Untitled Document
Sign Up | Login    
ವಿಧಾನಸೌಧದಲ್ಲಿ ತೋಳು ತಟ್ಟಿದ್ದ ಸಿದ್ದರಾಮಯ್ಯನವರ ಪೌರುಷ ಈಗೆಲ್ಲಿ ಹೋಯಿತು?


He Shirks, He ’Sleeps’, He Ducks, and He does it again!.. ಈ ಮೂರ್ನಾಲ್ಕು ಪದ ಪುಂಜಗಳನ್ನಿಟ್ಟುಕೊಂಡು ರಾಷ್ಟ್ರೀಯ ಮಾಧ್ಯಮಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಂಡವಾಳ ಬಯಲು ಮಾಡಿದ್ದವು. ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಮಹಿಳೆಯರ, ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರಗುತ್ತಿರುವುದು ರಾಜ್ಯದ ಜನತೆಯನ್ನು ತಲ್ಲಣಗೊಳಿಸಿದೆ, ಆದರೆ ರಾಜ್ಯದ ಜನತೆಗೆ ಉತ್ತರದಾಯಿಯಾಗಿರುವ ಸರ್ಕಾರವನ್ನು ಹೊರತುಪಡಿಸಿ ಎನ್ನುವುದು ಅತ್ಯಾಚಾರಕ್ಕಿಂತಲೂ ಘೋರವಾದ ವಿಚಾರ !

ಇತ್ತೀಚಿನ ದಿನಗಳಲ್ಲಿ ಕಣ್ಣಿಗೆ ರಾಚುವಂತೆ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ನಿಜ. ಆದರೆ ಕರ್ನಾಟಕದಲ್ಲಂತೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಮಟ್ಟಿಗೆ ಹಸುಳೆಗಳಿಂದ ವೃದ್ಧರವರೆಗೂ ಅತ್ಯಾಚಾರ ನಡೆಯುತ್ತಿದೆ. ಎಲ್ಲಿಗೆ ಬಂದು ನಿಂತಿದೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ? ಯಾರ ರಕ್ಷಣೆಗಾಗಿ ಸರ್ಕಾರ ಕೆಲಸ ಮಾಡುತ್ತಿದೆ? ಭ್ರಷ್ಟಾಚಾರದೊಂದಿಗೆ ಕೊಲೆ ಸುಲಿಗೆ, ದರೋಡೆ, ಒಂದೇ ವಾರದಲ್ಲಿ 4 ಅತ್ಯಾಚಾರ ಪ್ರಕರಣಳು ರಾರಾಜಿಸುತ್ತಿದ್ದರೂ "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ" ಎಂದು ಹಸಿ ಸುಳ್ಳು ಹೇಳುತ್ತಿರುವ ಹೊಣೆಗೇಡಿ ಸರ್ಕಾರ ಯಾರನ್ನು ಪೆದ್ದರನ್ನಾಗಿ ಮಾಡಲು ಹೊರಟಿದೆ?
ಬಹುಶಃ 14 ವರ್ಷದ ಬಾಲಕಿ ಮೇಲಿನ ಪ್ರಕರಣ ನಡೆಯದೇ ಹೋಗಿದ್ದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮಾನಭಂಗದ ಪ್ರಕರಣಗಳು ಇಷ್ಟು ತೀವ್ರ ಸ್ವರೂಪ ಪಡೆಯುತ್ತಿರಲಿಲ್ಲವೇನೋ. 9ನೇ ತರಗತಿಯಲ್ಲಿ ಓದುತ್ತಿದ್ದ ಕಂದಮ್ಮನ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಆತ್ಮಹತ್ಯೆ ಪ್ರಕರಣ ಎಂದು ಮುಚ್ಚಿಹಾಕಲು ಹೊರಟಿರುವುದೂ ಅಲ್ಲದೇ ಮೃಗಗಳಂತೆ ಅತ್ಯಾಚಾರ ನಡೆಸಿದವರನ್ನು ಈವರೆಗೂ ಬಂಧಿಸದೇ ಪರೋಕ್ಷವಾಗಿ ರಕ್ಷಿಸಲು ಮುಂದಾಗಿದೆಯಲ್ಲಾ ಇದೆಂಥಾ ಲಜ್ಜೆಗೇಡಿ ಸರ್ಕಾರ?

ಅತ್ಯಾಚಾರ ಪ್ರಕರಣಗಳಲ್ಲಿ ಸರ್ಕಾರ ನಡೆದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುತ್ತಿದೆ. ಬಾಯಿಬಿಟ್ಟರೆ ಗಾಂಧಿ ತತ್ವ, ಕೋಮುವಾದಿ, ಸಾಮಾಜಿಕ ನ್ಯಾಯ ಅಂತೆಲ್ಲಾ ಹಲುಬುವ ಸಿದ್ದರಾಮಯ್ಯ, ಅತ್ಯಾಚಾರ ಪ್ರಕರಣಗಳಂತಹ ಸೂಕ್ಷ್ಮ ವಿಷಯದಲ್ಲಿ ರಾಜಕೀಯ ಮಾಡುತ್ತಿರುವುದೇಕೆ? ವಿರೋಧಪಕ್ಷವನ್ನು ಬಿಡಿ, ರಾಜಕೀಯ ವಿರೋಧಿಗಳನ್ನೂ ಬದಿಗೆಸೆಯಿರಿ, ಯಾರೇನೇ ಹೇಳಲಿ ತಮ್ಮ ರಾಜ್ಯದಲ್ಲಿ ಇಂಥದೊಂದು ಅಮಾನವೀಯ ಘಟನೆ ನಡೆಯಬಾರದು, ನಡೆದರೂ ಅದು ಮರುಕಳಿಸದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕೆಂಬ ಕನಿಷ್ಠ ಸ್ವಾಭಿಮಾನವೂ ಇಲ್ಲ. "ನಾವಿನ್ನೆಷ್ಟು ದಿನ ಇರುತ್ತೇವೋ ಗೊತ್ತಿಲ್ಲ ಹೈಕಮಾಂಡ್ ಕೃಪಾ ಕಟಾಕ್ಷ ಇರುವವರೆಗೂ ಅಷ್ಟೇ ಇರುವುದು" ಎಂದು ಬಹಿರಂಗವಾಗಿ ಹೇಳಿಕೆ ನೀಡುವವರಿಗೆ ರಾಜ್ಯದ ಬಗ್ಗೆ ಹೇಗೆ ತಾನೇ ಕಾಳಜಿ ಇದ್ದೀತು? ಅವರ ಕಾಳಜಿ ಏನಿದ್ದರೂ ಇರುವಷ್ಟು ದಿನ ಹೈಕಮಾಂಡ್ ನ್ನು ವಿಶ್ವಾದಲ್ಲಿಟ್ಟುಕೊಂಡು ಕುರ್ಚಿಯಲ್ಲಿ ಉಳಿದುಕೊಳ್ಳುವುದಕ್ಕೆ ಮಾತ್ರ ಸೀಮಿತ.

ಇಷ್ಟಕ್ಕೂ ತೀರ್ಥಹಳ್ಳಿಯ ಪ್ರಕರಣದಲ್ಲಿ ಸರ್ಕಾರದ ನಡೆ ಅನುಮಾನ ಹುಟ್ಟಿಸುತ್ತಿಲ್ಲವೇ? ಅಕ್ಟೋಬರ್ 29ರಂದು ತೀರ್ಥಹಳ್ಳಿಯಲ್ಲಿ ನಡೆದಿರುವ ಅತ್ಯಾಚಾರ ಘಟನೆಯ ಬಗ್ಗೆ ಪೊಲೀಸರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ನ.3ರ ವರೆಗೂ ಸಿಗದೇ ಇದ್ದ ಬಾಲಕಿ ನಂದಿತಾ ಡೆತ್ ನೋಟ್ ನ.4ರಂದು ಧಿಡೀರ್ ಪ್ರತ್ಯಕ್ಷವಾಗಿದ್ದು ಹೇಗೆ? ಅದೂ ಟೈಪಿಸಿದ ಪ್ರತಿಯೊಂದು ದೊರೆಯುತ್ತದೆ!!! ಇದಕ್ಕೂ ಮುನ್ನ, ಅಂದರೆ ಬಾಲಕಿ ಮೇಲೆ ಅತ್ಯಾಚಾರ ನಡೆದ ಬೆನ್ನಲ್ಲೇ ಅಲ್ಲಿನ ತಾಲೂಕು ಸಂಯುಕ್ತ ಮುಸ್ಲಿಂ ಒಕ್ಕೂಟದಿಂದ, ನಿರ್ದಿಷ್ಟ ಪ್ರದೇಶಗಳಿಗೆ ಭದ್ರತೆ ಕೋರಿ ಪೊಲೀಸ್ ಠಾಣೆಗೆ ಪತ್ರವೊಂದು ರವಾನೆಯಾಗುತ್ತದೆ. ಅಲ್ಲಾ, ಎಲ್ಲೋ ಅತ್ಯಾಚಾರ ನಡೆದು, ಬಾಲಕಿ ಮೃತಪಟ್ಟರೆ ಅದನ್ನು ಖಂಡಿಸುವುದನ್ನು ಬಿಟ್ಟು ಭದ್ರತೆಗಾಗಿ ಪೊಲೀಸರಿಗೆ ಪತ್ರ ಬರೆಯುತ್ತಾರೆ ಎಂದರೆ ಇದರ ಅರ್ಥವೇನು? ಈ ಅತ್ಯಾಚಾರ ಪ್ರಕರಣಕ್ಕೆ Communal colour ಕೊಟ್ಟವರು ಯಾರು?
ನಂದಿತಾ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿರುವವರು ಅಲ್ಲಿನ ಸ್ಥಳೀಯ ಮುಸ್ಲಿಂ ಯುವಕರು ಎಂಬುದು ಎಲ್ಲೆಡೆ ಹಬ್ಬಿರುವ ವದಂತಿ. ಅಂತದ್ದರಲ್ಲಿ ಭದ್ರತೆಗಾಗಿ ಪತ್ರ ಬರೆದ ಸಂಘಟನೆಯವರನ್ನೇ ವಿಚಾರಣೆಗಾಗಿ ಬಂಧಿಸುವ ಬದಲು ಭದ್ರತೆಗಾಗಿ ಬೇಡಿಕೆಯಿಟ್ಟಿರುವ ಮೀನು ಮಾರ್ಕೆಟ್, ಮಸೀದಿ, ಅಲ್ಪಸಂಖ್ಯಾತರು ಇರುವ ಪ್ರದೇಶಗಳಿಗೆ ಭದ್ರತೆ ನೀಡಿದ್ದಾರೆ ಎಂದರೆ ಇಡಿ ವ್ಯವಸ್ಥೆ ಯಾರ ಪರ ಕೆಲಸ ಮಾಡುತ್ತಿದೆ? ಅದನ್ನೂ ಬಿಡಿ, ಪತ್ರ ಬರೆದ ನಂತರ ಭದ್ರತೆ ನೀಡಿ ಪೊಲೀಸರು ಮಾಡಿದ್ದೇನು? ಅತ್ಯಾಚಾರವೆಸಗಿದ್ದಾರೆ ಎಂದು ಹೇಳಲಾದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುವ ಬದಲು ಸಂತ್ರಸ್ತ ಬಾಲಕಿಯ ಬ್ಯಾಗ್ ನಲ್ಲಿ ಡೆತ್ ನೋಟ್ ಹುಡುಕುವ ಸಾಹಸ! ಇವೆಲ್ಲವೂ ಆಳುವವರ ಬಗ್ಗೆ ಅನುಮಾನ ಮೂಡಿಸದೇ ಏನು ಮಾಡೀತು? ಇತರ ಪ್ರಕರಣಗಳಲ್ಲಿ 90 ಬಾರಿ ಅತ್ಯಾಚಾರವಾದರೂ ಒಂದೇ ಒಂದು ದೂರಿಗೆ ಆರೋಪಿಯನ್ನು ಕೂಡಲೇ ಬಂಧಿಸಲು ತುದಿಗಾಲಲ್ಲಿ ನಿಲ್ಲುತ್ತಾರಲ್ಲ ? ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವವರನ್ನು ಬಂಧಿಸುವಲ್ಲಿ ಅಷ್ಟೇ ತೀವ್ರತೆ ಏಕಿಲ್ಲ? ಆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಇವರಿಗೇನು ಧಾಡಿ? ಹಾಗೆ ಮಾಡಿದ್ದರೆ ಪ್ರಕರಣಕ್ಕೆ ಕೋಮಿನ ಬಣ್ಣ ಹಚ್ಚಲಾಗುತ್ತಿದೆ ಎಂದು ಮಾಧ್ಯಮಗಳೆದುರು ಅರಚುವ ಸ್ಥಿತಿ ಬರುತ್ತಿರಲಿಲ್ಲ. ಈಗ ಹೇಳಿ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸದೇ ಅದಕ್ಕೆ ಕೋಮಿನ ಬಣ್ಣ ನೀಡುತ್ತಿರುವವರು ಯಾರು?

ಜು.22ರಂದು ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರಶ್ನಿಸಹೋದರೆ ನಿಮಗಿರುವುದು ಅದೊಂದೇ ನ್ಯೂಸಾ? ಬೇರೆ ಸುದ್ದಿ ಇಲ್ಲವಾ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸುತ್ತಾರೆ. ಇದೇ ಮುಂದುವರೆಯುತ್ತಿದ್ದು ಮತ್ತೊಮ್ಮೆ ಸರ್ಕಾರವನ್ನು ಪ್ರಶ್ನಿಸಿದರೆ ನಿಮ್ಮ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಇಂತಹ ಪ್ರಕರಣಗಳನ್ನು ವೈಭವೀಕರಿಸುತ್ತಿದ್ದೀರ ಎಂದು ಗೃಹ ಸಚಿವರು ಉದ್ಗಾರ ತೆಗೆಯುತ್ತಾರೆ. ಅಂದರೆ ಇವರು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳನ್ನು ಒಪ್ಪುತ್ತಾರೆ. ಅದನ್ನು ತಡೆಗಟ್ಟಲು ಸರ್ಕಾರ ವಿಫಲವಾಗಿದೆ ಎಂಬುದನ್ನೂ ಪರೋಕ್ಷವಾಗಿ ಒಪ್ಪುತ್ತಾರೆ. ಆದರೆ ಅದನ್ನು ಎಲ್ಲಿಯೂ ಹೇಳಬಾರದು. ಇದೇ ಕಾಂಗ್ರೆಸ್ ನ ಮನಸ್ಥಿತಿ!

ಅಲ್ಲಿಗೆ ಇವರು ಹೇಳುತ್ತಿರುವುದಾದರೂ ಏನು? ಮಾಧ್ಯಮಗಳು ಎಲ್ಲೇ ಅತ್ಯಾಚಾರ ಪ್ರಕರಣಗಳು ನಡೆದರೂ ಅದನ್ನು ಬಿತ್ತರಿಸದೇ ರಾಜ್ಯದಲ್ಲಿ ಸಮಸ್ತವೂ ಕ್ಷೇಮವಾಗಿದೆ ಎಂದು ಜನತೆಗೆ ಸುಳ್ ಸುದ್ದಿ ನೀಡುತ್ತಾ ಕಾಂಗ್ರೆಸ್ ಕೃಪಾಪೋಷಿತ ನಾ(ಲಾ)ಯಕರನ್ನು ಹೊಗಳಬೇಕು ಎಂದಲ್ಲವೇ? ನಾಚಿಕೆಯಾಗುವುದಿಲ್ಲವೇ ಮಾಧ್ಯಮಗಳೆದುರಿಗೇ ಇಂತಹ ಹೇಕೆ ನೀಡಲು? ಸ್ವಾಮಿ ಗೃಹ ಸಚಿವರೆ, ಬೇರೆ ಕೆಲಸವಿಲ್ಲವೆಂದಾಗಲೀ ಟಿ.ಆರ್.ಪಿ ಗೋಸ್ಕರ ಅತ್ಯಾಚಾರ ಪ್ರಕರಣಗಳನ್ನು ವೈಭವೀಕರಿಸುವಷ್ಟು ಮಾಧ್ಯಮಗಳಿನ್ನೂ ನೈತಿಕವಾಗಿ ಭ್ರಷ್ಟವಾಗಿಲ್ಲ.
ಸಿದ್ದರಾಮಯ್ಯ ಸರ್ಕಾರದ ನಡೆ ದೇಶದ ಯಾವ ಸಾಮನ್ಯ ಪ್ರಜೆಗಾದರೂ ರೇಜಿಗೆ ಹುಟ್ಟಿಸುತ್ತದೆ. ಅನ್ಯಾಯವನ್ನು ವಿರೋಧಿಸಿ, ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಬಿಗಿಯುವ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾಗ ವಿಧಾನಸೌಧದಲ್ಲೇ ತೋಳು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಹುಶಃ ಜನ ಇನ್ನೂ ಮರೆತಿಲ್ಲ. ಅವರದ್ದೇ ಸರ್ಕಾರವಿದೆ. ಮಹಿಳೆಯರು, ತಾಯಂದಿರ ನೋವು ಮುಗಿಲು ಮುಟ್ಟಿದೆ. ಯಾವ ಕ್ಷಣದಲ್ಲಿ ಎಲ್ಲಿ ರೇಪ್ ನಡೆದಿದೆ ಎಂದು ಬ್ರೇಕಿಂಗ್ ನ್ಯೂಸ್ ಬರುತ್ತದೋ ಯಾರಿಗೂ ಗೊತ್ತಿಲ್ಲ. ಅತ್ಯಾಚಾರಕ್ಕಾಗಿ ಕೆಟ್ಟ ಹೆಸರು ಪಡೆಯುತ್ತಿರುವುದನ್ನು ನೋಡಿಕೊಂಡೂ, ಅಂದು ತೋಳು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರ ಪೌರುಷ ಈಗೆಲ್ಲಿ ಹೋಯಿತು ಎಂಬುದೂ ಗೊತ್ತಾಗುತ್ತಿಲ್ಲ! ಸಂವೇದನೆ ಇರುವ ಯಾವ ಮುಖ್ಯಮಂತ್ರಿಯೂ ಅತ್ಯಾಚಾರದಂತಹ ಹೀನ ಕೃತ್ಯಗಳಿಗೆ ತೋಳು ತಟ್ಟಿ ಸವಾಲೆಸೆಯುತ್ತಾರೆಯೇ ಹೊರತು ವಿಧಾನಸೌಧವೆಂಬ ದೇಗುಲದಲ್ಲಿ ರಾಜಕೀಯ ಕಾರಣಗಳಿಂದಾಗಿ ಬೆರೀ ಹೇಳಿಕೆ ಕೊಟ್ಟು ಕೈಲಾಗದವರಂತೆ ಸುಮ್ಮನಾಗುವುದಿಲ್ಲ. alas!


(ಲೇಖನದಲ್ಲಿ ಬರೆದ ವಿಚಾರಗಳು, ಅಭಿಪ್ರಾಯಗಳು ಲೇಖಕರ ಸ್ವಂತದ್ದೇ ಆಗಿರುತ್ತದೆ, ಇದಕ್ಕೆ ಬ್ಯಾಂಗಲೋರ್ ವೇವ್ಸ್ ಹೊಣೆಯಾಗಿರುವುದಿಲ್ಲ - ಸಂ.)

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited