ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ ಸಂಸ್ಥೆ ಗ್ಯಾಲಕ್ಸಿ ಸ್ಟಾರ್ 2, ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್ ಹಾಗೂ ಗ್ಯಾಲಕ್ಸಿ ಎಸ್.ಎನ್.ಎಕ್ಸ್.ಟಿ ಎಂಬ ಕಡಿಮೆ ಬೆಲೆಯ ಮೂರು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ.
ಕನ್ನಡ ಸೇರಿದಂತೆ 11 ಭಾರತೀಯ ಭಾಷೆಗಳಿಗೆ ಹೊಂದಿಕೊಳ್ಳುವ ತಂತ್ರಜ್ನಾನ ಹಾಗೂ ಆಂಡ್ರಾಯ್ಡ್ ಕಿಟ್ ಕ್ಯಾಟ್ ಆಪರೇಟಿಂಗ್ ಸಿಸ್ಟಂ ಅನ್ನು ಈ ಮೊಬೈಲ್ ಗಳಲ್ಲಿ ಅಳವಡಿಸಲಾಗಿದೆ.
ಗ್ಯಾಲಕ್ಸಿ ಸ್ಟಾರ್-2 ಫೋನ್ ಬೆಲೆ 5,100 ರೂ.ಇದ್ದು, ಇದು ಬಿಳಿ ಮತ್ತು ಗ್ರೇ ಕಲರ್ ಗಳಲ್ಲಿ ಲಭ್ಯ. ಗ್ಯಾಲಕ್ಸಿ ಅಡ್ವಾನ್ಸ್ ಮತ್ತು ಎಸ್-ಎನ್.ಎಕ್ಸ್.ಟಿ ಫೋನ್ ಗಳ ಮಾರಾಟ ಬೆಲೆ ಒಂದೇ ಆಗಿದ್ದು 7,400 ರೂ. ಇವುಗಳು ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುತ್ತವೆ.
ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳಿರುವ ಸ್ಮಾರ್ಟ್ ಫೋನ್ ಗಳನ್ನು ಕೊಡುವ ಇಚ್ಛೆ ನಮ್ಮ ಸಂಸ್ಥೆಯದ್ದು ಎಂದು ಸ್ಯಾಮ್ ಸಂಗ್ ಇಂಡಿಯಾ ಮೊಬೈಲ್ ಹಾಗೂ ಐಟಿ ಮಾರಾಟ ವಿಭಾಗದ ಉಪಾಧ್ಯಕ್ಷ ಅಸಿಮ್ ವಾರ್ಸಿ ತಿಳಿಸಿದ್ದಾರೆ.
ಗ್ಯಾಲಕ್ಸಿ ಸ್ಟಾರ್-2, ಸ್ಟಾರ್ ಅಡ್ವಾನ್ಸ್ ಮತ್ತು ಏಸ್.ಎನ್.ಎಕ್ಸ್.ಟಿಯನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸಲಾಗಿದೆ. ವಿಶೇಷ ಮಾರಾಟ ಕೊಡುಗೆಯಾಗಿ ಈ ನೂತನ ಮೊಬೈಲ್ ಗಳ ಜೊತೆಯಲ್ಲಿ ಆರು ತಿಂಗಳ ಕಾಲ ಉಚಿತ ಇಂಟರ್ ನೆಟ್ ಸೌಲಭ್ಯವನ್ನೂ ನೀಡಲಾಗುತ್ತಿದೆ ಎಂದು ತಿಳಿಸಿದರು.