Untitled Document
Sign Up | Login    
ನಿಗೂಢ ( 1 )

ಹನ್ನೆರಡೂವರೆಯ ಟಪಾಲು ಬಸ್ಸು ಗುಡ್ಡದಾಚೆಯ ಹೆದ್ದಾರಿಯಲ್ಲಿ ಸಾಗಿಹೋದ ಸದ್ದು ಕೇಳಿಸಿತು. ಆ... ಯೆಂದು ಆಕಳಿಕೆ ತೆಗೆದು ಕಣ್ಣುಜ್ಜಿಕೊಂಡು ದಾರಿಯತ್ತ ನಿರುಕಿಸಿದಳು ವೇದವತಿ. ಮಗಳು ಹತ್ತು ವರ್ಷದ ಹುಡುಗಿ - ಮೀನಾಕ್ಷಿ ಇನ್ನೂ ಬಂದಿರಲಿಲ್ಲ. ಆಗಲೇ ಮಾಡಿಟ್ಟ ಅಡುಗೆಯೆಲ್ಲ ಆರಿ ತಣ್ಣಗಾಗಿತ್ತು. ಆಚೆ ಬಯಲಿನಲ್ಲಿ ಗದ್ದೆ ಊಳುತ್ತಿದ್ದ ಅಪ್ಪ ನಾರಾಯಣನಿಗೆ ಹೂಟೆ ಸಮಯದಲ್ಲಿ ದಿನವೂ ಊಟ ತೆಗೆದುಕೊಂಡು ಹೋಗುವುದು ಮೀನಾಕ್ಷಿಯ ಕೆಲಸ. ಅದರಲ್ಲಿ ಕಾಲಾಡಿಸುತ್ತಾ "ಛಪಲ್ ಛಪಲ್ ಎಂದು ಕಪ್ಪೆಗಳನ್ನೋಡಿಸುತ್ತ ಹೋಗಿ ಬರುವದೆಂದರೆ ಅವಳಿಗೆ ತುಂಬಾ ಖುಷಿ.

ಮುತ್ತಿನ ಬಯಲು ಎಂದು ಕರೆಯುವ ಆ ಗದ್ದೆ ಬಯಲು ತುಂಬಾ ದೊಡ್ಡದೇ. ಮಧ್ಯದಲ್ಲೊಂದು ಚಿಕ್ಕ ನೀರಿನ ಕಾಲುವೆ. ಕಾಲುವೆ ಚಿಕ್ಕದಾದರೂ ಕಾಲುವೆಯಲ್ಲಿ ನೀರು ಬಿಟ್ಟಾಗ ತುಂಬ ರಭಸವಿರುತ್ತದೆ. ಮಳೆ ಕಡಿಮೆಯಾಯಿತೆಂದರೆ ಒಂದು ಮೈಲಿ ದೂರದಲ್ಲಿರುವ ಬೇಡತಿ ಹಳ್ಳಕ್ಕೆ ಹಾಕಿದ ಕಟ್ಟಿನಿಂದ ನೀರು ಹರಿಬಿಡುತ್ತಾರೆ. ಮಳೆ ತುಂಬಾ ಬೀಳುತ್ತಿರುವದರಿಂದ ಆಚೆಮನೆ ನಾಗಭಾವ ಕಾಲುವೆಯ ತೂಬು ಬಿಟ್ಟು ನೀರು ಹತ್ತುವ ಹೆದರಿಕೆಯುರಲಿಲ್ಲ. ಎರಡು ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆ ಇಂದು ಸ್ವಲ್ಪ ನಿಂತಿತ್ತು. ಕಪ್ಪಿಟ್ಟ ಮುಗಿಲು ತಿಳಿಯಾಗ ತೊಡಗಿತ್ತು. ಕಾಲುವೆ ತುಂಬಿ ಹರಿಯುತ್ತಿದ್ದರೆ ಮೀನಾಕ್ಷಿ ಈಚೆ ಬದಿಯಿಂದಲೇ "ಅಣ್ಣಾ, ಬಾ, ಊಟ'' ಎಂದು ಕೂಗಿ ಕರೆಯುತ್ತಾಳೆ. ಅಪ್ಪನನ್ನು ಅವಳು ಕರೆಯುವದು ಹಾಗಯೇ.

ನಿಮಿಷಗಳು ಸರಿದಂತೆಲ್ಲ ವೇದವತಿಯ ಆತಂಕ ತೀವ್ರವಾಗತೊಡಗಿತು. ಮೀನಾಕ್ಷಿ ಒಬ್ಬಳೇ ಒಬ್ಬಳು ಮಗಳು. ಮಕ್ಕಳೇ ಆಗುವುದಿಲ್ಲವೆಂದು ಹತಾಶರಾಗಿ ಅಲ್ಲಿ ಇಲ್ಲಿ ಹರಕೆ ಹೊತ್ತು ಕಂಡ ಕಂಡ ವೈದ್ಯರನ್ನೆಲ್ಲ ಭೆಟ್ಟಿಯಾಗಿ ಅಂತೂ ಕೊನೆಗೆ ಆರತಿಗೊಬ್ಬಳು ಮಗಳು ಹುಟ್ಟಿ ಮನೆಯನ್ನು ಬೆಳಗಿಸಿದ್ದಳು. ವೇದವತಿ ನಾರಾಯಣರ ಆನಂದದ ಪುತ್ಥಳಿಯಾಗಿ ಕಂಗೊಳಿಸಿದ್ದಳು.
ಆಚೆಮನೆ ನಾಗಭಾವನೇನೋ ಹೇಳಿದ್ದನಂತೆ; ನಾರಾಯಣನಿಗೆ ಮಕ್ಕಳಿಲ್ಲದ್ದು ಒಳ್ಳೆಯದೇ ಆಯ್ತು. ನನಗೂ ಜಮೀನು ಕಡಿಮೆಯಿತ್ತು. ಹೇಗಿದ್ದರೂ ಅವನ ಜಮೀನಿಗೆ ನನ್ನ ಮಕ್ಕಳೇ ವಾರಸುದಾರರಾಗುತ್ತಾರೆ. ನನ್ನ ಐದು ಗಂಡುಮಕ್ಕಳಲ್ಲಿ ಒಬ್ಬನನ್ನು ಬೇಕಾದರೆ ದತ್ತುತೆಗೆದುಕೊಳ್ಳಲಿ, ಅದೇ ಒಳ್ಳೇದು ಎಂದು. ಈ ಮಾತನ್ನು ಕೆಲಸದ ಪಾರುವಿನಿಂದ ತಿಳಿದ ವೇದವತಿಯ ಮೈ ಉರಿದು ಹೋಗಿತ್ತು. ಒಂದು ಕಾಲದಲ್ಲಿ ಪ್ರಶಾಂತತೆಗೆ ಹೆಸರಾದ ಹಳ್ಳಿಯಲ್ಲಿಂದು ಜಮೀನಿನ ದುರಾಸೆ, ದ್ವೇಷ, ಮತ್ಸರ, ಕುಹಕ ರಾಜಕಾರಣಗಳು ಹೇಗೆ ರುದ್ರ ತಾಂಡವ ನಡೆಸತ್ತಿವೆ - ಹಳ್ಳಿಯ ಬಾಳನ್ನು ಕುಲಗೆಡಿಸುತ್ತಿವೆ ಎಂದು ಮರುಗಿದ್ದಳು. ಜೊತೆಗೆ ತಾನು ಬಂಜೆಯೆಂಬ ಕೀಳರಿಮೆ ಕಾಡಿದಾಗ ಮನಸ್ಸು ವ್ಯಾಕುಲಗೊಂಡಿತ್ತು. "ನಾನು ಮಾಡಿದ ಯಾವ ಪಾಪಕ್ಕಾಗಿ ನನ್ನನ್ನು ಬಂಜೆಯಾಗಿಸಿದೆ ದೇವರೆ! ಎಂದು ಅವಳು ಹಲವು ಹಗಲಿರುಳು ಹಲುಬಿದ್ದುಂಟು.

ಸಮಾಜದಲ್ಲಿ ತಾನು ಮುಖ ತೋರಿಸುವುದೆಂತು? ಬಂಜೆ ಇತರ ಮಕ್ಕಳನ್ನು ಬೇರೆ ಮುದ್ದಿಸಬಾರದು. ಮುಟ್ಟಬಾರದು. ಬಂಜೆಯ ಕೈ ನೀರನ್ನು ಬೇರೆಯವರು ಕುಡಿಯಲೂ ಅಳುಕುತ್ತಾರೆ. "ಅಯ್ಯೋ ನನ್ನನ್ನು ಹೀಗಾಗಿಸುವುದಕ್ಕಿಂತ ನಿನ್ನ ಪಾದದ ಬಳಿಗೇ ನನ್ನನ್ನು ಕರೆಸಿಕೊಂಡಿದ್ದರೇನಾಗುತ್ತಿತ್ತು?'' ಎಂದು ಆರ್ತಳಾಗಿ ದೇವರನ್ನು ಮೊರೆಯಿಡುತ್ತಿದ್ದಳು.

ನಾಗಭಾವನ ತಮ್ಮ ಶಂಕರಭಾವ ಒಳ್ಳೆ ಕುಶಾಲುಗಾರ. ಜೊತೆಗೆ ಯಾರಿಗೂ ನಿಸ್ಮೃಹ ಭಾವದಿಂದ ಸಹಾಯ ಮಾಡುವ ಪ್ರವೃತ್ತಿಯವ. ವೇದವತಿಯ ಚಿತ್ತ ಹತ್ತುವರ್ಷಗಳ ಹಿಂದಕ್ಕೆ ಓಡಿತ್ತು.

(ಮುಂದುವರಿಯವುದು)

Name : ವನರಾಗ ವನರಾಗ
Mobile no : -
Write Comments
*Name :
*Comment :
(Max.1000 Characters)
  
The Ultimate Job Portal

Other Episodes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited