Untitled Document
Sign Up | Login    
ಪೊಲೀಸರಿಗೂ ಅಭದ್ರತೆಯ ದೌರ್ಭಾಗ್ಯ, ಕರ್ನಾಟಕಕ್ಕೂ ಬಂದಿತೆ ಜಂಗಲ್ ರಾಜ್ ಭಾಗ್ಯ!

ಗೃಹ ಸಚಿವ ಕೆ.ಜೆ ಜಾರ್ಜ್

ಜಂಗಲ್ ರಾಜ್ ಖ್ಯಾತಿಯ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಆಡಳಿತ, ಅಭಿವೃದ್ಧಿ ವೈಖರಿ ಬಗ್ಗೆ ಇಂದಿಗೂ ಜನರಿಗೆ ಮನರಂಜನೆ ನೀಡುವ ಜೋಕುಗಳಿವೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಒಮ್ಮೆ, ಉದ್ಯಮ ಅಭಿವೃದ್ಧಿ ಸಂಬಂಧಿಸಿದಂತೆ ಚರ್ಚೆ ನಡೆಸಲು ಬಿಹಾರಕ್ಕೆ ಜಪಾನಿನ ನಿಯೋಗವೊಂದು ಆಗಮಿಸಿರುತ್ತದೆ. ಬಿಹಾರ ರಾಜ್ಯವನ್ನು ಮೆಚ್ಚಿದರೂ ಅದರ ದೌರ್ಭಾಗ್ಯಕ್ಕೆ ಮನದಲ್ಲೇ ನೊಂದ ಜಪಾನಿನ ರಾಯಭಾರಿ, ನಮಗೆ 3 ವರ್ಷ ಅವಕಾಶ ನೀಡಿ, ಬಿಹಾರವನ್ನು ಜಪಾನಿನಂತೆ ಅಭಿವೃದ್ಧಿಪಡಿಸಿ ಮಾರ್ಪಾಡು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಲಾಲೂ ಪ್ರಸಾದ್ ಬಳಿ ಮನವಿ ಮಾಡುತ್ತಾರೆ. ಆಶ್ಚರ್ಯಗೊಂಡ ಲಾಲೂ, ನೀವು ಜಪಾನಿಯರು ತುಂಬಾ ಅಸಮರ್ಥರು, ನನಗೆ ಕೇವಲ 3 ತಿಂಗಳ ಅವಕಾಶ ಕೊಡಿ, ನಿಮ್ಮ ಜಪಾನನ್ನು ಬಿಹಾರದಂತೆ ಮಾರ್ಪಾಡು ಮಾಡುತ್ತೇನೆ ಎಂದು ಜಪಾನಿನ ರಾಯಭಾರಿಗೆ ಹೇಳುತ್ತಾರೆ!.

ಸುದೀರ್ಘ ನಿದ್ದೆಯಿಂದ ತಕ್ಷಣವೇ ಎಚ್ಚರಗೊಂಡು, ವಾಸ್ತವದ ಪ್ರಜ್ನೆಯೇ ಇಲ್ಲದೇ ಏನನ್ನೋ ಮರೆತವರಂತೆ ಸಾಮಾಜಿಕ ನ್ಯಾಯ, ಅಹಿಂದ ಎಂಬಿತ್ಯಾದಿ ಪದಗಳನ್ನು ಮಾತ್ರ ಕನವರಿಸುವ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ನೋಡಿದರೂ ಜಂಗಲ್ ರಾಜ್ ನ ನೆರಳು ಒಂದು ಕ್ಷಣವಾದರೂ ಕಣ್ಮುಂದೆ ಸಾಗಿಹೋಗದೇ ಇರದು.
ಹಿಡಿತವಿರಬೇಕಿದ್ದ ಜಾಗದಲ್ಲಿ ಹಿಡಿತ ಕಳೆದುಕೊಂಡು, ಅನಗತ್ಯವಾಗಿ ಯೋಜನೆಗಳ ಹೆಸರಿನಲ್ಲೇ ರಾಜ್ಯದ ಜನರಿಗೆ ಭಾಗ್ಯಗಳನ್ನು ಕಲ್ಪಿಸುತ್ತಿರುವ ಸಿದ್ದರಾಮಯ್ಯ ಸರ್ಕಾರದ ಆಡಳಿತದಿಂದ ಸುವರ್ಣ ಕರ್ನಾಟಕಕ್ಕೆ ಜಂಗಲ್ ರಾಜ್ ದೌರ್ಭಾಗ್ಯ ಬಂದೊದಗಿದೆಯೇನೋ ಅನಿಸುತ್ತಿದೆಯೇ? ಹೌದೆನ್ನುತ್ತಿದೆ ಇತ್ತೀಚಿನ ಬೆಳವಣಿಗೆಗಳು. ಸಿಕ್ಕಸಿಕ್ಕಲ್ಲೆಲ್ಲಾ ದಾಂಧಲೆ, ಹಲ್ಲೆ, ಅದು ಯಾರ ಮೇಲೆ? ರೌಡಿ ಶೀಟರ್ ಗಳ ನಡುವೆಯೋ, ಸಾಮಾನ್ಯ ಜನರ ನಡುವೆಯೋ ಅಥವಾ ಶಾಲೆಗಳಲ್ಲಿ ಹುಡುಗಾಟಿಕೆಯಿಂದ ನಡೆಯುವ ಹೊಡೆದಾಟವಲ್ಲ. ಹಲ್ಲೆಯಾಗುತ್ತಿರುವುದು, ದಾಂಧಲೆ ನಡೆಯುತ್ತಿರುವುದು ಸಾಮಾನ್ಯ ಜನರು ತಮಗೆ ತೊಂದರೆಯಾದಲ್ಲಿ ಬಂದು ದೂರು ನೀಡಬೇಕಾದ ಪೊಲೀಸರ ಮೇಲೆಯೇ!

ಪಾಕೆಟ್ ಕಾರ್ಟೂನ್ ಗಳಂತಿರುವ ಒಂದಷ್ಟು ಯುವಕರು ಐಷಾರಾಮಿ ಕಾರುಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿ ಎಸ್.ಐಗೇ ಆವಾಜ್ ಹಾಕುವ ಮಟ್ಟಿಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಯಲ್ಲಿದೆ. ಸರಿಯಾಗಿ ಮೀಸೆ ಚಿಗುರದ ಹುಡುಗರೂ ಪದವಿ ಪಡೆದು 10-15 ವರ್ಷ ವೃತ್ತಿ ಜೀವನ ನಡೆಸಿದ ಎಸ್.ಐ ಗೆ ಧಮಕಿ ಹಾಕಿ 'ಮನೆಗೆ' ಕಳಿಸುವ ಧಾಷ್ಟ್ರ್ಯ ಪ್ರದರ್ಶಿಸುವಷ್ಟು ಸೊಕ್ಕು ತೋರಿಸಲು ಪೊಲೀಸರೇನು ಇವರ ಮನೆಯ ಕೆಲಸದಾಳುಗಳೇ? After all ಐಷಾರಾಮಿ ಕಾರುಗಳಿದ್ದ ಮಾತ್ರಕ್ಕೆ ರಸ್ತೆ ತುಂಬಾ ಅಡ್ಡಾದಿಡ್ಡಿ ಚಾಲನೆ ಮಾಡಿ ಪೊಲೀಸರಿಗೇ ಜೀವಬೆದರಿಕೆ ಹಾಕುವುದು ಎಂದರೆ ತಮಾಷೆಯ ಮಾತೇ? ಆಡುವ ಹುಡುಗರು ಪೊಲೀಸರಿಗೆ ಜೀವಬೆದರಿಕೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ರಾಜ್ಯದಲ್ಲಿ ಎಸ್.ಐ. ಹತ್ಯೆಯೂ ಸಂಭವಿಸುತ್ತದೆ, ಮತ್ತಷ್ಟು ಮಲ್ಲಿಕಾರ್ಜುನ ಬಂಡೆಯಂತಹ ನಿಷ್ಠಾವಂತ ಅಧಿಕಾರಿಗಳನ್ನೂ ಕರ್ನಾಟಕ ಕಳೆದುಕೊಳ್ಳಬೇಕಾಗುತ್ತದೆ.
ಹಾಗಾದರೆ ಇದಕ್ಕೆಲ್ಲಾ ಉತ್ತರ ನೀಡಬೇಕಿರುವವರು ಯಾರು? ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಯಾರದ್ದು? ಈ ಎಲ್ಲಾ ಆಗುಹೋಗುಗಳ ಬಗ್ಗೆ ನಿಗಾವಹಿಸಬೇಕಾದ್ದು ಯಾರ ಕರ್ತವ್ಯ?

ಭೂಗತ ಪಾತಕಿ ಮುನ್ನ ಹೆಸರಿನಲ್ಲಿ ಹಾರಿಸಿದ ಪೊಲೀಸ್ ಇಲಾಖೆ ಗುಂಡೇಟಿಗೆ ಎಸ್.ಐ ಮಲ್ಲಿಕಾರ್ಜುನ ಬಂಡೆ ಸಾವು, ರೌಡಿ ಶೀಟರ್ ಆಜಂ ಖಾನ್ ನೊಂದಿಗೆ ಗೃಹ ಸಚಿವರೇ ಗುರುತಿಸಿಕೊಂಡ ಪ್ರಕರಣ, ಎಡಿಜಿಪಿ ರವೀಂದ್ರನಾಥ್ ಪ್ರಕರಣದಲ್ಲಿ ಕೆ.ಎಸ್.ಆರ್.ಪಿ ಸಿಬ್ಬಂಧಿಗಳು ಬೀದಿಗಿಳಿದಿದ್ದು, 3 ಯುವಕರು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಜೀವಬೆದರಿಕೆ ಹಾಕಿದ ಪ್ರಕರಣ, ಲೇಟೆಸ್ಟ್ ಆಗಿ ಕಾಂಗ್ರೆಸ್ ನ ಶಾಸಕರ ಬೆಂಬಲಿಗರು ಪೊಲೀಸ್ ಪೇದೆ ಮೇಲೆ ಹಲ್ಲೆ ಪ್ರಕರಣ, ಇವುಗಳಲ್ಲಿ ಒಂದೇ ಒಂದು ಪ್ರಕರಣದಲ್ಲಾದರೂ ಗೃಹ ಸಚಿವರು ಸರಿಯಾದ ನಿರ್ಧಾರ ಕೈಗೊಂಡಿದ್ದಾರಾ? ಕೊನೆಯ ಪಕ್ಷ ಈ ಪ್ರಕರಣಗಳು ನಡೆದ ಸಂದರ್ಭದಲ್ಲಿ ರಾಜ್ಯಕ್ಕೊಬ್ಬ ಗೃಹ ಸಚಿವರು ಇದ್ದಾರೆ ಅಂತಲಾದರೂ ಅನಿಸಿದೆಯೇ? ಪೊಲೀಸ್ ಪೇದೆ ಮೇಲೆ ಹಲ್ಲೆ ಪ್ರಕರಣದಲ್ಲಿ ನನ್ನನ್ನು ಏನೂ ಪ್ರಶ್ನಿಸಬೇಡಿ, ಹೋಗಿ ಪೊಲೀಸ್ ಠಾಣೆ ಅಧಿಕಾರಿಗಳನ್ನೇ ಕೇಳಿಕೊಳ್ಳಿ ಎಂದು ಮಾಧ್ಯಮಗಳಿಗೆ ಉಢಾಫೆ ನೀಡುವ ಗೃಹ ಸಚಿವರಿಗೆ ಯಾವ ಹೊಣೆಗಾರಿಕೆ ಇದೆ? ಅಲ್ಲಾ, ಒಬ್ಬ ಶಾಸಕನ ವಿರುದ್ಧ ಪೊಲೀಸ್ ಇಲಾಖೆ ಸಿಬ್ಬಂಧಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿರುವುದು ಸಣ್ಣ ವಿಚಾರವೇ? ಪೊಲೀಸ್ ಠಾಣಾಧಿಕಾರಿಗಳನ್ನು ಕೇಳಲು ಇದೇನು ಸಾಮಾನ್ಯನೋರ್ವ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕರಣವೆಂಬ ತಪ್ಪು ಗ್ರಹಿಕೆಯೋ ಅಥವಾ ಹಲ್ಲೆಗೊಳಗಾಗಿರುವುದು ಪೇದೆಯೆಂಬ ತಾತ್ಸಾರ ಮನೋಭಾವವೋ? ಹಲ್ಲೆಗೊಳಗಾಗಿರುವುದು ಪೇದೆಗಳಾದರೂ ಹಲ್ಲೆ ನಡೆಸಿರುವುದು ನಿಮ್ಮದೇ ಪಕ್ಷದ ಒಬ್ಬ ಜನಪ್ರತಿನಿಧಿಯಿಂದ, ಒಂದು ವೇಳೆ ಎಲ್ಲದಕ್ಕೂ ಪೊಲೀಸ್ ಠಾಣಾಧಿಕಾರಿಗಳನ್ನೇ ಕೇಳುವುದಾದರೆ ಗೃಹ ಸಚಿವರು ಏಕೆ ಬೇಕು? ಒಂದು ವೇಳೆ ವಿರೋಧ ಪಕ್ಷದ ಶಾಸಕರ್ಯಾರಾದರೂ ಇದೇ ರೀತಿ ಮಾಡಿದ್ದರೆ ಗೃಹ ಸಚಿವರ ಪ್ರತಿಕ್ರಿಯೆ ಹೀಗೇ ಇರುತ್ತಿತ್ತಾ? ಇಷ್ಟೆಲ್ಲಾ ಆದರೂ ನನ್ನನ್ನು ಕೇಳಬೇಡಿ ಎನ್ನುವ ಬದಲು ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಹೇಳಬಹುದಿತ್ತಲ್ಲಾ....
ಚಿಕ್ಕಮಗಳೂರಿನ ತನಿಕೋಡು ಚೆಕ್ ಪೋಸ್ಟ್ ನಲ್ಲಿ ನಕ್ಸಲ್ ಹಾವಳಿ ಇರುವ ಕಾರಣ ವಾಹನ ತಪಾಸಣೆ ಮಾಡುವುದು ಕಡ್ಡಾಯ. ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಳ್ಳರಿಗೆ ವಾಹನ ತಪಾಸಣೆಯಿಂದ ವಿನಾಯಿತಿ ಇದೆ!. ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳು ತಪಾಸಣೆ ಮಾಡುವ ವಾಹನದಲ್ಲಿ ಸಿದ್ದರಾಮಯ್ಯ ಅವರಿಗೆ, ಗೃಹ ಸಚಿವರಿಗೆ ಆಪ್ಯಾಯಮಾನರಾಗಿರುವ ಬಾಂಧವರು ಇದ್ದರೆ ಅಂತಹ ವಾಹನಗಳನ್ನು ಯಾವುದೇ ಕಾರಣಕ್ಕೂ ತಪಾಸಣೆ ನಡೆಸುವಂತಿಲ್ಲ. ತಪಾಸಣೆ ನಡೆಸಿದರೆ ಅದು ಮಹಾ ಅಪರಾಧ!

ವಾಹನ ತಪಾಸಣೆ ಮಾಡುವುದಕ್ಕೆ ಸಹಕರಿಸದೇ ನಕ್ಸಲ್ ನಿಗ್ರಹ ದಳದ ಗುಂಡೇಟಿಗೆ ಸಿಕ್ಕಿ ಸತ್ತ ಬಾಂಧವ ಕಬೀರ್ ಗೆ 10 ಲಕ್ಷ ರೂ. ಪರಿಹಾರ, ಹುತಾತ್ಮನ ಪಟ್ಟವೂ ದೊರೆಯುತ್ತದೆ. ಭೂಗತ ಪಾತಕಿಯನ್ನು ಮಟ್ಟ ಹಾಕಲು ಹೋದ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆಗೆ ಮಾತ್ರ ಪೊಲೀಸ್ ಇಲಾಖೆಯಿಂದಲೇ ಗುಂಡೇಟು ಫ್ರೀ...

ದರೋಡೆ ಮಾಡುವವರನ್ನು, ನಿಯಮ ಉಲ್ಲಂಘಿಸಿದವರನ್ನು, ಗೋವುಗಳನ್ನು ಕಳ್ಳಸಾಗಣೆ ಮಾಡುವವರನ್ನು ಗೌರವಿಸುವ, ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಾರ್ಜ್ ಅವರಿಗೆ ಕಳ್ಳರು, ರೌಡಿ ಶೀಟರ್ ಗಳೊಂದಿಗೆ ಫೊಟೋ ಸೆಷನ್ ನಡೆಸುವುದನ್ನು ಬಿಟ್ಟರೆ ಬೇರೇನು ಗೊತ್ತು? ಅದಕ್ಕೇ ಇರಬೇಕು ರಾಜ್ಯದಲ್ಲಿ ಏನಾದರೂ ಗಂಭೀರ ಪ್ರಕರಣಗಳು ನಡೆದಾಗ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಬಾಯಿಗೆ ಮೈಕ್ ಇಟ್ಟರೆ ಬರುವುದೊಂದೇ ಉತ್ತರ, ನಮಗೇನು ಗೊತ್ತಿಲ್ಲ, ನಮ್ಮನ್ನೇನೂ ಪ್ರಶ್ನಿಸಬೇಡಿ ಎಂಬುದು. ಅಧಿಕಾರವಿದ್ದರೂ ಹೊಣೆಗೇಡಿಗಳಂತೆ ವರ್ತಿಸುತ್ತಿರುವ ಸರ್ಕಾರದ ನಂ.2ನೇ ಸ್ಥಾನದಲ್ಲಿರುವ ಗೃಹ ಸಚಿವರಿಂದ ಪೊಲೀಸ್ ಇಲಾಖೆಗೆ ರಕ್ಷಣೆ ನೀಡಲು ಸಾಧ್ಯವಾಗದೇ ಇದ್ದ ಮೇಲೆ ಇನ್ನು ಸಾಮಾನ್ಯ ಜನರ ಗತಿಯೇನು? ಗೃಹ ಸಚಿವರ ಕರ್ನಾಟಕವೂ ಉತ್ತರಪ್ರದೇಶ, ಬಿಹಾರದಂತೆ ಜಂಗಲ್ ರಾಜ್ ಆಗುವುದಿಲ್ಲ ಎಂಬುದಕ್ಕೆ ಖಾತ್ರಿ ಏನು?

ಮಾತೆತ್ತಿದರೆ ಸಾಮಾಜಿಕ ಬದ್ಧತೆಯೆಂದು ಭಾಷಣ ಬಿಗಿಯುವ ಗೃಹ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೊಲೀಸ್ ಇಲಾಖೆಯ ಸಿಬ್ಬಂಧಿ ಮೇಲೆ ಹಲ್ಲೆ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳಲು ಬದ್ಧತೆ ಇಲ್ಲ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ತಿಳಿಯುತ್ತದೆ.

ಪೊಲೀಸ್ ಇಲಾಖೆಯನ್ನೇ ನಿಭಾಯಿಸಲು ಸಾಧ್ಯವಾಗದೇ ಇದ್ದವರು ಇನ್ನು ಸಾಮಾಜಿಕ ಬದ್ಧತೆ ನೀಡಲು ಹೇಗೆ ತಾನೆ ಸಾಧ್ಯವಾದೀತು? ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದರೂ ಇಲಾಖೆಗಳನ್ನು ಸಮರ್ಥವಾ ನಿಭಾಯಿಸಲು ಸಾಧ್ಯವಾಗದೇ ಆಡಳಿತ ವೈಫಲ್ಯದಿಂದ ಪರೆದಾಡುತ್ತಿರುವವರು ಜನಸಾಮಾನ್ಯರಿಗೆ ಭದ್ರತೆ ನೀಡಲು ಹೇಗೆ ತಾನೆ ಸಾಧ್ಯ? ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ ಜಾರ್ಜ್ ಅವರ ಹೊಣೆಗೇಡಿತನ ಹೀಗೆ ಮುಂದುವರೆದಲ್ಲಿ ಲಾಲೂ ಪ್ರಸಾದ್ ಯಾದವ್ ಜೋಕ್, ಸುವರ್ಣ ಕರ್ನಾಟಕದ ಮಟ್ಟಿಗೆ ನಿಜವಾಗುವ ಕಾಲ ದೂರ ಉಳಿದಿಲ್ಲ. ಜಂಗಲ್ ರಾಜ್ ಭಾಗ್ಯ ರಾಜ್ಯಕ್ಕೂ ಕಾಲಿಟ್ಟರೆ ನೆಮ್ಮದಿಗೆ ಉಳಿಗಾಲವಿಲ್ಲ, ಎಚ್ಚರ!

 

Author : ಶ್ರೀನಿವಾಸ್ ರಾವ್

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited