Untitled Document
Sign Up | Login    
ಲಂಚವೆಂಬ ರಹದಾರಿ

ಲಂಚ ಕೊಟ್ಟರೆ ಮಂಚ..
ದೇಶದ ಎಲ್ಲ ಯೋಜನೆಗಳನ್ನೂ ನುಂಗಿಹಾಕಿ, ಅಭಿವೃದ್ಧಿಯನ್ನು ಕುಂಠಿತಗೊಳಿಸಿ ಜನರ ದುಡ್ಡನ್ನು ತಿಂಗುತೇಗುತ್ತಿರುವ 'ಭ್ರಷ್ಟಾಚಾರ' ಇಂದು ಸರ್ವವ್ಯಾಪಿಯಾಗಿದೆ. ಲಂಚವೆಂಬುದು ಭ್ರಷ್ಟಾಚಾರದ ಹೆಬ್ಬಾಗಿಲು, ಅದಕ್ಕಿಂಬುಮಾಡಿಕೊಡುವ ಅಲಿಖಿತ ರಹದಾರಿ. ತನ್ಮೂಲಕ ಕೆಲವೇ ಕೆಲವು ಜನ ಇಡೀ ಸಮೂಹವನ್ನು ವಂಚಿಸಿ ತಾವು ಮಾತ್ರ ಲಾಭ ಮಾಡಿಕೊಳ್ಳುವ ‘ಲೂಟಿ ಕೋರ ದಂಧೆ’ ಇದಾಗಿದೆ.

‘ಲಂಚವಿಲ್ಲದ ಜಾಗವಿಲ್ಲ; ವಂಚನೆಯಿಲ್ಲದ ಜಾಲವಿಲ್ಲ’ ಎನ್ನುವ ಹೊಸಗಾದೆಯನ್ನೀಗ ಬರೆಯಬೇಕಾಗಿದೆ. ಯಾವುದೇ ಸರಕಾರಿ, ಅರೆಸರಕಾರೀ ಕಚೇರಿಗೆ ಹೋಗಲಿ ಅಲ್ಲಿ ಕಾರಕೂನನಿಂದ ಹಿಡಿದು ಸಾಹೇಬರವರೆಗೆ ‘ಕಾಂಚಾಣ’ ಒಗೆದೇ ಮುಂದೆ ಹೋಗಬೇಕು. ಕಾನೂನು ರೀತ್ಯಾ ಮಾಡಲೇಬೇಕಾದ ಕೆಲಸವಾದರೂ ಲಂಚ ನೀಡಬೇಕು. ಕಾನೂನು ಬಾಹಿರ ಅಥವಾ ಲೋಪದೋಷಗಳಿದ್ದರಂತೂ ಲಂಚ ತಿನ್ನುವವನ ಬಾಯಿ ಎಷ್ಟು ದೊಡ್ಡದೊ, ಕೆಲಸದ ಮಹತ್ವ ಅಥವಾ ‘ಕೆಲಸದ ಬೆಲೆ’ಯೆಷ್ಟೊ ಅಷ್ಟು ಪ್ರಮಾಣದಲ್ಲಿ ‘ಮೊತ್ತ’ ಬೆಳೆಯುತ್ತ ಹೋಗುತ್ತದೆ. 'ನೈವೇದ್ಯ ಬಲಿ' ಇಡದೇ ಹೋದರೆ ಭೂತ ತೃಪ್ತಿ ಆಗುವುದಿಲ್ಲ. ಒಂದು ಕೆಲಸ ಆಗುವುದಿಲ್ಲ; ಇಲ್ಲವೇ ಉಲ್ಟಾ ಆಗುತ್ತದೆ; 'ಲಂಚಕ್ಕೆ ಇನ್ನೊಂದು ಹೆಸರೇ ಸರಕಾರಿ ನೌಕರ; ಭ್ರಷ್ಟಾಚಾರಕ್ಕೆ ಪರ್ಯಾಯ ಶಬ್ಧವೇ ರಾಜಕಾರಣಿ' ಎನ್ನುವಂತೆ. ( ಕಲವೇ ಜನ ಪ್ರಾಮಾಣಿಕರನ್ನು ಹೊರತುಪಡಿಸಿ).

ನೌಕರನಿಗೆ ಸರಕಾರ ಸಂಬಳ ಕೊಡುವುದಿಲ್ಲವೇ? ಅವರೇನು ನಮ್ಮ ಮೇಲಿನ ರಾಜರೆ?. ನೀಟಾಗಿ ಡ್ರೆಸ್ ಮಾಡಿಕೊಂಡು ತಮ್ಮ ತಮ್ಮ ಖುರ್ಚಿಯನ್ನು ಅಲಂಕರಿಸಿದರೆ ಮುಗಿಯಿತು. ಅವರೇ ಕೊತ್ವಾಲರು! ಅವರೇ ಬಾದಶಹರು!! ಲಂಚದ ವಿರುದ್ದ ದ್ವನಿ ಎತ್ತಿದರೆ ಕೆಲಸ ಹಳ್ಳ ಹಿಡಿಯುತ್ತದೆ. ಜೊತೆಗೆ ಅವನ ಮೇಲೆ ಎಲ್ಲಾ ದಿಕ್ಕುಗಳಿಂದಲೂ ಯುದ್ದ ಸಾರಲಾಗುತ್ತದೆ!

 

ನಮ್ಮ ಅವಶ್ಯಕತೆ ಹಾಗೂ ಅನಿವಾರ್ಯತೆಯ ಆಧಾರದ ಮೇಲೆ ಲಂಚದ ರೇಟು ಮೇಲೇರುತ್ತದೆ. ನಮ್ಮನ್ನು ಹಗುರವಾಗಿ ಕಾಣುವ ನೌಕರರು, ಅಧಿಕಾರಿಗಳು ಹೆಚ್ಚೆಚ್ಚು ‘ಗತ್ತು’ ತೋರಿಸುವುದು, ನಮ್ಮನ್ನು ಗದರಿಸುವುದು ಯಾಕೆಂದರೆ, ಆಗ ಕಾಂಚಣ ಹೆಚ್ಚು ಉದುರುತ್ತದೆ ಎಂದು ಅವರಿಗೆ ಗೊತ್ತು. ಪೋಲಿಸ್ ಇಲಾಖೆಯ ಸುದ್ದಿಯನ್ನಂತೂ ಹೇಳುವುದೇ ಬೇಡ ಬಿಡಿ. ಹೆಚ್ಚಿನ ಸಂದರ್ಭಗಳಲ್ಲಿ ಸಜ್ಜನರೂ ಅಪರಾಧಿಗಳಂತೆಯೇ ಬೆಲೆತೆರಬೇಕಾಗಿ ಬರುವುದರಿಂದ ಮರ್ಯಾದಸ್ಥರು ಆ ಬದಿಗೆ ತಲೆಮಾಡಿ ಮಲಗಲೂ ಅಂಜುತ್ತಾರೆ.

ಸರಕಾರಿ ನೌಕರರು, ಅಪರಾಧಿಗಳು (ಪ್ರಾಮಾಣಿಕರನ್ನು, ದಕ್ಷರನ್ನು ಹೊರತುಪಡಿಸಿ) ಎಷ್ಟು ನೀಚರಾಗಿದ್ದಾರೆಂದರೆ ಬಡವರ, ಕೆಲಸ ಮಾಡಿಕೊಳ್ಳಲು ಹೋದವರ ಪಾಲಿಗೆ ಜಿಗಣೆಗಳಾಗಿದ್ದಾರೆ. ಹಣದ ಮೂಟೆಯನ್ನು ನುಂಗುವ ತಿಮಿಂಗಲವಾಗಿದ್ದಾರೆ. ಅಭಿವೃಧ್ಧಿಯ ಮೂಲನೆಲೆಯಾಗಿದ್ದ ರಸ್ತೆ, ಹೆದ್ದಾರಿ, ಕಟ್ಟಡಗಳ ವಿಷಯದಲ್ಲಂತು ಮಹಾದೊಡ್ಡ ‘ನುಂಗಣ್ಣ’ ಗಳಾಗಿರುವ ಇಂಜಿನಿಯರ್ ಮತ್ತು ಗುತ್ತಿಗೆದಾರರ ಪರಮಲಾಲಸೆಯಿಂದಾಗಿ ಕಳಪೆ ಕಾಮಗಾರಿ, ಕಣ್ಣೊರೆಸುವ ತಂತ್ರ, ಮೂರುಕೆರೆಯ ಬದಲಿಗೆ ಒಂದೇ ಕೆರೆ ಆಗಿರುವುದನ್ನು ಕಾಣಬಹುದು.

ಅರಣ್ಯ ಇಲಾಖೆ ಬಗ್ಗೆ ಒಂದೇ ಉದಾಹರಣೆ ಸಾಕು. ಒಂದು ಸಸಿಯನ್ನೂ ನೆಡದೇ ಲಕ್ಷಸಸಿ ನೆಡಲಾಗಿದೆ, ಕಾಮಗಾರಿ ನೆಡದಿದೆ ಎಂದು ಬಿಲ್ಲುಪಾಸು ಮಾಡಿಸಿಕೊಳ್ಳುವುದು, ಹಾಗು ಲಾರಿಗಟ್ಟಲೆ ಕಳ್ಳ ನಾಟ ಸಾಗಾಟ ನಡೆದು ಅರಣ್ಯಲೂಟಿಯಾಗುತ್ತಿದ್ದರೂ ‘ತುಂಡು ಕಟ್ಟಿಗೆಯೂ ಹೋಗುತ್ತಿಲ್ಲ’ ಎಂದು ಮಾಹಿತಿ ಸಲ್ಲಿಸುವುದು, ಹೇಳಿಕೆ ನೀಡುತ್ತಿರುವುದು ನಮ್ಮ ಕಣ್ಣೆದುರಿನ ಸತ್ಯ. ಉಚಿತ ಅಕ್ಕಿ, ಕಾಮಗಾರಿ ಅಕ್ಕಿ ಬಿಡುಗಡೆಯಾದರೆ ಕಾಳಸಂತೆಯಲ್ಲಿ ಮಾರಾಟವಾಗುವುದು, ಸರಕಾರೀ ವಿದ್ಯಾರ್ಥಿ ನಿಲಯಗಳಲ್ಲಿ ಲಕ್ಷಗಟ್ಟಲೆ ನುಂಗುವ ಸರಕಾರಿ ಸಿಬ್ಬಂದಿ ಅಧಿಕಾರವರ್ಗ, ಲಾರಿಗೆಟ್ಟಲೆ ಔಷದ ಮಾಯಮಾಡುವ ಸರಕಾರಿ ಆಸ್ಪತ್ರೆ, ಆರೋಗ್ಯ ಇಲಾಖೆ, ಕಳಪೆ ಔಷಧ ಪೂರೈಸುವ ಕಂಪನಿಗಳು.. ಹೀಗೆ ಪಟ್ಟಿ ಉದ್ದ ಬೆಳೆಯುತ್ತಲೇ ಹೋಗುತ್ತದೆ. ಭೂಮಿ ವಿಲೇವಾರಿ, ವಾಹನ ಮುಂತಾದವುಗಳ ನೋಂದಣಿ ಅಧಿಕಾರಿಗಳ ಬಗ್ಗೆಯಾಗಲಿ, ಮಂತ್ರಿಗಳ ಕರ್ಮಕಾಂಡದ ಬಗೆಗಾಗಲಿ ಹೇಳುವ ಅಗತ್ಯವೇ ಇಲ್ಲ. ಕರ್ನಾಟಕದಲ್ಲಿ ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ಬಂದಮೇಲೆ ಲಂಚದ ಬ್ರಹ್ಮಾಂಡದಲ್ಲಿ ಸಂಚಲನವೇ ಉಂಡಾಯಿತು. ಅಷ್ಟರಮಟ್ಟಿಗೆ ಕಡಿವಾಣ ಬಿದ್ದಿತ್ತು, ಸಂತೋಷ. ಆದರೆ, ಲೋಕಾಯುಕ್ತರು ಹೋರಟುಹೋದ ಮರುದಿನದಿಂದಲೇ ಆಯಾ ಕಛೇರಿಗಳಲ್ಲೂ ಮೊದಲಿನಂತೆಯೇ ವ್ಯವಹಾರ ಕುದುರುತ್ತಿರುತ್ತದೆ ಎಂದರೆ ಯಾರಲ್ಲಿ ದೂರುವುದು? ಭ್ರಷ್ಟಾಚಾರವನ್ನು ತಡೆಯುವುದು ಹೇಗೆ ಎನ್ನುವುದು ಪ್ರಾಮಾಣಿಕ ಕಾಳಜಿಯುಳ್ಳವರನ್ನು ಕಾಡುವ ಪ್ರಶ್ನೆ.
ಸರಕಾರೀ ನೌಕರ ಜನತೆಯ ತೆರಿಗೆಯಿಂದ ವಿತರಿಸಲಾಗುವ ಸರಕಾರೀ ಪಗಾರು ತೆಗೆದುಕೊಳ್ಳುತ್ತಾನೆ. ನೌಕರಿ ಸಿಗುವ ತನಕ ಇಲಿಯಂತಿರುವ ನೌಕರ ನೌಕರಿ ಸಿಕ್ಕ ಮೇಲೆ ಹುಲಿಯಂತಾಗುವುದು ಸರ್ವೇ ಸಾಮಾನ್ಯ. ಉದ್ಯೋಗ ಭದ್ರತೆ, ತನಗಿನ್ನೇನೂ ತೊಂದರೆಯಿಲ್ಲ, ಯಾರೇನೂ ಮಾಡಲು ಸಾಧ್ಯವಿಲ್ಲ ಎಂಬ ಭಂಡ ಧೈರ್ಯ ಇದಕ್ಕೆ ಕಾರಣ. ಲಂಚ ಹೇಗೂ ಅಪರಾಧವನ್ನು
ಮುಚ್ಚಿಹಾಕುತ್ತದೆ. ಲಂಚ ಪಡೆದಾಗ ವಿಚಕ್ಷಕ ದಳದ ಕೈಗೆ ಸಿಕ್ಕಿಬಿದ್ದ ಸಿಬ್ಬಂದಿ ಪಾರಾಗುವುದು ಹೇಗೆ? ಹಿಡಿದ ಅಧಿಕಾರಿಗೆ ಲಂಚಕೊಟ್ಟು ಪಾರಾಗುವುದು! ಅಪರಾಧ ಅಪರಾಧದಿಂದಲೇ ಮುಚ್ಚಿ ಹೋಗುವ ಕಟು ಸತ್ಯವಿದು.

ಸೊಡರು ಲಂಚವ ಕೊಂಡು ಕೊಡುವದೊಪ್ಪಚಿ ಬೆಳಕ
ಪೊಡವಿಗೆ ಸೂರ‍್ಯ ಬೆಳಗುವಲ್ ಲಂಚವನು
ಹಿಡಿಯುವನ ಧರ್ಮಿ ಸರ್ವಜ್ಞ ॥

ಹೀಗೆ ಸರ್ವಜ್ಞನೇನೊ ಲಂಚವನ್ನು ತೆಗೆದುಕೊಳ್ಳುವವನು ‘ಅಧರ್ಮಿ ’ ಎಂದು ಕರೆದ. ಆ ಪಾಪ ಪ್ರಜ್ಞೆ ಲಂಚಕೋರನಿಗೆ ಬರಬೇಕಲ್ಲ!

ವಿ.ಎನ್.ಭಟ್ಟರು ತಮ್ಮ ಕವಿತೆಯೊಂದರಲ್ಲಿ ಹೇಳುತ್ತಾರೆ:

ಸರ್ಕಾರಿ ರಮಗದೊಳು ತುಂಬಿಹುದು ಚಿರನಿದ್ರೆ
ಬಿಸಿಮಾಡಿದೊಡೆ ಕೈಯ್ಯ ಹಾಕುವರು ಮುದ್ರೆ
ವಾಣಿಜ್ಯ ಕ್ಷೇತ್ರದೊಳು ತುಂಬಿಹುದು ಕಲಬೆರಕೆ
ನ್ಯಾಯಾಂಗದೊಳು ಫೈಲು ಹೊಡೆಯುವುದು ಗೊರಕೆ.
ಕೆಲವರ್ಷಗಳ ಹಿಂದೆ ದಕ್ಷಿಣ ಕೊರಿಯಾದಲ್ಲಿ ಲಂಚಕೋರ ಅಧ್ಯಕ್ಷನನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ಸುದ್ದಿ ಮತ್ತು ಇಂತಹ ಸಂಗತಿಗಳು ನಮ್ಮಲ್ಲಿ ವಿದ್ಯತ್ ಸಂಚಾರವನ್ನುಂಟುಮಾಡಬೇಕಿತ್ತು. ಪ್ರಜೆಗಳೆಲ್ಲ ಲಂಚದ ವಿರುದ್ಧ ಸಾಮೂಹಿಕವಾಗಿ ಪ್ರತಿಭಟಿಸುವ ವಾತಾವರಣ ನಿರ್ಮಾಣವಾಗಬೇಕಿತ್ತು. ಆದರೆ ಆ ಜಾಗೃತಿ ಉಂಟಾಗುವುದಾದರೂ ಹೇಗೆ? ಲಂಚಕೊಟ್ಟು ಬೇಗ ಕೆಲಸ ಮಾಡಿಸಿಕೊಳ್ಳುವ, ಲಾಭಪಡೆಯುವ ಆಸೆ ಹೊಂದಿರುವ, ಲಂಚಕೊಡುವ ನಮ್ಮ ಪಾಲೂ ಅದರಲ್ಲಿ ಇದೆಯಲ್ಲ : ಕೊಡುವವನಿದ್ದುದರಿಂದಲೇ
ತೆಗೆದುಕೊಳ್ಳುವವನಿದ್ದಾನೆ ಎಂಬ ವಾದವು ಧುತ್ತೆಂದು ನಮ್ಮ ಮುಂದೆ ನಿಂತುಬಿಡುತ್ತದೆ.

ಕಳೆದ ಎಂಬತ್ತನೇ ದಶಕದಲ್ಲಿ ಪ್ರಧಾನಿ ಇಂದಿರಾಗಾಂಧಿ 'ಲಂಚ ಮತ್ತು ಭ್ರಷ್ಟಾಚಾರವಿಲ್ಲದ ದೇಶವೆಲ್ಲಿದೆ ? ನಮ್ಮದೇಶವೊಂದೆ ಅಲ್ಲ ; ಅದು ಪ್ರಪಂಚವನ್ನೇ ವ್ಯಾಪಿಸಿದೆ' ಎಂದು ಹೇಳಿಕೆ ನೀಡುವದರ ಮೂಲಕ ಭ್ರಷ್ಟಾಚಾರಕ್ಕೆ ಸಮ್ಮತಿಯ ಮುದ್ರೆಯೊತ್ತಿಬಿಟ್ಟರು. ದೇಶದ ಅತ್ಯುನ್ನತ ನಾಯಕರೇ ಪರೋಕ್ಷವಾಗಿ ಲಂಚವನ್ನು ಘೋಷಿಸಿಬಿಟ್ಟರೆ ‘ಲಂಚ ತಡೆ ’ ಎನ್ನುವುದು ಮೂಲೆಗುಂಪಾಗಿ ಲಂಚ ತಡೆಯಿಲ್ಲದ್ದಾಗುತ್ತದಲ್ಲವೆ ? ಲಂಚ ನಿರ್ಮೂಲನ ಸಾಕಾರಗೊಳ್ಳುವುದು ಅದೆಂತು ಸಾಧ್ಯ?.

ಲಂಚ ಭ್ರಷ್ಟಾಚಾರ ಇಷ್ಟು ವ್ಯಾಪಕವಾಗಿ ಇಂಚಿಂಚು ಬಿಡದಂತೆ ಬೆಳೆಯಲು ಮೂಲಕಾರಣ ಧನದಾಹವೇ ಆಗಿದೆ. ಜೊತೆಗೆ ಇನ್ನಷ್ಟು ಕಾರಣಗಳನ್ನೂ ಹೀಗೆ ಪಟ್ಟಿಮಾಡಬಹುದು: ಧನವೇ ಪ್ರಧಾನವಾಗಿರುವ ಸಮಾಜ ವ್ಯವಸ್ಥೆ, ಸುಖೋಪಭೋಗ ಸಾಧನಗಳ ಸಂಗ್ರಹ, ವಿಲಾಸೀ ಜೀವನಶೈಲಿಗೆ ಮಾರುಹೋಗುವಿಕೆ, ಪರಸ್ಪರ ಸಮಾನ ವೃತ್ತಿ ಪ್ರವೃತ್ತಿಯವರಲ್ಲಿಯ ಪೈಪೋಟಿ, ದುಶ್ಚಟಗಳ ದಾಸನಾಗಿರುವುದು, ಮೇಲಿನವರಿಗೆ ಕಪ್ಪ ಕಾಣಿಕೆ (ಲಂಚ) ಸಲ್ಲಿಸಬೇಕಾಗಿರುವುದು.
ಇಂದು ಲಂಚ, ಭಷ್ಠಾಚಾರ ಮಿತಿಮೀರಿದೆ. ಏನು ಮಾಡಿದರೂ ನಿಲ್ಲುತ್ತಿಲ್ಲ. ಹಾಗಂತ ಅದನ್ನು ತಡೆಯಲು ನಿರ್ಮೂಲನ ಮಾಡಲು ಪ್ರಯತ್ನ ಮಾಡಬೇಡವೇ ? ನಿರಂತರವಾಗಿ ಪ್ರಯತ್ನಿಸಬೇಕು. ಉಗ್ರಹೋರಾಟ ಜರುಗಬೇಕು. ಅದೊಂದು ಸಾಮಾಜಿಕ ಕ್ರಾಂತಿಯ, ಚಳುವಳಿಯ ಸ್ವರೂಪ ತಾಳಬೇಕು. ಕಾನೂನಿನ ಕುಣಿಕೆಯನ್ನು ಇನ್ನಷ್ಟು ಬಿಗಿಮಾಡಬೇಕು. ಜನಜಾಗೃತಿಯನ್ನೂ ಉಂಟುಮಾಡಬೇಕು. ಆಡಳಿತ ಹೆಚ್ಚೆಚ್ಚು ವಿಕೇಂದ್ರೀಕರಣಗೊಂಡು ಅಧಿಕಾರ ನೌಕರರ ಕೈಯಿಂದ ದಾಟಿ ನೇರ ಜನರ ಕೈಗೆ ಬರಬೇಕು. ಅದರಲ್ಲೂ ವಿವೇಕಶೀಲರ ಕೈ ಸೇರಬೇಕು. ಆಗ ಭ್ರಷ್ಟಾಚಾರದ ಶವಪೆಟ್ಟಿಗೆಗೆ ಕೊನೆಯಮೊಳೆ ಹೊಡೆಯಬಹುದು.

ನನ್ನ ಜನಗಳೆ, ನೀವು ಅದಕ್ಕೆ ಜಾಗೃತರಾಗಿ ಸಿದ್ಧರಾಗಿ.

ಲೇಖಕ : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited