Untitled Document
Sign Up | Login    
ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು

ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ
ನಮ್ಮನ್ನು ನಾವೇ ಉದ್ಧರಿಸಿಕೊಳ್ಳಬೇಕು. ಅಷ್ಟೇ ಅಲ್ಲ ನಮ್ಮನ್ನು ನಾವು ಹಳಿದುಕೊಳ್ಳಲೂ ಬಾರದು . 'ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ ' ಎಂಬುದು ಗೀತೆಯ ಸಂದೇಶ. ನಮ್ಮನ್ನು ಬೇರೆಯವರು ಹಾಳು ಮಾಡುತ್ತಾರೆ ಅಥವಾ ಉದ್ಧಾರ ಮಾಡುತ್ತಾರೆ ಎಂಬುದು ಮೇಲ್ನೋಟಕ್ಕೆ ಕಾಣುವ ಮಿಥ್ಯೆಯೇ ಹೊರತು ನಿಜವಾದ ಸತ್ಯವಲ್ಲ. ನಮ್ಮ ನಮ್ಮ ಕರ್ಮಗಳಿಗೆ ಅನುಗುಣವಾಗಿ ಕರ್ಮಫಲ, ಬುದ್ಧಿ, ಗುಣಗಳನ್ನು ಹೊಂದುವುದರಿಂದಾಗಿ ಅದರಿಂದಾಗಿಯಯೇ ಉದ್ಧಾರವೊ ಅವನತಿಯೊ ವಿನಾ ಬೇರರೆಯವರಿಂದಲ್ಲ. ಅವೆಲ್ಲ ನಿಮಿತ್ತ ಮಾತ್ರ ಅಷ್ಟೆ .

ನಾವು ವಿಷವೃಕ್ಷವನ್ನು ನೆಟ್ಟು ಅದರಿಂದ ಅಮೃತಫಲವನ್ನು ಪಡೆಯಲು ಸಾಧ್ಯವಿಲ್ಲ. ಅದರಂತೆಯೆ ಕೆಟ್ಟ ಕೆಲಸದಿಂದ ಒಳ್ಳೆ ಫಲವನ್ನು ನಿರೀಕ್ಷಿಸುವದು ಅಸಂಗತ. ಒಳ್ಳೆಯ ಕೆಲಸಕ್ಕೆ ಒಳ್ಳೆಯ ಫಲ; ಕೆಟ್ಟ ಕೆಲಸಕ್ಕೆ ಕೆಟ್ಟ ಫಲ . ನಾವು ಮಾಡುವ ಪ್ರತಿ ಒಂದೂ ಕ್ರಿಯೆಯೂ ಕೂಡ ವ್ಯರ್ಥವಾಗುವುದಿಲ್ಲ. ಅದರದ್ದೇ ಆದ ಫಲವನ್ನು ಅದು ನೀಡಿಯೇ ನೀಡುತ್ತದೆ. ಪಾಪವೊ ಪುಣ್ಯವೊ ನಮಗೆ ಗೊತ್ತಿದೆಯೊ ಗೊತ್ತಿಲ್ಲವೊ ಅದು ತನ್ನಷ್ಟಕ್ಕೆ ತಾನು ಫಲ ನೀಡುತ್ತಲೇ ಹೋಗುತ್ತದೆ.

ಯಾರು ಹಿಂಸೆ,ಅನಾಚಾರ ಶೋಷಣೆ ಕೊಲೆ ಸುಲಿಗೆ ಮುಂತಾದ ಕುಕರ್ಮಗಳಲ್ಲಿ ತೊಡಗಿರುತ್ತಾರೊ ಅವರಿಗೆ ಶಿಕ್ಷೆ ಖಂಡಿತ. ಅವರು ಅವನತಿ ಹೊಂದುತ್ತಾರೆ. ಸರ್ವನಾಶ ಹೊಂದುತ್ತಾರೆ . ಇದರಲ್ಲಿ ಸಂಶಯವಿಲ್ಲ. ತಾತ್ಕಾಲಿಕವಾಗಿ ಅಂಥವರು ಸಮಾಜದಲ್ಲಿ ಅಧಿಕಾರ ಶ್ರೀಮಂತಿಕೆಯಿಂದ ಮೆರೆದ ಮೇಲೆ ಅವರು ದುರ್ಯೋಧನನಂತೆ , ರಾವಣನಂತೆ ನೆಲ ಕಚ್ಚುತ್ತಾರೆ.

 

ಯಾರು ಪ್ರೀತಿ, ದಯೆ, ಸತ್ಯ, ತ್ಯಾಗ ಸದಾಚಾರಗಳಿಂದ ಕೂಡಿದ ಸತ್ಕರ್ಮದಲ್ಲಿ ನಿರತರಾಗಿರುತ್ತಾರೊ ಅವರು ಬವಣೆ ಪಡುತ್ತಿರುವಂತೆ ಕಂಡು ಬಂದರೂ ಮುಂದೊಂದು ದಿನ ಅವರು ತೇಜೋಮಯವಾಗಿ ಪ್ರಕಾಶಿಸುತ್ತಾರೆ. ಅವರು ನಿಜವಾದ ಉದ್ಧಾರವನ್ನು ಹೊಂದುತ್ತಾರೆ.

ನಮ್ಮ ಪ್ರಾರಬ್ಧ ಕರ್ಮಕ್ಕೆ ಬೇರೆಯವರನ್ನು ಹೊಣೆಗಾರರನ್ನಾಗಿಸಿ ಅಳುತ್ತ ಕೂಡುವುದರಲ್ಲಾಗಲಿ, ಶಾಪ ಹಾಕುವುದರಲ್ಲಾಗಲಿ ಅರ್ಥವಿಲ್ಲ. ನಾವೇ ಪರಿಹಾರ ಕಂಡುಕೊಳ್ಳಬೇಕು. ಸುಖವೊ ದುಃಖವೊ ನಾವೇ ಅನುಭವಿಸ ಬೇಕು.

ಅದನ್ನೇ ಡಿ.ವಿ.ಜಿ.ಯವರು ಹೀಗೆ ಹೇಳುತ್ತಾರೆ :

ನಿನ್ನ ಹೆಣವನ್ನು ನೀನೇ ಹೊತ್ತು ಸಾಗಿಸ ಬೇಕೊ
ಅಣ್ಣ ಬಾ ತಮ್ಮ ಬಾ ಎಂದಳುವುದೇಕೊ
ನಿನ್ನೊಡಲೆ ಚಿತೆ ಜಗದ ತಂಟೆಗಳ ಸೌದೆಯಲಿ
ಮಣ್ಣೆ ತರ್ಪಣ ನಿನಗೆ ಮಂಕುತಿಮ್ಮ.

ಆದ್ದರಿಂದ ಕಷ್ಟಗಳು ಎದುರಾದರೆ ನಾವು ಅದನ್ನು ಎದುರಿಸಬೇಕು. ಧೈರ್ಯ ಸಾಹಸಗಳಿಂದ ಮುಂದಕ್ಕೆ ಅಡಿಯಿಡಬೇಕು. ನಮ್ಮ ಸಂಸಾರದ ವ್ಯಕ್ತಿಗತ ಹಾಗೂ ಸಾಮಾಜಿಕ ಹೊರೆಯನ್ನು ನಾವೇ ಹೊರಬೇಕು. ಹೊತ್ತು ಸಾಗಬೇಕು. ಇಂದಲ್ಲ ನಾಳೆ ಸುಖ ಸಿಕ್ಕೇ ಸಿಗುತ್ತದೆ.ಜೀವನ ಸಿದ್ಧಿ ಆಗಿಯೇ ಆಗುತ್ತದೆ. ಈ ಭೂಮಿ ಮರ ಗಿಡಗಳು ಗುಡ್ಡ ಬೆಟ್ಟ ಎತ್ತರದ ಹಿಮಾಲಯ ಎಲ್ಲವೂ ಪರೋಪಕರಕ್ಕಾಗಿಯೇ ಇದೆ.

ಜಲ ಸಕಲ ಜೀವಿಗಳಿಗೂ ಜೀವ ದಾನ ಮಾಡುತ್ತದೆ. ಉರಿವ ಸೂರ್ಯ, ಬೀಸುವ ಗಾಳಿ ಜಗತ್ತಿನ ಚೈತನ್ಯ. ಅಂತೆಯೇ ನಾವು ಸಹ ನಾವು ಬದುಕಿ ಬಾಳಿ ನಮ್ಮ ಉದ್ಧಾರವನ್ನು ಮಾಡಿಕೊಳ್ಳುವುದರ ಜೊತೆಗೆ ನಮ್ಮ ಸುತ್ತ ಮುತ್ತಲಿನ, ನಾಡಿನ, ದೇಶದ, ಜನರ ಬದುಕು ಉನ್ನತಿ ಹೊಂದುವಂತೆ ಅವರು ಉದ್ಧಾರ ಹೊಂದುವಂತೆ ಶಕ್ತಿ ಮೀರಿ ಪ್ರಯತ್ನಿಸಬೇಕು. ಆ ಉದ್ಧಾರದ ಹಾದಿ ಯಾವುದು? ಎಂಬುದನ್ನು ಕಂಡುಕೊಳ್ಳ ಬೇಕು. ಅದನ್ನು ಸಾಧಿಸಲು ನಿರಂತರ ಪರಿಶ್ರಮ ನಮ್ಮದಾಗಬೇಕು.

ಲೇಖಕ : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited