Untitled Document
Sign Up | Login    
ಸಜ್ಜನರು ಸುಮ್ಮನಿದ್ದರೆ ದುರ್ಜನರು ಗರ್ಜಿಸುತ್ತಾರೆ

ದುರ್ಜನರ ಅಟ್ಟಹಾಸ
ಇಂದು ಲೋಕದಲ್ಲಿ ನಡೆಯುವ ಅನ್ಯಾಯ ಅತ್ಯಾಚಾರ, ಮೋಸ , ವಂಚನೆ, ಅನೀತಿಗಳನ್ನು ಗಳನ್ನು ಕಂಡೂ ಕಾಣದವರಂತೆ ಸಜ್ಜನರು ಸುಮ್ಮನೇ ಇರುವುದು ಎಲ್ಲೆಡೆ ಕಂಡು ಬರುವ ದೃಶ್ಯ. ಸಜ್ಜನರು ಸುಮ್ಮನಿದ್ದಷ್ಟೂ ದುರ್ಜನರು ಇನ್ನೂ ಹೆಚ್ಚು ಕೊಬ್ಬುತ್ತಾರೆ. ಅಟ್ಟಹಾಸ ಮೆರೆಯುತ್ತಾರೆ. ಅಲ್ಲದೆ ಸಜ್ಜನರ, ಅಬಲರ, ಮಕ್ಕಳ, ವೃದ್ಧರ, ಮಹಿಳೆಯರ ಮೇಲೆ ದೌರ್ಜನ್ಯ, ನಿರಂಕುಶ ದರ್ಬಾರ, ಆಕ್ರಮಣ ನಡೆಸುತ್ತಲೇ ಹೋಗುತ್ತಾರೆ. ನಮ್ಮ ಕಣ್ಣೆದುರು ಅನ್ಯಾಯ, ಅತ್ಯಾಚಾರ ನಡೆಯುತ್ತಿದ್ದರೂ ನಾವು ಪ್ರತಿಭಟಿಸುವ, ತಡೆಯುವ ಇಚ್ಛಾಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ತಡೆಯುವ ಒಂದು ಪ್ರಯತ್ನವನ್ನೂ ಮಾಡುತ್ತಿಲ್ಲ. ನಮಗೆ ಸೋಲಾಗುತ್ತದೆಂದೊ, ತೊಂದರೆಯಾಗುತ್ತದೆಂದೊ, ತಮ್ಮನ್ನು ಹೀಯಾಳಿಸುತ್ತಾರೆಂದೊ ನನಗೇಕೆ ಈ ಉಸಾಬರಿ ಎಂದೊ ಸಜ್ಜನರು ತೆಪ್ಪಗಿದ್ದು ಬಿಡುತ್ತಾರೆ.

ಅನೇಕ ಬಾರಿ ಅನ್ಯಾಯದ ವಿರುದ್ಧದ ಹೋರಾಟ ಕುಸಿದು ಬೀಳುತ್ತದೆ, ಜನ ಬೆಂಬಲ ಸಿಗುವುದಿಲ್ಲ. ಅಧಿಕಾರ, ತೋಳ್ಬಲ, ಹಣಬಲ ಇದ್ದಲ್ಲಿ ಎಲ್ಲರೂ ಎಲ್ಲವೂ ತಲೆಬಾಗಿ ನಿಲ್ಲುತ್ತವೆ. ದುಷ್ಟರ ವಿರುದ್ಧ ಒಂದು ಸಾತ್ವಿಕ ಆಕ್ರೋಶ ವನ್ನಾಗಲಿ, ಸಾತ್ವಿಕ ಪ್ರತಿಭಟನೆಯನ್ನಾಗಲಿ ಮಾಡಲಾರದಷ್ಟು ನಾವು ನಿರ್ವೀಯರಾಗಿದ್ದೇವೆ ಯಾಕೆ? ಇದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.

ಉದಾತ್ತೀಕರಣ, ಖಾಸಗೀಕರಣ, ಜಾಗತೀಕರಣಗಳಿಂದಾಗಿ ಪ್ರತಿಯೊಬ್ಬನೂ ಆರ್ಥಿಕ ದಾಸ್ಯದ ಸರಪಳಿಯಿಂದ ಬಂಧಿತನಾಗಿದ್ದಾನೆ. ಯಾವುದೇ ವ್ಯವಸ್ಥೆಯ ವಿರುದ್ಧ ಹೋರಾಟಕ್ಕೆ ನಿಂತರೂ ಅವನು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಾನೆ. ವ್ಯಕ್ತಿಗತವಾದ ರಕ್ಷಣೆ ಇಲ್ಲವಾಗುತ್ತದೆ. ಆದಾಗ್ಯೂ ಸಹ ದುಷ್ಟರ ಅಟ್ಟಹಾಸಕ್ಕೆ ತಡೆಹಾಕದೇ ಹೋದರೆ ದುರ್ಜನರ ಗರ್ಜನೆಗೆ ಎದುರೇಟು ನೀಡದೇ ಹೋದರೆ ಜನಸಾಮಾನ್ಯರ ಗತಿ ಏನಾದೀತು?ಸಜ್ಜನರು ಬದುಕುವುದೆಂತು? ಶೋಷಣೆ ಮುಕ್ತ ಸಮಾಜ ಅದೆಂತು ಸಾಧ್ಯ ? ಸಾಮಾಜಿಕ ಸ್ವಾಸ್ಥ್ಯದ ಗತಿಯೇನು? ಅದಕ್ಕಾಗಿ ಸಜ್ಜನರು ಎದ್ದು ನಿಲ್ಲಬೇಕಾಗಿದೆ. 'ಬಿಡು ತಾಪ ತೊಡು ಚಾಪ' ಎಂಬ ಗೀತೆ ಮಾತನ್ನು ಅನುಷ್ಠಾನಗೊಳಿಸಬೇಕಾಗಿದೆ.

 

'ಕ್ಲೈಬ್ಯಂ ಮಾಸ್ಮ ಗಮಃ ಪಾರ್ಥ ನೈತತ್ವಯ್ಯುಪಪದ್ಯತೇ ಕ್ಷುದ್ರಂ ಹೃದಯ ದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ' .

ಅರ್ಜುನನೇ ನಪುಂಸಕತೆಯನ್ನು ತೊರೆ, ನಿನಗಿದು ಯೋಗ್ಯವಾದುದಲ್ಲ, ಕ್ಷುದ್ರವಾದ ಹೃದಯ ದೌರ್ಬಲ್ಯನ್ನು ಕಿತ್ತೆಸೆದು ಯುದ್ಧಕ್ಕೆ ಎದ್ದು ನಿಲ್ಲು. ಎನ್ನುವ ಗೀತೆಯ ಪಾಂಚಜನ್ಯವನ್ನು ಮತ್ತೆ ಮೊಳಗಿಸಬೇಕಿದೆ. ಸಜ್ಜನರು ಸುಮ್ಮನಿರದೇ ಎದ್ದು ಗರ್ಜಿಸಬೇಕಾಗಿದೆ. ಅಲ್ಲದೆ ದುಷ್ಟರಿಗೆ ಅಂಜಿ ಸುಮ್ಮನಿರುವುದು ಸಜ್ಜನಿಕೆಯಲ್ಲ ಅದು ಹೇಡಿತನ ಎನ್ನುವುದನ್ನೂ ಮರೆಯಬಾರದು. ಪುಕ್ಕಲುತನ, ನಪುಂಸಕತೆ ಸಜ್ಜನತ್ವಕ್ಕೆ ಅಪಚಾರ, ಅದು ಭೂಷಣವಲ್ಲ. 'ನಾಯಮಾತ್ಮಾ ಬಲಹೀನೇನ ಲಭ್ಯಃ' ಎನ್ನುವಂತೆ ಬಲಹೀನರಿಗೆ ಭಗವಂತನೂ ಒಲಿಯುವುದಿಲ್ಲ; ಜಗತ್ತು ಶಕ್ತಿಯನ್ನು ಪೂಜಿಸುತ್ತದೆ.

ಅನ್ಯಾಯದ ವಿರುದ್ಧ ಒಂದು ಸಾತ್ತ್ವಿಕ ಪ್ರತಿಭಟನೆಗೆ ಸುಂದರ ಉದಾಹರಣೆಯೊಂದನ್ನು ರಾಮಾಯಣದಲ್ಲಿ ಕಾಣಬಹುದು. ಜಟಾಯು ಒಂದು ಗೃಧ್ರ. ಸೀತೆಯನ್ನು ರಾವಣ ಹೊತ್ತೊಯುತ್ತಾನೆ. ಓರ್ವ ಅಬಲೆಯ ಮೇಲೆ ಒಬ್ಬ ದುಷ್ಟ ರಾಕ್ಷಸನ ಅತ್ಯಾಚಾರ, ಅಪಹರಣ. ಅದನ್ನು ಪ್ರತಿಭಟಿಸುವ, ತಡೆಯುವ ಯಾವ ವ್ಯಕ್ತಿಯೂ ಅಲ್ಲಿಲ್ಲ. ಆದರೆ ಒಂದು ಪಕ್ಷಿ ಅದನ್ನು ಪ್ರತಿಭಟಿಸುತ್ತದೆ. ತಡೆಯಲು ಪ್ರಯತ್ನಿಸುತ್ತದೆ. ಎಂಥ ಅದ್ಭುತ ಸಂಗತಿ ! ಅದಾಗಲೇ ಲೋಕವನ್ನೇ ತಲ್ಲಣಗೊಳಿಸಿದ, ಖಡ್ಗವನ್ನು ಹಿಡಿದ ಪರಾಕ್ರಮಿ ರಾವಣನನ್ನು ಎದುರಿಸಿ ಗೆಲ್ಲುವುದುಂಟೆ ? ಅದು ಜಟಾಯುವಿಗೂ ಗೊತ್ತಿದೆ. ಆ ದುಷ್ಟನೊಂದಿಗೆ ಹೋರಾಡುವುದೆಂದರೆ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತೆ ಎಂದು ಜಟಾಯುವಿಗೆ ತಿಳಿಯುವುದಿದೆಯೆ?

ಆದರೆ ಅನ್ಯಾಯ-ಅತ್ಯಾಚಾರದ ವಿರುದ್ಧ ಒಂದು ಪ್ರತಿಭಟನೆ, ಅದನ್ನು ತಡೆಯುವ , ಪ್ರಾಣವನ್ನೇ ಪಣವಾಗಿಟ್ಟ ಒಂದು ಪ್ರಯತ್ನ. ಅಲ್ಲದೇ ಸೀತೆ ಎಲ್ಲಿ ಹೋದಳು? ಏನಾಯಿತು? ಎನ್ನುವ ಸುಳಿವನ್ನು ನೀಡಲು ರಾಮ ಭಕ್ತ ಜಟಾಯು ರಾಮ ಬರುವ ತನಕ ಪ್ರಾಣ ಹಿಡಿದುಕೊಂಡದ್ದು , ಕರ್ತವ್ಯ ಪರಾಯಣತೆಯನ್ನು ಮೆರೆಯಿತು. ಎಂಥ ಸಾಹಸ! ಎಂಥ ಕರ್ತವ್ಯ ನಿಷ್ಠೆ ! ದುರ್ಜನರೆದುರು ಕೈಕಟ್ಟಿ ಕುಳಿತು ಕೊಳ್ಳುವ ಸಜ್ಜನರಿಗೆ ಸಾಹಸಿ ಜಟಾಯ ಸಾಹಸದ ಒಂದು ದಿವ್ಯ ಪ್ರೇರಣೆಯಲ್ಲವೆ ?

ಸಜ್ಜನರು ಮತದಾನಕ್ಕೆ ಹೋಗದೇ ಇದ್ದಲ್ಲಿ ದುರ್ಜನರು ದೇಶವನ್ನು ಆಳುತ್ತಾರೆ, ಎಂಬ ಮಾತನ್ನು ನಿಜವಾಗಿಸಲಿಕ್ಕೋ ಎಂಬಂತೆ ಆ ನಮ್ಮ ಸಜ್ಜನರು ಮತದಾನಕ್ಕೂ ಹೋಗುವುದಿಲ್ಲ. ಸಜ್ಜರು ತಮ್ಮ ತಲೆಯ ಮೇಲೆ ದುರ್ಜನರ ಮುಳ್ಳಿನ ಪಾದರಕ್ಷೆಯನ್ನು ಎಷ್ಟೇ ಕಷ್ಟವಾದರೂ ಹೊತ್ತು ನಿಲ್ಲುತ್ತೇವೆ ಎಂದರೆ ನಮ್ಮ ಹೇಡಿತನಕ್ಕೆ ಮಿತಿ ಉಂಟೆ? ಇದರಿಂದ ಯಾವಾಗ ಹೇಗೆ ಹೊರ ಬರುವದು? ಸಜ್ಜನರು ಯೋಚಿಸಬೇಕಾಗಿದೆ.

ಲೇಖಕ : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited