Untitled Document
Sign Up | Login    
ಸೌಂದರ್ಯ ಪ್ರಜ್ಞೆ ಬಾಳಿನಲ್ಲಿರಲಿ ಮುಖದಲ್ಲಿ ಮಂದಹಾಸ ಮಿನುಗುತ್ತಿರಲಿ...

ನಾವೆಲ್ಲರೂ ನಮ್ಮ ಶರೀರವನ್ನು ಸುಂದರವಾಗಿರಿಸಿಕೊಳ್ಳಲು ಬಯಸುತ್ತೇವೆ. ಶರೀರದ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ನಾನಾ ರೀತಿಯ ಅಲಂಕಾರ ವಸ್ತುಗಳನ್ನು ಉಪಯೋಗಿಸುತ್ತೇವೆ. ಮುಖಕ್ಕೆ, ಕಾಲಿಗೆ, ತಲೆಗೆ, ಕೂದಲುಗಳಿಗೆ ಎಂಬಂತೆ ಹತ್ತು-ಹಲವಾರು ಕಾಸ್ಮೆಟಿಕ್ಸ್ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಅವುಗಳನ್ನೆಲ್ಲವನ್ನೂ ತರುತ್ತೇವೆ. ಮನೆಯಿಂದ ಹೊರಡುವಾಗ ತಪ್ಪದೆ ಅಲಂಕರಿಸುತ್ತೇವೆ. ಡ್ರೆಸ್‌ಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ. ಯುವತಿಯರು, ಅದರಲ್ಲೂ ಮುಖ್ಯವಾಗಿ ಗ್ಲಾಮರ್ ಜಗತ್ತಿನವರು ಅಲಂಕಾರದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಡ್ರೆಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಫ್ಯಾಶನ್,ಬಣ್ಣ ಇತ್ಯಾದಿಗಳ ಬಗ್ಗೆ ಸಾಕಷ್ಟು ಲೆಕ್ಕಾಚಾರ ಮಾಡಿಕೊಳ್ಳುತ್ತೇವೆ.

ಇಷ್ಟೆಲ್ಲಾ ಮಾಡಿಕೊಂಡರೂ, ಎಲ್ಲೋ ಏನೋ ಎಡವಟ್ಟಾಗಿದೆ ಎಂಬ ಶಂಕೆ ಮನದಲ್ಲಿ ಮೂಡುತ್ತದೆ. ಪ್ರಾಯದ ಕುರುಹು ಮೇಕ್-ಅಪ್-ಅನ್ನು ಹಾಳು ಮಾಡುತ್ತಿದೆಯೇ? ಮುಖದಲ್ಲಿ ಚಿಂತೆಗಳು ವ್ಯಕ್ತವಾಗಿ ಸೌಂದರ್ಯತೆಯನ್ನು ಹಾಳು ಮಾಡುತ್ತಿವೆಯೇ? ಎಂಬ ಯೋಚನೆ ಮೂಡುತ್ತದೆ. ಎಲ್ಲಾ ಕೃತಕ ಅಲಂಕಾರಗಳಿಗೆ ಮೀರಿ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಲು ನಮ್ಮಲ್ಲಿರಬೇಕಾದ ಅತ್ಯಂತ ಪ್ರಾಮುಖ್ಯವಾದ ಸಂಪತ್ತೆಂದರೆ ಮುಖದಲ್ಲಿ ಮುಗುಳ್ನಗೆ ಮತ್ತು ಹೃದಯದಲ್ಲಿ ಸಂತೋಷ. ನಾವು ಸಂತೋಷದಿಂದಿರಬೇಕು. ಸದಾ ನಗುನಗುತ್ತಿರಬೇಕು. ಇದುವೇ ಸೌಂದರ್ಯದ ರಹಸ್ಯ. ಮನಸ್ಸಿನಲ್ಲಿ ಚಿಂತೆ ಕಾಡುತ್ತಿದ್ದರೆ, ಜೀವನದಲ್ಲಿ ಶಿಸ್ತು ಇಲ್ಲದಿದ್ದಲ್ಲಿ, ಸಮಸ್ಯೆಗಳು ತಾಂಡವವಾಡುತ್ತಿದ್ದಲ್ಲಿ ಶರೀರ ತಾನಾಗಿಯೇ ಸೊರಗುತ್ತದೆ, ಎಲ್ಲಾ ಅಲಂಕಾರಗಳು ವೇಸ್ಟ್ ಆಗುತ್ತದೆ. ಸೌಂದರ್ಯ ಮಾಯವಾಗುತ್ತದೆ.

ಸೌಂದರ್ಯ ಯಾವತ್ತೂ ಕೃತಕವಾಗಿರುವುದಿಲ್ಲ. ಅದು ನೈಸರ್ಗಿಕವಾಗಿರಬೇಕು. ನಾವು ಧರಿಸುವ ವೇಶ-ಭೂಷಣಗಳು ಹಾಗೂ ಮಾಡುವ ಅಲಂಕಾರಗಳು ಮತ್ತು ನಮ್ಮ ಶರೀರದ ನೈಜ ಗಾತ್ರ ಮತ್ತು ಆಕಾರಗಳ ನಡುವೆ ಯಾವಾಗಲೂ ಒಂದು ರೀತಿಯ ಸಂತುಲನೆ ಇರುತ್ತದೆ. ಮಹಿಳೆಯರಲ್ಲಿ ದಪ್ಪ ಶರೀರದವರು, ತೆಳ್ಳಗಿನವರು, ಶ್ಯಾಮಲ ವರ್ಣದವರು ಮತ್ತು ಗೋಧೀ (ವೀಟಿಶ್) ವರ್ಣದವರು ಎಂಬಂತೆ ಹಲವಾರು ರೀತಿಯಲ್ಲಿರುತ್ತಾರೆ. ಶರೀರದ ಬಣ್ಣಕ್ಕೆ ಅನುಗುಣವಾಗಿ ಬಟ್ಟೆಗಳ ಬಣ್ಣವೂ ಕೂಡಾ ಮ್ಯಾಚಿಂಗ್ ಇದ್ದರೆ ಚೆನ್ನಾಗಿರುತ್ತದೆ. ಬಿಳಿ/ಗೋಧಿ ಬಣ್ಣದ ಶರೀರಕ್ಕೆ ಕೆಂಪು ಅರಿಶಿನ ಬಣ್ಣಗಳು ಅಥವಾ ಬಿಳಿ ಬಟ್ಟೆಯ ಮೇಲೆ ಇವುಗಳ ಲೈನಿಂಗ್‌ಗಳಿದ್ದರೆ ಚೆನ್ನಾಗಿರುತ್ತದೆ. ಕಪ್ಪು ಬಣ್ಣದವರಿಗೆ ಹಗುರ ಬಣ್ಣಗಳು ಸೂಕ್ತವಾಗಿರುತ್ತದೆ. ನೀಲಿ ಬಣ್ಣವೂ ಕೂಡಾ ಸೂಕ್ತವಾಗಿರುತ್ತದೆ. ಆದ್ದರಿಂದ ತಮ್ಮ ಶರೀರದ ವರ್ಣಕ್ಕೆ ಅನುಗುಣವಾಗಿ ಬಟ್ಟೆಗಳನ್ನು ಅಥವಾ ವ್ಯಾನಿಟಿ ಬ್ಯಾಗನ್ನು ಉಪಯೋಗಿಸಬಹುದು. ಅದೇ ರೀತಿಯಲ್ಲಿ ದಪ್ಪ-ತೆಳ್ಳಗೆಗೆ ಅನುಗುಣವಾಗಿ ಸೀರೆಗಳು, ಸಲ್ವಾರ್ ಕಮೀಜ್ ಮೊದಲಾದವುಗಳನ್ನು ಧರಿಸಬೇಕು. ನೀಲಿ ಹಸಿರು ಮತ್ತು ಕೆಂಪು ಪ್ರೈಮ್ ಕಲರ್‌ಗಳಾಗಿರುತ್ತವೆ. ಪುರುಷರು ಈ ಬಣ್ಣದ ಪ್ಲೈನ್ ಶರ್ಟ್ ಅಥವಾ ಬೇರೆ ಬಣ್ಣದ ಶರ್ಟ್ ಧರಿಸಿದ್ದಲ್ಲಿ ಮೇಲೆ ತಿಳಿಸಿರುವ ಯಾವುದಾದರೂ ಒಂದು ಬಣ್ಣದ ಲೈನಿಂಗ್ ಇದ್ದಲ್ಲಿ ಅದು ತುಂಬಾ ಚೆನ್ನಾಗಿರುತ್ತದೆ. ಕಪ್ಪು ಅಥವಾ ನೀಲಿ ಪ್ಯಾಂಟ್‌ಗಳು ಮುಖ್ಯವಾಗಿ ಚಾಲನೆಯಲ್ಲಿದ್ದರೂ ಬೇರೆ ಬಣ್ಣದ ಪ್ಯಾಂಟ್‌ಗಳಿಗೆ ಬಿಳಿ ಅಥವಾ ಅರಶಿನ ಬಣ್ಣದ ಶರ್ಟ್‌ಗಳು ಅತ್ಯಂತ ಸೂಕ್ತವಾದ ಮ್ಯಾಚ್ ಆಗಿರುತ್ತದೆ.

 


ಹಣದ ಬಲದಿಂದ ಮೇಲಿನ ವ್ಯವಸ್ಥೆಗಳನ್ನು ಯಾರೂ ಕೂಡಾ ಮಾಡಿಕೊಳ್ಳಬಹುದು. ಆದರೆ, ಯಾವುದೆ ಕಾಯಿಲೆಯನ್ನು ಹೊಂದಿದ್ದಲ್ಲಿ, ಹಾಗೂ ಔಷಧಿ ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿದ್ದರೂ ಸರಿಯಾಗಿ ಗುಣಮುಖವಾಗುತ್ತಿಲ್ಲವಾಗಿದ್ದಲ್ಲಿ ಶರೀರ ಕಂಗೆಡುತ್ತದೆ ಮತ್ತು ಕ್ಷೀಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವ ಡ್ರೆಸ್‌ಗಳು ಅಥವಾ ಯಾವ ಅಲಂಕಾರಗಳು ಕೂಡಾ ಶರೀರದ ಸೌಂದರ್ಯವನ್ನು ಹೆಚ್ಚಿಸಲಾರದು. ನಿಮ್ಮ ವ್ಯಕ್ತಿತ್ವ ಇತರರು ನಿರ್ಲಕ್ಷಿಸುವಷ್ಟು ಅಸಹ್ಯವಾಗಿರುತ್ತದೆ. ಆದ್ದರಿಂದ, ಸೌಂದರ್ಯದ ಹಿನ್ನೆಲೆ ತುಂಬಾ ದೊಡ್ಡದಿರುತ್ತದೆ.

ಯಾವಾಗಲೂ ನಗು ನಗುತ್ತಿರಬೇಕು ಎಂದು ಹೇಳುವುದು ತುಂಬಾ ಸುಲಭ. ಆದರೆ ಇದನ್ನು ಆಚರಣೆಗೆ ತರುವುದು ತುಂಬಾ ಕಷ್ಟ. ನಿಮ್ಮ ಸೌಂದರ್ಯಕ್ಕೆ ನಗುವೇ ಅಂತರಾಳದ ರಹಸ್ಯವಾಗಿರುತ್ತದೆ. ಸದಾ ಹರ್ಷಚಿತ್ತರಾಗುವುದರಿಂದ ಮುಖದಲ್ಲಿ ಹಾಗೂ ಅದರಲ್ಲೂ ಮುಖ್ಯವಾಗಿ ಕಣ್ಣಿನಲ್ಲಿ ಏನೋ ಹೊಳಪು ಇರುತ್ತದೆ. ನೀವು ಬೆಳ್ಳಗಿರಲಿ ಅಥವಾ ಕಪ್ಪಾಗಿರಲಿ, ಇದು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಯಾವಾಗಲೂ ನಗು ನಗುತ್ತಿರಬೇಕಾದರೆ ನಿಮ್ಮಲ್ಲಿ ಯಾವುದೇ ಸಮಸ್ಯೆಗಳಿರಬಾರದು. ಪ್ರತಿದಿನ ರಾತ್ರಿ ವಿಪರೀತ ಕುಡಿದು ಜಗಳಾಡುವ ಅಥವಾ ಹೊಡೆದಾಡುವ ಗಂಡನಿದ್ದಲ್ಲಿ, ಇನ್ನೆಲ್ಲಿರುತ್ತದೆ ನಗು? ಸ್ವಂತ ಮನೆಯಾಗಬೇಕು, ಮನೆಯಲ್ಲಿ ಸಕಲ ಸರಂಜಾಮುಗಳಿದ್ದು ಘನತೆ ಹೆಚ್ಚಿಸಿಕೊಳ್ಳುವುದಕ್ಕಾಗಿ ಸಿಕ್ಕಾಬಟ್ಟೆ ಸಾಲ ಮಾಡಿಕೊಂಡು ಹೋಮ್ ಲೋನ್, ಪರ್ಸನಲ್ ಲೋನ್ ಎಂಬಂತೆ ಹಲವಾರು ಲೋನ್‌ಗಳಿಗೆ ತಿಂಗಳಿನಲ್ಲಿ ಬರುವ ನಿರ್ಧಿಷ್ಟವಾದ ವೇತನಗಳಿಂದ ಪತಿ-ಪತ್ನಿಯರಿಬ್ಬರು ಕಂತುಗಳನ್ನು ಕಟ್ಟುವುದಕ್ಕಾಗಿ, ಮಕ್ಕಳ ಫೀಸ್ ಕಟ್ಟುವುದಕ್ಕಾಗಿ ಸರಿಯಾಗಿ ಉಣ್ಣದೇ, ಸರಿಯಾಗಿ ನಿದ್ರಿಸದೇ ಚಿಂತೆ ಮಾಡಿಕೊಂಡಿದ್ದಲ್ಲಿ, ಇನ್ನೆಲ್ಲಿ ಬರುತ್ತದೆ ನಗು? ಪಾರ್ಟಿ, ಫ್ರೆಂಡ್ಸ್, ಬಾಯ್‌ಫ್ರೆಂಡ್ ಎನ್ನುತ್ತಾ, ಪಬ್‌ಗಳಲ್ಲಿ ತಿರುಗುತ್ತಾ ಶಿಸ್ತಿಲ್ಲದ ಬಾಳನ್ನು ಮುಂದುವರಿಸಿಕೊಂಡು ಬಂದಲ್ಲಿ, ಬಾಯ್ ಫ್ರೆಂಡ್ ಸಮಸ್ಯೆ, ಆರೋಗ್ಯ ಸಮಸ್ಯೆ ಎಂದು ಯವತಿಯರಿಗೆ ಹಲವಾರು ಸಮಸ್ಯೆಗಳಿದ್ದಲ್ಲಿ ಮತ್ತೆಲ್ಲಿ ಬರುತ್ತದೆ ನಗು? ಹೇಗೆ ಹೆಚ್ಚುತ್ತದೆ ಸೌಂದರ್ಯ?
ಅದಕ್ಕಾಗಿಯೇ ಹೇಳುತ್ತಾರೆ ನಾಳ್ನುಡಿ ಸುಳ್ಳಲ್ಲ ಎಂದು. ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ನಮ್ಮ ಆಸೆಗಳನ್ನು ನಮ್ಮ ವರಮಾನದ ಒಳಗೆಯೇ ಸೀಮಿತಗೊಳಿಸಿಕೊಂಡಲ್ಲಿ ಬಾಳು ಸುಂದರ, ಮನದಲ್ಲೂ ಸಂತೋಷವಿರುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ನಾಳ್ನುಡಿಯಲ್ಲಿ ಅಪಾರ ಅರ್ಥವಿದೆ. ಯಾರ ಯಾರ ಜೊತೆ ಹೇಗೆ ಮಾತಾಡಬೇಕು ಎಂದು ಚೆನ್ನಾಗಿ ಅರಿತುಕೊಂಡಲ್ಲಿ ಅನಗತ್ಯ ಕ್ಲೇಶ ಹುಟ್ಟುವುದಿಲ್ಲ. ಅನಗತ್ಯ ವಾದ-ವಿವಾದಗಳು ದೊಡ್ಡದಾಗಿ, ಕಲಹವಾಗಿ ಶತ್ರುಗಳನ್ನು ನಿರ್ಮಿಸುತ್ತದೆ.

ಮಹಾಭಾರತ ಕಥೆಯಲ್ಲಿ ಅರಗಿನ ಮನೆ ಸುಟ್ಟ ಪ್ರಕರಣ ಬಳಿಕ ಪಾಂಡವರು ಮತ್ತೆ ಹಸ್ತಿನಾಪುರಕ್ಕೆ ಬರುತ್ತಾರೆ. ಅವರಿಗಾಗಿ ಇಂದ್ರಪ್ರಸ್ಥದಲ್ಲಿ ಸುಂದರವಾದ ಭವನವನ್ನು ನಿರ್ಮಿಸಲಾಗುತ್ತದೆ. ಅದರ ಗ್ರಹ ಪ್ರವೇಶ ಅಂಗವಾಗಿ ಒಂದು ಯಾಗವನ್ನು ಏರ್ಪಡಿಸಲಾಗುತ್ತದೆ. ಧೃತರಾಷ್ಟ್ರ, ಭೀಷ್ಮ ಮೊದಲ್ಗೊಂಡು ಹಸ್ತಿನಾಪುರದಿಂದ ಎಲ್ಲರನ್ನೂ ಆಹ್ವಾನಿಸಲಾಗುತ್ತದೆ. ವಿಶಿಷ್ಟ ವಿನ್ಯಾಸಗಳಿಂದ ನಿರ್ಮಿಸಲಾಗಿರುವ ಈ ಮನೆಯನ್ನು ವೀಕ್ಷಿಸುತ್ತಾ ಧುರ್ಯೋಧನ ಆಶ್ಚರ್ಯಗೊಳ್ಳುತ್ತಾನೆ. ನೆಲ-ನೀರು ವ್ಯತ್ಯಾಸ ಕಾಣದೆಯೇ ಕೊಳವೊಂದಕ್ಕೆ ಬೀಳುತ್ತಾನೆ. ಆಗ ಮಹಡಿಯ ಮೇಲಿದ್ದ ದ್ರೌಪದಿ ಕುರುಡನ ಪುತ್ರನೂ ಕೂಡಾ ಕುರುಡನೇ ಆಗಿರುತ್ತಾನೆ ಎಂದು ಕಿಲ ಕಿಲ ನಗುತ್ತಾ ಧುರ್ಯೋಧನನನ್ನು ಅಣಕಿಸುತ್ತಾಳೆ. ಮೊದಲೇ ಪಾಂಡವರಿಗೆ ಶತ್ರುವಾಗಿರುವ ವ್ಯಕ್ತಿ ಎಂದು ತಿಳಿದಿರುವಾಗ ಆತನ ಬಗ್ಗೆ ಈ ಪ್ರಕಾರವಾಗಿ ದ್ರೌಪದಿ ಮಾತನಾಡಿದ್ದು ಸರಿಯಲ್ಲ. ಆವಾಗಲೇ ಧುರ್ಯೋಧನ ಈಕೆಯ ಸೊಕ್ಕನ್ನು ಅಡಗಿಸಬೇಕು ಎಂದು ಛಲ ತೆಗೆದುಕೊಳ್ಳುತ್ತಾನೆ. ಮುಂದೆ ಜೂಜಾಟ, ದ್ರೌಪದಿ ವಸ್ತ್ರಾಪಹರಣ ಗೊತ್ತಲ್ಲ? ಆದ್ದರಿಂದ ನಾವು ಯಾವಾಗಲೂ ವಿನಮ್ರತೆಯಿಂದ ಮಾತನಾಡಬೇಕು. ಅನಗತ್ಯ ಕಮೆಂಟ್‌ಗಳು ಬೇಡ. ಸ್ವಾರ್ಥ ಬುದ್ಧಿ, ದುರಾಸೆಗಳು ನಿಮ್ಮ ಶರೀರ ಮತ್ತು ಸೌಂದರ್ಯವನ್ನು ಹಾಳು ಮಾಡುತ್ತವೆ. ಹೊಟ್ಟೆ ಎನ್ನುವುದು ಸಿಕ್ಕಿದ್ದನ್ನೆಲ್ಲಾ ತುಂಬಿಸುವ ಉಗ್ರಾಣವಲ್ಲ. ಆಹಾರಗಳು ನಿಮ್ಮ ಶರೀರಕ್ಕೆ ಬೇಕು, ಚಪಲಕ್ಕಲ್ಲ. ಮಿತವಾಗಿ ಸೇವಿಸಿ ಹಿತವಾಗಿ ಬಾಳಿರಿ. ಸೌಂದರ್ಯ ಎನ್ನುವುದು ನಿಮ್ಮ ಶಿಸ್ತು ಬದ್ಧ, ಸ್ವಾರ್ಥ ರಹಿತ ಬಾಳಿನಲ್ಲಿದೆ. ಅಲಂಕಾರ ವಸ್ತುಗಳಲ್ಲಿ ಅಲ್ಲ.

ನಗು ನಗುತಾ ನಲೀ ನಲೀ ಎನೇ ಆಗಲಿ..

ಲೇಖಕ : ಎ.ವಿ.ಚಿತ್ತರಂಜನ್ ದಾಸ್ ನವದೆಹಲಿ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited