Untitled Document
Sign Up | Login    
ಅವನು ಮೇಲಲ್ಲ, ಇವಳು ಕೀಳಲ್ಲ


ಆಕೆ ಇರುವುದೇ ಹಾಗೆ. ಅನಂತ ಸಾಧ್ಯತೆಗಳನ್ನು ತನ್ನಲ್ಲಿ ಹುದುಗಿಸಿಕೊಂಡು ಅದರ ಹಮ್ಮು ಬಿಮ್ಮು ಏನೂ ಇಲ್ಲದೆ ಎಲ್ಲರೊಳಗೊಂದಾಗಿ ಇರುವಾಕೆ. ಅವಳ ಆಂತರ್ಯದಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ, ಉತ್ಸಾಹ, ಧೈರ್ಯ, ಸ್ಥೈರ್ಯ.... ಎಲ್ಲವೂ ಇದೆ. ಮೊಗೆದು ಕೊಟ್ಟಷ್ಟೂ ಇವು ಜಾಸ್ತಿ ಆಗುವವೇ ಹೊರತು ಬರಿದಾಗುವಂತಹವಲ್ಲ. ಹಾಗೆಯೇ ಅವಳು ಲಾವಣ್ಯವತಿ, ಸುಗುಣೆ, ಸುಕೋಮಲೆ ಅಥವಾ ಹೆಣ್ಣೆಂಬ ಕಾರಣಕ್ಕೆ ಅಪೂರ್ಣಳು ಎಂದೇನೂ ಭಾವಿಸಬೇಕಾಗಿಲ್ಲ.

ಆಕೆಯ ಸುತ್ತಲಿನ ಸಮಾಜ ಕೆಲವೊಮ್ಮೆ ಅವಳ ಅಸಹಾಯಕತೆಯನ್ನೋ, ಸೌಮ್ಯತೆಯನ್ನೋ, ಮುಗ್ದತೆಯನ್ನೋ ದುರ್ಬಳಕೆ ಮಾಡಿಕೊಳ್ಳುವುದುಂಟು ಅಥವಾ ಹಾಗೆ ಪ್ರಯತ್ನಿಸುವುದುಂಟು. ಅಂತಹ ಸಂದರ್ಭಗಳಲ್ಲಿ ಈ ಎಲ್ಲವನ್ನೂ ಮೀರಿ ನಿಲ್ಲುವ ಸಾಮರ್ಥ್ಯವೂ ಅವಳಲ್ಲುಂಟು.

ಇಂದು ಹೆಣ್ಣು ಸೀತೆಯಂತೆ ಸಾದ್ವಿ ಮಾತ್ರವೇ ಅಲ್ಲ ದ್ರೌಪದಿಯಂತೆ ಛಲಗಾತಿಯೂ ಹೌದು. ಹನ್ನೆರಡನೆಯ ಶತಮಾನದಲ್ಲಿಯೇ ಬಸವಾದಿ ಪ್ರಮಥರ ನಾಯಕತ್ವದಲ್ಲಿ ಸ್ತ್ರೀ ಸಮಾನತೆಯ ಕೂಗು ಕೇಳಿ ಬಂದಿತ್ತು. ಅಕ್ಕನಂತೂ "ಸಾವ ಕೆಡುವ ಗಂಡರ ಹಂಗು ತನಗಿಲ್ಲ" ಎಂದು ಅಂದಿನ ಕಾಲಕ್ಕೇ ಗಂಡ ಕೌಶಿಕ ಮಹಾರಾಜನನ್ನೇ ತ್ಯಜಿಸಿ ಸ್ತ್ರೀ ಸ್ವಾತಂತ್ರ್ಯದ ಕಹಳೆ ಊದಿದಾಕೆ. ಅಧ್ಯಾತ್ಮದ ಉತ್ತುಂಗವನ್ನು ಏರಿದಾಕೆ. ರಾಣಿ ಲಕ್ಷ್ಮೀಬಾಯಿ, ಅಬ್ಬಕ್ಕ, ಚನ್ನಮ್ಮ, ಜೀಜಾಬಾಯಿ.... ಎಲ್ಲರೂ ಗಂಡಿಗೆ ಸರಿ ಸಮನಾಗಿ ಅಥವಾ ಅದಕ್ಕೂ ಮಿಗಿಲಾಗಿ ಆಡಳಿತದ ಚುಕ್ಕಾಣಿ ಹಿಡಿದವರು. ಅಂತೆಯೇ ಸಮರ್ಥವಾಗಿ ನಿಭಾಯಿಸಿದವರು ಕೂಡಾ. ಹಾಗೆಂದು ಅವರು ಮನೆ ಸಂಸಾರವನ್ನೇನೂ ಮರೆತಿಲ್ಲ. ಅದನ್ನೂ ಕೂಡಾ ಬಹು ಮುತುವರ್ಜಿಯಿಂದಲೇ ಕಾಪಾಡಿಕೊಂಡು ಬಂದಿದ್ದಾರೆ.

ಪ್ರಸ್ತುತ ನಮ್ಮ ಸುತ್ತ ಮುತ್ತಲೇ ಅದೆಷ್ಟು ಮಹಿಳೆಯರು ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ, ತಂತ್ರಜ್ನಾನದಲ್ಲಿ, ವೈದ್ಯಕೀಯ, ಬ್ಯಾಂಕಿಂಗ್ ನಲ್ಲಿ, ಸೈನ್ಯದಲ್ಲಿ,.... ಹೀಗೆ ಹತ್ತು ಹಲವು ಕ್ಶೇತ್ರದಲ್ಲಿ ಅತ್ಯುನ್ನತ ಹುದ್ದೆಯಲ್ಲಿಲ್ಲ? ಹೀಗಿರುವಾಗ ಸಂಚಿ ಹೊನ್ನಮ್ಮನ ಸಾಂಗತ್ಯ ಪದ್ಯವೊಂದು ತಲೆಯಲ್ಲಿ ಸುಳಿದಾಡುತ್ತದೆ. "ಪೆಣ್ಣಲ್ಲವೆ ನಮ್ಮನೆಲ್ಲ ಪಡೆದ ತಾಯಿ, ಪೆಣ್ಣಲ್ಲವೆ ಪೊರೆದವಳು, ಪೆಣ್ಣು ಪೆಣ್ಣೆಂದೇತಕೆ ಬೀಳುಗಳೆವರು, ಕಣ್ಣು ಕಾಣದ ಗಾವಿಲರು".

ಹೌದು ಮನೆಯಲ್ಲಿ ಬರೀ ಹೆಣ್ಣು ಮಕ್ಕಳೇ ಹುಟ್ಟಿದರೆ ಆ ಮಕ್ಕಳನ್ನು ಕೀಳಾಗಿ ಕಾಣುವ, 'xx' ಕ್ರೋಮೋಸೋಮ್ ಹೊಂದಿದ ಆಕೆ ಹೆಣ್ಣು ಮಗುವನ್ನು ಪಡೆಯುವಲ್ಲಿ ಎಷ್ಟು ಕಾರಣಳಾದಾಳು? ಎಂದೂ ಯೋಚಿಸದೇ, ಹೆಣ್ಣು ಹೆತ್ತ ತಾಯನ್ನು ಮೂದಲಿಸುವ ಮೌಢ್ಯತೆ, ತಾರತಮ್ಯ ಇಂದಿಗೂ ಇದೆ. ದಿನಪತ್ರಿಕೆಗಳನ್ನು ನೋಡಿದರೆ ಪ್ರತಿ ದಿನವೂ ವರದಿಯಾಗುವ ಒಂದಿಲ್ಲೊಂದು ಇಂತಹ ಗಟನೆಗಳು ಇದಕ್ಕೆ ಸಾಕ್ಷಿಯನ್ನು ಒದಗಿಸುತ್ತವೆ. ಹೆಣ್ಣು ಭ್ರೂಣ ಹತ್ಯೆ ಮುಂತಾದ ಕಾರಣದಿಂದಾಗಿ ಇಂದು ಪ್ರಾಕೃತಿಕ ಸಮತೋಲನ ಏರು ಪೇರಾಗಿದೆ. ಪ್ರತಿ ನೂರು ಪುರುಷರಿಗೆ ತೊಂಬತ್ತ ಮೂರು ಮಹಿಳೆಯರಿದ್ದಾರೆ. ಈ ವ್ಯತ್ಯಾಸಕ್ಕೆ ಕಾರಣವೂ ಇಲ್ಲದಿಲ್ಲ. ಮನೆಗೊಂದು ಗಂಡುಮಗು ಬೇಕು, "ಅಪುತ್ರಸ್ಯ ಗತಿರ್ನಾಸ್ತಿ" ಎಂಬ ನಂಬಿಕೆಗಳೂ ಕಾರಣವಾಗಿರಬಹುದು. ಹೆಣ್ಣು ಮಗು ಹೊರೆ, ಸಾಕಿ ಸಲಹುವುದು ಕಷ್ಟ ಎಂದೂ, ಅದೊಂದು ಖರ್ಚಿನ ಬಾಬತ್ತು ಎಂದೂ, ಯೋಚಿಸುವ ಜನರೂ ಇದ್ದಾರೆ. ಹೆಣ್ಣು ಮಗುವೊಂದು ಈ ಭೂಮಿಗೆ ಬರುವ ಮೊದಲೇ ಗರ್ಭದಲ್ಲೇ ಚಿವುಟುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಇದೆ.

ಈ ಎಲ್ಲ ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ ಆಕೆ ತನ್ನದೇ ಆದ ವ್ಯಕ್ತಿತ್ವವನ್ನು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ. ಪುರುಷರೊಂದಿಗೆ ಸರಿಸಮನಾಗಿ ಸ್ಪರ್ಧಿಸಿ, ಮಿಗಿಲೆನಿಸಿಕೊಳ್ಳಲು ಆಕೆಗೆ ವಿಭಿನ್ನ ಕೆಲಸಗಳನ್ನು ಏಕ ಕಾಲಕ್ಕೆ ಮಾಡಬೇಕಾದ ಒತ್ತಡ ಇದೆ. ಅದು ಅವಳಿಗೆ ರಕ್ತಗತವೂ ಆಗಿಬಿಟ್ಟಿದೆ. ಉದಾಹರಣೆಗೆ ಮಾಧ್ಯಮವನ್ನೇ ತೆಗೆದುಕೊಂಡರೆ ಮಹಿಳೆಯ ಬಿಂಬ ಹೇಗಿದೆ? ಅವಳ ಕಾರ್ಯ ಏನು? ಎಂದು ಯೋಚಿಸಿದರೆ, ಕಾರ್ಯ ಕ್ಷೇತ್ರವೇನೋ ಬಹು ವಿಸ್ತ್ರತವಾಗಿದೆ. ಅವಕಾಶ ಸವಾಲುಗಳೂ ಬಹಳವಾಗಿಯೇ ಇದೆ. ಆದರೆ ಆಕೆಯ ಬಿಂಬ.... ವಿದ್ಯುನ್ಮಾನ ಮಾಧ್ಯಮದಲ್ಲಾದರೆ ಟಿ.ಆರ್.ಪಿ ಗಾಗಿ, ಪತ್ರಿಕೆಗಳಲ್ಲಾದರೆ ಪ್ರಸಾರ ಸಂಖ್ಯೆಯ ಹೆಚ್ಚಳಕ್ಕಾಗಿ ಮಹಿಳೆಯನ್ನು ಒಂದು ಸರಕಿನ ರೀತಿ ಚಿತ್ರಿಸಲಾಗುತ್ತಿದೆ. ಅವಳು ಅಳುಮುಂಜಿಯೆಂದೋ, ಮನೆ ಒಡೆಯುವವಳೆಂದೋ, ಜಗಳಗಂಟಿಯೆಂದೋ ಬಿಂಬಿಸಲಾಗುತ್ತಿದೆ. ಜಾಹಿರಾತುಗಳಲ್ಲಂತು ಮಹಿಳೆಯ ಚಿತ್ರ ಇರಲೇ ಬೇಕು. ಕಾರೊಂದು ಮಾರಾಟವಾಗಬೇಕಾದರೆ ಅರೆ ಬರೆ ಬಟ್ಟೆಯ ಬಣ್ಣದ ಗೊಂಬೆಯಂತಿರುವ ಹುಡುಗಿಯೊಬ್ಬಳು ಅದರ ಪಕ್ಕ ನಿಂತಿರಲೇಬೇಕು. ದೊಡ್ಡ ಸ್ಕೂಟರೋ ಇನ್ನಾವುದೋ ಒಂದು ದ್ವಿಚಕ್ರ ವಾಹನವನ್ನೋ ಯುವಕನೊಬ್ಬ ಓಡಿಸಿಕೊಂಡು ಹೋದರೆ ಪಕ್ಕದಲ್ಲಿ ನಿಂತ ಹುಡುಗಿ ಹಾರುತ್ತಿರುವ ಲಂಗವನ್ನು ಹಿಡಿದಿಡುವ ವ್ಯರ್ಥ ಪ್ರಯತ್ನವನ್ನು ಮಾಡುತ್ತ ಬಿಟ್ಟ ಕಣ್ಣು ಬಿಟ್ಟಂತೆ ಆ ಸ್ಕೂಟರನ್ನೇ ನೋಡುತ್ತಾ ನಿಲ್ಲಬೇಕು. ಆತ ತಿರುಗಿ ಬಂದು ಆಕೆಯನ್ನು ಕರೆದುಕೊಂಡು ಹೋಗಬೇಕು. ಮನೆಗೆ ಬಳಿಯುವ ಬಣ್ಣವೇ ಇರಲಿ, ಪೀಠೋಪಕರಣವೇ ಇರಲಿ, ಒಂದು ಲ್ಯಾಪ್ ಟಾಪೇ ಇರಲಿ ಅದು ಮಾರಾಟವಾಗಲು ಹುಡುಗಿಯೊಬ್ಬಳು ಅಲ್ಲಿ ನಿಂತಿರಬೇಕು.

ಇನ್ನು ಕೆಲವು ಬಿಸಿನೆಸ್ ಕ್ಲಾಸ್ ಪುರುಷರಿಗೆ ಪಾರ್ಟಿಯೊಂದಕ್ಕೆ ತೆರಳಲು ಹುಡುಗಿಯೊಬ್ಬಳು ಜತೆಯಲ್ಲಿರಲೇಬೇಕು. ಅದು ಅವನ ಪ್ರೆಸ್ಟೀಜ್ (ಅಂತಸ್ತು) ವಿಷಯ. ದುಡಿಯುವ ವರ್ಗದಲ್ಲಾದರೋ ಮನೆಯಲ್ಲಿ ಬೇಯಿಸಿ ಹಾಕಲು ಇವನ ಅಸಹನೆಯನ್ನೆಲ್ಲಾ ತೋಡಿ ಹಾಕಲು ಆಕೆ ಬೇಕು. ಕಸದ ತೊಟ್ಟಿಯಂತೆ. ಮಧ್ಯಮ ವರ್ಗದಲ್ಲಾದರೋ ಆಕೆಯೊಬ್ಬಳು ಶೋಕೇಸ್ ಗೊಂಬೆ. ಭಾವನೆಗಳು ಬತ್ತಿ ಹೋದ ಜೀವ.

ಇವೆಲ್ಲವುಗಳ ಮಧ್ಯೆ ಆಕೆಯಲ್ಲಿ ತನ್ನ ವ್ಯಕ್ತಿತ್ವದ ಹುಡುಕಾಟ ಶುರುವಾದರೆ ಮನೆಯೊಂದು ರಣರಂಗ. ಶಾಂತಿ ಸಂಧಾನ ನಡೆಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದು ಹೊರ ಬಂದರೆ ಚಿಂತಿಸುವ ಮಹಿಳೆಯನ್ನು ಚಿಂತೆಯ ಕೂಪಕ್ಕೆದೂಡಲು ಸಮಾಜ ಪ್ರಯತ್ನಿಸುತ್ತದೆ. ಆಕೆಯ ಮನಸ್ಥಿತಿಯನ್ನು ಕುಗ್ಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತದೆ. ಅದಕ್ಕೂ ಬಗ್ಗದಿದ್ದರೆ ಆಕೆಯ ಚಾರಿತ್ರ್ಯವಧೆ ಮಾಡುತ್ತಾರೆ. ಇಲ್ಲಸಲ್ಲದ್ದನ್ನು ಕಟ್ಟಿ ಕಥೆ ಹೇಳುತ್ತಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ತಮ್ಮ ದೌರ್ಭಲ್ಯ ತಿಳಿದೀತು, ತಮ್ಮನ್ನು ಮೀರಿ ಬೆಳೆದಾಳು ಎಂಬ ಭಯ. ಆಕೆ ಎಂದಿಗೂ ಮೊದಲದರ್ಜೆಯ ಪ್ರಜೆಯಾಗಬಾರದು, ಆಕೆಯ ಸ್ಥಾನ ಮಾನ ಆನುಷಂಗಿಕವಾದದ್ದು ಎಂಬ ಪುರುಷ ಪೂರ್ವಾಗ್ರಹ ಪೀಡಿತ ಪಟ್ಟಭದ್ರ ಮನೋಭಾವ. (ಹಾಗೆಯೇ ಸ್ತ್ರೀಯಕಣ್ಣಿನಿಂದ ಜಗತ್ತನ್ನು ನೋಡುವ, ಸ್ತ್ರೀ ಸಂವೇದನೆಯನ್ನುಳ್ಳ ಪುರುಷರೂ ಇದ್ದಾರೆ.), ಕೆಲವೊಮ್ಮೆ ಸ್ತ್ರೀಯರೇ ಇಂತಹ ಕುಯುಕ್ತಿಗೆ ಸಾತ್ ನೀಡುವುದೂ ಉಂಟು.

ಈ ಎಲ್ಲ ಸಮಸ್ಯೆ ಸವಾಲುಗಳನ್ನು ಸ್ತ್ರೀ ಧೈರ್ಯವಾಗಿ ಎದುರಿಸಿ ಬುದ್ಧಿಗೆ ಕೆಲಸ ಕೊಟ್ಟು ವಿಶಾಲ ಮನೋಭಾವವನ್ನು ಬೆಳೆಸಿಕೊಂಡಾಗ ಆಕೆ ಜಗದಗಲ ಮುಗಿಲೆತ್ತರ ಬೆಳೆಯುವುದರಲ್ಲಿ ಸಂಶಯವಿಲ್ಲ. ಆಳವಾಗಿ ವಿಚಾರಿಸಿ ನೋಡಿದಾಗ ಹೆಣ್ಣು ಗಂಡೆಂಬುದು ಸೃಷ್ಟಿಯ ಮುಂದುವರಿಕೆಗಾಗಿ ದೇಹರಚನೆಯಲ್ಲಿನ ವ್ಯತ್ಯಾಸವೇ ಹೊರತು ಮತ್ತೇನೂ ಅಲ್ಲ. ಇದನ್ನರಿಯದ ಮೂಢಮತಿಗಳು ವಚನಕಾರರೆನ್ನುವಂತೆ "ಗಡ್ಡ ಮೀಸೆ ಬಲಿತೊಡೆ ಗಂಡೆಂಬರು, ಮೊಲೆ ಮೂಡಿ ಬಂದೊಡೆ ಹೆಣ್ಣೆಂಬರು, ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ" ಎಂಬುದನ್ನು ತಿಳಿಯಲು ಹೋಗುವುದೇ ಇಲ್ಲ. ಸಮಸ್ತ ಸೃಷ್ಟಿಯಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಹಾಗಿರುವುದು ಅವರವರ ಮನೋಭೂಮಿಕೆಯಲ್ಲಿ ಸುಳಿವ ವಿಚಾರಗಳಷ್ಟೇ.

 

Author : ವಿದ್ಯಾ ಭಟ್

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited