್ಟಿತು. ಪತಿಯ ಒಪ್ಪಿಗೆಯಿಂದ ಪುರಾಣಕಾಲದಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದರಂತೆ. ಆದರೆ ಇಂದು ಸಮಾಜ ವ್ಯವಸ್ಥೆ ಬದಲಾದುದರಿಂದ ಅದಕ್ಕೆ ಅವಕಾಶವಿಲ್ಲವಲ್ಲ! ಇದ್ದಿದ್ದರೆ… ನಾನು ಇನ್ನೂ ಹೆಚ್ಚು ಪರಿಶುದ್ಧಳಾಗಿರುತ್ತಿದ್ದೇನಲ್ಲ ಎಂದು ಅವಳಿಗೆ ಎಷ್ಟೋ ಬಾರಿ ಅನಿಸಿದ್ದುಂಟು.

ಅಂದು ಸರಿ ಸುಮಾರು ರಾತ್ರಿ 9.30 ಆಗಿರಬಹುದು. ರಾತ್ರಿಯೂಟಕ್ಕೆ ಬಂದಿದ್ದ ಶಂಕರಭಾವನಿಗೆ ತಾನು ತೆರೆದುಕೊಂಡಿದ್ದಳು. ಹೊಸ ಸಂಭ್ರಮದಲ್ಲಿ ಮೈಮರೆತಿದ್ದಳು. ದೇವರು ದಯಾಮಯನು. ಆ ಬಾರಿಯೇ ಅವಳ ಮುಟ್ಟು ನಿಂತು ಗರ್ಭ ಕಟ್ಟಿದ ಕುರುಹು ಮೂಡಿತು. ಆಮೇಲೆಂದೂ ದೇವರಾಣೆಯಾಗಿಯೂ ಪತಿಯನ್ನು ಬಿಟ್ಟು ಇನ್ನಾರಿಗೂ ಅವಳು ತೆರೆದುಕೊಂಡಿಲ್ಲವಾದರೂ ಶಂಕರಭಾವನಿಗೆ ಅವಳು ಋಣಿಯಾಗಿದ್ದಳು. ಅವಳ ಪಾಲಿಗೆ ಅವನು ವೇದವ್ಯಾಸನಾಗಿದ್ದನು!. ಆದರೆ ದುರ್ದೈವದಿಂದ ಮೀನಾಕ್ಷಿ ಹುಟ್ಟುವ ಮೊದಲೇ ಒಂದು ದಿನ ಹುಬ್ಬಳ್ಳಿಯಿಂದ ಬರುವಾಗ ಟ್ರಕ್ ಅಪಘಾತದಲ್ಲಿ ಶಂಕರಭಾವ ಅಸುನೀಗಿದ ಸುದ್ದಿ ತಿಳಿದಾಗ ಒಬ್ಬಳೇ ಕುಳಿತು ಅವಳು ಅದೆಷ್ಟುಬಾರಿ ಕಂಬನಿ ಹರಿಸಿ ಋಣಮುಕ್ತಳಾಗಲು ಪ್ರಯತ್ನಿಸಿದ್ದಳೋ ದೇವರಿಗೇ ಗೊತ್ತು!. ಅವನಲ್ಲಿ ಅವಳಿಗೆ ಪ್ರೇಮವಿತ್ತೆ? ಸಹಾನುಭೂತಿ ಇತ್ತೇ? ಉಪಕೃತಳೆಂದು ಕೃತಜ್ಞತೆ ಇತ್ತೇ? ಅದೊಂದೂ ಅವಳಿಗೆ ಗೊತ್ತಾಗದು.

ಯೋಚನೆಯಿನ್ನೂ ಮುಂದುವರಿಯುತ್ತಲೇ ಇತ್ತು. ಅಷ್ಟರಲ್ಲಿ ಒಳಗೆ “ಠಣ್’’ ಎಂದು ಸದ್ದಾಗಿ (ನಾಗಭಾವನ ಮನೆ ಕಳ್ಳ ಬೆಕ್ಕು ಬಂದಿರಬೇಕು ಎನ್ನುತ್ತ ಒಳಗೋಡಿದಳು. ಬೆಕ್ಕು ಮೀನಾಕ್ಷಿಗಾಗಿ ತೆಗೆದಿರಿಸಿದ ಹಾಲು-ಮಜ್ಜಿಗೆಯನ್ನು ಚಲ್ಲಿ ಹಾಕಿದ್ದಲ್ಲದೇ ಅನ್ನದ ತಪ್ಪಲೆಯನ್ನೂ ಕೆಡವಿತ್ತು). “ಅಮ್ಮಯ್ಯ ಹಾಳು ಬೆಕ್ಕು. ಮುನ್ನಿ ಊಟಮಾಡಿಯೂ ಹೋಗಿಲ್ಲ. ಹಸಿದು ಬರ್ತಾಳೆ ಪಾಪ! ಎನ್ನುತ್ತ ಎಲ್ಲವನ್ನು ಎತ್ತಿ ಚೊಕ್ಕಮಾಡಿ ಗಂಟೆ ನೋಡುತ್ತಾಳೆ. ಆಗಲೇ ಎರಡು ಗಂಟೆ ಆಗಿ ಹೋಗಿತ್ತು. ಈಗ ಅವಳಿಗೆ ನಿಜವಾಗಿಯೂ ಗಾಬರಿಯಾಯಿತು. ಗಣೇಶನ ಹಬ್ಬಕ್ಕೆಂದು ಹೊಲಿಸಿ ತಂದ ಹೊಸ ಲಂಗ ದಾವಣಿಯೇ ಬೇಕೆಂದು ಹಟ ಹಿಡಿದು ಬೇರೆ ಹಾಕಿಕೊಂಡು ಹೋಗಿದ್ದಳು. ಯಾವತ್ತೂ ಹಟ ಹಿಡಿಯದ ಅವಳು ಇಂದೇಕೆ ಹಾಗೆ ಹಟ ಹಿಡಿದಳು? ಇನ್ನು ಹೀಗೇ ಕೂಡ್ರವದು ಸರಿಯಲ್ಲವೆಂದು ಅವಳಿಗೆ ಅನ್ನಿಸಿತು. ಯಾವುದೋ ಅನಿಶ್ಚಿತ ಭಯದಿಂದ ಅವಳ ಎದೆ ಢವ ಢವ ಹೊಡೆದುಕೊಳ್ಳತೊಡಗಿತು.

ಬೇಗ ಬೇಗ ಮನೆಯ ಬಾಗಿಲು ಎಳೆದುಕೊಂಡು ಕೊಂಡಿಗೆ ಚಿಲಕ ಸಿಕ್ಕಿಸಿ ಹೊರಬಂದಳು. ಮಳೆ ಸಣ್ಣಗೆ ಜಿನುಗುತ್ತಿತ್ತು. ಲಗುಬಗನೆ ಮನೆಯ ಮುಂದಿನ ಗದ್ದೆಯನ್ನು ದಾಟಿ ದಿಬ್ಬವನ್ನೇರಿ ವೇದವತಿ ಸುತ್ತಲೂ ನೋಡಿದಳು. ದೂರದಲ್ಲಿ ಯಾರು ಯಾರೋ ಊಳುತ್ತಿದ್ದರೆ ಒಂದಿಬ್ಬರು ಹಲಿಗೆ ಹೊಡೆಯುತ್ತಿದ್ದರು. ಆದರೆ ನಾರಾಯಣ ಊಳುತ್ತಿರುವಂತೆ ಕಾಣಿಸಲಿಲ್ಲ. ಹಲಗೆಗೆ ಅವರದು ಬಂದಿರಲಿಲ್ಲ. “ಮಿನ್ನಿ ಆಚೆಗೇ ಹೋಗಿರಬಹುದು. ಊಟಕ್ಕೆ ಕುಳಿತಿರಬಹುದು’’ಎಂದುಕೊಂಡಳು. ಕೆಳಗೆ ಇಳಿಯುತ್ತಿರುವಂತೆ ಕಾಲುವೆ ತುಂಬಿ ಹರಿಯುತ್ತಿರುವುದು ಕಾಣಿಸಿತು. ಅವಳ ಆತಂಕ ಇನ್ನೂ ಹೆಚ್ಚಾಯಿತು. ಮಿನ್ನಿ ಇದನ್ನು ದಾಟಿಕೊಂಡೇ ಹೋದಳೇ? ಅಥವಾ ನಂತರ ಕಾಲುವೆಗೆ ನೀರು ಹರಿಬಿಟ್ಟಿರಬಹುದೆ? ವೇದವತಿ ಭಯದಿಂದ ನಡುಗಿದಳು.

“ಮಿನ್ನಿ, ಮಿನ್ನಿ ಎಂದು ಕೂಗುತ್ತಲೇ ಕಾಲುವೆಯ ಈಚೆ ದಡದ ಬಳಿ ಬಂದ ಅವಳು ಪುನಃ ಕಣ್ಣರಳಿಸಿ ಬಯಲಿನೆಡೆಗೆ ನೋಡಿದಳು. ಅನತಿ ದೂರದಲ್ಲಿ ನಾರಾಯಣ ಗಳಿಯ ನಿಲ್ಲಿಸಿ ಮಾವಿನ ಮರದಡಿಯಲ್ಲಿ ಕುಳಿತಿರುವುದು ಕಾಣಿಸಿತು. ಆದರೆ ಅಲ್ಲೆಲ್ಲು ಮಿನ್ನಿ ಕಾಣಿಸಲಿಲ್ಲ’’. “ಮಿನ್ನಿ ಅಲ್ಲೇ ಇದ್ದಾಳಾ? ಮಿನ್ನಿ… ಮಿನ್ನಿ… ಬಂದಿ…ದ್ದಾಳಾ?’’ ಎಂದು ಕೂಗಿ ಗಂಡನ ಕೇಳಿದಳು.

ಇನ್ನೂ ಊಟವೇಕೆ ಬಂದಿಲ್ಲವೆಂದು ಯೋಚಿಸುತ್ತಾ, ಹಸಿವಾದುದರಿಂದ ನೆರಳಿನಲ್ಲಿ ವಿಶ್ರಮಿಸಿದ್ದ ನಾರಾಯಣನಿಗೆ ಹೆಂಡತಿಯ ಕೂಗನ್ನು ಕೇಳಿ ಆಶ್ಚರ್ಯವೂ ಗಾಬರಿಯೂ ಉಂಟಾಯಿತು. ಓಡುತ್ತಲೇ ಬಂದ ನಾರಾಯಣ “ಏನು… ಏನಾಯ್ತು? ಮಿನ್ನಿ ಬಂದಿದ್ದಳೇ? ಕೇಳಿದ. ವೇದವತಿ ಅಲ್ಲಿಯೇ ಕುಸಿದಳು. ಹೌ..ದು.. ನನ್ನ ಮಿನ್ನಿ.. ಊಟ ತಕ್ಕೊಂಡು … ಬಂದಿದ್ದಳು. ಎಲ್ಲಿ ಹೋದಳು? ಹುಡುಕಿ ಕರೆ ತನ್ನಿ… ಎಂದು ಅಳುತ್ತಲೇ ಗೋಗರೆದಳು ಹುಚ್ಚಿಯಂತೆ..

ಮುಂದುವರಿಯುವುದು..

Name : ವನರಾಗ ವನರಾಗ
Mobile no : -
Write Comments
*Name :
*Comment :
(Max.1000 Characters)
  
The Ultimate Job Portal

Other Episodes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited