Untitled Document
Sign Up | Login    
ದೆಹಲಿ ಚುನಾವಣೆ - ಗರಿಗೆದರಿದ ಕದನ ಕುತೂಹಲ!

ಯಾರು ಹಿತವರು ನಿನಗೆ ಈ ಈರ್ವರೊಳಗೆ?..

ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ತೀವ್ರ ಚಳಿಯ ಮಧ್ಯೆಯೂ ದಿನಗಳೆದಂತೆ ಚುನಾವಣಾ ಕಣದಲ್ಲಿ ಬಿಸಿ ಏರುತ್ತಿದೆ. 2014 ಮೇ ಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ನಂತರ ಮಹಾರಾಷ್ಟ್ರ, ಹರ್ಯಾಣ, ಜಮ್ಮು-ಕಾಶ್ಮೀರ ಮತ್ತು ಜಾರ್ಖಂಡ್ ವಿಧಾನ ಸಭೆಗಳಿಗೆ ನಡೆದ ಚುನಾವಣೆಗಿಂತಲೂ ದೆಹಲಿ ಚುನಾವಣೆಗೆ ವಿಶೇಷ ಮಹತ್ವ ನೀಡಲಾಗುತ್ತಿದೆ. ಈವರೆಗೆ ನಡೆದ 4 ರಾಜ್ಯಗಳ ಚುನಾವಣೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಮ್ಮು-ಕಾಶ್ಮೀರ (ಅಲ್ಲಿ ಸರಕಾರ ರಚನೆ ಇನ್ನೂ ಸಾಧ್ಯವಾಗದ ಹಿನ್ನಲೆಯಲ್ಲಿ ರಾಜ್ಯಪಾಲರ ಆಢಳಿತ ಹೇರಲಾಗಿದೆ) ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳಲ್ಲಿ ತನ್ನ ಸರಕಾರ ಸ್ಥಾಪಿಸಿದ ಬಿಜೆಪಿಗೆ ದೆಹಲಿ ಚುನಾವಣೆ ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಮೋದಿ ಅಲೆಯಿಂದಲೇ ಕೇಂದ್ರದಲ್ಲಿ ಬಹುಮತದ ಸರಕಾರ ಸ್ಥಾಪಿಸಿದ ಬಿಜೆಪಿಗೆ ರಾಜ್ಯ ಚುನಾವಣೆಗಳಲ್ಲೂ ಮೋದಿ ಅಲೆಯೇ ಬಹುಮಟ್ಟಿಗೆ ಸಹಕಾರಿಯಾಗಿತ್ತು. ಇದೇ ಅಲೆ ದೆಹಲಿಯಲ್ಲೂ ಮುಂದುವರಿಯುತ್ತದೆಯೇ ಅಥವಾ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ನರೇಂದ್ರ ಮೋದಿಯವರ ಗೆಲುವಿನ ಓಟವನ್ನು ತಡೆಯುವಲ್ಲಿ ಯಶಸ್ವಿಯಾಗುತ್ತದೆಯೇ ಎಂಬುದು ರಾಜಕೀಯ ಪಂಡಿತರ ಕುತೂಹಲ.

ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಧರಣಿಗಳನ್ನು ನಡೆಸುತ್ತಾ 2013ರಲ್ಲಿ ನಡೆದ ದೆಹಲಿ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಾಗೂ ವಿಶ್ಲೇಷಕರು ಅಚ್ಚರಿಪಡುವಂತೆ 28 ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷ ತನ್ನ ಕಟ್ಟಾ ವಿರೋಧಿ ಕಾಂಗ್ರೆಸ್ ಪಕ್ಷದ ಸಹಾಯ ಪಡೆದು ಕೇಜ್ರಿವಾಲ್ ನೇತೃತ್ವದಲ್ಲಿ ಸರಕಾರ ರಚಿಸಿತು. ಆದರೆ ಅಧಿಕಾರಕ್ಕೆ ಬಂದ ಕೇವಲ 49 ದಿನಗಳಲ್ಲೇ ರಾಜೀನಾಮೆ ನೀಡಿ ಕೇಜ್ರಿವಾಲ್ ಹೊರನಡೆದದ್ದು ಅವರ ಅಭಿಮಾನಿಗಳೂ ಸೇರಿದಂತೆ ಎಲ್ಲರನ್ನೂ ಇನ್ನೊಮ್ಮೆ ಅಚ್ಚರಿಗೊಳಿಸಿತ್ತು!. ಕೇಜ್ರಿವಾಲ್ ಒಬ್ಬ ಪಲಾಯನವಾದಿ ಎಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡರು. ಅಲ್ಲದೆ, 2014 ಮೇ ತಿಂಗಳಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ ಪಂಜಾಬ್ ನಲ್ಲಿ 4 ಸ್ಥಾನಗಳನ್ನು ಬಿಟ್ಟರೆ ದೇಶಾದ್ಯಂತ ತೀವ್ರ ಸೋಲುಂಡು ಆಮ್ ಆದ್ಮಿ ಪಕ್ಷ ತನ್ನ ರಾಷ್ಟ್ರೀಯ ಆಕಾಂಕ್ಷೆಗಳನ್ನು ಸದ್ಯಕ್ಕೆ ಕೈಬಿಡುವಂತೆ ಮಾಡಿತು. ಆ ಕಾರಣಕ್ಕಾಗಿ 4 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಭಾಗವಹಿಸಲಿಲ್ಲ.

ಸದ್ಯಕ್ಕಂತೂ ಕೇಜ್ರಿವಾಲ್ ತಮ್ಮ ಗುರಿಯನ್ನು ದೆಹಲಿ ಗದ್ದುಗೆಗಷ್ಟೇ ಸೀಮಿತಗೊಳಿಸಿದ್ದಾರೆ. ಅವರಿಗೆ ಈ ಚುನಾವಣೆ ತಮ್ಮ ಹಾಗೂ ಪಕ್ಷದ ಅಸ್ಥಿತ್ವದ ಪ್ರಶ್ನೆಯಾಗಿದೆ. ದೆಹಲಿಯಲ್ಲಿ ಸೋತರೆ ಕೇಜ್ರಿವಾಲ್ ರಾಜಕೀಯವಾಗಿ ಮೂಲೆಗುಂಪಾಗುವುದರಲ್ಲಿ ಸಂದೇಹವಿಲ್ಲ. ಪ್ರಧಾನಿ ಮೋದಿಯವರ 8 ತಿಂಗಳುಗಳ ಧಕ್ಷ, ಭ್ರಷ್ಟಾಚಾರ ರಹಿತ ಆಡಳಿತವೂ ಕೇಜ್ರಿವಾಲ್ ಅವರಿಗೆ ತಲೆನೋವಾಗಿದೆ. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗುತ್ತಾ ಜನಬೆಂಬಲ ಪಡೆದ ಕೇಜ್ರಿವಾಲ್ ಈಗ ಸೂಕ್ತವಾದ ಚುನಾವಣಾ ಘೋಷಣೆಗಾಗಿ ಪರದಾಡುವಂತಾಗಿದೆ!. ಅದಕ್ಕಾಗಿ ಹಳೇ ಗ್ರಾಮಾಫೋನ್ ರೆಕಾರ್ಡ್ ನಂತೆ ಬಿಜಲಿ-ಪಾನಿ (ವಿದ್ಯುತ್-ನೀರು) ಗಳನ್ನೇ ನಂಬಿ ಬೀದಿಗಿಳಿದಿದ್ದಾರೆ.

ತಮ್ಮ 49 ದಿನಗಳ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದೂ ಬೀದಿಯಲ್ಲಿ ಧರಣಿ ನಡೆಸಿ ರಾತ್ರಿ ಅಲ್ಲೇ ಮಲಗಿದ ಹೆಗ್ಗಳಿಕೆ ಕೇಜ್ರಿವಾಲ್ ಅವರದ್ದು. ಆಮ್ ಆದ್ಮಿ ಪಕ್ಷದ ಸರಣಿ ಧರಣಿಗಳು ದೆಹಲಿ ಜನರಿಗೆ ಹೊಸ ಪಕ್ಷದ ಬಗ್ಗೆ ಭ್ರಮನಿರಸನವನ್ನೂ ಉಂಟುಮಾಡಿತ್ತು. ಅಲ್ಲದೆ ಸರಕಾರ ನಡೆಸುವ ಸಾಮರ್ಥ್ಯವಿಲ್ಲದೆ ಕ್ಷುಲ್ಲಕ ಕಾರಣಕ್ಕೆ ರಾಜೀನಾಮೆ ಕೊಟ್ಟು ಹೊರನಡೆದಿದ್ದೂ ಅವರ ಅಭಿಮಾನಿಗಳ ಸಂಖ್ಯೆಯನ್ನೂ ಬಹಳ ಕುಂಠಿತಗೊಳಿಸಿತ್ತು. ಸಾಲದೆಂಬಂತೆ ಆಮ್ ಆದ್ಮಿ ಪಕ್ಷ ತೊರೆದ ಸ್ಥಾಪಕ ಸದಸ್ಯೆ ಶಾಜಿಯಾ ಇಲ್ಮಿ ಹಾಗೂ ಪಕ್ಷಸ್ಥಾಪನೆಗೆ ಮೊದಲು ತಮ್ಮ ಸಹೋದ್ಯೋಗಿಯಾಗಿದ್ದ ಕಿರಣ್ ಬೇಡಿ ಬಿಜೆಪಿ ಸೇರಿದ್ದಂತೂ ಅವರಿಗೆ ಇನ್ನಿಲ್ಲದ ಸಂಕಟ ತಂದಿರುವುದೂ ಹೌದು. ಇತ್ತೀಚಿನ ಚುನಾವಣಾ ಸಮೀಕ್ಷೆ ಪ್ರಕಾರ 70 ಸ್ಥಾನಗಳ ಪೈಕಿ ಬಿಜೆಪಿಗೆ 35ರಿಂದ 45 ಹಾಗೂ, ಆಮ್ ಆದ್ಮಿ ಪಕ್ಷಕ್ಕೆ 18ರಿಂಡ 25 ಸ್ಥಾನಗಳು ಲಭಿಸುವ ಸಾಧ್ಯತೆಯಿದೆ. ಇದೂ ಕೂಡಾ ಕೇಜ್ರಿವಾಲ್ ಮತ್ತು ಅವರ ಪಟಲಾಂಗೆ ಸಂತಸ ತರುವ ವಿಷಯವಲ್ಲ.

ಹಾಗಾದರೆ ಕೇಜ್ರಿವಾಲ್ ಬಗ್ಗೆ ಬಿಜೆಪಿ ತಲೆಕೆಡಿಸಿಕೊಳ್ಳುವ ಅಗತ್ಯವಿದೆಯೆ? ಬೇರೆಲ್ಲೂ ಗೆಲ್ಲದ ಕೇಜ್ರಿವಾಲ್ ಪಕ್ಷ ದೆಹಲಿಯಲ್ಲಿ ಗೆಲ್ಲಲು ಸಾಧ್ಯವೆ? ವಿಶ್ವ ನಾಯಕನ ಪಟ್ಟಕ್ಕೇರಿದ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ಮುಂದೆ ಕೇಜ್ರಿವಾಲ್ ಜಾದೂ ನಡೆದೀತೆ?.. ಇದಕ್ಕೆ ಉತ್ತರ ಫೆ.10ರಂದು ಲಭಿಸಲಿದೆ. ಆದರೆ, ಕಳೆದೊಂದು ವರ್ಷದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಅರವಿಂದ ಕೇಜ್ರಿವಾಲ್ ತಮ್ಮ ಹಿಂದಿನ ವರ್ಚಸ್ಸು ಮತ್ತು ಜನ ಮನ್ನಣೆ ಕಳೆದುಕೊಂಡಿದ್ದಂತೂ ನಿಜ. ಮಾತ್ರವಲ್ಲ, ಆಮ್ ಆದ್ಮಿ ಪಕ್ಷ ಹಲವು ವರಿಷ್ಠ ನಾಯಕರನ್ನು ಕಳೆದುಕೊಂಡು ಇನ್ನಷ್ಟು ದುರ್ಬಲವಾಗಿರುವುದೂ ಅಷ್ಟೇ ಸತ್ಯ. ಕೆಲವೊಂದು ರಾಜಕೀಯ ಪಂಡಿತರು ಮತ್ತು ಮಾಧ್ಯಮಗಳನ್ನು ಬಿಟ್ಟರೆ ಬೇರಾರೂ ಕೇಜ್ರಿವಾಲ್ ಪಕ್ಷ ಚುನಾವಣೆ ಗೆಲ್ಲಬಹುದು ಅಂತ ನಂಬುತ್ತಿಲ್ಲ. ಆದರೂ ದೇಶದ ರಾಜಧಾನಿ ದೆಹಲಿಯಲ್ಲೇ ಸೋತರೆ ಪ್ರಧಾನಿ ಮೋದಿ ಹಾಗೂ ಸೋಲಿಲ್ಲದ ಸರದಾರನಾದ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ತೀವ್ರ ಮುಖಭಂಗವಾಗುವುದಂತು ಖಂಡಿತ. ಅಲ್ಲದೆ, ಅವರಿಬ್ಬರನ್ನು ಹಣಿಯಲು ಸದಾ ಕಾಯುತ್ತಿರುವ ವಿಪಕ್ಷಗಳಿಗಂತೂ ಅದಕ್ಕಿಂತ ಬೇರೆ ಕಾರಣ ಬೇಕಿಲ್ಲ. ಹಾಗಾಗಿ ಬಿಜೆಪಿ ತನ್ನೆಲ್ಲಾ ಸಂಘಟನಾ ಶಕ್ತಿಯನ್ನು ಈ ಚುನಾವಣೆಯಲ್ಲಿ ಪ್ರಯೋಗಿಸುವುದು ಅನಿವಾರ್ಯವಾಗಿದೆ. ಆದ್ದರಿಂದಲೇ ಪ್ರಧಾನಿ ಮೋದಿ ಸೇರಿದಂತೆ ಪಕ್ಷದ ಎಲ್ಲ ವರಿಷ್ಠ ನಾಯಕರು, ಸಚಿವರು ಹಾಗೂ ಮುಖ್ಯಮಂತ್ರಿಗಳು ದೆಹಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಏನೇ ಇರಲಿ, ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ ದೆಹಲಿ ಚುನಾವಣೆಯ ಫಲಿತಾಂಶ ಫೆ.10ರಂದು ಬರಲಿದ್ದು, ಅಲ್ಲಿಯವರೆಗೆ ಜನಸಾಮಾನ್ಯರಿಗೆ ಸಾಕಷ್ಟು ಮನರಂಜನೆ ಸಿಗುವುದರಲ್ಲಿ ಸಂದೇಹವಿಲ್ಲ!.

 

Author : ಸಮಚಿತ್ತ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited