Untitled Document
Sign Up | Login    
ನಿರೀಕ್ಷೆಗಳೊಂದಿಗೆ ಸದಾನಂದ ಗೌಡರ ರೈಲಿನಲ್ಲಿ ಒಂದು ಪಯಣ......

ರೈಲ್ವೆ ಸಚಿವ ಸದಾನಂದ ಗೌಡ

ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ, ಯುಪಿಎ ಸರ್ಕಾರದ ರೈಲ್ವೆ ಪ್ರಯಾಣ ದರ ಪ್ರಸ್ತಾವನೆಯನ್ನು ಜಾರಿಗೊಳಿಸಿ ಶೇ.14ರಷ್ಟು ದರ ಏರಿಕೆ ಮಾಡಿದ ರೈಲ್ವೆ ಮಂತ್ರಿ ಡಿ.ವಿ ಸದಾನಂದ ಗೌಡರ ಮೊದಲ ರೈಲ್ವೆ ಬಜೆಟ್ ಜು.8ರಂದು ಮಂಡನೆಯಾಗಲಿದೆ.

ಪ್ರಯಾಣ ದರದ ಜೊತೆ ಜೊತೆಗೇ ಜನರ ನಿರೀಕ್ಷೆಯೂ ಸಹ ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನತೆಗೆ ಮತ್ತೊಮ್ಮೆ ಪ್ರಯಾಣ ದರ ಏರಿಕೆ ಮಾಡಿರುವ ರೈಲ್ವೆ ಸಚಿವರು ವಾಸ್ತವಿಕ ವಿಧಾನ ಅಳವಡಿಸಿಕೊಳ್ಳುವ ಮೂಲಕ ಹದಗೆಟ್ಟಿರುವ ರೈಲ್ವೆ ಇಲಾಖೆಯನ್ನು ಮರಳಿ ಟ್ರಾಕ್ ಗೆ ತರಬಹುದೆಂಬ ಅಗಾಧ ನಿರೀಕ್ಷೆ ದೇಶವ್ಯಾಪಿ ಹರಡಿದೆ. ಸದಾನಂದ ಗೌಡರ ಮೊದಲ ರೈಲ್ವೆ ಬಜೆಟ್ ನಿರೀಕ್ಷೆಗಳನ್ನು ಸ್ಥೂಲವಾಗಿ ಗಮನಿಸುವುದಾದರೆ ಎಲ್ಲಾ ರೀತಿಯಿಂದಲೂ ಕರ್ನಾಟಕ ರಾಜ್ಯದ ನಿರೀಕ್ಷೆಯೇ ಅತಿ ಹೆಚ್ಚು.

ಜಾಫರ್ ಷರೀಫ್ ಹೊರತುಪಡಿಸಿ ಇತ್ತೀಚಿನ ದಶಕಗಳಲ್ಲಿ ಕರ್ನಾಟಕದಿಂದ ರೈಲ್ವೆ ಮಂತ್ರಿಯಾಗಿದ್ದವರು ಕೆ.ಹೆಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ, ಈ ಮಂತ್ರಿಗಳ ಅವಧಿಯಲ್ಲಿ ರಾಜ್ಯಕ್ಕೆ ಬಹುದೊಡ್ಡ ಕೊಡ್ಡ ಕೊಡುಗೆಯೇನು ಬಂದಿರಲಿಲ್ಲ. ಹಾಗೆಯೇ ಹಗರಣಗಳಿಗೇ ಹೆಸರುವಾಸಿಯಾಗಿದ್ದ ಯುಪಿಎ ಸರ್ಕಾರದಲ್ಲಿದ್ದ ಕಾರಣ ಯಾವ ನಿರೀಕ್ಷೆಗೂ ಅವಕಾಶವಿರಲಿಲ್ಲ. ಆದರೆ ಭಾರತದ ಭವಿಷ್ಯವನ್ನು ಬದಲಾಯಿಸುವ ಪಣತೊಟ್ಟು ಬಂದಿರುವ ನರೇಂದ್ರ ಮೋದಿ ಮೇಲೆ ದೇಶದ ಜನತೆಯ ನಂಬಿಕೆ ಇಟ್ಟು ಬಹುಮತ ನೀಡಿದ್ದಾರೆ. ಅಂತೆಯೇ ನರೇಂದ್ರ ಮೋದಿ ಸಹ ಸದಾನಂದ ಗೌಡರ ಮೇಲೆ ಅಪಾರವಾದ ನಂಬಿಕೆಯಿಟ್ಟು ರೈಲ್ವೆ ಖಾತೆ ನೀಡಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಸದಾನಂದ ಗೌಡರಿಗೆ, ಇಲ್ಲಿನ ರೈಲ್ವೆ ಸಮಸ್ಯೆಗಳ ಬಗ್ಗೆ ಪ್ರತ್ಯೇಕ ಪರಿಚಯ ಬೇಕಿಲ್ಲ. ಮಂಗಳೂರು, ಹಾಸನ ಕೊಡಗು, ಚಿಕ್ಕಮಗಳೂರು ಹೆಸರಿಗೆ ಜಿಲ್ಲೆಗಳು ಸಂದರ್ಶಿಸುವುದಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಅತ್ಯದ್ಭುತ ಪ್ರವಾಸಿ ತಾಣಗಳು. ಆದರೆ ರಾಜ್ಯ ರಾಜಧಾನಿಯಿಂದ ಈ ಭಾಗಗಳಿಗೆ ಹೇಳಿಕೊಳ್ಳುವಂತಹ ರೈಲು ಸಂಪರ್ಕ ಇಲ್ಲ. ಒಂದು ವೇಳೆ ಈ ಭಾಗಗಳಿಗೆ ರೈಲು ಸಂಪರ್ಕ ಉತ್ತಮವಾಗಿದ್ದಲ್ಲಿ ಪ್ರವಾಸಿಗರಿಗೆ ಅನುಕೂಲವಾದೀತು ಎಂಬ ನಿರೀಕ್ಷೆ ಇದೆ.

ಸಕಲೇಶಪುರದಿಂದ ಮಂಗಳೂರು ಮಾರ್ಗಕ್ಕೆ ಹೆಚ್ಚಿನ ರೈಲು ಘೋಷಿಸುವುದಕ್ಕೂ ಭಾರಿ ಬೇಡಿಕೆ ಇದೆ. ಸದಾನಂದ ಗೌಡರೂ ಕರಾವಳಿ ಪ್ರದೇಶದವರೇ ಆದ ಕಾರಣ ಈ ಭಾಗಗಳಿಗೆ ಹೆಚ್ಚಿನ ರೈಲು ಸಂಪರ್ಕ ನಿರೀಕ್ಷಿಸಬಹುದು. ಇನ್ನು ರಾಜಧಾನಿ ಬೆಂಗಳೂರಿನಿಂದ ಗಡಿ ನಾಡು ಚಾಮರಾಜನಗರ, ಹೊಸಪೇಟೆ, ಹರಿಹರ-ದಾವಣಗೆರೆಗೂ ಹೆಚ್ಚಿನ ರೈಲುಗಳನ್ನು ನಿರೀಕ್ಷಿಸಲಾಗುತ್ತಿದೆ.

ಮಂಗಳೂರು- ಹೌರಾ ವಿವೇಕ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರ ಮಂಗಳೂರು- ಜಮ್ಮು ಥಾವಿ ನವ್ ಯುಗ್ ಎಕ್ಸ್ ಪ್ರೆಸ್ ಎರಡು ವಾರಕ್ಕೊಮ್ಮೆ ಸಂಚಾರಕ್ಕೆ ಜನತೆ ಮನವಿ ಮಾಡಿದ್ದಾರೆ. ರೈಲ್ವೆ ಸಚಿವರು ಇದನ್ನು ಎಷ್ಟರ ಮಟ್ಟಿಗೆ ಪರಿಗಣಿಸಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

ಇವೆಲ್ಲಕ್ಕಿಂತಲೂ ಪ್ರಮುಖ ಅಂಶಗಳೆಂದರೆ ಯೋಜನೆಗಳಿಗೆ ಹಣ ಕೃಡೀಕರಣ, ಬಜೆಟ್ ಸಂದರ್ಭದಲ್ಲಿ ಪೇಪರ್ ಮೇಲೆ ಎಥೇಚ್ಛವಾಗಿ ಹಣದ ಹೊಳೆಯನ್ನು ಹರಿಸಬಹುದು. ಆದರೆ ರೈಲ್ವೆ ಇಲಾಖೆಯ ಸದ್ಯದ ಪರಿಸ್ಥಿತಿ ಗಮನಿಸಿದರೆ, ರೈಲುಗಳ ಆಧುನಿಕರಣ, ಯೋಜನೆಗಳ ಅನುಷ್ಠಾನ ವಿಷಯದಲ್ಲಿ ಸವಾಲು ಎದುರಾಗುವುದು ಖಂಡಿತ. ಇದಕ್ಕಾಗಿ ಮೋದಿ ನೇತೃತ್ವದ ಸರ್ಕಾರ ವಿದೇಶಿ ಹೂಡಿಕೆ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಇದೆ.

'ಡೈಮಂಡ್ ಕ್ವಾಡ್ರಿಲ್ಯಾಟೆರಲ್ : ಎನ್.ಡಿ.ಎ ಸರ್ಕಾರದ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ರಸ್ತೆಗಳನ್ನು ಸುವರ್ಣ ಚತುಷ್ಪಥವನ್ನಾಗಿ ಮಾಡಿ ಗಮನ ಸೆಳೆದಿದ್ದರು. ಇದೀಗ ಎನ್.ಡಿ.ಎ ಸರ್ಕಾರದ ಮತ್ತೋರ್ವ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ರೈಲು ಸಂಚಾರದಿಂದ ಬೆಸೆಯಲು ಹೊರಟಿದ್ದು ಸುವರ್ಣ ಚತುಷ್ಪಥದಂತೆಯೇ ರೈಲ್ವೆಯಲ್ಲಿ ಡೈಮಂಡ್ ಕ್ವಾಡ್ರಿಲ್ಯಾಟೆರಲ್ ಹೈ-ಸ್ಪೀಡ್ ರೈಲು ಸಂಚಾರಕ್ಕೆ ಅನುದಾನ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿಯೇ ಇದೆ.

ಒಟ್ಟಾರೆ ಮೋದಿ ಸರ್ಕಾರದ ಮೊದಲ ರೈಲ್ವೇ ಬಜೆಟ್ ನಲ್ಲಿ ಪ್ರವಾಸೋದ್ಯಮವನ್ನು ಬೆಸೆಯಬಲ್ಲ ರೈಲು ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ಸೇರಿದಂತೆ ರೈಲ್ವೆ ಇಲಾಖೆ ಚಿತ್ರಣ ಬದಲಾಯಿಸಲು ಬುನಾದಿಯಾಗಬಲ್ಲ ಯೋಜನೆಗಳ ಬಗ್ಗೆ ಹಲವು ನಿರೀಕ್ಷೆಗಳಿವೆ.

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited