Untitled Document
Sign Up | Login    
2014 ಭಾರತಕ್ಕೆ ಅವಿಸ್ಮರಣೀಯ ಘಟನೆಗಳನ್ನು ನೀಡಿದ ವರ್ಷ


2014 ಕಳೆದು 2015ನೇ ಹೊಸ ವರ್ಷ, ಹೊಸ ನಿರೀಕ್ಷೆಗಳನ್ನು ಹೊತ್ತು ತಂದಿದೆ. ಹೊಸ ವರ್ಷದ ಮುನ್ನೋಟದ ಜೊತೆಜೊತೆಯಲ್ಲೇ 2014ರ ಹಿನ್ನೋಟ ಅವಲೋಕನವೂ ನಡೆಯುತ್ತಿದೆ. ಜಾಗತೀಕರಣದಲ್ಲಿ ಬೆಸೆದಿರುವ ದೇಶಗಳಿಗೆ 2014 ಹೇಗಿತ್ತು ಎಂಬುದನ್ನು ವರ್ಣಿಸುವುದಕ್ಕಿಂತಲೂ ಭಾರತದ ಮಟ್ಟಿಗೆ 2014ನ್ನು ವರ್ಣಿಸುವುದು ಈ ಬಾರಿಯ ಹಿನ್ನೋಟದ ಸ್ಪೆಷಲ್ ಎಂದೇ ಹೇಳಬಹುದು.

ಹೊಸ ವರ್ಷದ ಮುನ್ನೋಟದ ಸಂದರ್ಭದಲ್ಲಿ ಪ್ರತಿ ವರ್ಷದ ಹಿನ್ನೋಟದ ವ್ಯಾಖ್ಯಾನಗಳೂ ಒಂದೇ ತೆರನಾಗಿರುತ್ತಿದ್ದವು. ಆದರೆ ಈಬಾರಿ ಗತ ವರ್ಷದ ನೆನಪುಗಳೂ ರೋಚಕವಾಗಿದೆ. ಕಾರಣವಿಷ್ಟೇ 2014 ಭಾರತವನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡಿದ ವರ್ಷ. ಏಕೆಂದರೆ ಲೋಕಸಭಾ ಚುನಾವಣೆಯಿಂದ ಹಿಡಿದು ಈಕ್ಷಣದ ವರೆಗೂ ಎಲ್ಲಿ ಭಾರತ ವಿದೇಶಗಳ ಕೇಂದ್ರಬಿಂದುವಾಗಿ ನಿಂತಿದೆ.

2014 ನಿಶ್ಚಿತವಾಗಿಯೂ ಭಾರತದ ಐತಿಹಾಸಿಕ ವರ್ಷವೇ ಸರಿ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ 2014ರನ್ನು 1947ರೊಂದಿಗೆ ಸಮೀಕರಿಸಿ ಹರಿದಾಡಿದ್ದ, ಶೇರ್ ಮಾಡಲ್ಪಟ್ಟ ಪೋಸ್ಟ್ ಗಳಿಗೆ ಲೆಕ್ಕವೇ ಇಲ್ಲ. 60 ವರ್ಷಗಳಿಂದ ಚರ್ವಿತಚರ್ವಣವೆಂಬಂತಿದ್ದ ಚುನಾವಣಾ ವ್ಯವಸ್ಥೆಯನ್ನು ಬದಲಾಯಿಸಿತ್ತು. ವಿಶ್ವದ ದೊಡ್ಡಣ್ಣ ಕೂಡ ಭಾರತಕ್ಕೆ ಶರಣಾದ ವರ್ಷ ಎಂದು ಭಾರತ ಚಿರಕಾಲ ನೆನಪಿಟ್ಟುಕೊಳ್ಳಬಲ್ಲಂತಹ ಬದಲಾವಣೆಗಳು ನಡೆದವು. ಮೊಟ್ಟ ಮೊದಲನೆಯದ್ದು ನಿಯೋಜಿತ ಪ್ರಧಾನಿಯಾಗಿದ್ದ ನರೇಂದ್ರ ಮೋದಿ ಪ್ರಜಾಪ್ರಭುತ್ವದ ದೇಗುಲವಾದ ಸಂಸತ್ ಭವನದ ಮುಂಭಾಗದಲ್ಲಿದ್ದ ಮೆಟ್ಟಿಲಿಗೆ ಶಿರಬಾಗಿ ನಮಸ್ಕರಿಸಿ ಒಳಗೆ ಪ್ರವೇಶಿಸಿದ್ದರು. ನಂತರ ಮಾಡಿದ ಭಾಷಣದಲ್ಲಿ ಇಡೀ ದೇಶವೇ ಭಾವೋದ್ವೇಗಕ್ಕೊಳಗಾಗುವಂತೆ ಮಾಡಿದ್ದರು.

ಮೊದಲನೆಯದಾಗಿ ಸಾರ್ವತ್ರಿಕ ಚುನಾವಣೆಯಲ್ಲಿ ಒಂದೇ ಪಕ್ಷಕ್ಕೆ ಬಹುಮತ ದೊರೆತಿಯಿತು. ಆ ನಂತರ ಪ್ರಾರಂಭವಾದ ಎಲ್ಲಾ ಆಡಳಿತಾತ್ಮಕ ವಿಚಾರಗಳೂ ಒಂದಲ್ಲಾ ಒಂದು ರೀತಿಯಲ್ಲಿ ಇತಿಹಾಸ ಸೃಷ್ಠಿಸಿತ್ತು. ಡಬ್ಲ್ಯೂಟಿಒ ಒಪ್ಪಂದದಲ್ಲಿ ಸ್ಪಷ್ಟ ನಿಲುವು ತಳೆದ ಭಾರತದ ಮುಂದೆ ವಿಶ್ವದ ದೊಡ್ಡಣ್ಣ ಅಮೆರಿಕ ತಲೆ ಬಾಗಿದ್ದು, ಚೀನಾದೊಂದಿಗಿನ ಫಲಪ್ರದ ಮಾತುಕತೆ, ಭಾರತಕ್ಕೆ ಆಗಮಿಸಿದ್ದ ಚೀನಾ ಅಧ್ಯಕ್ಷರಿಂದಲೇ ಗಡಿ ಪ್ರದೇಶದಲ್ಲಿದ್ದ ಚೀನಾ ಸೈನಿಕರನ್ನು ಹಿಮ್ಮೆಟ್ಟಿಸುವ ತಾಕತ್ತು ಭಾರತಕ್ಕೆ ಸಿಕ್ಕಿದ್ದು 2014ರಲ್ಲೇ.
ಭಾರತ ನಿಧಾನವಾಗಿ ಅಧ್ಯಕ್ಷೀಯ ಮಾದರಿ ಆಡಳಿತಕ್ಕೆ ಒಗ್ಗಲು ಪ್ರಾರಂಭವಾಗಿದ್ದಕ್ಕೂ ಸಹ 2014 ಸಾಕ್ಷಿಯಾಗಿ ನಿಲ್ಲುತ್ತದೆ. ಕೇಂದ್ರ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸಚಿವಾಲಯಗಳ ವಿಲೀನ ಪ್ರಕ್ರಿಯೆ ಮೂಲಕ ದೇಶದ ಆಡಳಿತ ಯಂತ್ರಕ್ಕೆ ಚುರುಕುಮುಟ್ಟಿಸಲಾಯಿತು. ಅರುಣಾಚಲ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ಭಾರತದ ಗಡಿ ಪ್ರದೇಶದಲ್ಲಿ ಅತಿಕ್ರಮಣ ಮಾಡುತ್ತಿದ್ದ ಚೀನಾಕ್ಕೂ ಭಾರತದ ನಾಯಕತ್ವದ ಪರಿಚಯವಾದ ವರ್ಷ 2014.

ಇದು ಪ್ರಮುಖ ರಾಜಕೀಯ ವಿಷಯಗಳ ಹಿನ್ನೋಟವಾದರೆ 2014ರಲ್ಲಿ ವಿಜ್ನಾನದಲ್ಲೂ ಭಾರತ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದೆ.

ಮರೆತ ರಾಷ್ಟ್ರಗಳೊಂದಿಗೆ ಮರು ಬಾಂಧವ್ಯ:

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನೆರೆಯ ಕೆಲ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳದ ಸ್ಥಿತಿ ಉಂಟಾಗಿತ್ತು. ಆದರೆ ಅದನ್ನು ಸರಿಪಡಿಸಲು ಮೋದಿ ಬರಬೇಕಾಯಿತು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಪ್ರಥಮವಾಗಿ ಭೂತಾನ್ ಗೆ ಭೇಟಿ ನೀಡಿ, ಭಾರತ ಮರೆತಿದ್ದ ರಾಷ್ಟ್ರದೊಂದಿಗೆ ಯಶಸ್ವಿ ದ್ವಿಪಕ್ಷೀತ ಮಾತುಕತೆ ನಡೆಸಿದರು, ನಂತರದ ಸರದಿ ಭಾರತ ಮರೆತಿದ್ದ ಅತಿ ಪ್ರಮುಖ ರಾಷ್ಟ್ರ ನೇಪಾಳದ್ದು. ಅಲ್ಲಿಗೂ ಲಗ್ಗೆ ಇಟ್ಟ ಮೋದಿ, ನೇಪಾಳಿ ಜನಮಾನಸ ಗೆಲ್ಲುವುದಲ್ಲದೇ ಅಲ್ಲಿನ ಅಭಿವೃದ್ಧಿಗೂ ಸಹಾಯ ಮಾಡಿ, ನೇಪಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದ ಚೀನಾ ಗರ್ವಭಂಗ ಮಾಡಿದರು. ಈ ಮೂಲಕ ಮೋದಿ ಭಾರತ ಒಂದು ಕಾಲದಲ್ಲಿ ಮರೆತಿದ್ದ ನೆರೆ ರಾಷ್ಟ್ರಗಳೊಂದಿಗೆ ಮೋದಿ ಮತ್ತೊಮ್ಮೆ ಬಾಂಧವ್ಯ ಬೆಸೆಯಲು ಮುಂದಾದರು. ಈ ಸಾಲಿಗೆ ಜಪಾನ್, ಮಯಾನ್ಮಾರ್,ಫಿಜಿ, ಆಸ್ಟ್ರೇಲಿಯಾ ಸಹ ಸೇರುತ್ತದೆ.

2014ರಲ್ಲಿ ಪ್ರಧಾನಿ ಮಾಡಿದ ಭಾಷಣವನ್ನು ಮರೆಯುವುದಾದರೂ ಹೇಗೆ?:

ಪ್ರತಿ ವರ್ಷದಲ್ಲೂ ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಮಾಡುತ್ತಿದ್ದ ಭಾಷಣ ಸಾಮಾನ್ಯವಾಗಿಬಿಟ್ಟಿತ್ತು. ವರ್ಷಾಂತ್ಯದಲ್ಲಿ ಇದರ ಬಗ್ಗೆ ಚರ್ಚೆಯೇ ನಡೆಯುತ್ತಿರಲಿಲ್ಲ. ಆದರೆ 2014ರಲ್ಲಿ ಹಾಗಾಗಲಿಲ್ಲ, ಪ್ರಧಾನಿ ನರೇಂದ್ರ ಮೋದಿ ಇದನ್ನು ಅಕ್ಷರಶಃ ಅವಿಸ್ಮರಣೀಯವನ್ನಾಗಿಸಿದ್ದಾರೆ. ನಭೂತೋ ನಭವಿಷ್ಯತಿ ಎಂಬಂತೆ ಸ್ವಾತಂತ್ರ್ಯ ದಿನಾಚರಣೆಯಂದು ಸಿದ್ಧಪಡಿಸಿದ ಭಾಷಣ ಇಲ್ಲದೇ, ಗುಂಡು ನಿರೋಧಕ ಕವಚ ಇಲ್ಲದೇ ಭಾಷಣ ಮಾಡಿ, ದೇಶದ ಅಭಿವೃದ್ಧಿ ಬಗೆಗಿನ ನೀಲನಕ್ಷೆಯನ್ನು ಅನಾವರಣಗೊಳಿಸಿದ್ದರು. ಇನ್ನು ಎಷ್ಟೇ ದಶಕಗಳಾದರೂ ಈ ಅವಿಸ್ಮರಣೀಯ ಘಟನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ.
ಮಂಗಳನೆಡೆಗೆ ಪಯಣ:

2014ನ್ನು ಮಂಗಳ ವರ್ಷ ಎನ್ನಬಹುದು. ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ನಡೆಸಿದ್ದರೆ, ಇನ್ನೊಂದೆಡೆ ಅಮೆರಿಕದ ನಾಸಾ ಸಹ ಮಂಗಳನತ್ತ ಹೆಚ್ಚು ಆಸಕ್ತಿ ವಹಿಸಿ ನೌಕೆಯನ್ನು ಕಳುಹಿಸಿದೆ. ಮಂಗಳನ ಕಕ್ಷೆಯಲ್ಲಿ ಗಗನ ನೌಕೆಯೊಂದನ್ನು ಸ್ಥಾಪಿಸುವ ಮಾಸ್ ಆರ್ಬಿಟರ್ ಮಿಷನ್ (ಮಾಮ್)ನಲ್ಲಿ ಇಸ್ರೋ ಸಾಧಿಸಿದ ಯಶಸ್ಸು ಭಾರತವನ್ನು ಬಾಹ್ಯಾಕಾಶ ಸಂಶೋಧನೆಯಲ್ಲಿ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಿದೆ. 2014ರ ಸೆ. 24ರಂದು ಈ ಸಾಧನೆ ಮಾಡಿದ ಭಾರತ, ರಷ್ಯಾ, ಅಮೆರಿಕ, ಯುರೋಪ್ ಬಳಿಕದ ನಾಲ್ಕನೇ ರಾಷ್ಟ್ರವಾಗಿ ತಲೆ ಎತ್ತಿ ನಿಂತಿದೆ.

ಡಿ. 18ರಂದು ಭಾರತ ಜಿಎಸ್‌ಎಲ್ 3 ಮೂಲಕ ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕರೆದೊಯ್ಯಬಲ್ಲ ಮಾದರಿಯ ಉಪಗ್ರಹಗಳ ಪರೀಕ್ಷಾರ್ಥ ಪ್ರಯೋಗದಲ್ಲಿ ಯಶಸ್ವಿಯಾಯಿತು. 2020ರ ಮಾನವನ ಮಂಗಳ ಪ್ರವೇಶಕ್ಕೆ ಇದು ಮುನ್ನುಡಿಯಾಗಿದೆ.

ಡಿಜಿಟಲ್ ಇಂಡಿಯಾ

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ದೇಶಾದ್ಯಂತ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಡಿಜಿಟಲ್ ತಂತ್ರಜ್ನಾನ ಅಳವಡಿಕೆ ವೇಗವಾಗಿ ನಡೆಯುತ್ತಿದೆ. ಸ್ವತಃ ಪ್ರಧಾನಿ ಈಗಾಗಲೇ ಡಿಜಿಟಲ್ ತಂತ್ರಜ್ನಾನವನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ ಸರ್ಕಾರಿ ಅಧಿಕಾರಿಗಳೂ ಡಿಜಿಟಲ್ ತಂತ್ರಜ್ನಾನವನ್ನು ಸಮರ್ಥವಾಗಿ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಡಿಜಿಟಲ್ ಕ್ರಾಂತಿ ಉಂಟಾದ ವರ್ಷ ಎಂದರೆ ಅದು 2014 ಎನ್ನಲು ಅಡ್ದಿ ಇಲ್ಲ.

ಮೊಬೈಲ್ ಒನ್

ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಕ್ಷಣವೇ ದೇಶದಲ್ಲಿ ಡಿಜಿಟಲ್ ಇಂಡಿಯಾ ಯೋಜನೆಗೆ ಅತಿ ಹೆಚ್ಚು ಪ್ರಾಮುಖ್ಯತೆ ದೊರೆಯಿತು. ಇತ್ತ, ಡಿಜಿಟಲ್ ಕ್ರಾಂತಿಯಲ್ಲಿ ಕರ್ನಾಟಕವೂ ಹಿಂದೆ ಬೀಳಲಿಲ್ಲ. ಸಿದ್ದರಾಮಯ್ಯ ನೇತತ್ವದ ಸರಕಾರವು ಬೆರಳ ತುದಿಯಲ್ಲಿ ಸರಕಾರ ಎಂಬ ಘೋಷಾ ವಾಕ್ಯದೊಂದಿಗೆ, 'ಮೊಬೈಲ್ ಒನ್' ಎಂಬ, ಸಕಲ ಸೇವೆಗಳ ಗುಚ್ಛವೊಂದನ್ನು ರಾಜ್ಯಕ್ಕೆ ಪರಿಚಯಿಸಿತು. ವೆಬ್ ಮೂಲಕ ಒಂದೇ ಕಡೆ ವಿವಿಧ ಸರಕಾರಿ ಸೇವೆಗಳು, ಕರೆನ್ಸಿ ರೀಚಾರ್ಜ್, ಬಿಲ್ ಪಾವತಿ, ಆರೋಗ್ಯ, ಮಹಿಳಾ ರಕ್ಷಣೆ... ಮುಂತಾದ ಸೇವೆಗಳು ಲಭ್ಯವಾಗಿ, ಹೊಸ ಅಧ್ಯಾಯ ಆರಂಭವಾಯಿತು.

ಮೈಕ್ರೋಸಾಫ್ಟ್ ಆದ ನೋಕಿಯಾ:

ಭಾರತೀಯರ ನೆಚ್ಚಿನ ಮೊಬೈಲ್ ಬ್ರ್ಯಾಂಡ್ ನೋಕಿಯಾದ ಮೊಬೈಲ್ ತಯಾರಿಕಾ ಘಟಕವನ್ನು ಮೈಕ್ರೋಸಾಫ್ಟ್ ಕಂಪನಿಯು 750 ಕೋಟಿ ಡಾಲರ್‌ಗೆ ಖರೀದಿಸುವ ಮೂಲಕ ಜಗತ್ತಿನ ಎರಡು ಅತಿ ಜನಪ್ರಿಯ ತಂತ್ರಜ್ನಾನಗಳು ಒಂದಾದವು. ಸ್ಮಾರ್ಟ್‌ಫೋನ್‌ಗಳ ಅಬ್ಬರಕ್ಕೆ ಒಗ್ಗಿಕೊಳ್ಳಲಾಗದೆ ತೀರಾ ಹಿನ್ನಡೆ ಅನುಭವಿಸಿದ ನೋಕಿಯಾ, ಆಂಡ್ರಾಯ್ಡ್ ಎಕ್ಸ್ ಸರಣಿಯ ಮೂಲಕ ಚೇತರಿಸಿಕೊಳ್ಳಲು ಪ್ರಯತ್ನಿಸಿತಾದರೂ, ವಿಫಲವಾಯಿತು. ಮೈಕ್ರೋಸಾಫ್ಟ್‌ನ ವಿಂಡೋಸ್ ತಂತ್ರಾಂಶದ ಲುಮಿಯಾ ಫೋನುಗಳು ಮಾರುಕಟ್ಟೆಯಲ್ಲಿ ಛಾಪು ಮೂಡಿಸುತ್ತಿರುವಂತೆಯೇ, ಆ ಕಂಪನಿಯೇ ನೋಕಿಯಾ ವಿಭಾಗವನ್ನು ತನ್ನದಾಗಿಸಿಕೊಂಡು, ಮೈಕ್ರೋಸಾಫ್ಟ್ ಲುಮಿಯಾ 535 ಮೂಲಕ ಪರಿಪೂರ್ಣವಾಗಿ, ತನ್ನದೇ ಬ್ರ್ಯಾಂಡ್ ಬಲದಲ್ಲಿ ಮೊಬೈಲ್ ಮಾರುಕಟ್ಟೆಗೆ ಜಿಗಿಯಿತು.

ಒಟ್ಟಾರೆ 2014ರಲ್ಲಿ ಭಾರತ ಮಾತ್ರ ಇಡಿ ವಿಶ್ವದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಅಲ್ಲದೇ ಭಾರತ ವಿಶ್ವದಲ್ಲೇ ಅಗ್ರಗಣ್ಯ ರಾಷ್ಟ್ರವಾಗಿ ರೂಪುಗೊಳ್ಳಲು ಅಗತ್ಯವಿರುವ ಅಷ್ಟೂ ಕೆಲಸಗಳು 2014ರಲ್ಲಿ ನಡೆದಿದೆ. 2014 ಭಾರತಕ್ಕೆ ರಾಜಕೀಯ, ಅಭಿವೃದ್ಧಿ, ವಿಜ್ನಾನ ತಂತ್ರಜ್ನಾನದಂತಹ ವಿಷಯಗಳಲ್ಲಿ ಅವಿಸ್ಮರಣೀಯ ವರ್ಷವಾಗಿ ಉಳಿಯಲಿದೆ.



 

Author : ಬೆಂಗಳೂರು ವೇವ್ಸ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited