Untitled Document
Sign Up | Login    
ಭಗವದ್ಗೀತೆ ಹತ್ಯಾಕಾಂಡಕ್ಕೆ ಪ್ರಚೋದನೆಯೆಂದಾದರೆ ಗೀತೆಯಿಂದ ಪ್ರಭಾವಿತರಾದ ತುಳಸಿ ಏಕೆ ಭಯೋತ್ಪಾದಕಿಯಾಗಲಿಲ್ಲ?


ಕೆಲವರ ಮನಸ್ಥಿತಿಯೇ ವಿಚಿತ್ರ. ನಕ್ಸಲರನ್ನು ಪ್ಯಾಕೇಜ್ ಮೂಲಕ ಮುಖ್ಯವಾಹಿನಿಗೆ ತರುವವರಿಗೆ ಅಮಾಯಕರ ಪ್ರಾಣಕ್ಕಿಂತಲೂ ಅಲ್ಲೆಲ್ಲೋ ದೂರದ ಇರಾಕ್ ನಲ್ಲಿ ಹತ್ಯೆಗೀಡಾದ ಉಗ್ರರ ಪ್ರಾಣ ಹೆಚ್ಚು ಮಹತ್ವ ಪಡೆದಿರುತ್ತೆ. ಆ ಉಗ್ರರು ಬದುಕಿದ್ದಿದ್ದರೆ ಅವರಿಗೆ ವಯಸ್ಸಾದ ಮೇಲೆ ಮುಂದೊಂದು ದಿನ ಪ್ಯಾಕೇಜ್ ಮೂಲಕ ಮುಖ್ಯವಾಹಿನಿಗೆ ಕರೆತರಬಹುದು. ಯಾವುದೇ ವಿಷಯಗಳು ಇಲ್ಲದಿದ್ದಾಗ ಅವರೊಂದಿಗೆ ತಾವೂ ಮುಖ್ಯವಾಹಿನಿಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಬಹುದೆಂಬ ’ದು(ದೂ)ರಾಲೋಚನೆ’ಯೆಂದರೂ ತಪ್ಪಿಲ್ಲ.

ಅವರಿಗೆ ನಕ್ಸಲರು ಶಸ್ತ್ರಾಸ್ತ್ರ ಪ್ರಯೋಗಿಸಿದರೆ ಧರ್ಮ ಸಂಸ್ಥಾಪನೆಯೆಂದೂ, ಉಗ್ರರ ಹುಟ್ಟಡಗಿಸಲು ಸೈನಿಕರು ಶಸ್ತ್ರಾಸ್ತ್ರ ಪ್ರಯೋಗಿಸಿದಾಗ ಅಧರ್ಮದ, ಹತ್ಯಾಕಾಂಡದ ಪ್ರಚೋದನೆಯ ಪರಮಾವಧಿಯೆಂದೇ ತೋರುತ್ತದೆ. ಕೊನೆಗೆ ಜೀವವನ್ನು ಒತ್ತೆಯಿಟ್ಟು, ಆಸೆ, ಆಕಾಂಕ್ಷೆಗಳನ್ನು ಬದಿಗಿಟ್ಟು, ನಾಳೆಗಳ ಬಗ್ಗೆ ಕನಸುಗಳನ್ನು ಕಟ್ಟಿಹಾಕಿ ಇರಾಕ್ ನಲ್ಲಿ ಉಗ್ರರೊಂದಿಗೆ ಸೆಣೆಸುವ ಅಮೆರಿಕಾದ ಯೋಧರೊಬ್ಬರಿಗೆ ಕರ್ಮಯೋಗ, ಭಕ್ತಿಯೋಗಗಳನ್ನು ತಿಳಿಸಿ ಚಿತ್ತ-ವೃತ್ತಿ-ನಿರೋಧವನ್ನು ದಯಪಾಲಿಸಿದ ಭಗವದ್ಗೀತೆ ಕಾಣುವುದು ಹತ್ಯಾಕಾಂಡಕ್ಕೆ ಪ್ರಚೋದನೆಯಂತೆಯೇ!

ಹತ್ಯಾಕಾಂಡದ ಪರ್ಯಾಯ ಶಬ್ದಕ್ಕೆ ಬಳಸುವ ಭಗವದ್ಗೀತೆಯೊಂದಿಗೆ ಕುರಾನ್ ನ್ನು ಸಮೀಕರಿಸಿ ಅಲ್ಪಸಂಖ್ಯಾತರ(?)ವರ್ಗಕ್ಕೆ ತಾತ್ಕಾಲಿಕವಾಗಿ ನೋವುಂಟು ಮಾಡಿದರೂ ಚಿಂತೆಯಿಲ್ಲ, ಆದರೆ ಭಗವದ್ಗೀತೆಯನ್ನು ಮಾತ್ರ ಹತ್ಯಾಕಾಂಡದ ಪ್ರಚೋದನಾ ಗ್ರಂಥವೆಂದು ಸಾಬೀತುಪಡಿಸುವ ಉಮೇದು ಅವರಲ್ಲಿರುತ್ತದೆ. ಆದ್ದರಿಂದಲೇ ಭಗವದ್ಗೀಯೆಂದರೆ ಅವರಿಗೆ ಯುದ್ಧ ಬಿಟ್ಟು ಬೇರೇನೂ ನೆನಪಾಗುವುದಿಲ್ಲ. ಅಂತಹವರಿಗೆ ಲೋಕಜ್ನಾನದ ಬಗ್ಗೆಯೇ ತಿಳಿದಿರುವುದಿಲ್ಲ(ಲೋಕಜ್ನಾನವೆಂದರೆ ಜಗತ್ತು ಯಾವುದನ್ನು ಬಯಸುತ್ತಿದೆ ಎಂಬುದು). ಇನ್ನು ಭಗವದ್ಗೀತೆಯಲ್ಲಿ ತಿಳಿಸಿರುವ ಆತ್ಮಜ್ನಾನವೆಲ್ಲಿಂದ ತಿಳಿಯಲು ಸಾಧ್ಯ?

ಇಷ್ಟಕ್ಕೂ ಇಲ್ಲಿ ಇರಾಕ್ ನ ಉಗ್ರರು ಹಾಗೂ ಅಮೆರಿಕಾದ ಯೋಧರ ಬಗ್ಗೆ ಏಕೆ ಹೇಳಬೇಕೆಂದರೆ ಭಾರತ ಪ್ರವಾಸ ಕೈಗೊಂಡಿದ್ದ ಅಮೆರಿಕಾದ ಸಂಸತ್ ನ ಹಿಂದೂ ಸದಸ್ಯೆ ತುಳಸಿ ಗೆಬಾರ್ಡ್, ಇರಾಕ್ ನಲ್ಲಿ ಉಗ್ರರ ಅಟ್ಟಹಾಸವನ್ನು ಪ್ರತ್ಯಕ್ಷ ನೋಡಿದ್ದರು. ಸ್ವತಃ ತಾವೇ ಸೈನಿಕರಾಗಿ ಇರಾಕ್ ನ ಉಗ್ರರೊಂದಿಗೆ ಹೋರಾಡಿದ್ದರು. ಕ್ರೌರ್ಯದೊಂದಿಗೆ ಸೆಣೆಸಿದ್ದರು. ಆದರೆ ಅವರಿಗೆ ಅಂತಹ ಸಂದಿಗ್ಧ ಸ್ಥಿತಿಯಲ್ಲಿಯೂ ಜೀವನವನ್ನು ನರಕವಾಗಿಸದೇ ಆಶಾಕಿರಣವಾಗಿ, ಭರವಸೆಯನ್ನು ನೀಡಿದ್ದು ಶ್ರೀಕೃಷ್ಣನ ಬೋಧನೆಗಳಿದ್ದ ಭಗವದ್ಗೀತೆ ಮಾತ್ರ. ಹಿಂದೂ ಎಂದ ಮಾತ್ರಕ್ಕೆ ಆಕೆ ಭಾರತೀಯ ಮೂಲದವಳಲ್ಲ. ಅಥವಾ ಅವರ ಪೂರ್ವಜರಾರೂ ಹಿಂದೂಗಳಾಗಿರಲಿಲ್ಲ. ಆದರೂ ಸನಾತನ ಧರ್ಮದ ತತ್ವಗಳನ್ನು ಅರಿತು ಮೆಚ್ಚಿ ಹಿಂದೂ ಧರ್ಮವನ್ನು ಆಚರಿಸುತ್ತಿದ್ದರು.

ತುಳಸಿ ಗೆಬಾರ್ಡ್ ಅಮೆರಿಕನ್ನಳು, ಎರಡು ವರ್ಷದವಳಾಗಿದ್ದಾಗ, ಹವಾಯಿ ದ್ವೀಪ ಸಮೂಹಕ್ಕೆ ಕುಟುಂಬ ಸಮೇತ ವಲಸೆ ಹೋದರು ತಂದೆ ಮೈಕ್ ಗೆಬಾರ್ಡ್. ತಂದೆ ತಾಯಿ ಮೂಲತಃ ಕ್ರೈಸ್ತರು. ಹಿಂದೂ ಧರ್ಮದಲ್ಲಿದ್ದ ಅತೀವ ಆಸಕ್ತಿಯಿಂದ ಸನಾತನ ಧರ್ಮದ ಅನುಯಾಯಿಗಳಾದರು. ತುಳಸಿ ಗೆಬಾರ್ಡ್ ತಿಳುವಳಿಕೆ ಬಂದಾಗಿನಿಂದಲೂ ತಾಯಿಯಿಂದ ಭಗವದ್ಗೀತೆಯ ಸಾರವನ್ನು ತಿಳಿದಳು. ಭಗವದ್ಗೀತೆಯನ್ನು ಕೇಳಿಕೊಂಡೇ ಬೆಳೆದಳು. ಭಗವದ್ಗೀತೆಯನ್ನು ಓದಿಕೊಂಡೇ ಸೇನೆಗೆ ಸೇರಿದಳು.

ಭಗವದ್ಗೀತೆ ಹತ್ಯಾಕಾಂಡದ ಪ್ರಚೋದನಾ ಗ್ರಂಥವೆಂಬುವವರ ಲಾಜಿಕ್ ಪ್ರಕಾರ ಈ ಹಂತದಲ್ಲಿ, ಅಧರ್ಮೀಯರ ಹತ್ಯೆಯನ್ನು ಪ್ರೋತ್ಸಾಹಿಸುವ ಧರ್ಮ ಗ್ರಂಥವನ್ನು ಓದಿದವರು ಯಾರೇ ಆದರೂ ಕ್ರೌರ್ಯ ಮೆರೆಯಬೇಕಿತ್ತು. ಕಾನೂನಿನ ಚೌಕಟ್ಟು ದಾಟಬೇಕಿತ್ತು. ಆದರೆ ಭಾರತೀಯಳೇ ಅಲ್ಲದ ಭಗವದ್ಗೀತೆಯನ್ನು ಓದಿದ ತುಳಸಿಯಲ್ಲಿ ಅಂತಹ ಬದಲಾವಣೆಗಳಾವುದೂ ಆಗಲಿಲ್ಲ, ಭಯೋತ್ಪಾದಕರನ್ನು ಕಂಡರೆ ಪ್ರೀತಿಯೂ ಉಕ್ಕಲಿಲ್ಲ. ತಾನು ನಂಬಿದ್ದ ಧರ್ಮದ ವಿರುದ್ಧವಾಗಿ ನಡೆಯುತ್ತಿರುವವರ ವಿರುದ್ಧ ಕ್ರೌರ್ಯವೂ ಕಾಣಿಸಲಿಲ್ಲ. ಭಗವದ್ಗೀತೆಯಿಂದ ಬದಲಾವಣೆ ಆಗಿದ್ದು ಒಂದೇ ಅದು ಆತ್ಮಜ್ನಾನದ ಸಾಕ್ಷಾತ್ಕಾರ. ಹಾಗೂ, ಕರ್ಮಯೋಗ(ಕರ್ತವ್ಯ) ತನಗೆ ನೀಡಲಾಗಿದ್ದ ಉಗ್ರರನ್ನು ಸೆದೆಬಡಿಯುವ ಕೆಲಸವಾದ ಮೇಲೆ ನಿರ್ಲಿಪ್ತ ಸ್ಥಿತಿ. ಭಗವದ್ಗೀತೆ ಹತ್ಯಾಕಾಂಡಕ್ಕೆ ಪ್ರಚೋದನೆ ನೀಡುವಂತಹ ಗ್ರಂಥ ಎಂದಾದರೆ ತುಳಸಿ ಸೈನಿಕರಾಗಿದ್ದಾಗ ಇರಾಕ್ ಉಗ್ರರ ಕ್ರೌರ್ಯ ಕಂಡು ಅಥವಾ ಅದಕ್ಕೂ ಮುನ್ನ ತಾವೂ ಏಕೆ ಉಗ್ರ ಸಂಘಟನೆ ಸೇರಲಿಲ್ಲ? ಭಗವದ್ಗೀತೆಯಿಂದ ಹತ್ಯೆಗೆ ಪ್ರಚೋದನೆ ಪಡೆದವರು ಯೋಧರ ಕೆಲಸದ ನಂತರ ಜನಸೇವೆಯನ್ನೇ ಆಯ್ಕೆ ಮಾಡಿಕೊಂಡು ಒಂದಲ್ಲ ಎರಡೆರಡು ಬಾರಿ ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಜನರಿಂದ ಹೇಗೆ ಆಯ್ಕೆಯಾಗಿ ಬರುತ್ತಿದ್ದರು? ಭಗವದ್ಗೀತೆಯ ಉಪದೇಶದ ಪ್ರಮುಖ ಸಂಗತಿ ಹತ್ಯೆಗೆ ಪ್ರಚೋದನೆಯೇ ಆಗಿದ್ದರೆ ಎಳೆಯ ವಯಸ್ಸಿನಿಂದಲೂ ಭಗವದ್ಗೀತೆಯನ್ನೇ ಕೇಳಿ "ಧೈರ್ಯ, ಶಾಂತಿ, ನೆಮ್ಮದಿ, ತಾಳ್ಮೆ ಹಾಗೂ ಸಮಾಜ ಸೇವೆಯ ಗುಣಗಳನ್ನು ಬೆಳೆಸಿದ್ದೇ ಗೀತೆ ಎಂದು ಸಂಕೋಚವಿಲ್ಲದೇ ಹೇಳುವ ತುಳಸಿ ಗಬಾರ್ಡ್ ಅವರು ಸೇನೆಗೆ ಸೆರುವುದರ ಬದಲು ಕ್ರೌರ್ಯಕ್ಕೆ ಮತ್ತೊಂದು ಹೆಸರಾದ ಉಗ್ರ ಸಂಘಟನೆಯನ್ನೇಕೆ ಸೇರಲಿಲ್ಲ?
ಇಷ್ಟಕ್ಕೂ ತುಳಸಿ ಗೆರ್ಬಾಡ್ ಬಾಲ್ಯದಲ್ಲೇ ಭಗವದ್ಗೀತೆಯನ್ನು ಓದಿದ್ದರೂ ಆತ್ಮವನ್ನು ಶಸ್ತ್ರಗಳು ತುಂಡರಿಸಲಾರವು, ಬೆಂಕಿಯು ಸುಡಲಾರದು, ನೀರು ನೆನೆಸಲಾರದು ಹಾಗೂ ಗಾಳಿಯು ಒಣಗಿಸಲಾರದು ಎಂಬ ಅದರ ತತ್ವಗಳು ಯುದ್ಧಭೂಮಿಯಲ್ಲೇ ಏಕೆ ಸ್ಪಷ್ಟವಾಗಿದ್ದು ಅಥವಾ ಮತ್ತಷ್ಟು ಗಟ್ಟಿಯಾಗಿ ಮನ ತಲುಪಲು ಸಾಧ್ಯವಾಗಿದ್ದು? ಯುದ್ಧಭೂಮಿಯ ಮೂಲಕವೇ ಏಕೆ ಕರ್ಮಯೋಗ, ಭಕ್ತಿಯೋಗಗಳು ಅರಿವಿಗೆ ಬಂದದ್ದು? ಜೀವನದ ಮೌಲ್ಯಗಳನ್ನು ತಿಳಿಸುವ ಭಗವದ್ಗೀತೆ ಸಾರಾಂಶ, ಮನುಷ್ಯನಿಗೆ ಅರಿವಾಗುವುದು ಸವಾಲುಗಳು ಎದುರಾದಾಗ, ಎಂದೂ ಕಾಣದ ಕಠಿಣ ಸಂದರ್ಭ ಎದುರಾದಾಗ ಅಲ್ಲದೇ ಮತ್ತೇನು ಹೋಂ ಸ್ಟೇ? ಪಬ್, ಲಿವಿಂಗ್ ಟುಗೆದರ್ ಜೀವನ, ಸಿಗರೇಟಿನ ಹೊಗೆ ಬಿಡುವ ಶೋಕಿಯ ಸಂದರ್ಭದಲ್ಲಿ ಅರಿವಿಗೆ ಬರುವುದಕ್ಕೆ ಸಾಧ್ಯವೇ? ಅಥವಾ ಇವೆಲ್ಲವನ್ನೂ ದಾಟಿ ಪ್ಯಾಕೇಜ್ ಗಾಗಿ ಶರಣಾಗುವ ಸಂದರ್ಭದಲ್ಲಿ ಅರಿವಿಗೆ ಬರಲು ಸಾಧ್ಯವೇ?

ಇರಾಕ್ ನಲ್ಲಿ ಉಗ್ರರ ಅಟ್ಟಹಾಸ ನೋಡಿದ ಗಬಾರ್ಡ್, 2008ರಲ್ಲಿ ಅವಳು ಮತ್ತೆ ನುಗ್ಗಿದ್ದು ಕುವೈತ್‍ನ ಯುದ್ಧ ಭೂಮಿಗೆ, ಅಲ್ಲೂ ಆಕೆಗೆ ಭಗವದ್ಗೀತೆಯ ಪ್ರಚೋದನೆಯಿಂದ ಸಿಕ್ಕಿದ್ದು ಗೆಲುವೇ ಹೊರತು ಹತ್ಯೆ ಮಾಡುವ ಇರಾದೆಯಲ್ಲ. ತುಳಸಿ ಗಬಾರ್ಡ್ ಎಂಬ ವಿದೇಶಿ ಮಹಿಳೆ ಇಂದಿಗೂ ಭಗವದ್ಗೀತೆಯನ್ನು ಜೀವನದ ಸ್ಪೂರ್ತಿ ಎಂದೇ ನಂಬಿದ್ದಾರೆ. ಜೀವನ ವಿಧಾನವನ್ನೇ ಬದಲಿಸುವ ಸಾಮರ್ಥ್ಯವುಳ್ಳ ಗ್ರಂಥ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಗೀತೆಯಲ್ಲಿರುವ ಕರ್ಮ ಯೋಗ, ಭಕ್ತಿಯೋಗಗಳನ್ನು ಅರಿತು ಸಾಗಿದರೆ ಭಯೋತ್ಪಾದನೆಯನ್ನೂ ಸುಲಭವಾಗಿ ನಿರ್ನಾಮ ಮಾಡಿ, ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಶಕ್ತಿಯುಳ್ಳ ಜೀವಸೆಲೆಯ ಗ್ರಂಥವೆಂದು ಒಪ್ಪಿದ್ದಾರೆ. ಭಗವದ್ಗೀತೆಯ ಶ್ಲೋಕಗಳನ್ನು ಕಲಿತು ತನ್ನ ಬದುಕಿನ ತಳಹದಿಯನ್ನಾಗಿಸಿಕೊಂಡ ತುಳಸಿ ಗಬಾರ್ಡ್ ನಂತಹ ಕ್ರೈಸ್ತ ತಂದೆ-ತಾಯಿಯ ಹಿನ್ನೆಲೆಯುಳ್ಳ ಮಹಿಳೆಯೊಬ್ಬಳಿಗೆ ಕುವೈತ್‍ ನಂತಹ ರಾಷ್ಟ್ರದಲ್ಲಿ ಇತಿಹಾಸದಲ್ಲೇ ಇದು ಮೊದಲ ಬಾರಿ ಶೌರ್ಯ ಪ್ರಶಸ್ತಿ ಕೊಡಮಾಡಿಸುತ್ತದೆ ಎಂದರೆ ಅದು ಹತ್ಯೆಗೆ ಪ್ರಚೋದಿಸುವ ಗ್ರಂಥವೋ ಅಥವಾ ಮಾನವ ಜೀವ ಸಂಕುಲದ ಶ್ರೇಯೋಭಿವೃದ್ಧಿಯನ್ನು ಪ್ರಚೋದಿಸುವ ಗ್ರಂಥವೋ ಎಂಬುದು ತಿಳಿಯುವುದಿಲ್ಲವೇ?.
ಇನ್ನೂ ಮುಂದುವರೆದು ಧರ್ಮಕ್ಕೆ ಗ್ಲಾನಿಯನ್ನು ಉಂಟು ಮಾಡುವವರು ಗುರು ಹಿರಿಯರಿರಲಿ ದಾಯಾದಿಗಳಿರಲಿ, ಅವರ ಮಕ್ಕಳಾಗಿರಲಿ ಬಂಧು ಬಂಧುವರ್ಯರೇ ಆಗಿದ್ದರೂ ಅವರನ್ನು ಶಿಕ್ಷಿಸುವುದು(ಅರ್ಥಾತ್ ಕೊಲ್ಲುವುದು) ತಪ್ಪಲ್ಲ ಎಂಬುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಇದು ತಪ್ಪಾದರೆ ನಾವು ಈಗ ನಮ್ಮ ದೇಶದಲ್ಲಿ ಅನುಸರಿಸುತ್ತಿದ್ದೇವಲ್ಲ ಕಾನೂನು ಅದೂ ತಪ್ಪಾಗುತ್ತದೆ. ಏಕೆಂದರೆ ಒಬ್ಬ ಪೊಲೀಸ್ ಅಧಿಕಾರಿಯನ್ನೋ, ರಾಜಕಾರಣಿಯನ್ನೋ ಉದಾಹರಣೆಯಾಗಿಟ್ಟುಕೊಂಡಲ್ಲಿ ತನ್ನ ಸಂಬಂಧಿಕರಾಗಲಿ, ಸ್ವತಃ ಮಕ್ಕಳೇ ಆಗಿರಲಿ ತಪ್ಪು ಮಾಡಿದರೆ, ಅಥವಾ ಭಯೋತ್ಪಾದನೆಯಲ್ಲೋ, ದೇಶದ್ರೋಹದಂತಹ ಗಂಭೀರ ಅಪರಾಧ ನಡೆಸಿದಾಗಲೋ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲೇ ಬೇಕು(ಗಲ್ಲು ಶಿಕ್ಷೆಯನ್ನೂ ತಳ್ಳಿಹಾಕುವಂತಿಲ್ಲ) ಎಂದು ಕಾನೂನು ಹೇಳುತ್ತದೆ. ಅಲ್ಲದೇ, ಅದೆಷ್ಟೋ ಹೋರಾಟಗಾರರು ಅದಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ಇದರಲ್ಲಿ ಕಾಣದ ಆಕ್ಷೇಪ ಭಗವದ್ಗೀತೆಯಲ್ಲಿ ಆಕ್ಷೇಪ ಹುಡುಕುವುದು ಎಷ್ಟು ಸರಿ? ಭಗವದ್ಗೀತೆಯಲ್ಲಿನ ಈ ಅಂಶಕ್ಕೆ ತಗಾದೆ ತೆಗೆದರೆ ನಮ್ಮ ಈಗಿನ ಕಾನೂನಿಗೂ ತಗಾದೆ ತೆಗೆಯಬೇಕಾಗುತ್ತದೆ. ಇಸ್ಲಾಮ್ ಪರಮ ಪವಿತ್ರ ಗ್ರಂಥದಲ್ಲಿ ಕಾಫಿರರನ್ನು ಕೊಲ್ಲಲು ಮಾತ್ರ ಆಜ್ನೆ ಇದೆ. ಆದರೆ ಭಗವದ್ಗೀತೆಯಂತೆಯೇ ಸ್ವಧರ್ಮೀಯರೇ ತಪ್ಪು ಮಾಡಿದಲ್ಲಿಯೂ,(ಧಾರ್ಮಿಕ ದೃಷ್ಟಿಯಿಂದಲ್ಲ ರಾಜನೀತಿಯ ದೃಷ್ಟಿಯಿಂದ) ಅವರನ್ನೂ ಶಿಕ್ಷಿಸಿ ಧರ್ಮವನ್ನು ರಕ್ಷಿಸು ಎಂಬ ವಿಶಾಲ ಮನಸ್ಥಿತಿ ಇತರ ಧರ್ಮಗಳಲ್ಲೇಕೆ ಕಾಣಿಸುವುದಿಲ್ಲ?

ಭಗವದ್ಗೀತೆಯೆಂಬುದು ಅಗತ್ಯವಿದ್ದಲ್ಲಿ ಮಾತ್ರ ಶಿಕ್ಷೆ ನೀಡುವ ಬಗ್ಗೆ ಹೇಳಿದೆಯೇ ಹೊರತು, ಅರ್ಜುನ ದ್ವಂದ್ವಕ್ಕೆ ಸಿಲುಕಿದ ಎಂದು ಸಿಕ್ಕ ಸಿಕ್ಕವರನ್ನೆಲ್ಲಾ ಸಿಕ್ಕ ಸಿಕ್ಕ ಜಾಗದಲ್ಲಿ ಮನಸೋ ಇಚ್ಛೆ ಕೊಲ್ಲಲು ಪ್ರಚೋದನೆಯನ್ನಾಗಲಿ ಆಜ್ನೆಯನ್ನಾಗಲಿ ನೀಡಿಲ್ಲವಲ್ಲ.

ಕೊನೆಯದಾಗಿ, ಭಗವದ್ಗೀತೆಯಲ್ಲಿರುವ ಉದಾರ ತತ್ವಗಳನ್ನು ಬದಿಗೆಸೆದು ಗುರುಹಿರಿಯರ ವಿರುದ್ಧ ಯುದ್ಧ ಮಾಡಬೇಕಾಗಿ ಬಂದ ಅರ್ಜುನನ ದ್ವಂದ್ವ ಮನಸ್ಥಿತಿಯನ್ನು ಯುದ್ಧಕ್ಕೆ ಅಣಿಗೊಳಿಸುವುದು, ಹಾಗೂ ರಣರಂಗದಲ್ಲಿ ದಾಖಲಾಗಿರುವ ಉಪದೇಶ ಎಂಬುದನ್ನೇ ಪ್ರಮುಖವಾಗಿಟ್ಟುಕೊಂಡು ಹತ್ಯಾಕಾಂಡಕ್ಕೆ ಪ್ರಚೋದನಕಾರಿ ಎಂದು ಹೀಗಳೆಯುತ್ತಾರಲ್ಲ, ತನ್ನ ದೇಶವನ್ನು ಕಾಪಾಡಲು ಓರ್ವ ಸೈನಿಕ ತನ್ನ ಎದುರಾಳಿಯ ವಿರುದ್ಧ ಶಸ್ತ್ರಾಸ್ತ್ರ ಹೂಡದೇ ಸಾವು ನೋವಿನ ಭಾವನಾತ್ಮಕ ವಿಷಯಗಳ ದ್ವಂದ್ವದಲ್ಲಿ ಸಿಲುಕಿದಾಗ ದೇಶ ರಕ್ಷಣೆ ದೃಷ್ಟಿಯಿಂದ ಭಗವದ್ಗೀತೆಯಂತಹ ಗ್ರಂಥ ರಣರಂಗದಲ್ಲದೇ ಮತ್ತೇನು ಮೋಜು ಮಾಡುವ ಹೋಂ ಸ್ಟೇ ಗಳಲ್ಲಿ ದಾಖಲಾಗಲು ಸಾಧ್ಯವೇ?

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited