Untitled Document
Sign Up | Login    
ಮೋದಿ ಅವರನ್ನು ಟೀಕಿಸುವ ಭರದಲ್ಲಿ ಮಾಧ್ಯಮಗಳ ಮಾನ ಹರಾಜು ಹಾಕುವುದೇಕೆ?

ಮಾಧ್ಯಮಗಳ ಮೇಲೆ ಆರೋಪ ಮಾಡಿರುವ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮಿನ್ ಮಟ್ಟು

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯೋತ್ಸವದ ಭಾಷಣವನ್ನು ಹಣ ಪಡೆದು ಕೆಲವು ಸುದ್ದಿ ವಾಹಿನಿಗಳು ದಿನವಿಡೀ ಬಿತ್ತರಿಸುತ್ತವೆ!ಆ.17ರಂದು ನಡೆದ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ ವಿಚಾರ ಸಂಕಿರಣದಲ್ಲಿ ಮಾಜಿ ಪತ್ರಕರ್ತ, ರಾಜ್ಯ ಸರ್ಕಾರದ ಮಾಧ್ಯಮ ಹಾಲಿ ಸಲಹೆಗಾರ ದಿನೇಶ್ ಅಮಿನ್ ಮಟ್ಟು ಇಂತಹ ಹೇಳಿಕೆ ನೀಡಿಬಿಟ್ಟರು! ಮೋದಿ ಅವರದ್ದು ಅಸ್ವಾಭಾವಿಕ(ಕೃತಕ) ಜನಪ್ರಿಯತೆ ಎಂಬುದು ಸಿ.ಎಂ ಸಲಹೆಗಾರರ ವಿಚಾರವಾಗಿತ್ತು. ಅದನ್ನು ಹೇಳುವ ರೀತಿಯಲ್ಲಿ ಹೇಳಿದಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲವೇನೊ.... ಸುದ್ದಿಯಲ್ಲಿರಲು ಹಪಹಪಿಸಿ ಲೋಕಸಭಾ ಚುನಾವಣೆಗೂ ಮುನ್ನ ಹಲವು ಸಾಹಿತಿಗಳು ಇಂತಹದ್ದೇ ಹೇಳಿಕೆ ನೀಡಿ ಅಗ್ಗದ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಪತ್ರಿಕೋದ್ಯಮದಲ್ಲಿ ಸುದೀರ್ಘ ಅವಧಿಯ ಅನುಭವ ಹೊಂದಿರುವ ಹಿರಿಯ ಪತ್ರಕರ್ತರೇ ಯಾವುದೋ ಪಕ್ಷವನ್ನು ಟೀಕಿಸುವ ಭರದಲ್ಲಿ ವೃತ್ತಿಧರ್ಮಕ್ಕೇ ಅಪಚಾರವೆಸಗುವುದೇ?

ಪ್ರಧಾನಿಯ ಜನಪ್ರಿಯತೆಯನ್ನು ಟೀಕಿಸುವ ಭರದಲ್ಲಿ ಪತ್ರಕರ್ತರೇ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮದ ಘನತೆಯನ್ನು ಹರಾಜುಹಾಕಿರುವುದು ಬಹುಶಃ ಇತಿಹಾಸದಲ್ಲೇ ಮೊದಲು! ಗಾಂಧಿ ಕುಟುಂಬಕ್ಕೆ ಇಂದಿಗೂ ನಿಷ್ಠರಾಗಿಯೇ ಉಳಿದುಕೊಂಡಿರುವ ಪತ್ರಕರ್ತ ಕುಮಾರ್ ಕೇಥ್ ಕರ್ ಸಹ ಈ ಮಟ್ಟಕ್ಕೆ ಇಳಿದಿರಲಿಲ್ಲ ಎಂದೆನುಸುತ್ತದೆ, ಅಮಿನ್ ಮಟ್ಟು ಅವರದ್ದು ಅವರನ್ನೂ ನಾಚಿಸುವಂತಹ ಹೇಳಿಕೆ.

ಭಾರತ ಕಂಡ ಪ್ರಸಿದ್ಧ ಪತ್ರಕರ್ತ ಅರುಣ್ ಶೌರಿ, ಎನ್.ರಾಮ್, ಚೋ.ರಾಮಸ್ವಾಮಿ, ಕುಮಾರ್ ಕೇಥ್ ಕರ್, ಆಮ್ ಆದ್ಮಿಯ ಅಶುತೋಶ್ ಸೇರಿದಂತೆ ಪತ್ರಕರ್ತರೂ ಸಹ ನಿರ್ದಿಷ್ಟಪಕ್ಷಗಳ ಪರವಾಗಿ ಮಾತನಾಡಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಅವರ್ಯಾರೂ ಪತ್ರಿಕಾರಂಗದ ಮಾನವನ್ನೆಂದಿಗೂ ಹರಾಜು ಹಾಕಿರಲಿಲ್ಲ. ಇಷ್ಟಕ್ಕೂ ಪೇಯ್ಡ್ ಮೀಡಿಯಾ ಅಥವಾ ಏಕಪಕ್ಷೀಯವಾಗಿ ಸುದ್ದಿ ಬಿತ್ತರಿಸುವ ಬಗ್ಗೆ ಹೇಳಿಕೆಗಳನ್ನು ನೀಡಲು ಅಮಿನ್ ಮಟ್ಟು ಅವರಿಗೆ ಅರ್ಹತೆ ಏನಿದೆ? ಏಕೆಂದರೆ 2012ರ ನವೆಂಬರ್ 5ರಂದು(11/05/2012) ಪ್ರಜಾವಾಣಿ ಪತ್ರಿಕೆಯಲ್ಲಿ ದಿನೇಶ್ ಅಮಿನ್ ಮಟ್ಟು ಬರೆದ
'ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ'ಶೀರ್ಷಿಕೆಯ ಲೇಖನ ಅವರಿಗೆ ಗಾಂಧಿ ಕುಡಿಯ ಬಗ್ಗೆ ಇರುವ ಅತೀವ ಕಳಕಳಿಯನ್ನು 'ಅನಾವರಣ'ಗೊಳಿಸಿತ್ತು. (http://www.prajavani.net/columns/ರಾಹುಲ್-ಭವಿಷ್ಯ-ಅವರ-ಕೈಯಲ್ಲಿಯೇ-ಇದೆ)

2012ರ ವೇಳೆಗೆ ಯುಪಿಎ ಸರ್ಕಾರದ ಬಂಡವಾಳ ದೇಶದ ಜನತೆಗೆ ಗೊತ್ತಾಗಿಹೋಗಿತ್ತು. ಪ್ರಥಮ ಅವಧಿಯಲ್ಲೇ ಹಗರಣಗಳ ಪಟ್ಟಿಯನ್ನೇ ಹೊತ್ತುಕೊಂಡಿತ್ತು ಕಾಂಗ್ರೆಸ್ ಸರ್ಕಾರ. ಅಷ್ಟೇ ಅಲ್ಲ, ಪ್ರಜಾಪ್ರಭುತ್ವದಲ್ಲಿ ಜೀವಿಸುತ್ತಿದ್ದ ಜನತೆ ಸುಮಾರು 60 ವರ್ಷಗಳಿಂದ ನಡೆದುಕೊಂಡು ಬಂದಿದ್ದ ವಂಶಪಾರಂಪರ್ಯ ರಾಜಕಾರಣದಿಂದ ರೋಸಿಹೋಗಿದ್ದರು. ಆದರೂ ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆಂದು ಹೇಳುವ ಮೂಲಕ ಈ ಅಂಕಣದಲ್ಲಿ ಮಾಧ್ಯಮಗಳಿಂದ ಯುವರಾಜನೆಂದೇ ಕರೆಸಿಕೊಳ್ಳುತ್ತಿದ್ದ, ದೇಶದ ಜನತೆ ಪಾಲಿಗೆ ಬೇಡವಾಗಿದ್ದ ರಾಹುಲ್ ಗಾಂಧಿಯನ್ನು, ಅತಿ ಪ್ರಮೋಟ್ ಮಾಡಲು ಸೂಕ್ಷ್ಮವಾಗಿ ಯತ್ನಿಸಿದ್ದರು ಅಮಿನ್ ಮಟ್ಟು ಸಾಹೇಬರು. ಅಮಿನ್ ಮಟ್ಟು ಅವರೂ ಹಣ ಪಡೆದು ಬರೆದಿದ್ದೀರಾ ಎಂದು ಆರೋಪ ಮಾಡುವುದು ಅನ್ಯರಿಗೆ ಸುಲಭದ ಕೆಲಸ. ಮೋದಿ ರಾಷ್ಟ್ರರಾಜಕಾರಣಕ್ಕೆ ಬರುವುದಕ್ಕೂ ಮುನ್ನ( ಅಂದರೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆಯುವುದಕ್ಕೂ ಮುನ್ನ) ರಾಹುಲ್ ಗಾಂಧಿ ಕುಳಿತರೆ, ನಿಂತರೆ, ಮಾಧ್ಯಮಗಳು ಯುವರಾಜನೆಂದೇ ಸಂಬೋಧಿಸಿ ಸಕಲ ರಾಜಮರ್ಯಾದೆಗಳನ್ನಿತ್ತು ಗೌರವಿಸಿದಾಗ ಮುಖ್ಯಮಂತ್ರಿಗಳ ಸಲಹೆಗಾರರಾದ ಅಮಿನ್ ಮಟ್ಟು ಅವರಿಗೆ ಮಾಧ್ಯಮಗಳ ಬಗ್ಗೆ ಹಣ ಪಡೆದು ಸುದ್ದಿ ಬಿತ್ತರಿಸುತ್ತಿದ್ದ ಅನುಮಾನ ಬರಲೇ ಇಲ್ಲ.

ಇರಲಿ, ಪ್ರಜಾಪ್ರಭುತ್ವದ ಬಗ್ಗೆ ಅತೀವ ಕಾಳಜಿ ಹೊಂದಿದವರು ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ? ಒಂದು ವೇಳೆ ವಂಶಪರಂಪರೆಯಿಂದ ರಾಜಕಾರಣವನ್ನು ಒಪ್ಪಿಕೊಂಡಿರುವ ಜನತೆಯ ನಿರ್ಧಾರವನ್ನು ಅಮಿತ್ ಮಟ್ಟು ಮುಕ್ತ ಮನಸ್ಸಿನಿಂದ ಸ್ವೀಕರಿಸುವುದೇ ಆದರೆ, ಅದೇ ಜನತೆ 2014ನೇ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಒಪ್ಪಿದ್ದಾರಲ್ಲಾ ಅದನ್ನು ಸಾರಾಸಗಟಾಗಿ ನಿರಾಕರಿಸಿ ಮಾಧ್ಯಮಗಳ ಮೇಲೇಕೆ ವೃಥಾ ಅಪವಾದ ಮಾಡುತ್ತಾರೆ? ಅಥವಾ, ವಂಶಾಡಳಿತವನ್ನು ಒಪ್ಪಿಕೊಳ್ಳುವಂತೆ ಮಾಡಿದ್ದ ಮಾಧ್ಯಮಗಳು ನಿಷ್ಠೆ ಬದಲಿಸಿ ವಂಶಾಡಳಿತದ ವಿರುದ್ಧ ಇರುವ ಮೋದಿ ಅವರ ಭಾಷಣಗಳನ್ನು ಪ್ರಸಾರ ಮಾಡುತ್ತಿದೆ ಎಂಬುದು ದಿನೇಶ್ ಅಮಿನ್ ಮಟ್ಟು ಅವರ ವಾದವೇ? ರಾಜಕೀಯ ಟೀಕೆಗಳಿಗೆ ಮಾಧ್ಯಮಗಳ ಘನತೆಯನ್ನೇಕೆ ಕುಗ್ಗಿಸುತ್ತೀರಿ? ಬಹುತೇಕ ಮಾಧ್ಯಮಗಳು, ಟಿ.ಆರ್.ಪಿ, ಸರ್ಕ್ಯುಲೇಶನ್ ಹೆಚ್ಚಳಕ್ಕೋಸ್ಕರ ಹೇಳಿಕೆಗಳಿಗಾಗಿ (ಬೈಟ್) ರಾಜಕೀಯ ವ್ಯಕ್ತಿಗಳನ್ನು ಪೀಡಿಸುತ್ತವೆ ಎಂಬುದು ತಿಳಿದಿದೆ. ಇನ್ನೂ ಕೆಲವೊಂದು ಮಾಧ್ಯಮಗಳು ಸ್ಪಷ್ಟವಾಗಿ ಹೇಳಬೇಕೆಂದರೆ ದೇಶಕ್ಕೆ ಮಾರಕವಾಗಿರುವ ನಕ್ಸಲರ ಬಗ್ಗೆ ಮಾನವೀಯ ಕಾಳಜಿ ಪ್ರದರ್ಶಿಸಿದ್ದ, ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಹಣ ಮಾಡುತ್ತಿದ್ದ, ಆನಂತರ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ತೆಹಲ್ಕಾ ದಂತಹ ಕೆಲವು ಮಾಧ್ಯಮಗಳು ಹುಟ್ಟಿಕೊಂಡಿರುವುದೇ ಹಣ ಮಾಡಲು ಎಂಬ ಆರೋಪವೂ ಇದೆ(yellow journalism). ನೀವು ಆರೋಪಿಸುವುದಾದರೆ, ಅದ್ಯಾವ ಮಾಧ್ಯಮ ಹಣ ಪಡೆದಿದೆಯೋ ನಿರ್ದಿಷ್ಟವಾಗಿ ಉಲ್ಲೇಖಿಸಿದರೆ ಬೇರೆ ಮಾಧ್ಯಮಗಳ ಮರ್ಯಾದೆ ಉಳಿಯುತ್ತದೆ. ಇಲ್ಲದೇ ಇದ್ದರೆ ಮಾಧ್ಯಮಗಳೇ ಹೀಗೆ ಎಂಬ ಸಾರ್ವತ್ರಿಕ ಅಭಿಪ್ರಾಯ ಮೂಡುವುದಿಲ್ಲವೇ?

ಒಂದು ವೇಳೆ ನೀವು ಹೇಳುವ ಪ್ರಕಾರ ಮಾಧ್ಯಮಗಳು ಹಣ ಪಡೆದು ಸುದ್ದಿ ಬಿತ್ತರಿಸುವುದೇ ಆಗಿದ್ದರೆ, ಮೋದಿ ಹಣ ಕೊಟ್ಟ ಮರುಕ್ಷಣದಿಂದ ಮಾಧ್ಯಮಗಳೇ ಬದಲಾಗಿ ಹೋಗಬೇಕಿತ್ತು. ಹಾಗಾಯಿತೇ? ಊಹ್ಹು ಇಲ್ಲ. ಮೋದಿ ಪ್ರಧಾನಿಯಾಗುವವರೆಗೂ ಅವರನ್ನು ಹಣಿಯಲು ಮಾಧ್ಯಮಗಳು ಶಕ್ತಿ ಮೀರಿ ಪ್ರಯತ್ನಿಸಿದ್ದು ಜಗತ್ತಿಗೇ ಗೊತ್ತಿದೆ. ಸೋನಿಯಾ ಗಾಂಧಿ ಪ್ರಧಾನಿಯಾಗುವ ಊಹಾಪೋಹವೆದ್ದ ಸಂದರ್ಭದಲ್ಲಾಗಲೀ, ರಾಜೀವ್ ಗಾಂಧಿ ಪ್ರಧಾನಿಯಾದ ಸಂದರ್ಭದಲ್ಲಾಗಲಿ ಸಿಖ್ ನರಮೇಧ ನಡೆಸಿರುವುದರ ಬಗ್ಗೆ ಯಾವುದೇ ಮಾಧ್ಯಮಗಳೂ ಉಸಿರೆತ್ತಲಿಲ್ಲ. ಆದರೆ ಮೋದಿ ಪ್ರಧಾನಿ ಅಭ್ಯರ್ಥಿಯಾದಾಗಿನಿಂದ ಹಿಡಿದು ಲೋಕಸಭಾ ಚುನಾವಣೆ ಫಲಿತಾಂಶ ಬರುವವರೆಗೂ ಚಾಲ್ತಿಯಲ್ಲಿದ್ದದ್ದು ಒಂದೇ ವಿಷಯ ಗುಜರಾತ್ ನರಮೇಧ. ಇಷ್ಟಾದರೂ ಮೋದಿಯಿಂದ ಹಣ ಪಡೆದು ಮಾಧ್ಯಮಗಳು ಪ್ರಚಾರ ನೀಡುತ್ತಿವೆ ಎನ್ನಲು ಹೇಗೆ ಸಾಧ್ಯ? ಒಂದು ವೇಳೆ ಸಿ.ಎಂ ಮೀಡಿಯಾ ಕಾರ್ಯದರ್ಶಿ ಹೇಳುವಂತೆ ಹಣ ನೀಡಿದ ಬಳಿಕವೂ ಮಾಧ್ಯಮ ಮೋದಿ ವಿರುದ್ಧವೇ ಮಾತನಾಡಲು ಸಾಧ್ಯವೇ? ಯೋಚಿಸಿ...
ಇಷ್ಟಕ್ಕೂ ಮೋದಿ ಯಾರು?

ಅಮಿನ್ ಮಟ್ಟು ಅವರು ಆರೋಪ ಮಾಡಿರುವುದರಿಂದ ಇಂತಹ ಪ್ರಶ್ನೆ ಕೇಳಲೇಬೇಕಾಗಿದೆ. ನರೇಂದ್ರ ಮೋದಿ ಯಾರು? ಮಾಧ್ಯಮಗಳು, ಭಾಷಣವನ್ನು ದಿನವಿಡೀ ಪ್ರಸಾರ ಮಾಡುವುದರಲ್ಲಿ ಅನುಮಾನ ಪಡಲು ಅಮಿನ್ ಮಟ್ಟು ಅವರು ಉಲ್ಲೇಖಿಸಿರುವ ಹೆಸರು ಯಾರೋ ಉಗ್ರ ಸಂಘಟನೆಯವರದ್ದೋ, ಅಥವಾ ಇನ್ನಾರೋ ಸಾಮಾನ್ಯನದ್ದೋ ಅಲ್ಲವಲ್ಲ. ದಿನವಿಡಿ ಪ್ರಸಾರವಾದದ್ದು ಪ್ರಧಾನಿಯೊಬ್ಬರ ಭಾಷಣ ಅಷ್ಟೇ.

ಜನತೆ ನೀಡಿದ ಬಹುಮತದೊಂದಿಗೆ ಈ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಿಂದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ್ದರು. ಹಲವಾರು ಕಾರಣಗಳಿಗೆ ಇದೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಹಿನ್ನೆಲೆಯಲ್ಲಿ ಹಲವು ಮಾಧ್ಯಮಗಳು ಹಲವು ರೀತಿಯಲ್ಲಿ ಹಲವು ಸ್ವರೂಪಗಳಲ್ಲಿ ಅದನ್ನು ವರದಿ ಮಾಡಿದ್ದವು. ಇದರಲ್ಲಿ ಪೇಯ್ಡ್ ನ್ಯೂಸ್ ಎಂದು ಆರೋಪಿಸಲು ಯಾವ ಅಂಶವಿದೆ? ಅಥವಾ ಪ್ರಧಾನಿ ಭಾಷಣವನ್ನು ಇಂತಿಷ್ಟೇ ಸಮಯ ಬಿತ್ತರಿಸಬೇಕೆಂಬ ನಿಯಮವೇನಾದರೂ ಇದೆಯೇ?

ಯಾವ ಕ್ಷೇತ್ರದಲ್ಲಾದರೂ ಹೊಸತೇನಾದರು ಕಂಡರೆ ಅದನ್ನು ತುಸು ಹೆಚ್ಚಾಗಿಯೇ ಬಿತ್ತರಿಸುವುದು ಮಾಧ್ಯಮಗಳ ಗುಣಧರ್ಮ, ಬೆಕ್ಕು-ನಾಯಿ ಸ್ನೇಹದಿಂದಿದ್ದರೆ ಅದನ್ನು ವಿದ್ಯುನ್ಮಾನ ಮಾಧ್ಯಮಗಳು ದಿನವಿಡೀ ಬಿತ್ತರಿಸಿ ಪ್ಯಾನಲ್ ಡಿಸ್ಕಷನ್ ನಡೆಸುವ ಕಾಲವಿದು. ಇನ್ನು ಸ್ವಾತಂತ್ರ್ಯ ದಿನಾಚರಣೆಯಂತಹ ವಿಶೇಷ ಸಂದರ್ಭದಗಳಲ್ಲಿ ರಾಷ್ಟ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಪದೇ ಪದೇ ತೋರಿಸುವುದು ಸಹಜ, ಪ್ರಧಾನಿ ಯಾರೇ ಆಗಿರಲಿ ಅವರ ಭಾಷಣದ ಬಗ್ಗೆ ರಾಷ್ಟ್ರೀಯ ವಾಹಿನಿಗಳಲ್ಲಿ ಚರ್ಚೆ ನಡೆಸುವುದು ಟಿ.ವಿ ಮಾಧ್ಯಮಗಳ ಪದ್ಧತಿಯಾಗಿಬಿಟ್ಟಿದೆ. ನರೇಂದ್ರ ಮೋದಿ 2014 ಲೋಕಸಭಾ ಚುನಾವಣೆ ಫಲಿತಾಂಶದಲ್ಲೇ ದೇಶದ ಕೇಂದ್ರಬಿಂದುವಾಗಿದ್ದರು, ಇಂದಿರಾ ಗಾಂಧಿ ಅಂತಹ ವಂಶಪರಂಪರೆಯ ನಾಯಕಿಯನ್ನು ಹೊರತುಪಡಿಸಿದರೆ ಅತಿ ಹೆಚ್ಚು ಬಹುಮತದೊಂದಿಗೆ ಪ್ರಧಾನಿ ಹುದ್ದೆಗೆ ಸಾಮಾನ್ಯನೊಬ್ಬ ಕೆಂಪು ಕೋಟೆ ಮೇಲಿಂದ ನಡೆಸುವ ಭಾಷಣ ಯಾರಿಗೇ ಆದರೂ ಕುತೂಹಲ ಮೂಡಿಸುವುದಿಲ್ಲವೇ ಹೇಳಿ ಮಾಧ್ಯಮ ಸಲಹೆಗಾರರೇ....? ಅದರಲ್ಲಿಯೂ ಪ್ರಧಾನಿ ಮೋದಿ ಅವರ ಭಾಷಣ ಪ್ರತಿಬಾರಿಗಿಂತಲೂ ವಿಭಿನ್ನವಾಗಿತ್ತು. ಗುಂಡು ನಿರೋಧಕ ಕವಚ ಬಳಸದೇ, ಬರೆದು ತಂದದ್ದನ್ನು ಓದದೇ ಭಾಷಣ ಮಾಡಿದ್ದೇ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹೈಲೈಟ್ ಆಗಿತ್ತು. ಇದನ್ನೇ ಮಾಧ್ಯಮಗಳು ದಿನವಿಡಿ ಬಿತ್ತರಿಸಿ ಚರ್ಚೆ ನಡೆಸಿದ್ದವು. ತಪ್ಪೇನಿದೆ? ಕಳೆದ ಬಾರಿಯಂತೂ ಮಾಧ್ಯಮಗಳು ಮೋದಿ, ಮನಮೋಹನರ ಭಾಷಣಗಳನ್ನು ಹೋಲಿಸಿ ದಿನಗಟ್ಟಲೆ ಚರ್ಚೆ ನಡೆಸಿದ್ದವು. ಆಗ ನಿಮಗೆ ಮಾಧ್ಯಮಗಳ ಮೇಲೆ ಅನುಮಾನ ಬರಲಿಲ್ಲವೇ?
ಮಾಧ್ಯಮಗಳ ಮೇಲೆ ಗಂಭೀರ ಆರೋಪ ಮಾಡಿ ಜನರು ಪ್ರಜಾಪ್ರಭುತ್ವದ ನಾಲ್ಕನೇ ಅಂಗದಲ್ಲೂ ನಂಬಿಕೆ ಕಳೆದುಕೊಳ್ಳುವಂತಹ ಹೇಳಿಕೆ ನೀಡಿರುವ ದಿನೇಶ್ ಅಮಿನ್ ಮಟ್ಟು ಅವರು ರಾಜ್ಯ ಸರ್ಕಾರದ ಮಾಧ್ಯಮ ಸಲಹಾಗಾರನಾಗಿ ಕಾರ್ಯನಿರ್ವಹಿಸುವುದಕ್ಕೂ ಮುನ್ನ ಓರ್ವ ಪತ್ರಕರ್ತರಾಗಿದ್ದರು. ಈ ಹೇಳಿಕೆಯಿಂದ ದಿನೇಶ್ ಅಮಿನ್ ಮಟ್ಟು ಅವರ ಪ್ರಾಮಾಣಿಕತೆ ಬಗ್ಗೆಯೇ ಅನುಮಾನ ಮೂಡುವಂತಾಗಿದೆ. ಅವರೇ ನೀಡಿರುವ ಪೇಯ್ಡ್ ನ್ಯೂಸ್ ಹೇಳಿಕೆ ಪತ್ರಕರ್ತರ ಪ್ರಾಮಾಣಿಕತೆಯನ್ನೇ ಅಣಕಿಸುವಂತಿದೆ. ಮುಖ್ಯಮಂತ್ರಿಗಳ ಪತ್ರಿಕಾ ಸಲಹಗಾರರಾಗಿ ಅಧಿಕಾರ ಸ್ವೀಕರಿಸಿದ ನಂತರ ಇಂತಹ ಹೇಳಿಕೆ ನೀಡಲು ಸರ್ಕಾರದಿಂದಲೋ ಅಥವಾ ಮುಖ್ಯಮಂತ್ರಿಗಳಿಂದಲೋ ನೀವು ಎಷ್ಟು ಹಣ ಪಡೆದಿದ್ದೀರಿ ಎಂದೂ ನಿಮ್ಮನ್ನು ಜನತೆ ಪ್ರಶ್ನಿಸಿರಬಹುದು. ಕಾಂಗ್ರೆಸ್ ಅಥವಾ ಇನ್ಯಾವುದೇ ನಿರ್ಧಿಷ್ಟ ಪಕ್ಷವನ್ನು ಸಮರ್ಥಿಸಿಕೊಳ್ಳಲೇಬೇಕೆಂಬ ಅನಿವಾರ್ಯತೆ ಇದ್ದರೆ, ಅಧಿಕೃತವಾಗಿ ಪಕ್ಷದ ಸದಸ್ಯತ್ವ ಸ್ವೀಕರಿಸಿಯೇ ಇಂತಹ ಆರೋಪ ಮಾಡಬಹುದು.. ಹಾಗಾದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಮೋದಿ ಟೀಕಿಸುವ ಭರದಲ್ಲಿ ಪತ್ರಕರ್ತರಾಗಿದ್ದುಕೊಂಡೇ ಮಾಧ್ಯಮಗಳ ಮಾನ ಹರಾಜು ಹಾಕುವುದೇಕೆ?


 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited