Untitled Document
Sign Up | Login    
ವಿಶ್ವಕ್ಕೇ ಪ್ರಜಾಪ್ರಭುತ್ವ ಶಕ್ತಿ ಸಾರಿದ ಪ್ರಧಾನಿಯ ಜನ್ಮದಿನಾಚರಣೆ

ಪ್ರಧಾನಿ ನರೇಂದ್ರ ಮೋದಿ

ಸೆ.17, ಭಾರತದ 15ನೇ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ 64ನೇ ಜನ್ಮ ದಿನಾಚರಣೆ. ಒಂದು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸಿದ್ದ ವ್ಯಕ್ತಿ ದೇಶದ ಅತ್ಯುನ್ನತ ಸ್ಥಾನ ಪ್ರಧಾನಿ ಹುದ್ದೆಗೇರಿ ಪ್ರಜಾಪ್ರಭುತ್ವಕ್ಕೆ ಇರುವ ಶಕ್ತಿಯನ್ನು ಜಗತ್ತಿಗೇ ಸಾರಿದವರು.

ಹೆಸರಿನ ಮುಂದಿರುವ ಗಾಂಧಿ ಎಂಬ ಉಪನಾಮವೇ ಸ್ವಾತಂತ್ರ್ಯ ಬಂದ 65 ವರ್ಷಗಳ ನಂತರವೂ ದೇಶವನ್ನು ಆಳುತ್ತಿದ್ದ ಸಂದರ್ಭದಲ್ಲಿ, ನರೇಂದ್ರ ಮೋದಿ ಎಂಬ ಶಕ್ತಿ ವಿಶ್ವದ ಕೇಂದ್ರ ಬಿಂದುವಾಗಿದ್ದು 2014ರ ಲೋಕಸಭಾ ಚುನಾವಣೆಯಲ್ಲಿ. ಅದಕ್ಕೆ ಮುನ್ನವೂ ನರೇಂದ್ರ ಮೋದಿ ಜಾಗತಿಕ ಮಟ್ಟದಲ್ಲಿ ತಮ್ಮನ್ನು ಯಶಸ್ವಿಯಾಗಿ ಗುರುತಿಸಿಕೊಂಡಿದ್ದರು. ಗುಜರಾತ್ ನಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿರುವ ಸಂದರ್ಭದಲ್ಲೇ ಅನೇಕ ವಿದೇಶಿ ಪ್ರತಿನಿಧಿಗಳು ಗುಜರಾತ್ ಗೆ ಆಗಮಿಸಿದ ಸಂದರ್ಭದಲ್ಲಿ ಮೋದಿ ಅವರಿಗೆ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದರು. ಇದೇ ಇಂದು ಮೋದಿ ಅವರಿಗೆ ನೆರೆ ರಾಷ್ಟ್ರಗಳೊಂದಿಗೆ ಬೇರಾವುದೇ ಪ್ರಧಾನಿ ಹೊಂದಿರದ ಅತ್ಯಂತ ಸೌಹಾರ್ದಯುತ ಸಂಬಂಧ ಕಾಯ್ದುಕೊಳ್ಳಲು ಸಹಕಾರಿಯಾಗಿರುವ ಪ್ಲಸ್ ಪಾಯಿಂಟ್.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅನೇಕ ದಿಗ್ಗಜರ ಗಮನವನ್ನು ತಮ್ಮೆಡೆಗೆ ಸೆಳೆದಿದ್ದರು. ಗುರೂಜಿ ಗೋಳವಲ್ಕರ್ ಸೇರಿದಂತೆ ಸಂಘದ ಹಲವು ಪ್ರಮುಖರೊಂದಿಗೆ ಮೋದಿ ಅತ್ಯಂತ ಕಿರಿಯ ವಯಸಿನಲ್ಲಿಯೇ ಸಂಪರ್ಕ ಹೊಂದಿದ್ದರು. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ಗುಜರಾತ್ ನಲ್ಲಿ ಆರ್.ಎಸ್.ಎಸ್ ನಡೆಸಿದ್ದ ಚಳುವಳಿಗೆ ಮೋದಿ ಕೊಡುಗೆಯಂತೂ ಅವಿಸ್ಮರಣೀಯವಾಗಿ ಉಳಿದಿದೆ.

ಪ್ರಧಾನಿ ಮೋದಿ ಅವರು ಇತರ ರಾಜಕಾರಣಿಗಳಂತೆ ಜೀವನ ನಡೆಸುತ್ತಿರುವವರಲ್ಲ. ಚಿಕ್ಕಂದಿನಿಂದಲೇ ಹಲವಾರು ಕಷ್ಟ ಕೋಟಲೆಗಳನ್ನು ಸಮರ್ಥವಾಗಿ ಎದುರಿಸಬೇಕಾಯಿತು. ಆದರೆ ಅಡೆತಡೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಕೇವಲ ವ್ಯಕ್ತಿತ್ವದ ಶಕ್ತಿ ಮತ್ತು ಧೈರ್ಯದಿಂದಲೇ ಸವಾಲುಗಳನ್ನು ಅವಕಾಶಗಳನ್ನಾಗಿ ಅವರು ಬದಲಿಸುತ್ತಿದ್ದರು. ಆದರಲ್ಲೂ ಕಾಲೇಜು ಹಾಗೂ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾಲಯ ಸೇರಿದಾಗ ಇನ್ನಷ್ಟು ಕಠಿಣ ಹಾದಿಯಲ್ಲಿ ಮೋದಿ ಸಾಗಬೇಕಾಯಿತು. ಬದುಕೆಂಬ ಯುದ್ಧದಲ್ಲಿ ನೈಜ ಸೈನಿಕನಂತೆ ಹೋರಾಟ ನಡೆಸಿಕೊಂಡು ಬಂದರು. ಸೋಲುವುದು, ಹಿಂಜರಿಕೆ ವಿರುದ್ಧ ಪ್ರಬಲವಾಗಿ ಮುನ್ನುಗ್ಗುತ್ತಿದ್ದರು. ಅವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆರ್.ಎಸ್.ಎಸ್ ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು. ಪ್ರಮುಖವಾಗಿ 1974ರಲ್ಲಿ ನವನಿರ್ಮಾಣ ಭ್ರಷ್ಟಾಚಾರ ವಿರೋಧಿ ಚಳವಳಿ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ 19 ತಿಂಗಳ (ಜೂನ್ 1975೭೫ ರಿಂದ ಜನವರಿ 1997) ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಭೂಗತರಾಗಿಯೇ ಉಳಿದ ಮೋದಿಯವರು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು.
1983ರಲ್ಲಿ ಬಿಜೆಪಿ ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮೋದಿ ಧುಮುಕಿದರು. ಪಕ್ಷ ಸೇರಿದ ಒಂದು ವರ್ಷದಲ್ಲೇ ಗುಜರಾತ್ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದರು. ಆ ಹೊತ್ತಿಗಾಗಲೆ ಅವರು ಅತ್ಯಂತ ಸಮರ್ಥ ಸಂಘಟನಾಕಾರ ಎಂದು ಎಲ್ಲೆಡೆ ಗುರುತಿಸಿ ಕೊಂಡಿದ್ದರು. 1988 ಮತ್ತು 1995ರ ನಡುವೆ ಗುಜರಾತಿನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯವರು ಮಾಸ್ಟರ್ ತಂತ್ರಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆ ಅವಧಿಯಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಮಟದಲ್ಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸುವ ಜವಾಬ್ದಾರಿ ನೀಡಲಾಯಿತು. ಎಲ್ ಕೆ ಅಡ್ವಾಣಿಯವರ ಸೋಮನಾಥದಿಂದ ಅಯೋಧ್ಯಾವರೆಗಿನ ರಥಯಾತ್ರೆ (ಅತಿ ದೊಡ್ಡ ಯಾತ್ರೆ) ಮತ್ತು ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ(ದಕ್ಷಿಣ ಭಾರತ ತುತ್ತತುದಿ)ಯಿಂದ ಉತ್ತರದ ತುದಿಯಲ್ಲಿರುವ ಕಾಶ್ಮೀರದವರೆಗೆ ಯಾತ್ರೆ ನಡೆಸುವ ಗುರುತರ ಜವಾಬ್ದಾರಿಯನ್ನು ಮೋದಿಯವರು ಹೊತ್ತುಕೊಂಡರು. 1998ರಲ್ಲಿ ನವದೆಹಲಿಯಲ್ಲಿ ಬಿಜೆಪಿ ಅಧಿಕಾರ ಸ್ಥಾಪನೆಗೆ ಮೋದಿ ನಿಭಾಯಿಸಿದ ಇದೇ ಎರಡು ರಥಯಾತ್ರೆಗಳು ಕಾರಣ.1995ರಲ್ಲಿ ಅವರು ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದ ನರೇಂದ್ರ ಮೋದಿ ಅವರಿಗೆ ಭಾರತದ ಐದು ರಾಜ್ಯಗಳ ಉಸ್ತುವಾರಿಯನ್ನು ನೀಡಲಾಯಿತು. 1998ರಲ್ಲಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆ ಅಲಂಕರಿಸಿದರು. 2001ರ ಅಕ್ಟೋಬರ್ ವರೆಗೂ ಈ ಹುದ್ದೆಯನ್ನು ನಿಭಾಯಿಸಿದರು. ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಯವರು ಕರ್ತವ್ಯ ನಿಭಾಯಿಸುತ್ತಿದ್ದಾಗ, ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ, ಮತ್ತು ಅಷ್ಟೇ ಸೂಕ್ಷ್ಮವಾಗಿದ್ದ ಈಶಾನ್ಯ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳಲ್ಲಿನ ಪಕ್ಷದ ವ್ಯವಹಾರ ಉಸ್ತುವಾರಿಯನ್ನು ವಹಿಸಲಾಯಿತು. ಅನೇಕ ರಾಜ್ಯಗಳಲ್ಲಿ ಪಕ್ಷದ ಸಂಘಟನಾ ವ್ಯವಸ್ಥೆಯನ್ನು ಪುನರಾಚಿಸಿ ಪಕ್ಷದ ಬಲವರ್ಧನೆಗೆ ಮೋದಿ ಕಾರಣರಾದರು. ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುವಾಗ ನರೇಂದ್ರ ಮೋದಿ ಅವರು ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಅನೇಕ ಸಂದರ್ಭಗಳಲ್ಲಿ ಮಹತ್ವದ ಪಾತ್ರ ವಹಿಸಿದರು. ಈ ಅವಧಿಯಲ್ಲಿ ಮೋದಿ ಅವರು ವಿಶ್ವದಾದ್ಯಂತ ಪ್ರವಾಸ ಮಾಡಿ ವಿವಿಧ ದೇಶದ ಪ್ರಮುಖ ನಾಯಕರನ್ನು ಭೇಟಿ ಮಾಡಿದರು. ಈ ಪ್ರವಾಸ ಅನುಭವ ಹೊಸ ಜಾಗತಿಕ ದೃಷ್ಟಿಕೋನ ಬೆಳೆಸಿಕೊಳ್ಳಲು ಸಹಕಾರಿಯಾಯಿತು.
2001ರ ಅಕ್ಟೋಬರ್ ನಲ್ಲಿ ಗುಜರಾತ್ ಸರಕಾರವನ್ನು ಮುನ್ನಡೆಸಬೇಕೆಂದು ಅವರಿಗೆ ಪಕ್ಷದ ವರಿಷ್ಠರಿಂದ ಕರೆ ಬಂದಿತು. ಮೋದಿ ಅವರ ಸರಕಾರ ಅಕ್ಟೋಬರ್ ೭, ೨೦೦೧ರಂದು ಅಧಿಕಾರವಹಿಸಿಕೊಂಡಾಗ ಗುಜರಾತಿನ ಆರ್ಥಿಕ ಪರಿಸ್ಥಿತಿ ಅನೇಕ ಪ್ರಾಕೃತಿಕ ವಿಕೋಪಗಳ ಜೊತೆ ಹೋರಾಟ ನಡೆಸಿತ್ತು. ಅದೇ ವರ್ಷ ಜನವರಿಯಲ್ಲಿ ಸಂಭವಿಸಿದ ಭಾರಿ ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ಅನಾಹುತಗಳು ಸರಕಾರವನ್ನು ಕಂಗೆಡಿಸಿತ್ತು. ಆದರೆ, ದೇಶ ವಿದೇಶಗಳನ್ನು ಸುತ್ತಾಡಿ ವಿಪತ್ತು ನಿರ್ವಹಣೆ ಅನುಭವ ಪಡೆದಿದ್ದ ಮೋದಿ ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು. ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿ ವಿಶ್ವದೆಲ್ಲೆಡೆಯಿಂದ ಗುಜರಾತಿಗೆ ಹಲವಾರು ಪ್ರಶಸ್ತಿ ಹಾಗೂ ಮನ್ನಣೆಗಳು ಸಂದಿವೆ. ವಿಕೋಪದ ಪರಿಣಾಮ ತಗ್ಗಿಸಿದ್ದಕ್ಕಾಗಿ ನೀಡುವ ಯುಎನ್ ಸಸಕಾವಾ ಪ್ರಶಸ್ತಿ, ಆಡಳಿತದಲ್ಲಿ ಹೊಸ ಬದಲಾವಣೆ ತಂದಿದ್ದಕ್ಕಾಗಿ ಕಾಮನ್ವೆಲ್ತ್ ಅಸೋಸಿಯೇಷನ್ ಫಾರ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಅಂಡ್ ಮ್ಯಾನೇಜ್ ಮೆಂಟ್ ಪ್ರಶಸ್ತಿ, ಯುನೆಸ್ಕೋ ಪ್ರಶಸ್ತಿ, ಇ-ಆಡಳಿತಕ್ಕಾಗಿ ಸಿಎಸ್ಐ ಪ್ರಶಸ್ತಿ ಮುಂತಾದ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಗುಜರಾತ್ ಪಾತ್ರವಾಗಿದೆ. ಸಾರ್ವಜನಿಕರಿಂದ ಸತತ ಮೂರು ವರ್ಷ ದೇಶದ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಅವರನ್ನು ಗುರುತಿಸಲಾಗಿದೆ.

ಗುಜರಾತನ್ನು ಜಾಗತಿಕ ನಕಾಶೆಯಲ್ಲಿ ಗೋಚರಿಸುವಂತೆ ಮಾಡಿರುವ ವೈಬ್ರಂಟ್ ಗುಜರಾತ್, ಬಂಡವಾಳ ಹೂಡಿಕೆಗೆ ಅತ್ಯಂತ ನೆಚ್ಚಿನ ರಾಜ್ಯವಾಗಿ ಹೊರಹೊಮ್ಮಿದೆ. ಕಳೆದ ಕೆಲ ವರ್ಷಗಳಿಂದ ಗುಜರಾತ್ ಸಂಪದ್ಭರಿತ ರಾಜ್ಯವಾಗಿ ಮುನ್ನಡೆದಿದೆ.

ಸಮರ್ಥ ವ್ಯಕ್ತಿತ್ವ, ಸ್ಪಷ್ಟ ನಿಲುವು, ಧೈರ್ಯ, ಸಮರ್ಪಣಾ ಭಾವಗಳು ಒಬ್ಬರೇ ನಾಯಕರಲ್ಲಿ ಹೇಗೆ ಅರಳಬಲ್ಲದು ಎಂಬುದನ್ನು ಅವರು ಯುವಜನತೆಗೆ ತೋರಿಸಿ ಕೊಟ್ಟಿದ್ದಾರೆ. ನಿಷ್ಕಳಂಕ ಸೇವಾ ಮನೋಭಾವವುಳ್ಳ, ಉದಾತ್ತ ನಿಲುವು ಹೊಂದಿರುವ, ಅಪಾರ ಪ್ರೀತಿ ಗಳಿಸಿರುವ ಏಕೈಕ ವ್ಯಕ್ತಿಯನ್ನು ಕಾಣುವುದು ಅತ್ಯಂತ ಅಪರೂಪ. ಅತ್ಯಂತ ಕಡಿಮೆ ಸಮಯದಲ್ಲಿಯೇ ಅತಿ ಹೆಚ್ಚು ಸಾಧಿಸಿ ನರೇಂದ್ರ ಮೋದಿಯವರು ಭಾರತವನ್ನು ವಿಶ್ವ ಗುರುವನ್ನಾಗಿಸಲು ಶ್ರಮಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತದ ಅಭಿವೃದ್ಧಿಗಾಗಿ ನಾವೂ ಕೈಜೋಡಿಸೋಣ. ವಿಶ್ವಗುರು ಭಾರತ ನಿರ್ಮಿಸೋಣ.




 

Author : ಬೆಂಗಳೂರು ವೇವ್ಸ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited