Untitled Document
Sign Up | Login    
ಗಾಂಧಿ ತತ್ವವನ್ನು ಕೊಂದಿದ್ದು ಕಾಂಗ್ರೆಸ್ ಎಂಬ ಸಾಕ್ಷಿಮಹಾರಾಜರ ಮಾತು ಸತ್ಯ ಅಲ್ಲವೇ?

ಸಂಸದ ಸಾಕ್ಷಿ ಮಹಾರಾಜ್

ನರೇಂದ್ರ ಮೋದಿ ಅವರ ಆಡಳಿತ ಪ್ರಾರಂಭದ ದಿನದಿಂದಲೂ ಈವರೆಗೂ ಸರ್ಕಾರದ ವಿರುದ್ಧ ಪ್ರತಿಭಟಿಸಲು ವಿರೋಧಪಕ್ಷಗಳಿಗೆ ವಿಷಯವೇ ಸಿಕ್ಕಿಲ್ಲ. ಎರಡು ಅಂಕಿ ದಾಟದ ಕಾಂಗ್ರೆಸ್ಸಿಗರು ವಿಪಕ್ಷ ಸ್ಥಾನ ಪಡೆಯದೇ ಇದ್ದರೂ ಹೇಗಾದರೂ ಸರ್ಕಾರವನ್ನು ಹಣಿಯಲೇಬೇಕೆಂಬ ತೀರ್ಮಾನಕ್ಕೆ ಬಂದಿತ್ತು. ಒಂದಷ್ಟು ದಿನ ಕಪ್ಪು ಹಣದ ವಿಷಯ ಸಿಕ್ಕಿತಾದರೂ ಅದನ್ನು ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ಸಿಗರಿಗೆ ಸಾಧ್ಯವಾಗಲಿಲ್ಲ. ಆನಂತರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ನೀಡಿದ ವಿವಾದಾತ್ಮಕ ಹೇಳಿಕೆ ವಿಷಯದ ಬಗ್ಗೆ ಒಂದಷ್ಟು ದಿನ ಕಾಲಹರಣ ಮಾಡಿದರು. ಕೊನೆಗೆ ಸಾಕ್ಷಿ ಮಹಾರಾಜ್ ಗಾಂಧಿ ಬಗ್ಗೆ ಹೇಳಿಕೆ ನೀಡುವವರೆಗೂ ಕಾಂಗ್ರೆಸ್ ಗೆ ಸಂಸತ್ ನಲ್ಲಿ ಆಹಾರವಿಲ್ಲದಂತಾಗಿತ್ತು.

ವಿಪಕ್ಷದಲ್ಲಿದ್ದರೂ ಸರಿ, ಅಧಿಕಾರದಲ್ಲಿದ್ದರೂ ಸರಿ, ಅಸಲಿಯೋ ಅಥವಾ ನಕಲಿಯೋ ಒಟ್ಟಿನಲ್ಲಿ ಗಾಂಧಿ ಎಂಬ ಹೆಸರಿಲ್ಲದೇ ಕಾಂಗ್ರೆಸ್ಸಿಗರ ಅಸ್ಥಿತ್ವವೇ ಇಲ್ಲ. ತಮ್ಮ ಪಕ್ಷದವರನ್ನು ಹೊರತುಪಡಿಸಿ ಗಾಂಧಿ ಹೆಸರನ್ನು ಮತ್ತೊಬ್ಬರು ಹೇಳಿದರೂ ಸಹಿಸಲು ಸಾಧ್ಯವಾಗುವುದಿಲ್ಲ ಇವರಿಗೆ. ಅಂಥದ್ದರಲ್ಲಿ ಸಾಕ್ಷಿಮಹಾರಾಜರು, 'ಗಾಂಧಿಯನ್ನು ಕೊಂದಿದ್ದು ಗೋಡ್ಸೆ, ಆದರೆ ಗಾಂಧಿ ತತ್ವಗಳನ್ನು ಕೊಂದದ್ದು ಕಾಂಗ್ರೆಸ್ಸೇ' ಎಂದು ಸತತ ಒಂದು ವಾರ ಕಾಲ ಕಿರುಚುತ್ತಿದ್ದ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದರು!. ಗಮನಾರ್ಹ ವಿಷವೆಂದರೆ ಗಾಂಧಿ ಕೊಲೆಯ ಬಗ್ಗೆ ಕಾಂಗ್ರೆಸ್ಸಿಗರ ಮೇಲೆ ಆರೋಪ ಮಾಡಿದರೂ ಸಹ ಸಾಧ್ವಿ ನಿರಂಜನ ಜ್ಯೋತಿ ಅವರಿಗೆ ವ್ಯಕ್ತವಾದ ಪ್ರತಿಭಟನೆ ಸಾಕ್ಷಿ ಮಹಾರಾಜರ ಹೇಳಿಕೆಗೆ ವಿರೋಧ ವ್ಯಕ್ತವಾಗಲಿಲ್ಲ. ಹಾಗಾದರೆ ಗಾಂಧಿ ತತ್ವಗಳನ್ನು ಕಾಂಗ್ರೆಸ್ಸಿಗರು ಕೊಲೆ ಮಾಡಲಿಲ್ಲವೇ? ಅದೇಕೆ ಮಾಡಲಿಲ್ಲ. ಸ್ವಾತಂತ್ರ್ಯ ನಂತರ ವಿಸರ್ಜನೆಯಾಗಬೇಕಿದ್ದ ಕಾಂಗ್ರೆಸ್, ರಾಜಕೀಯ ಪಕ್ಷವಾಗಿ ತಲೆ ಎತ್ತಿನಿಂತಿದ್ದೇ ಗಾಂಧಿ ತತ್ವದ ಸಮಾಧಿ ಮೇಲೆ! ಅರ್ಥಾತ್ ಹುಟ್ಟಿದ್ದೇ ಗಾಂಧಿ ತತ್ವದ ಕಗ್ಗೊಲೆಯ ಮೂಲಕ.

ದೇಶದ್ರೋಹದ ಕೆಲಸಗಳನ್ನು ಮಾಡಿ ಕೊನೆಗೆ ಸೋಗಲಾಡಿಗಳ ವೇಷದಲ್ಲಿ ಗಾಂಧಿ ತತ್ವಗಳನ್ನು ಮುಂದಿಟ್ಟು ಮತ ಬೇಡಿ ಅಧಿಕಾರಕ್ಕೆ ಬಂದರಲ್ಲ ಅದು ಗಾಂಧಿ ತತ್ವದ ಕೊಲೆಯಲ್ಲವೇ? 60ವರ್ಷ ನಿರಂತರವಾಗಿ ದೇಶದ ಜನರಿಗೆ ಮೋಸ ಮಾಡಿತ್ತಲ್ಲ ಅದು ಗಾಂಧಿ ತತ್ವಗಳ ಕೊಲೆಯಾದೀತು. ಗೋಹತ್ಯೆ, ಮತಾಂತರ ಎಂದಾಗ ಅರಚುತ್ತಾ ಅಲ್ಪಸಂಖ್ಯಾತರ ಪರ ವಹಿಸಿಕೊಂಡು ಮಾತನಾಡುತ್ತಾರಲ್ಲ ಅದು ಕೂಡ ಗಾಂಧಿ ತತ್ವದ ಕೊಲೆಯಾಗುತ್ತದೆ. ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜನೆಗೊಳಿಸಬೇಕೆಂದ ಗಾಂಧಿ ಅವರ ಮಾತು ಮೀರಿ ನಡೆದರಲ್ಲಾ ಅದನ್ನು ಏನೆನ್ನಬೇಕು?
ಚೆಗೆವೆರಾ ಎದುರು ಬೊಲಿವಿಯನ್ ಸೇನಾ ಅಧಿಕಾರಿ ಪಿಸ್ತೂಲು ಹಿಡಿದು ನಿಂತ ಸಂದರ್ಭದಲ್ಲಿ ಆತ ಹೇಳಿದ್ದ ಮಾತು ನೆನಪಾಗುತ್ತದೆ. I know you are here to kill me. Shoot, coward, you are only going to kill a man, ಗುಂಡು ಹೊಡಿ. ನೀನು ಸಾಯಿಸುವುದು ವ್ಯಕ್ತಿಯನ್ನೇ ಹೊರತು ವಿಚಾರವನ್ನಲ್ಲ’! ಎಂದು ಹೇಳಿದ್ದ ಮಾತದು. ಇಲ್ಲಿ ಆ ಮಾತುಗಳು ನೆನಪಾಗುತ್ತವೆ. ಈ ನೆಲೆಗಟ್ಟಿನಿಂದ ನೋಡಿದರೆ ಗಾಂಧಿಯನ್ನು ಶಾಶ್ವತವಾಗಿ ಕೊಂದದ್ದು ದೇಹಕ್ಕೆ ಗುಂಡಿಟ್ಟುಕೊಂದ ನಾಥೂರಾಮ್ ಗೋಡ್ಸೆಯೋ ಅಥವಾ ವಿಚಾರಗಳಿಗೆ 60 ವರ್ಷಗಳಿಂದ slow poison ಉಣಿಸುತ್ತಾ ಬಂದ ಕಾಂಗ್ರೆಸ್ಸಿಗರೋ ಎಂಬುದು ಸ್ಪಷ್ಟವಾಗುತ್ತದೆ.

ಇಷ್ಟಕ್ಕೂ ಸ್ವಾತಂತ್ರ್ಯ ಬಂದ ನಂತರ ಹಲವು ವರ್ಷಗಳು ಗಾಂಧಿಯನ್ನು ನಮ್ಮೊಂದಿಗಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಬಾಯ್ಬಿಟ್ಟರೆ ಗಾಂಧಿಗಿರಿಯನ್ನೇ ಉಸುರುವ ನಕಲಿ ಗಾಂಧಿಗಳು ದೇಶ ಲೂಟಿ ಮಾಡುವ ಮೂಲಕ ಗಾಂಧಿ ತತ್ವಗಳನ್ನು ಎಂದಿಗೋ ಕೊಲೆ ಮಾಡಿದರು!. ಆದರೆ ಎಲ್ಲವನ್ನೂ ಮಾಡಿದ ಕಾಂಗ್ರೆಸ್ಸಿಗರು ಮಾತ್ರ ಲೋಕಸಭೆಯಲ್ಲಿ ಕಿರುಚತೊಡಗಿದರು.

ಸಂಸತ್ ಕಲಾಪದಲ್ಲಿ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಿಷಯಗಳು ಚರ್ಚೆಯಾದ ಸಂದರ್ಭದಲ್ಲಿ ಗಾಂಧಿ ಹೆಸರನ್ನು ಗುತ್ತಿಗೆಗೆ ಪಡೆದಿರುವ ಕಾಂಗ್ರೆಸ್ಸಿಗರು ಅವರ ತತ್ವಗಳಿಗೇಕೆ ವಿರುದ್ಧವಾಗಿ ಮಾತನಾಡುತ್ತಾರೆ? ಸಾಧ್ವಿ ನಿರಂಜನ ಜ್ಯೋತಿ ಅವರು ಈ ದೇಶದಲ್ಲಿ ರಾಮನ ಮಕ್ಕಳು ಮಾತ್ರ ದೇಶದಲ್ಲಿರಬೇಕೆಂದು ಹೇಳಿದಾಗ ಗಾಂಧಿಯ ರಾಮರಾಜ್ಯದ ಕನಸಿನ ಆಯಾಮವನ್ನೂ ಮರೆತು ಸಂಸತ್ ನಲ್ಲಿ ಗದ್ದಲವೆಬ್ಬಿಸಿದರು. ರಾಜೀನಾಮೆ ಕೇಳಿದರು. ಕಾಂಗ್ರೆಸ್ಸಿಗರು ಗಾಂಧಿಜಿ ತತ್ವ ಹಾಗೂ ಆ ಹೆಸರನ್ನು ನಿತ್ಯನಿರಂತರವಾಗಿ ತಮಗೆ ಬೇಕಾದ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲು ಇದಕ್ಕಿಂತ ಉದಾಹರಣೆ ಬೇಕಾ?

ಇನ್ನು ಮತಾಂತರದ ವಿಷಯದಲ್ಲಿಯೂ ಕಾಂಗ್ರೆಸ್ ಪಕ್ಷ ಎಂದಿಗೂ ನಡೆದುಕೊಂಡಿರುವುದು ಗಾಂಧಿ ತತ್ವಗಳಿಗೆ ವಿರುದ್ಧವಾಗಿಯೇ, ಪಾಕಿಸ್ತಾನದಲ್ಲಿ ಹಿಂದೂಗಳ ದೇವಾಲಯ ಧ್ವಂಸ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮತಾಂತರ ಎಗ್ಗಿಲ್ಲದೇ ನಡೆಯುತ್ತಿದ್ದರೂ ಇವರದ್ದೇ ಸರ್ಕಾರ ಇದ್ದಾಗ ಶಿಖಂಡಿಗಳಂತೆ ವರ್ತಿಸಿದ್ದರು. ಆದರೆ ಉತ್ತರ ಪ್ರದೇಶದಲ್ಲಿ 57 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ಸಾಗಿದನ್ನು ಮಾತ್ರ ಸಹಿಸಲಾಗಲಿಲ್ಲ. ಆಗ ಗಾಂಧಿ ತತ್ವಗಳ ಬಗ್ಗೆ ಕಾಂಗ್ರೆಸ್ಸಿಗರಿಗೆ ನೆನಪಾಗಲಿಲ್ಲ. ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಾದರೂ ಗಾಂಧಿ ತತ್ವಗಳನ್ನು ಕೊಂದಿದ್ದು ಮಾತ್ರ ತಾವೇ ಎಂದು ಮನಸ್ಸಾಕ್ಷಿ ಚುಚ್ಚಲಿಲ್ಲ. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆಗೆ ಪ್ರತಿಭಟಿಸುತ್ತಾರೆಂದರೆ ಕಾಂಗ್ರೆಸ್ಸಿಗರು ಅದೆಂಥಹ ನೈತಿಕ ಭ್ರಷ್ಟರಿರಬೇಕು?
ಇವೆಲ್ಲದ್ದಕ್ಕೂ ಮೀರಿದ ಗಾಂಧಿ ತತ್ವ ಅಂಹಿಸೆ, ಕಾಂಗ್ರೆಸ್ಸಿಗರು ಅದನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ? ಗಾಂಧಿಯನ್ನು ಹತ್ಯೆ ಮಾಡಿದವ ಬ್ರಾಹ್ಮಣ ಎಂಬ ಕಾರಣಕ್ಕೆ ಬಾಂಬೆಯಲ್ಲಿ ಅದೆಷ್ಟು ಬ್ರಾಹ್ಮಣರ ಮೇಲೆ ದಾಳಿ ನಡೆದಿಲ್ಲ? ಇಂದಿರಾ ಗಾಂಧಿಯನ್ನು ಕೊಂದವರ ಸಮುದಾಯದವರೆಂಬ ಕಾರಣಕ್ಕೆ ಅದೆಷ್ಟು ಸಿಖ್ಖರನ್ನು ಹತ್ಯೆ ಮಾಡಿಲ್ಲ? ಗಾಂಧಿ ತತ್ವಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರು ಇಂತಹ ಸಂದರ್ಭದಲ್ಲಿ ಅಹಿಂಸೆಯನ್ನು ತಡೆಯಬಹುದಿತ್ತಲ್ಲ. ಇವೆಲ್ಲವನ್ನೂ ಬಿಡಿ, ದೇಶವನ್ನು ಕೇಕ್ ಕತ್ತರಿಸಿದ ರೀತಿಯಲ್ಲಿ ಕತ್ತರಿಸಿ ಹಂಚಿದಾಗ ಪಾಕಿಸ್ತಾನದಿಂದ ಭಾರತಕ್ಕೆ ಹೊರಟ ಹಿಂದೂ ಮಹಿಳೆಯರು ಮಾನ ಕಳೆದುಕೊಂಡು ಅಹಿಂಸಾವಾದಿಯಾದ ಗಾಂಧಿ ಎದುರೇ ಹೆಣಗಳಾಗಿ ಬಿದ್ದಾಗ ಕಾಂಗ್ರೆಸ್ಸಿಗರು ಅಹಿಂಸಾ ತತ್ವವನ್ನು ಮರೆತೇಬಿಟ್ಟಿದ್ದರು. ಹಾಗಾದರೆ ಇಷ್ಟೆಲ್ಲಾ ನಡೆದಾಗಲೂ ಸುಮ್ಮನಿದ್ದ ಕಾಂಗ್ರೆಸ್ಸಿನವರು ಗಾಂಧಿ ಬದುಕಿದ್ದಾಗಲೇ ಅವರ ಕೊಲೆ ಮಾಡಿದ್ದರು ಎಂಬುದು ಸಾಬೀತಾದಂತಾಯಿತು. ಆದರೂ ಸಾಕ್ಷಿ ಮಹಾರಾಜ್ ಹೇಳಿಕೆ ನಿಜ ಅನ್ನಿಸಲಿಲ್ಲ. ಅಧಿಕಾರಕ್ಕಾಗಿ ಏನನ್ನೂ ಮಾಡಲು ತಯಾರಿರುವವರಿಗೆ ಗಾಂಧಿ ತತ್ವಗಳನ್ನು ಕೊಲ್ಲುವುದು ಕಷ್ಟದ ಕೆಲಸವಾಗದು. ಏಕೆಂದರೆ ಅವರಿಗೆ ತತ್ವ ಸಿದ್ಧಾಂತಗಳಿಗಿಂತ ಲೂಟಿ ಹೊಡೆಯುವುದೇ ಮುಖ್ಯ. ಲೂಟಿ ಹೊಡೆಯುವುದಕ್ಕೆ ಅಧಿಕಾರ ಮುಖ್ಯ, ಅಧಿಕಾರ ಹಿಡಿಯಲು ಮಾತ್ರ ಗಾಂಧಿ ತತ್ವಗಳು ಸೀಮಿತ. ಸಂಬಂಧವೇ ಇಲ್ಲದಿದ್ದರೂ ಹೆಸರಲ್ಲೇ ಗಾಂಧಿ ಎಂಬ ಪದ ಸೇರಿಸಿಕೊಂಡಿದ್ದಾರಲ್ಲಾ, ಇನ್ನು ತತ್ವಗಳನ್ನು ಕಟ್ಟಿಕೊಂಡು ಏನಾಗಬೇಕು? ಸಾಚಾಗಳಂತೆ ವರ್ತಿಸುವ ಕಾಂಗ್ರೆಸ್ಸಿಗರು ಗಾಂಧಿ ನೆನಪಿನಲ್ಲಿ ದೇಶಕ್ಕೆ ಉಪಯೋಗವಾಗುವ ಯೋಜನೆಗಳನ್ನು ನೀಡಿದ್ದಾರಾ? ಗಾಂಧಿಜಿ ಹೇಳುತ್ತಿದ್ದ ಸ್ವಚ್ಛತೆಗಾಗಿ ಜಾಗೃತಿ ಮೂಡಿಸುವುದಕ್ಕೂ 60 ವರ್ಷಗಳೇ ಬೇಕಾಯಿತು. ಅದೂ ಕಾಂಗ್ರೆಸ್ಸೇತರ ಪ್ರಧಾನಿಯಿಂದ. ರಾಜಕೀಯ ಕ್ಷೇತ್ರವನ್ನು ಕಲ್ಮಶಗೊಳಿಸಿದವರಿಂದ ಭಾರತವನ್ನು ಸ್ವಚ್ಛಗೊಳಿಸಲು ಹೇಗೆತಾನೇ ಸಾಧ್ಯ ಹೇಳಿ?
ತಾವಿದ್ದ ಕಾಂಗ್ರೆಸ್ ಪಕ್ಷ ದೇಶಕ್ಕೂ ತಮ್ಮ ತತ್ವ ಸಿದ್ಧಾಂತಗಳಿಗೂ ಮುಳುವಾಗುತ್ತದೆ ಎಂದು ಗಾಂಧಿಗೆ ಗೊತ್ತಿರಲಿಲ್ಲವೇ? ಪಾಕಿಸ್ತಾನದಿಂದ ಬಂದ ನಿರಾಶ್ರಿತ ಹಿಂದೂಗಳು ಗಾಂಧಿ ಬಳಿ ಅಳಲು ತೋಡಿಕೊಂಡಾಗ ನಿರಾಶ್ರಿತರ ಪರವಾಗಿ ಪ್ರಧಾನಿ ನೆಹರೂಗೆ ಅಪ್ಪಣೆ ಮಾಡುವ ಶಕ್ತಿಯನ್ನೂ ಕಳೆದುಕೊಂಡಿದ್ದರು. ಈ ವಿಷಯದಲ್ಲಿ ನೆಹರೂ ನಡೆದುಕೊಂಡ ರೀತಿಯಲ್ಲೇ ಗಾಂಧಿಗೆ ತಮ್ಮ ರಾಮರಾಜ್ಯದ ಕನಸನ್ನೂ ಸೇರಿಸಿ ಸಮಸ್ತ ತತ್ವಗಳಿಗೂ ಈ ಪಕ್ಷ ಕೊಳ್ಳಿ ಇಡಲಿದೆ ಎಂದು ಅರ್ಥವಾಗಬೇಕಿತ್ತು. ಒಂದು ವೇಳೆ ಅರ್ಥವಾಗಿದ್ದರೂ ಗಾಂಧಿ ಆ ವೇಳೆಗೆ ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದರು. ಒಬ್ಬ ನಾಯಕನಿಂದ ಪ್ರಧಾನಿ ಹುದ್ದೆ ಗಿಟ್ಟಿಸಿಕೊಂಡ ಪಕ್ಷ ಆತ ಬದುಕಿದ್ದಾಗಲೇ ತನ್ನ ಗಾಡ್ ಫಾದರ್ ನ ತತ್ವಗಳಿಗೆ ತಿಲಾಂಜಲಿ ಅರ್ಪಿಸಿತ್ತು. ಆದರೂ ಶರೀರಕ್ಕೆ ಗುಂಡು ಹೊಡೆದ ವ್ಯಕ್ತಿಯನ್ನೇ ಮುಂದಿಟ್ಟುಕೊಂಡು ಸಂಸತ್ ನಲ್ಲಿ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಹಾಗೂ ನೆಹರೂ ಕುಟುಂಬದ ಪ್ರತಿಯೊಂದು ನಡೆಯೂ ಗಾಂಧಿ ತತ್ವವನ್ನು ಕೊಲೆ ಮಾಡಿದೆ. ಭಾರತದ ಬಗ್ಗೆ ಭಾವನೆಗಳೇ ಇಲ್ಲದೇ ಹಿಂದೂವಾಗಿ ನನ್ನ ಹುಟ್ಟು ಆಕಸ್ಮಿಕ ಎಂದವರನ್ನು ವಿಪರೀತವಾಗಿ ತಲೆಮೇಲೆ ಕೂರಿಸಿಕೊಂಡಾಗ ತತ್ವಗಳನ್ನು ಬಲಿಕೊಡಬೇಕಾಗುತ್ತದೆ ಎಂಬುದಕ್ಕೆ ಗಾಂಧಿಗಿಂತಲೂ ಉತ್ತಮ ಉದಾಹರಣೆ ಬೇಕಿಲ್ಲ. ಗಾಂಧಿ ತತ್ವಗಳನ್ನು ಕಾಂಗ್ರೆಸ್ ಕೊಂದರೂ ಗೋಡ್ಸೆಯೇ ಗಾಂಧಿಯನ್ನು ಕೊಂದದ್ದು ಎಂದೆನಿಸುವುದು ಸಹಜ. ಕಾಂಗ್ರೆಸ್ ಗಾಂಧಿ ವಿಚಾರದಲ್ಲಿ ನಡೆದುಕೊಂಡಿದ್ದು ಅಧಿಕಾರಕ್ಕಾಗಿ, ಮತ ಗಳಿಸಲು ಬಳಸಿಕೊಂಡು ಎಸೆದದ್ದು ಎಲ್ಲದರ ಬಗ್ಗೆ ಅರಿವಿರುವವರು ಗೋಡ್ಸೆ ಮಾತ್ರ ಗಾಂಧಿಯನ್ನು ಕೊಂದ ಎನ್ನಲು ಸಾಧ್ಯವಿಲ್ಲ. ಗಾಂಧಿ ತತ್ವವನ್ನು ಕೊಂದಿದ್ದು ಕಾಂಗ್ರೆಸ್ ಎಂಬ ಸಾಕ್ಷಿಮಹಾರಾಜರ ಮಾತು ಸುಳ್ಳೆನ್ನಲು ಸಾಧ್ಯವಿಲ್ಲ.

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited