Untitled Document
Sign Up | Login    
ಅಚ್ಚೆ ದಿನಗಳನ್ನು ಹೊತ್ತು ತಂದ ಮೋದಿ ಸರ್ಕಾರದ 100 ದಿನಗಳು

ಮೋದಿ ಸರ್ಕಾರಕ್ಕೆ 100 ದಿನಗಳು....

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದು ಇಂದಿಗೆ 100 ದಿನಗಳು ಪೂರ್ಣಗೊಂಡಿದೆ. ಪ್ರಧಾನಿ ಮೋದಿ ಶರವೇಗದ ಕಾರ್ಯವೈಖರಿಯಿಂದ ಚುನಾವಣಾ ಪೂರ್ವದಲ್ಲಿ ನೀಡಿದ್ದ ಅಚ್ಚೆ ದಿನಗಳ ಭರವಸೆ ಮೋದಿ ವಿರೋಧಿಗಳ ಅನುಮಾನವನ್ನು ಭೇದಿಸಿ ಅಷ್ಟೇ ವೇಗದಿಂದ ದೇಶದ ಜನತೆಯನ್ನು ತಲುಪುತ್ತಿರುವುದು ಸ್ಪಷ್ಟವಾಗಿದೆ.

ಕಳೆದ 10 ವರ್ಷಗಳಲ್ಲಿ ದೇಶದ ಜನತೆಯನ್ನು ಕಾಡುತ್ತಿದ್ದ ಸರ್ಕಾರ, ನಾಯಕತ್ವದ ಅನುಪಸ್ಥಿತಿಯನ್ನು ತುಂಬುವುದರ ಜೊತೆಜೊತೆಗೇ, ಯಾವುದೇ ಸರ್ಕಾರದಿಂದಲೂ ಸಾಧ್ಯವಾಗದ ಆರ್ಥಿಕತೆಗೆ ಕೇವಲ 3 ತಿಂಗಳೊಳಗೆ ಶಕ್ತಿ ತುಂಬಿದ್ದು ಮೋದಿ ಸರ್ಕಾರದ ಅಸ್ಥಿತ್ವದ ಹೆಗ್ಗಳಿಕೆ. ಕಪ್ಪು ಹಣ ವಾಪಸ್ ತರುವುದಕ್ಕಾಗಿ ಎಸ್.ಐ.ಟಿ ರಚನೆ, ಸಂಸದರಿಗೆ ನೀತಿ ಪಾಠ, ಪ್ರತಿಜ್ನಾವಿಧಿ ನೆಪದಲ್ಲಿ ಸಾರ್ಕ್ ನಾಯಕರೊಂದಿಗೆ ಬಾಂಧವ್ಯ ಬೆಸಯಲು ಮೊದಲ ಕ್ರಮ, ಚೀನಾ ಗಡಿಯಲ್ಲಿ ಸುಸಜ್ಜಿತ ಆಕಾಶ್ ಕ್ಷಿಪಣಿ ನಿಯೋಜನೆ, 6-7 ದಶಕದ ಹಳೆಯದಾದ ಯೋಜನಾ ಆಯೋಗ ರದ್ದತಿ, ಕೊಲಿಜಿಯಂ ವ್ಯವಸ್ಥೆಗೆ ಇತಿಶ್ರೀ, ದೇಶದ ಆರ್ಥಿಕ ಚೇತರಿಕೆ ಕಂಡಿದ್ದು ಸೇರಿದಂತೆ ಹತ್ತು ಹಲವು ವಿಷಯ ದೇಶದ ಜನತೆಯ ಹುಬ್ಬೇರಿಸಿದ್ದು ಒಂದೆಡೆಯಾದರೆ, ದೇಶದ ಜನತೆಯನ್ನು ಬ್ಯಾಂಕ್ ನೊಂದಿಗೆ ಜೊತೆಗೂಡಿಸುವುದು ಮತ್ತೊಂದೆಡೆ.

ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಸರ್ಕಾರ ಅರೆ ಅಧ್ಯಕ್ಷೀಯ ಮಾದರಿಯಲ್ಲಿ ಕ್ಷಿಪ್ರ ನಿರ್ಧಾರ ಕೈಗೊಂಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಕಾರು ಬಂಗಲೆಗಳಿಗಾಗಿ ದುಂದು ವೆಚ್ಚ ಮಾಡುತ್ತಿದ್ದ ಪರಿಪಾಠಕ್ಕೆ ಬ್ರೇಕ್ ಹಾಕಿ ಒಂದಕ್ಕೊಂದು ಸಂಬಂಧಿಸಿದ ಇಲಾಖೆಗಳನ್ನು ವಿಲೀನಗೊಳಿಸುವ ಮೂಲಕ ಬರೊಬ್ಬರಿ 120 ಕೋಟಿ ಉಳಿತಾಯ ಮಾಡಿ, 'ಒಳ್ಳೆಯ ದಿನ'ಗಳಿಗೆ ಮೋದಿ ಅಂದೇ ಅಡಿಪಾಯ ಹಾಕಿದ್ದರು. ಯಾವುದೇ ಸರ್ಕಾರ ಹೊಸದಾಗಿ ಅಸ್ಥಿತ್ವಕ್ಕೆ ಬಂದರೂ ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಬದಲಾವಣೆ ಇರುವುದು ಸಹಜ ವಿಷಯವೇ ಆಗಿದ್ದರೂ ಇಂತಹ ಸಣ್ಣ ವಿಷಯಗಳಲ್ಲೂ ಮೋದಿ ಸರ್ಕಾರ ಸಂಚಲನವನ್ನೇ ಸೃಷ್ಠಿಸಿತ್ತು. ಕ್ಷೀಣಿಸಿದ್ದಕ್ಕೆ ಮದ್ದಾಗಿ ಮೋದಿ ಸರ್ಕಾರದ ಕ್ಷಿಪ್ರಗತಿಯ ಸಾಧನೆ ಏನು ಎಂಬುದೇ ಚರ್ಚೆಯ ಪ್ರಧಾನ ಅಂಶವಾದರೆ ನಿಜವಾಗಿಯೂ ಮೋದಿ 100 ದಿನಗಳ ಸಾಧನೆ ಬಗ್ಗೆ ಚರ್ಚೆಗೆ ಅರ್ಹವಾಗಿರುವುದು ಹಣದುಬ್ಬರ ಕಡಿಮೆಯಾಗಿ ಆರ್ಥಿಕ ಕ್ಷೇತ್ರ ಚೇತರಿಕೆ ಕಂಡಿದ್ದಲ್ಲವೇ?
ದೇಶದ ಆರ್ಥಿಕ ಸ್ಥಿತಿ ಚಿಂತಾಜನಕವಾದಾಗ ಜಾಗತಿಕ ಆರ್ಥಿಕತೆ ಕುಸಿತ ಇದ್ದೇ ಇರುತ್ತದೆ. ಯುಪಿಎ ಸರ್ಕಾರ ಆಡಳಿತ ನಡೆಸಿದ್ದು ನಿರಂತರ ಹತ್ತು ವರ್ಷ ಅರ್ಥ ವ್ಯವಸ್ಥೆ ಕುಸಿಯುತ್ತಲೇ ಹೋಯಿತಾದರೂ ನಯಾ ಪೈಸೆಯಷ್ಟು ಏರಿಕೆ ಕಾಣಲಿಲ್ಲ. ಕಾರಣ ಜಾಗತಿಕ ಆರ್ಥಿಕ ಕುಸಿತತೆ ಎಂದೇ ಇಟ್ಟುಕೊಳ್ಳೋಣ. ಕಾಂಗ್ರೆಸ್ಸಿನ ಪ್ರಕಾರ ಯುಪಿಎ ಸರ್ಕಾರ ಇಳಿಯುವವರೆಗೂ ಜಾಗತಿಕ ಆರ್ಥಿಕ ಸ್ಥಿತಿ ಚೇತರಿಕೆಯಾಗಲೇ ಇಲ್ಲ. ಅಂದರೆ ಕಾಂಗ್ರೆಸ್ ಆಡಳಿತ ಎಂದರೆ ಜಾಗತಿಕ ಆರ್ಥಿಕತೆಗೂ ವರ್ಜ್ಯ! ಇರಲಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಜಿಡಿಪಿ ದರ ಏರಿಕೆಯಾಗಿದ್ದು ಕಾಂಗ್ರೆಸ್ಸಿನ ಸಾಧನೆಯೆಂದೇ ಒಪ್ಪಿಕೊಳ್ಳೋಣವೆಂದರೆ ಕೇವಲ 96 ದಿನಗಳಲ್ಲೇ ಜಾಗತಿಕ ಆರ್ಥಿಕತೆ ಅನಿರೀಕ್ಷಿತವಾಗಿ ಚೇತರಿಕೆಯಗಾಲು ಹೇಗೆ ಸಾಧ್ಯ? ಹಾಗಾದರೆ ಮೋದಿ ಸರ್ಕಾರ 100 ದಿನಗಳ ಸಾಧನೆಯಲ್ಲಿ ಪ್ರಧಾನವಾಗಿರುವ ಜಿಡಿಪಿ ದರ ನಿರೀಕ್ಷೆಗೂ ಮೀರಿ ಏರಿಕೆಯಾಗಲು ಕಾರಣವೇನು?

ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸುತ್ತಿದ್ದಂತೆಯೇ, ಯುಪಿಎ ನಾಯಕತ್ವದ ಗೊತ್ತು ಗುರಿಯಿಲ್ಲದ ವಿದೇಶಾಂಗ ನೀತಿ, ಆರ್ಥಿಕ ನೀತಿಯಿಂದ ರೋಸಿ ಹೋಗಿ ನೆಲಕಚ್ಚಿದ್ದ ಷೇರುಪೇಟೆ ಸ್ಪಂದಿಸಲು ಪ್ರಾರಂಭಿಸಿತ್ತು. ಕಾರಣ, ಮೋದಿ ಎಂಬ ಭರವಸೆಯ ನಾಯಕ ದೇಶದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ್ದರು. ಅಲ್ಲಿಂದಲೇ ಷೇರು ಪೇಟೆ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿತ್ತು. ಆ ನಂತರದ ಕುಸಿತಗಳಿಗೆ ಸರ್ಕಾರವೇ ಕಾರಣವಾಗಿತ್ತಾದರೂ ಭರವಸೆಯನ್ನು ಜೀವಂತವಾಗಿಸಿದ್ದು ಮಾತ್ರ ಮೋದಿ ಹೆಸರು! ಆ ನಂತರ ಚುನಾವಣೋತ್ತರ ಸಮೀಕ್ಷೆಯ ನಂತರ ನಿಜವಾದ ಮೋದಿ ದರ್ಬಾರ್ ಆರಂಭವಾಯಿತೆಂದೇ ಹೇಳಬೇಕಾಗುತ್ತದೆ. ಅಂದಿನಿಂದ ಷೇರು ಪೇಟೆ ಹೂಡಿಕೆದಾರರ ಪಾಲಿಗೆ ಮೋದಿ ಶಕ್ತಿಯಾಗಿ ಪರಿಣಮಿಸಿದ್ದರು. ಲೋಕಸಭಾ ಚುನಾವಣೆ ಫಲಿತಾಂಶದ ನಂತರವಂತೂ ಷೇರುಪೇಟೆ ಸೂಚ್ಯಂಕಗಳ ಏರಿಕೆಯದ್ದೇ ದರ್ಬಾರ್.


ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಅನರ್ಥವಾಗಲು ಅಂದಿನ ಪರಿಸರ ಖಾತೆ ಸಚಿವೆ ಜಯಂತಿ ನಟರಾಜನ್, ಹಣಪಡೆಯುವ ಉದ್ದೇಶದಿಂದ ಕೆಲವು ಮಹತ್ವದ ಯೋಜನೆಗಳ ಕಡತಗಳನ್ನು ವಿಲೇವಾರಿ ಮಾಡದೇ ಪರವಾನಗಿ ದೊರೆಯದೇ ಇದ್ದದ್ದೂ ಮುಖ್ಯ ಕಾರಣವಾಗಿತ್ತು. ಇದೇ ಕಾರಣದಿಂದ, ಅಧಿಕಾರದಿಂದ ಕೆಲವೇ ದಿನಗಳಲ್ಲಿ ಕೆಳಗಿಳಿಯಲಿದ್ದ ಯುಪಿಎ ಸರ್ಕಾರ ಜಯಂತಿ ನಟರಾಜನ್ ರಾಜೀನಾಮೆ ಪಡೆದು ಪರಿಸರ ಖಾತೆಯನ್ನು ಪೆಟ್ರೋಲಿಯಂ ಸಚಿವ ವೀರಪ್ಪ ಮೋಯ್ಲಿಗೆ ಹೆಚ್ಚುವರಿ ಜವಾಬ್ದಾರಿ ನೀಡಿತ್ತು. ಮೋದಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇದನ್ನೇ ಜಯಂಟಿ ಟ್ಯಾಕ್ಸ್ ಎಂದು ಜರೆದ ಉದಾಹರಣೆಯೂ ಸಾಕಷ್ಟಿದೆ. ಆದರೆ ಜಯಂತಿ ಟ್ಯಾಕ್ಸ್ ಎಂದು ಲೇವಡಿ ಮಾಡುತ್ತಿದ್ದ ಮೋದಿ ಸುಮ್ಮನೆ ಕೂರಲಿಲ್ಲ ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಪರಿಸರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಮೂಲಕ ನೆನೆಗುದಿಗೆ ಬಿದ್ದಿದ್ದ ಯೋಜನೆಗಳ ಕಡತಗಳನ್ನು ವಿಲೇವಾರಿ ಮಾಡಿಸಿ ಪರವಾನಗಿ ದೊರೆಯುವಂತೆ ಮಾಡಿದರು. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಜಿಡಿಪಿಯನ್ನಾಗಲೀ, ಅರ್ಥ ವ್ಯವಸ್ಥೆಯನ್ನಾಗಲೀ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಕ್ಷೀಣಿಸುತ್ತಿದ್ದ ಅರ್ಥ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬಹುದಲ್ಲವೇ? ಮೋದಿ ಸರ್ಕಾರ ಮಾಡಿದ್ದೂ ಅದನ್ನೆ. ರಕ್ಷಣಾ ಕ್ಷೇತ್ರದಲ್ಲಿ ಎಫ್.ಡಿ.ಐ ಹೆಚ್ಚಳ, ಶೀಘ್ರಗತಿಯಲ್ಲಿ ಪರವಾನಗಿ ಮಂಜೂರಾತಿ, ಉತ್ಪಾದನೆ, ಗಣಿಗಾರಿಕೆ, ಹಾಗೂ ವಿತ್ತೀಯ ಸೇವಾ ವಲಯದಲ್ಲಿ ಮೋದಿ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳೇ ಉದ್ದಿಮೆದಾರರಲ್ಲಿ ಉತ್ಸಾಹ ಮೂಡಿಸಿದೆ. ಬಂಡವಾಳ ಹೂಡಿಕೆದಾರರು ಭಾರತದ ಔದ್ಯಮಿಕ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮನಸ್ಸು ಮಾಡುತ್ತಿರುವುದೂ ಸಹ ಇತ್ತೀಚೆಗೆ ಬಿಡುಗಡೆಗೊಂಡ ಜಿಡಿಪಿಯಿಂದ ತಿಳಿಯುತ್ತದೆ. ಪರಿಣಾಮ ಆರ್ಥಿಕ ವಲಯ ಚೇತರಿಕೆಯತ್ತ ಸಾಗುತ್ತಿದೆ.

ದೇಶದ ಜನತೆಯನ್ನು ಬ್ಯಾಂಕ್ ನೊಂದಿಗೆ ಜೋಡಿಸುವ ಜನ್-ಧನ್ ಯೋಜನೆ: ಜನ್-ಧನ್ ಯೋಜನೆ, ದೇಶದ ಬ್ಯಾಂಕಿಂಗ್, ವಿಮಾ ಕ್ಷೇತ್ರಗಳು ದಾಖಲೆ ಬರೆಯಲು ನೆರವಾದ ಯೋಜನೆ. ಕಾಂಗ್ರೆಸ್ ನ 60 ವರ್ಷಗಳ ಕಾಲ ಮಾಡಲಾಗದ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಒಂದೇ ದಿನದಲ್ಲಿ ಮಾಡಿದ್ದರು. ಶೇ.68ರಷ್ಟು ಜನರನ್ನು ಬ್ಯಾಂಕ್ ನೊಂದಿಗೆ ವ್ಯವಹರಿಸುವ ಮೂಲಕ ಪ್ರಧಾನಿ ಮೋದಿ ಹಣಾಕಾಸು ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಪ್ರಧಾನಿಯ ಈ ಯೋಜನೆಯಿಂದ ವಿದ್ಯಾರ್ಥಿಗಳಿಂದ ವಿಧವಾ ವೇತನ ಪಡೆಯುವವರಿಗೆ ಬ್ಯಾಂಕ್ ನ ನೆರವು ದೊರೆಯಲಿದೆ. ಅಲ್ಲದೇ ರೈತರಿಗಂತೂ ಉಳಿತಾಯ ಮಾಡಲು ದಲ್ಲಾಳಿಗಳಿಂದ ಮುಕ್ತಿ ಪಡೆಯಲು ಈ ಯೋಜನೆ ವರದಾನವಾಗಿ ಪರಿಣಮಿಸಿದೆ. ದೇಶದ ಅಷ್ಟೂ ಜನರ ಉಳಿತಾಯ ಬ್ಯಾಂಕ್ ನಲ್ಲಿ ಜಮೆಯಾದರೆ ಅರ್ಥ ವ್ಯವಸ್ಥೆ ಬಲಿಷ್ಠಗೊಳ್ಳುವುದರ ಜೊತೆಗೆ ಬ್ಯಾಂಕ್ ಗಳ ಆದಾಯ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಸಾಲವನ್ನೂ ಅಗ್ಗದ ಬಡ್ಡಿ ದರದಲ್ಲಿ ನೀಡಬಹುದಾದ ಸಾಧ್ಯತೆಗಳಿವೆ.
ಮೇಕ್ ಇನ್ ಇಂಡಿಯಾ ಮಂತ್ರ: ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ಗುರುತಿಸಬೇಕೆಂಬ ಕನಸು ಹೊತ್ತಿರುವ ನರೇಂದ್ರ ಮೋದಿ ಸರ್ಕಾರ, ಈಗಾಗಲೇ ಮೇಕ್ ಇನ್ ಇಂಡಿಯಾ ಮಂತ್ರ ಪರಿಚಯಿಸಿದೆ. ಜಪಾನ್ ಸೇರಿದಂತೆ ವಿವಿಧ ದೇಶಗಳಿಗೆ ಹೂಡಿಕೆಗೆ ಆಹ್ವಾನ ನೀಡಿದೆ. ಭಾರತದ ಪ್ರಧಾನಿಯೊಬ್ಬರಿಗೆ ಜಪಾನ್ ನಲ್ಲಿ ಅದ್ದೂರಿ ಸ್ವಾಗತ ದೊರೆತಿದ್ದೂ ಅಲ್ಲದೇ ಜಪಾನ್ ಸರ್ಕಾರ, ಭಾರತದಲ್ಲಿ ಈ ಹಿಂದೆ ಹೂಡುತ್ತಿದ್ದ 2ರಷ್ಟು ಬಂಡವಾಳ ಹೂಡುವುದಕ್ಕೆ ಒಪ್ಪಿಗೆ ಸೂಚಿಸಿದೆ. ಅಂದರೆ ಮೋದಿ ಭೇಟಿ ಭಾರತದ ಇತರ ಪ್ರಧಾನಿಗಳಿಗಿಂತಲೂ ದುಪ್ಪಟ್ಟು ಶಕ್ತಿಯುತವಾಗಿತ್ತು ಎಂಬುದು ಸಾಬೀತಾಯಿತು.


ಡಿಜಿಟಲ್ ಇಂಡಿಯಾ ಕನಸು: ಭಾರತ ಆಯ್ಕೆ ಮಾಡಿರುವ ಪ್ರಧಾನಿ ಐಟಿ ಕ್ಷೇತ್ರವನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಚಾಣಾಕ್ಷ ಎಂಬುದು ತಿಳಿದೇ ಇದೆ. ಮುಖ್ಯಮಂತ್ರಿಯಾಗಿದ್ದಾಗಲೇ ಐಟಿ ತಂತ್ರಜ್ನಾನವನ್ನು ಯಶಸ್ವಿಯಾಗಿ ಬಳಸಿ ರಾಜಕೀಯ ವಲಯವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದವರು ಮೋದಿ. ಇನ್ನು ಪ್ರಧಾನಿಯಾಗಿದ್ದಾರೆ ಎಂದಮೇಲೆ ಕೇಳಬೇಕೆ? ಭಾರತವನ್ನು ಐಟಿ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ಮಾಸ್ಟರ್ ಪ್ಲಾನ್ ರೆಡಿಯಾಗಿರುತ್ತದೆ. ಐಟಿ ಕ್ಷೇತ್ರದ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಳೆಗುಂದಿದ್ದ ಐಟಿ ಕ್ಷೇತ್ರವನ್ನು ಸದೃಢಗೊಳಿಸಲು ಕ್ರಮ ಕೈಗೊಂಡಿರುವುದು ಮೋದಿ ಸರ್ಕಾರದ ನೂರು ದಿನಗಳಲ್ಲಿ ಮತ್ತೊಂದು ಗಮನಾರ್ಹ ಸಾಧನೆ, ಈಗಾಗಲೇ .ಭಾರತ್ ಡೊಮೇನ್ ಪ್ರಾರಂಭಿಸಿ ಸ್ಥಳೀಯ ಭಾಷೆಗಳಲ್ಲೇ ವೆಬ್ ಸೈಟ್ ಹೆಸರು ನೋಂದಣಿಗೆ ಮೋದಿ ಸರ್ಕಾರ ಚಾಲನೆ ನೀಡಿದೆ. ಇನ್ನು ಪ್ರತಿಯೊಬ್ಬ ನಾಗರಿಕನೂ ತನ್ನ ಸ್ವ-ವಿವರಗಳನ್ನು ಸಂಗ್ರಹಿಸಿಕೊಳ್ಳಲು ಡಿಜಿಟಲ್ ಕ್ಲೌಡ್ ಎಂಬ ಹೊಸ ಯೋಜನೆ ಜಾರಿಗೊಳ್ಳಲು ತಯಾರಿಯಾಗುತ್ತಿದೆ. ಡಿಜಿಟಲ್ ಕ್ಲೌಡ್ ಮೂಲಕ ಆಡಳಿತ ವ್ಯವಸ್ಥೆಯನ್ನು ಕಾಗದ ಮುಕ್ತ ಮಾಡಬೇಕೆಂಬುದು ಮೋದಿ ಕನಸು.

ಕನಿಷ್ಠ ಸರ್ಕಾರ ಗರಿಷ್ಟ ಆಡಳಿತ ಎಂಬ ಸೂತ್ರದಲ್ಲಿ ಕೊಲೊಜಿಯಂ ವ್ಯವಸ್ಥೆ ರದ್ದತಿ ಯೋಜನಾ ಆಯೋಗದ ಬದಲಿಗೆ ಹೊಸ ಆಯೋಗದ ರಚನೆ, ಗಂಗಾ ನದಿ ಶುದ್ದೀಕರಣ ಹೀಗೆ ನೂರಾರು ಕ್ರಾಂತಿಕಾರಿ ಕ್ರಮ ಕೈಗೊಂಡಿರುವ ಮೋದಿ ಸರ್ಕಾರದ 100 ದಿನಗಳು ಇಡಿ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವುದಂತೂ ಸುಳ್ಳಲ್ಲ. ಮೋದಿ 100 ದಿನಗಳು ಅವರ ಭರವಸೆಯ ಅಚ್ಚೆ ದಿನಗಳನ್ನು ಹೊತ್ತು ತಂದಿದೆ!.....

 

Author : ಬೆಂಗಳೂರು ವೇವ್ಸ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited