Untitled Document
Sign Up | Login    
ಅದೃಷ್ಟ

ನಾವು ಕಾಣದೇ ಇರುವುದು ಆಕಸ್ಮಿಕವಾಗಿ ಒಲಿದು ಬಂದ ಸೌಭಾಗ್ಯ ಅದೃಷ್ಟ. ಮೇಲ್ನೋಟಕ್ಕೆ ಇದು ಯಾವ ಶ್ರಮವಿಲ್ಲದೇ ದೊರೆತ ಫಲ ಎನಿಸ ಬಹುದು. ಆದರೆ ತಾರ್ಕಿಕವಾಗಿಯೂ ಭಾರತೀಯ ದರ್ಶನಗಳ ಪ್ರಕಾರವೂ ಅದು ಅವನ ಪೂರ್ವ ಜನ್ಮ ಅಥವಾ ಮೊದಲೆಂದೋ ಗೈದ ಸಾಧನೆಯ ಫಲ. ಸತ್ಕಾರ್ಯವೇ ಅದೃಷ್ಟ ಮೂಲ, ಸತ್ಕರ್ಮಿಯೇ ಅದೃಷ್ಟವಂತ .

ಕಣ್ಣಿಗೆ ಕಾಣದೇ ಇರುವದು, ಹಣೆಬರಹ, ದೈವ, ವಿಧಿ, ದೈವೀ ಕೃಪೆ, ಪುಣ್ಯ ಪಾಪ ಅಲ್ಲದೆ ಬೆಂಕಿ ನೀರು ಮುಂತಾದುದರ ಭಯ 'ಅದೃಷ್ಟಂ ವಹ್ನಿ ತೋಯಾದಿ ಭಯಂ -ಅಮರ ' ಇತ್ಯಾದಿ ಅದೃಷ್ಟದ ಶಾಬ್ದಿಕ ಅರ್ಥ.

ಓರ್ವ ವ್ಯಕ್ತಿ ನೂರಾರು ತೆಂಗಿನ ಗಿಡ ಹಾಕಿ ನೀರೆರೆದು ಬೆಳೆಸಿರುತ್ತಾನೆ. ಫಲ ಬರುವುದರೊಳಗೆ ಅವನು ಸಾಯುತ್ತಾನೆ. ಆದರೆ ಅವನ ಮರುಜನ್ಮ ನೂರಾರು ತೆಂಗಿನ ಮರ ಫಲ ಬಿಡುವ ಸಮೃದ್ಧ ಕುಟುಂಬದಲ್ಲಿ ಆಗುತ್ತದೆ. ಅದರ ಫಲದ ಒಡೆಯ ಅವನಾಗುತ್ತಾನೆ. ಅವನ ಪೂವಾರ್ಜಿತ ಕರ್ಮವೇ ಅದೃಷ್ಷವಾಗಿ ಒಲಿದಿದೆ.

ಲಾಟರಿ ಹೊಡೆಯುತ್ತದೆಂದು ಜನ್ಮವಿಡೀ ಟಿಕೆಟ್ಟು ಖರೀದಿಸಿರುತ್ತಾನೆ. ಅವನು ಲಾಟರಿ ಸಂಸ್ಥೆಗೆ ಕಟ್ಟಿದ ಹಣವೇ ಬಡ್ಡಿ ಸೇರಿ ಲಕ್ಷಾಂತರ ಹಣ ಆಗಿರಬಹುದು. ಆಗೊಮ್ಮೆ ಅದು ಅವನಿಗೆ ಲಾಭದೊಂದಿಗೆ ಮರಳ ಬಹುದು ಅಥವಾ ಮರುಜನ್ಮದಲ್ಲಿ ಅದೃಷ್ಟ ಒಲಿಯಬಹುದು. ಅತಿಯಾಸೆ ದುರಾಸೆಗಳಿಂದ ಕೆಟ್ಟ ಯೋಚನೆಯಿಂದ ಮಾಡಿದ್ದಾದರೆ ಅದಕ್ಕನುಗುಣವಾಗಿ ಅದರ ಉಳಿಯುವಿಕೆ;ಪ್ರಯೋಜನ. ಒಟ್ಟಿನಲ್ಲಿ 'ಒಳ್ಳೆಯದಿರಲಿ ಕೆಟ್ಟದಿರಲಿ ಮಾಡಿದ ಒಂದು ಚಿಕ್ಕ ಕೆಲಸವೂ ವ್ಯರ್ಥವಾಗುವುದಿಲ್ಲ', ಎಂದು ಓಶೋ ಹೇಳುತ್ತಾರೆ.

 


ದರಿದ್ರ ದಾಮೋದರನ ಕಥೆ ಯಾರಿಗೆ ಗೊತ್ತಿಲ್ಲ ? ಪಾರ್ವತಿಯ ಸೋದರ ದಾಮೋದರ. ಆಕಾಶ ಮಾರ್ಗದಲ್ಲಿ ಇಬ್ಬರೂ ಸಾಗುತ್ತಿರುವಾಗ ಕೆಳಗೆ ದಾಮೋದರ ಹರಕು ಬಟ್ಟೆಯ ತಿರುಕನಂತೆ ಹೋಗುತ್ತಿದ್ದ. ಪಾರ್ವತಿಗೆ ಕರುಳು ಕರಗಿತು. ಶಿವನೊಡನೆ ಕೇಳಿದಳು, 'ನೀವು ಜಗತ್ತಿಗೇ ಏನೆಲ್ಲ ಕೊಡುತ್ತೀರಿ, ನನ್ನ ಸೋದರ ಸಂಬಂಧಿಗೆ ಮಾತ್ರ ಎಂಥ ದಾರಿದ್ರ್ಯ! ನೀವು ಗಂಡಸರೇ ಹೀಗೆ, ಹೆಂಡತಿಯ ತವರವರೆಂದರೆ ಅಸಡ್ಡೆ' ಎಂದಳು. ಪಾರ್ವತಿಯ ಮಾತಿನಲ್ಲಿ ನೋವಿತ್ತು, ಅವನಿಗೆ ಪತಿ ಸಹಾಯ ಮಾಡಲಿ ಎಂದಿತ್ತು. ಶಿವ ನುಡಿದ, ಇದೋ ಅವನಿಗೆ ಮೂರ ಚರಿಗೆ ಹೊನ್ನು ಅವನು ಬರುವ ದಾರಿಯಲ್ಲಿ ಇಡುತ್ತೇನೆ. ಒಯ್ದು ಸಿರಿವಂತನಾಗಲಿ, ಎಂದು ದಾರಿಯಲ್ಲಿ ಹೊನ್ನು ತುಂಬಿದ ಮೂರು ಚರಿಗೆ ಇಟ್ಟ. ಶಿವ ಪಾರ್ವತಿ ಮರೆಯಲ್ಲಿ ನಿಂತು ನೋಡುತ್ತಿದ್ದರು. ದಾರಿ ನಡೆಯುತ್ತಿರುವ ದಾಮೋದರನಿಗೆ ಹೊಸ ಐಡಿಯಾ ಬಂತು. ಕುರುಡರು ದಾರಿ ಹೇಗೆ ನಡೆಯುತ್ತಾರೆಂದು ನೋಡೇ ಬಿಡೋಣ ಎಂದು ಕಣ್ಣ ಮುಚ್ಚಿಕೊಂಡು ತಡಕಾಡುತ್ತ ದಾರಿ ಸಾಗಿದ. ಚರಿಗೆ ಹೊನ್ನು ಕಾಲಿಗೆ ಎಡವಿತು. ದೊಡ್ಡ ಕಲ್ಲೇ ಇದೆ, ಎಡವಿತು ಎಂದು ಒದ್ದುಕೊಂಡು ಮುಂದೆ ಮುಂದೆ ಹೋದ ಪಾ॒ರ್ವತಿ ಈ ದೃಶ್ಯವನ್ನು ನೋಡುತ್ತಲೇ ಇದ್ದಳು. ಶಿವ ಹೇಳಿದ,'ಅವನಿಗೆ ಅದೃಷ್ಟವಿಲ್ಲ'.

ಅಂದರೆ ಅದರ ಅರ್ಥ ಅದೃಷ್ಟ ಕೈ ಹಿಡಿಯುವಂಥ ಕೆಲಸ, ಸಾಧನೆಯನ್ನು ಹಿಂದೆ ಮಾಡಿಲ್ಲ, ಈಗ ಮಾಡುತ್ತಿಲ್ಲ. ಸೋಮಾರಿಯಾಗಿ ಕೆಲಸ ಮಾಡದೇ ಕಾಲ ಕಳೆಯುವವರಿಗೆ ಸಮಾಜವಾಗಲಿ, ಸರಕಾರವಾಗಲಿ, ಕಾನೂನಾಗಲಿ, ಒಂದಿಷ್ಟು ಸಹಾಯ ಧನವಾಗಲಿ ಏನು ಮಾಡಿತು ? ಆತ ದರಿದ್ರನಾಗಿಯೇ ಉಳಿದು ಬಿಡುತ್ತಾನೆ .

ಅದೃಷ್ಟ ಒಲಿದರೆ ಸಾಲದು ಅದರ ಉಪಯೋಗವೂ ಅಷ್ಟೇ ಮಹತ್ವದ್ದು ಅದೃಷ್ಟವನ್ನು. ಪಡೆದುಕೊಳ್ಳುವ ಚಾತುರ್ಯವೂ ಬೇಕು ಅದನ್ನು ಬಳಸಿಕೊಳ್ಳುವ ಕುಶಲತೆಯೂ ಇರಬೇಕು. ಕನ್ಯೆ ಕುರುಡಿಯೊಬ್ಬಳ ಭಕ್ತಿಗೆ ಮೆಚ್ಚಿದ ದೇವರು ಪ್ರತ್ಯಕ್ಷನಾಗಿ ಹೇಳಿದ, 'ಏನು ಬೇಕಾದರೂ ಕೇಳು, ಆದರೆ ಒಂದೇ ಒಂದು ವರ ಮಾತ್ರ ಕೇಳ ಬೇಕು', ಚತುರೆಯಾದ ಕುರುಡಿ ಕೇಳಿದಳು 'ನನ್ನ ಮಿಮ್ಮಕ್ಕಳು ಬಂಗಾರದ ಬಟ್ಟಲಲ್ಲಿ ಊಟ ಮಾಡುವುದನ್ನು ನಾನು ನೋಡಬೇಕು', ಒಂದೇ ಒಂದು ವರ. ಮದುವೆ-ಗಂಡ, ಮಕ್ಕಳು, ಶ್ರೀಮಂತಿಕೆ, ಅಲ್ಲದೆ ಅಂಧತ್ವವನ್ನು ಕಳೆದು ಕೊಂಡು ದೃಷ್ಟಿಯನ್ನೂ ಪಡೆದಳು. ದೇವರೇ ಪ್ರತ್ಯಕ್ಷನಾದ ಒಲಿದು ಬಂದ ಅದೃಷ್ಟ ಅದು. ಅದನ್ನು ಬುದ್ಧಿಂತಿಕೆಯಿಂದ ಪಡೆದುಕೊಂಡ, ಬಳಸಿಕೊಂಡ ಚಾತುರ್ಯ ಕುರುಡಿಯದು.

ಸಂಪತ್ತು ಒಂದೇ ಅದೃಷ್ಟವೆಂದಲ್ಲ. ಸುಂದರಿಯೂ ಗುಣವತಿಯೂ ಆದ ಹೆಂಡತಿ ಅಥವಾ ಗಂಡ , ಉನ್ನತ ಶಿಕ್ಷಣ,ಉತ್ತಮ ಉದ್ಯೋಗ, ಉತ್ತಮ ನೆರೆ ಹೊರೆ, ಸಂಬಂಧ, ಉತ್ತಮ ಯಶಸ್ಸು ಮುಂತಾದ ಎಲ್ಲವೂ ಅದೃಷ್ಟವೇ. ಈ ಅದೃಷ್ಟ ಯಾರಿಗೆ ಬೇಡ ?

ಲೇಖಕ : ವನರಾಗ ಶರ್ಮ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited