Untitled Document
Sign Up | Login    
ರಾಷ್ಟ್ರೀಯತೆಯ ಒರೆಗಲ್ಲು ಮಾನಸಿಕ ಅಸ್ಮಿತೆ

ವ್ಯಕ್ತಿಯ ರಾಷ್ತ್ರೀಯತೆಯ ಒರೆಗಲ್ಲೆಂದರೆ ಆತನ ಮನೋಭೂಮಿಕೆ. ಮಾನಸಿಕ ನಿಷ್ಠೆ, ಶ್ರದ್ಧೆಗಳೇ ಅದರ ತಾತ್ತ್ವಿಕ ತಳಹದಿಯೇ ಹೊರತು "ಹೊರನೋಟ" ಅಲ್ಲ. ದೇಹ ಇಲ್ಲಿದ್ದರೂ ಮನಸ್ಸು ಅಲ್ಲಿದ್ದರೆ ಅವನು "ಇಲ್ಲಿ"ಯವನಲ್ಲ. ಒಂದು ನಾಡಿನಲ್ಲಿ ಹುಟ್ಟಿ ಬೆಳೆದ ಮಾತ್ರಕ್ಕೆ ಅವನು ಅದೇ ನಾಡಿನವನು ಎಂದು ಹೇಳಲಾಗದು. ಆತನ ಮತ್ತು ಸಮುದಾಯದ ನಡೆ-ನುಡಿ, ಹುಟ್ಟು-ಸಂಸ್ಕಾರ, ವಿಚಾರ-ಸಾಧನೆ ಎಲ್ಲ ಸೇರಿ ಸಂಸ್ಕೃತಿ ಎನಿಸುತ್ತದೆ. ಅವನ ಸಂಸ್ಕೃತಿಯೇ ಅವನ ರಾಷ್ಟ್ರೀಯತೆಯನ್ನು ನಿರ್ಧರಿಸುತ್ತದೆ.

ರಾಷ್ಟ್ರೀಯತೆಯ ಬೇರು ಎಲ್ಲಿದೆ ಎಂಬುದನ್ನು ತಿಳಿಸುವ ಒಂದು ಸುಂದರ ಕಥೆಯನ್ನು ಇಲ್ಲಿ ಉದಾಹರಿಸಬಹುದು. ನರಿ ಒಂದು ತನ್ನ ಪುಟ್ಟ ಮರಿಯನ್ನು ಕಾಡಿನಲ್ಲಿ ಬಿಟ್ಟು ಹೋಗಿರುತ್ತದೆ. ಸುತ್ತಾಡುತ್ತಿದ್ದ ಸಿಂಹಿಣಿಯೊಂದು ಅದನ್ನು ಕಂಡು ತನ್ನ ಗುಹೆಗೆ ತಂದು ಸಾಕಿತು. ಸಿಂಹಿಣಿಯ ಇತರ ಮರಿಗಳ ಜೊತೆಗೆ ಅದರ ಹಾಲನ್ನೇ ಕುಡಿದು ನರಿಮರಿಯೂ ಅಲ್ಲಿಯೇ ಬೆಳೆಯಿತು. ಸಿಂಹದ ಮರಿಗಳ ಜೊತೆಗೆ ಆಡಿ,ಕುಣಿಯಿತು. ಅದೊಂದು ದಿನ ನರಿಮರಿ ಸಿಂಹದ ಮರಿಗಳ ಜೊತೆ ಕಾಡಿನಲ್ಲಿ ಹೋಗುತ್ತಿದ್ದಾಗ ಆನೆಯೊಂದು ಎದುರಾಯಿತು. ಸಿಂಹದ ಮರಿಗಳು ಆಕ್ರಮಣಕ್ಕೆ ಸಿದ್ಧವಾದವು. ನರಿ ಮರಿ ಹೆದರಿ "ಆ ದೊಡ್ಡ ಪ್ರಾಣಿಯ ಜೊತೆ ಕಲಹ ಬೇಡ" ಎಂದು ಬುದ್ಧಿವಾದ ಹೇಳಿತು, "ನಿನಗೆ ಹೆದರಿಕೆಯಾದರೆ ಮನೆಗೆ ಹೋಗು. ಬಹಳ ದಿನಗಳ ನಂತರ ನಮಗೆ ಒಳ್ಳೆ ಬೇಟೆ ದೊರೆತಿದೆ. ನಾವು ಬಿಡಲಾರೆವು", ಎಂದು ಸಿಂಹದ ಮರಿಗಳು ಹೇಳಿದಾಗ ನರಿಮರಿ ಗುಹೆಗೆ ಮರಳಿತು. ಸಿಂಹಿಣಿಯ ಹತ್ತಿರ ಹೇಳಿತು: "ಅಮ್ಮಾ, ತಮ್ಮಂದಿರು ದೊಡ್ಡ ಆನೆಯೊಂದಿಗೆ ಜಗಳಕ್ಕಿಳಿದಿದ್ದಾರೆ. ಏನು ಗತಿ ಆಗಿದೆಯೊ ! ಅಣ್ಣನಾಗಿ ನಾನು ಬುದ್ಧಿ ಹೇಳಿದರೂ ಕೇಳಲಿಲ್ಲ". ಆಗ ಸಿಂಹಿಣಿ ನಕ್ಕು ಹೇಳಿತು :

ಶೂರೋಸಿ ಕೃತವಿದ್ಯೋಸಿ ದರ್ಶನೀಯೋಸಿ ಪುತ್ರಕ
ಯಸ್ಮಿನ್ ಕುಲೆ ತ್ವಮುತ್ಪನ್ನಃ ಗಜಸ್ತತ್ರ ನ ಹನ್ಯತೇ

" ಮಗೂ , ನೀನು ಶೂರನಿರುವಿ,ವಿದ್ಯಾವಂತನಿರುವಿ, ಸುಂದರನಿರುವಿ ಸರಿ. ಆದರೆ ನೀನು ಹುಟ್ಟಿದ ಕುಲದಲ್ಲಿ ಆನೆಯು ಕೊಲ್ಲಲ್ಪಡುವುದಿಲ್ಲ. ರಾಷ್ಟ್ರಗಳ ವಿಚಾರದಲ್ಲಿಯೂ ಇದೇ ಮಾತು ಅನ್ವಯಿಸುತ್ತದೆ. ಹೊರಗಿನಿಂದ ಬಂದವರು ಒಟ್ಟಿಗೆ ವಾಸ ಮಾಡುವುದು, ಉಣ್ಣುವುದು, ತಿನ್ನುವುದರಿಂದ ಅವರು ರಾಷ್ಟ್ರೀಯರು ಎನ್ನಲಾಗದು. ಗುಣ ಶೀಲ, ಸ್ವಭಾವ, ಚಿಂತನೆ ಎಲ್ಲವೂ ಸಂಪೂರ್ಣ ಪರಿವರ್ತನೆಯಾದಾಗ ಮಾತ್ರ ಆತ ರಾಷ್ಟ್ರೀಯನಾಗುತ್ತಾನೆ.

 

ನೂರಾರು ವರ್ಷಗಳ ಹಿಂದೆ ಜರ್ಮನಿಯ ಕೆಲವರು ಇಂಗ್ಲೆಂಡಿಗೆ ಹೋಗಿ ನೆಲೆಸಿದರು. ಅವರಿಗೆ ಇಂಗ್ಲೆಂಡಿನ ನಾಗರಿಕ ಹಕ್ಕೂ ದೊರಕಿತು. ಅವರು ಬೇರೆವರೆಂದು ಅನಿಸಲೇ ಇಲ್ಲ. ಅವರಲ್ಲೊಬ್ಬ ಇಂಗ್ಲೆಂಡಿನ ಆಡಳಿತದ ಅಡಿಯಲ್ಲಿ ಐ.ಸಿ.ಎಸ್. ಅಧಿಕಾರಿಯಾಗಿ ಭಾರತದ ಮಧ್ಯಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ. 1914 ರಲ್ಲಿ ಯುದ್ಧ ಪ್ರಾರಂಭವಾದಾಗ ಜರ್ಮನಿ ಬಗ್ಗೆ ಅವನಿಗೆ ಪ್ರೇಮಾಭಿಮಾನ ಉಂಟಾದೀತೆಂದು ಸಂದೇಹಿಸಿ ಅವನನ್ನು ಬಂಧಿಸಿ ಕಾರಾಗ್ರಹದಲ್ಲಿ ಇಡಲಾಯಿತು. ಇದು ಇಂಗ್ಲೆಂಡಿನ ಸಹಜ ರಾಜನೀತಿ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅದು ಯುಕ್ತ. ನಮ್ಮ ರಾಷ್ಟ್ರ ಅಖಂಡವಾಗಿ, ಸುಖ-ಶಾಂತಿಯಿಂದ ಕೂಡಿದ ಒಂದು ಉತ್ಕೃಷ್ಟ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿಯಬೇಕೆಂದರೆ ರಾಷ್ಟ್ರೀಯ ಭಾವೈಕ್ಯ ಅತ್ಯಗತ್ಯ. ಆ ರಾಷ್ಟ್ರೀಯ ಭಾವೈಕ್ಯದ ಅಡಿಪಾಯವೆಂದರೆ ಮೂರು ಪ್ರಧಾನ ಮೌಲ್ಯಗಳು :

ಮೊದಲನೆಯದಾಗಿ ನಮ್ಮ ಪವಿತ್ರ ಮಾತೃ ಭೂಮಿ ಎಂದು ನಾವು ಗೌರವಿಸುವ ಈ ರಾಷ್ಟ್ರಕ್ಕೆ ಜ್ವಲಂತ ನಿಷ್ಠೆ. ಎರಡನೆಯದು ನಾವೆಲ್ಲ ಒಂದೇ ತಾಯಿಯ ಮಕ್ಕಳೆಂಬ ಅರಿವಿನಿಂದ ಬಂದ ಸಂಗಾತಿ ಭಾವನೆ, ನಿಜವಾದ ಭ್ರಾತೃತ್ವ.

ಮೂರನೆದಾಗಿ ಒಂದೇ ಸಂಸ್ಕೃತಿ ಮತ್ತು ಪರಂಪರೆ, ಒಂದೇ ಚರಿತ್ರೆ ಮತ್ತು ಸಂಪ್ರದಾಯಗಳು ಒಂದೇ ಆದರ್ಶಗಳು ಮತ್ತು ಆಕಾಂಕ್ಷೆಗಳು ಇವುಗಳಿಂದ ಜನಿಸಿದ ಒಂದೇ ರಾಷ್ಟ್ರ ಜೀವನ ವಾಹಿನಿಯ ತೀಕ್ಷ್ಣ ಪ್ರಜ್ಞೆ. ಈ ಮೌಲ್ಯತ್ರಯಗಳೇ ರಾಷ್ಟ್ರೀಯತೆಯ ರಾಷ್ಟ್ರ ಸೌಧದ ಭದ್ರ ಬುನಾದಿಯಾಗಿದೆ.

ನಮ್ಮ ದೇಶ ಬಹುವಿಧ ಸಂಪ್ರದಾಯ, ವಿವಿಧ ಜನಾಂಗ, ವೈವಿಧ್ಯಮಯ ಸಂಸ್ಕೃತಿಯಿಂದ ಕೂಡಿದ್ದರೂ ಎಲ್ಲದರ ಮೂಲ ಒಂದೇ ಆಗಿದೆ. ಅನೇಕತೆಯಲ್ಲಿ ಏಕತೆ ನಮ್ಮ ರಾಷ್ಟ್ರದ ಜೀವನ ಸಿದ್ಧಾಂತ. ಅಲ್ಲದೇ ಈ ದೇಶದಲ್ಲಿ ವಾಸಿಸುವ ಎಲ್ಲರೂ ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಒಂದಾಗಿ ಸೇರಿ ಹೋಗಬೇಕಾದದ್ದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯ.

ಲೇಖಕ : ವನರಾಗ ಶರ್ಮಾ

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited