Untitled Document
Sign Up | Login    
ನಮ್ಮಲ್ಲಿ ಆದರ್ಶ ವ್ಯಕ್ತಿಗಳ ಕೊರತೆ ಯಾಕಿದೆ ?

ಭವ್ಯ ಭಾರತ 5,000 ವರ್ಷಕ್ಕೂ ಹೆಚ್ಚು ಪ್ರಾಚೀನವಾದ ಪರಂಪರೆಯನ್ನು ಹೊಂದಿರುವ ದೇಶವಾಗಿದೆ. ಜನಸಂಖ್ಯೆಯಲ್ಲಿ ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ದೇಶವಾಗಿದೆ. ಇಂದು ನಾವು ಒಂದಾದ ಮೇಲೆ ಒಂದರಂತೆ ಸಮಸ್ಯೆಗಳನ್ನು ಹುಟ್ಟಿಸಿಕೊಳ್ಳುತ್ತಿದ್ದೇವೆ. ರಾಜಕೀಯ ಮುಖಂಡರು ನಮ್ಮನ್ನು ತಪ್ಪುದಾರಿಯಲ್ಲಿ ಕರೆದುಕೊಡು ಹೋಗುತ್ತಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ನುಂಗಿ ನೀರುಕುಡಿಯುವ ದ್ರೋಹಿಗಳಾಗಿದ್ದಾರೆ. ಹಾಗಾದರೆ ನಮ್ಮನ್ನು ಕಾಪಾಡಲು ಮುಖಂಡರಿಲ್ಲವೇ? ನಮ್ಮ ಸಮಸ್ಯೆಗಳನ್ನು ಬಗೆಹರಿಸುಲು ನಮ್ಮಿಂದ ಸಾಧ್ಯವಿಲ್ಲವೇ? ಇಂದು ಎಲ್ಲಾ ರಾಜಕೀಯ ಪಕ್ಷಗಳು ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಎಂಬಂತೆ ಅಧಿಕಾರವನ್ನು ಪಡೆದುಕೊಂಡಿದ್ದಾಯಿತು, ಅದರ ರುಚಿಯನ್ನು ನಾವುಗಳು ಅನುಭವಿಸಿದ್ದಾಯಿತು. ವರ್ಷದಿಂದ ವರ್ಷಕ್ಕೆ ಹಣದುಬ್ಬರ ಏರುತ್ತಿದೆ. ದೇಶದ ಪ್ರಗತಿ ದರ ಕುಸಿಯುತ್ತಿದೆ. ಮುಂದಿನ ಪೀಳಿಗೆಗೆ ನಾವೇನು ಕೊಡುತ್ತಿದ್ದೇವೆ? ಯಾವ ರೀತಿಯಲ್ಲಿ ನಾವು ನಾಗರಿಕರನ್ನು ತಯಾರು ಮಾಡುತ್ತಿದ್ದೇವೆ? ಭವಿಷ್ಯದಲ್ಲಿ ನಮ್ಮ ದೇಶದಲ್ಲಿ ಶ್ರೇಷ್ಠ ಮುಖಂಡರು ಬರಲಾರರೇ? ಮುಂದಿನ ಆಶಾಜ್ಯೋತಿ ನಮ್ಮ-ನಿಮ್ಮ ಮಕ್ಕಳು ಆಗಲು ಸಾಧ್ಯವಿಲ್ಲವೇ?

ಕಿರಣ್ ಬೇಡಿಯಂತಹ ಮಹಿಳಾ ಪೋಲೀಸ್ ಆಫೀಸರ್ ನಮ್ಮಲ್ಲಿ ತುಂಬಾ ಕಡಿಮೆಯಿದ್ದಾರೆ. ಇಷ್ಟೊಂದು ಜನಸಂಖ್ಯೆ ನಡುವೆ ಒಳ್ಳೆಯ ಕ್ರಿಕೆಟ್ ಆಟಗಾರರು ನಮಗೆ ಸಿಗ್ತಾ ಇಲ್ಲ. 'ಇದ್ದರೆ ಇವರಂತೆ ಇರಬೇಕು' ಎಂದು ತೋರಿಸಿ ಹೇಳುವುದಕ್ಕೆ ನಮ್ಮಲ್ಲಿ ಆದರ್ಶ ವ್ಯಕ್ತಿಗಳ ಕೊರತೆಯಿದೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ನಮಗೆ ಒಂದೇ ಒಂದು ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಎಲ್ಲೆಲ್ಲೂ ವಿಫಲತೆಗಳೇ ಎದ್ದು ಕಾಣುತ್ತಿವೆ. ಅಹಿಂಸಾ ಮಾರ್ಗದಿಂದ ಬ್ರಿಟಿಷರನ್ನು ಹೊರಗೆ ಹಾಕಿರುವ ನಮ್ಮ ಶಕ್ತಿ ಎಲ್ಲಿ ಹೋಯಿತು?

ಇಂಗ್ಲೆಂಡಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದಿ ಸಿನಿಮಾ ಹಾಡುಗಳ ಮೇಲೆ ಡ್ಯಾನ್ಸ್ ಕಲಿಸಿ ಕೊಡುವ ಪರಿಪಾಟ ಅಲ್ಲಿನ ಶಾಲೆಗಳಲ್ಲಿ ಪ್ರಾರಂಭವಾಗಿದ್ದು, ಇದು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಸಂಕೇತವನ್ನು ಅರಿತುಕೊಂಡ ಬ್ರಿಟಿಷ್ ಪ್ರಧಾನಿ ಸಾರ್ವಜನಿಕ ಸಭೆಯೊಂದರಲ್ಲಿ ಹೀಗೆ ಹೇಳಿದ್ದರು, ಇಂಡಿಯನ್ ಮ್ಯೂಸಿಕ್ ಮೇಲೆ ಡ್ಯಾನ್ಸ್ ಕಲಿಸುವುದನ್ನು ಕಡಿಮೆ ಮಾಡಿ, ಆಟೋಟಗಳ ಮೇಲೆ ಹೆಚ್ಚಿನ ಗಮನ ಹರಿಸಿ. ಇದರಿಂದಾಗಿ ಕನಿಷ್ಠ ಪಕ್ಷ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲಬಹುದು.

ಇತ್ತೀಚಿನ ದಿನಗಳಲ್ಲಿ ಯಾಕೆ ಯೋಗ್ಯ ವ್ಯಕ್ತಿಗಳು/ಮುಖಂಡರು ಬರುತ್ತಿಲ್ಲವೆಂದರೆ, ಇಂದು ಮಕ್ಕಳನ್ನು ಬೆಳೆಸುವ ವಿಧಾನ, ಮಕ್ಕಳಿಂದ ತಂದೆ-ತಾಯಿಗಳು ಬಯಸುವ ವಿಚಾರಗಳು ಭಿನ್ನವಾಗಿವೆ. ಕೆಲವೊಂದು ತಂದೆ-ತಾಯಿಗಳಲ್ಲಿ ತಮ್ಮ ಮಕ್ಕಳನ್ನು ಯಾವ ಹಾದಿಯಲ್ಲಿ ಬೆಳೆಸಬೇಕು, ಅವರ ಜೀವನದ ಗುರಿ ಹೇಗಿರಬೇಕು ಎಂದೇ ತಿಳಿದಿರುವುದಿಲ್ಲ. ಕೆಲವು ಮಕ್ಕಳಿಗೂ ತಿಳಿದಿರುವುದಿಲ್ಲ. ಹಾಗಿದ್ದರೂ, ತನ್ನ ಸಮಾಜದಲ್ಲಿ, ಅಥವಾ ನೆರೆ-ಹೊರೆಯಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮಕ್ಕಳಿಂದ ಅವರಿಗಿಷ್ಟವಿಲ್ಲದ ಕೆಲಸಗಳನ್ನು ಮಾಡಿಸುತ್ತಾರೆ. ಪಕ್ಕದ ಮನೆಯವರ ಮಗಳು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ ಎಂದಾದಲ್ಲಿ ತನ್ನ ಮಗಳು ಅವಳನ್ನು ಮೀರಿಸಬೇಕು ಎಂಬ ಉದ್ದೇಶಕ್ಕೆ ಮಗುವಿಗೆ ಡ್ಯಾನ್ಸ್ ಟೀಚರ್ ನಿಯುಕ್ತಿ ಮಾಡುತ್ತಾರೆ, ಇಲ್ಲವೇ ಡ್ಯಾನ್ಸ್ ಸ್ಕೂಲ್‌ಗೆ ಕಳಿಸುತ್ತಾರೆ. ಇತ್ತ ಮಗುವಿಗೆ/ಬಾಲಕಿಗೆ ಅದು ಇಷ್ಟವಾಗಿರುವುದಿಲ್ಲ. ಒಲ್ಲದ ಮನಸ್ಸಿನಿಂದ ತಂದೆ-ತಾಯಿಗಳ ತಾಳಕ್ಕೆ ಕುಣಿಯುತ್ತಾಳೆ. ಕುಣಿದು ಕುಣಿದು ಆಯಾಸವಾಗುತ್ತದೆ. ಸರಿಯಾದ ಆಹಾರ ಸೇವನೆ ಇಲ್ಲದೆಯೇ ಶರೀರ ಕ್ಷೀಣವಾಗುತ್ತದೆ. ಪಕ್ಕದ ಮನೆ ಅಥವಾ ಆಫೀಸಿನಲ್ಲಿ ಸಹೋದ್ಯೋಗಿಯ ಸುಪುತ್ರ ಕ್ವಿಜ್‌ನಲ್ಲಿ ಬಹುಮಾನ ಪಡೆದಿದ್ದಾನೆ ಎಂಬ ಸುದ್ದಿ ಕೇಳಿದಾಗ ತನ್ನ ಮಗನನ್ನೂ ಹಾಗೆ ಮಾಡಿಸಲು ಕೆಲವರು ಹೊರಡುತ್ತಾರೆ. ಆಟೋಟ-ತಿಂಡಿಗಳನ್ನು ಮರೆತು ಹಗಲೂ-ರಾತ್ರಿ ಜನರಲ್ ನಾಲೆಡ್ಜ್ ಹೆಚ್ಚಿಸುವಂತೆ ಅವನಲ್ಲಿ ಒತ್ತಡ ಹಾಕುತ್ತಾರೆ. ಈ ಪ್ರಕಾರವಾಗಿ ತಂದೆ ತಾಯಿಗಳು ಮಕ್ಕಳ ಮೇಲೆ ತಮ್ಮ ಆಸೆ-ಆಕಾಂಕ್ಷೆಗಳನ್ನು ಹೇರುತ್ತಾ ಅರಳುವ ಹೂವನ್ನು ಮೊಗ್ಗಾಗಿರುವಾಗಲೇ ಹೊಸಕಿ ಹಾಕುತ್ತಾರೆ. ಅಂತಹ ಮಕ್ಕಳಿಗೆ ತಂದೆ-ತಾಯಿಗಳ ಮೇಲೆ ಬಾಲ್ಯದಿಂದಲೇ ಒಂದು ರೀತಿಯ ದ್ವೇಷ ಬೆಳೆಯುತ್ತದೆ ಅಥವಾ ಅವರ ಮೇಲೆ ಯಾವುದೇ ಪ್ರೀತಿ-ಅಭಿಮಾನ ಇರುವುದಿಲ್ಲ.

ಇಂದು ಬೇರೆ ಬೇರೆ ಚ್ಯಾನೆಲ್‌ಗಳಲ್ಲಿ ಹಲವಾರು ಬಗೆಯ ರಿಯಾಲಿಟಿ ಶೋಗಳು ಬರುತ್ತಿವೆ. ಕೆಲವು ಶೋಗಳು ಹಣದ ಲಾಲಸೆಯನ್ನು ಒಡ್ಡುತ್ತಿವೆ. ಇನ್ನು ಕೆಲವು ಟಾಪ್ ವನ್ ಪಟ್ಟ ಕಟ್ಟುತ್ತಿವೆ. ಇವುಗಳಿಗಾಗಿ ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ. ಪ್ರವೇಶ ಪಡೆಯುವುದಕ್ಕಾಗಿ ವರ್ಷ ವರ್ಷಗಳಿಂದ ಫೋನ್ ಮಾಡಿ, ಎಸ್‌ಎಮ್‌ಎಸ್ ಕಳುಹಿಸಿ ಪ್ರಯತ್ನಿಸಬೇಕಾಗುತ್ತದೆ. ಒಂದು ಬಾರಿ ಅಲ್ಲಿಗೆ ತಲುಪಿದರೆ ನಮ್ಮ ಭಾಗ್ಯೋದಯವಾಗುತ್ತದೆ, ಮತ್ತೆ ಜೀವನಪೂರ್ತಿ ಸುಖವಾಗಿ, ಸೆಲೆಬ್ರಿಟಿಯಾಗಿ ಬಾಳಬಹುದಲ್ಲಾ ಎಂದು ಲಕ್ಷಗಟ್ಟಲೆ ಜನರು ಪ್ರಯತ್ನಿಸುತ್ತಾರೆ. ಇದೆಲ್ಲಾ ಅದೃಷ್ಟದ ಆಟ, ಕೇವಲ ಒಂದು ಜೂಜಾಟ ಎಂಬುದನ್ನು ಮರೆಯುತ್ತಾರೆ. ಅವರಿಗೆ ಬೇಕಾಗಿರುವುದು ಒಂದೋ ಎರಡೋ ಟಾಪರ್‌ಗಳು ಮಾತ್ರ. ಆದರೆ ಈ ಪಂದ್ಯದಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸಿ ಹತಾಶರಾಗುವವರ ಸಂಖ್ಯೆ ಸಾವಿರಾರು. ಇಲ್ಲಿನ ಸೋಲು ಅವರ ಜೀವನಕ್ಕೆ ದೊಡ್ಡ ಆಘಾತವಾಗುತ್ತದೆ. ಕೆಲವರಿಗೆ ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮುಂದಿನ ಜೀವನದ ಬಗ್ಗೆ ಕೆಲವರಿಗೆ ಜಿಗುಪ್ಸೆ ಉಂಟಾಗುತ್ತದೆ. ಕೇವಲ ಶೇಕಡಾ ೫ ರಷ್ಟು ಜನರು ಮಾತ್ರವೇ ಬೇರೆ ಹಾದಿಗಳನ್ನು ಕಂಡುಕೊಂಡು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಉಳಿದವರೆಲ್ಲಾ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಸಮಾಜದ ದೃಷ್ಟಿಯಿಂದ ಪ್ರತಿಭೆಗಳ ದುರಂತ ಎನ್ನಬಹುದು. ಇದರಿಂದ ದೇಶಕ್ಕಾಗಲಿ, ಸಮಾಜಕ್ಕಾಗಲಿ, ಯಾವುದೇ ಪ್ರಯೋಜನ ಇರುವುದಿಲ್ಲ.

ಇನ್ನು ಕೆಲವೆಡೆ ಹುಚ್ಚುತನವಿದೆ. ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಅಥವಾ ತಮ್ಮ ಚ್ಯಾನೆಲ್ ವಿಭಿನ್ನವಾದುದನ್ನು ತೋರಿಸುತ್ತೇವೆ ಎಂಬ ಉದ್ದೇಶದಿಂದ ವಿಚಿತ್ರವಾದ ಅಥವಾ ಅಸಹ್ಯ ಕ್ರಿಯೆಗಳನ್ನು ಮಾಡಿ ತೊರಿಸುತ್ತಾರೆ. ಹಸುಕೂಸು ಮಗುವನ್ನು ಎತ್ತಿ ಹಾರಿಸುವುದು, ಮಕ್ಕಳ/ಹೆಣ್ಣು/ಬಾಲಕಿ ಮೈ ಮೇಲೆ ೪೦-೫೦ ಹಾವುಗಳನ್ನು ಹಾಯಬಿಡುವುದು, ಜಿರಳೆಗಳನ್ನು ತಿನ್ನುವುದು, ಹಾಗೂ ನೋಡಲು ಅಸಾಧ್ಯವಾದ ಇನ್ನೂ ಹಲವಾರು ಕಾರ್ಯಗಳನ್ನು ತೋರಿಸುತ್ತಾರೆ. ಅಗತ್ಯವಿಲ್ಲದೆಯೇ ಅಪಾಯಕಾರಿ ಸಾಹಸಗಳನ್ನು ಮಾಡಿ ತೋರಿಸುತ್ತಾರೆ ಅಥವಾ ಮಾಡಿಸಲಾಗುತ್ತದೆ. ಡ್ಯಾನ್ಸ್ ಎನ್ನುವುದು ವ್ಯಾಯಾಮ ಅಭ್ಯಾಸದಂತೆ ತೋರಿ ಬರುತ್ತದೆ. ಈ ಪ್ರಕಾರವಾದ ಹುಚ್ಚುತನಗಳಿಂದಾಗಿ ಇಂದು ಸಮಾಜದಲ್ಲಿ ಯುವ ಜನಾಂಗವನ್ನು ಆದರ್ಶರನ್ನಾಗಿ/ಶ್ರೇಷ್ಠರಾಗುವಂತೆ ಮಾಡುವುದಕ್ಕಾಗಿ ಸೂಕ್ತವಾದ ಮಾರ್ಗದರ್ಶನವೇ ಇಲ್ಲದಂತಾಗಿದೆ.

ಹಿಂದಿನ ಸಮಾಜ, ಸಮಾಜದ ನಾಗರಿಕರು ಯೋಗ್ಯ ವ್ಯಕ್ತಿಗಳಾಗಿದ್ದರು. ಜನರಲ್ಲಿ ಶಿಸ್ತು ಮತ್ತು ಆದರ್ಶಗಳಿದ್ದವು. ಸುಮಾರು 30-40 ವರ್ಷಗಳಷ್ಟು ಹಿಂದೆ ಯುವ ಜನಾಂಗದಲ್ಲಿ ಮುಂದೆ ನಾನು ಸೇನೆಗೆ ಸೇರಿ ದೇಶಕ್ಕೆ ಕೀರ್ತಿ ತರುವಂತಾಗಬೇಕು, ಅಥವಾ ಐ.ಎ.ಎಸ್ ಅಧಿಕಾರಿಯಾಗಿ ಅತ್ಯುತ್ತಮ ರೀತಿಯಲ್ಲಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಒಳ್ಳೆಯ ಹೆಸರನ್ನು ಗಳಿಸಬೇಕು ಎಂಬ ಛಲವಿತ್ತು. ಆವಾಗಿನ ತಂದೆ-ತಾಯಿಗಳು ಕೂಡಾ ತಾವು ಸ್ವತಃ ಶಿಸ್ತುಬದ್ಧರಾಗಿದ್ದ ಕಾರಣ ತಮ್ಮ ಮಕ್ಕಳನ್ನು ಕೂಡಾ ಯೋಗ್ಯ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಹಂಬಲವಿತ್ತೇ ವಿನಹಾ ಅದಾಗಬೇಕು....... ಇದಾಗಬೇಕು ಎಂಬ ನಿಧಿಷ್ಟವಾದ ಬೇಡಿಕೆ ಇದ್ದಿರಲಿಲ್ಲ.

ಇಂದು ನಾವೆಲ್ಲರೂ ಸುಲಭದ ಜೀವನವನ್ನು ಬಯಸುತ್ತಿದ್ದೇವೆ. ಹಣ ಸಾಕಷ್ಟು ಸಿಗಬೇಕು, ಜೀವನ ಸುಲಭವಾಗಬೇಕು ಎನ್ನುವುದೊಂದೇ ಗುರಿಯಾಗಿದೆ. ಐ.ಎ.ಎಸ್ ಅಧಿಕಾರಿ ಯಾಕೆ ಆಗಬೇಕು? ೪ ವರ್ಷ ಯಾವುದಾದರೂ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಸಾಕಷ್ಟು ಹಣ ಮಾಡಬೇಕು. ಆಮೇಲೆ ಜೀವನಪೂರ್ತಿ ಹಾಯಾಗಿರಬಹುದು. ಎಮ್‌ಪಿ/ಎಮ್.ಎಲ್.ಎ ಯಾಕೆ ಆಗಬೇಕು? ಒಂದು ಬಾರಿ ಗೆದ್ದರೆ ಐದು ವರ್ಷದಲ್ಲಿ ಸಾಕಷ್ಟು ಹಣ ಮಾಡಬೇಕು. ಮುಂದೆ ಗೆದ್ದು ಬರುವ ಗ್ಯಾರಂಟಿಯಿಲ್ಲ, ಅಥವಾ ಗೆಲ್ಲದಿದ್ದರೂ ಪರವಾಗಿಲ್ಲ. ಮುಂದೆ ಹಾಯಾಗಿ ಜೀವಿಸಬಹುದಲ್ಲವೆ? ಇಂಜೀನಿಯರ್ ಆಗಿ, ಡಾಕ್ಟರ್ ಆಗಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಎಕ್ಸ್‌ಕ್ಯೂಟೀವ್ ಆಗಿ ಸಾಕಷ್ಟು ಹಣ ಗಳಿಸಿ ಆರಾಮವಾಗಿ ಜೀವಿಸಬೇಕು, ಶ್ರೀಮಂತರ ಮನೆಯ ಕನ್ಯೆಯನ್ನು ವಿವಾಹವಾಗಬೇಕು. ನಾಳೆ ಏನಾದರೂ ಸಮಸ್ಯೆ ಬಂದರೆ ಸಹಾಯ ಸಿಗುತ್ತದಲ್ಲಾ! ಗವರ್ನ್‌ಮೆಂಟ್ ಕೆಲಸ ಯಾಕೆ ಬೇಕು? ತಿಂಗಳು ತಿಂಗಳು ಸರಿಯಾಗಿ ಸಂಬಳ ಬರುತ್ತದೆ. ಕೆಲಸ ಮಾಡಬೇಕಾಗಿಲ್ಲ. ಹೇಳುವವರಿಲ್ಲ, ಕೇಳುವವರಿಲ್ಲ. ಚಮ್ಚಾಗಿರಿ ಮಾಡ್ತಾ ಇದ್ರೆ ಲಂಚವೂ ತಿನ್ನಬಹುದು. ಲೈಫ್ ಸೆಕ್ಯೂರ್ ಆಗುತ್ತೆ.......... ಎಂದು ಹಲವಾರು ಕ್ಷೇತ್ರದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಮರೆತು ಕೇವಲ ತಮ್ಮ ಸುಖವನ್ನು ಮಾತ್ರವೇ ಅರಸುತ್ತಾ ಹೋಗುವ ಜನರು ಎಲ್ಲಡೆ ತುಂಬಿರುವಾಗ ರಾಷ್ಟ್ರ ನಿರ್ಮಾಣ ಎಲ್ಲಿ ಆಗುತ್ತದೆ? ಒಂದೆಡೆ ರಾಜಕೀಯ ಸಮಸ್ಯೆ. ಇನ್ನೊಂದೆಡೆ ದೇಶಕ್ಕೆ ಹೊರೆಯಾಗಿರುವ ಅಪಾರ ಜನಸಂಖ್ಯೆ. ದೇಶವನ್ನು ಕಬಳಿಸುವವರೇ ಹೆಚ್ಚಾಗಿರುವ ಈ ದೇಶದಲ್ಲಿ ಇಂತಹ ಹಲವಾರು ಬಗೆಯ ರೋಗಗಳು ಅಂಟಿಕೊಂಡಿವೆ. ಈ ಸನ್ನಿವೇಶ ಪ್ರಸಕ್ತ ಜನಾಂಗಕ್ಕೆ ಮಾರಕವಾಗಿದೆ ಮಾತ್ರವಲ್ಲದೆ ಇದು ಮುಂದಿನ ಪೀಳಿಗೆಯನ್ನು ಕೂಡಾ ಹಾಳು ಮಾಡುವಂತೆ ಕಾಣುತ್ತಿದೆ.

ಆದ್ದರಿಂದ ಭವ್ಯ ಭಾರತವನ್ನು ನಿರ್ಮಿಸಬೇಕಾದಲ್ಲಿ, ದೇಶದ ಕಳೆದುಕೊಂಡಿರುವ ವರ್ಚಸ್ಸನ್ನು ಮತ್ತೆ ಪಡೆದುಕೊಳ್ಳಲು ಮತ್ತು ರಾಜಕೀಯ ಶುದ್ಧೀಕರಣ ಮಾಡುವುದಕ್ಕಾಗಿ ಉತ್ತಮ ನಾಗರಿಕರ ಅಗತ್ಯವಿದೆ. ಇದರಿಂದಾಗಿ ಸಮಾಜದಲ್ಲಿ ಉತ್ತಮ ಸಂಸ್ಥೆಗಳು ನಿರ್ಮಾಣವಾಗುತ್ತವೆ. ಉತ್ತಮ ಸಂಸ್ಥೆಗಳಿಂದ ಉತ್ತಮ ಮುಖಂಡರು ಹುಟ್ಟಿಕೊಳ್ಳುತ್ತಾರೆ. ಉತ್ತಮ ಮುಖಂಡರು ಮತ್ತೆ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ. ಮಹಾತ್ಮಾ ಗಾಂಧಿ ಸ್ವತಂತ್ರ ಭಾರತಕ್ಕೆ ಕಾರಣಕರ್ತರಾಗಿದ್ದರು. ಈಗ ಸ್ವತಂತ್ರ ಭಾರತ ಅಂತಹ ಗಾಂಧೀಜಿಯವರನ್ನು (ಅಂದರೆ ಮಹಾಪುರುಷರನ್ನು) ಮತ್ತೆ ತಯಾರು ಮಾಡಬೇಕಾದ ಅಗತ್ಯವಿದೆ.

 

ಲೇಖಕ : ಚಿತ್ತರಂಜನ್ ದಾಸ್

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited