Untitled Document
Sign Up | Login    
ಐದು ಮತ್ತೊಂದರ್ಧ ಮುಖ್ಯಮಂತ್ರಿಗಳಿದ್ರೂ ಉತ್ತರಪ್ರದೇಶ ನಿಭಾಯಿಸೋಕಾಗ್ತಿಲ್ಲವಂತೆ!

.

ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅಧಿಕಾರ ಸ್ವೀಕರಿಸಿದ ಬಳಿಕ ಅಲ್ಲಿ ಮಹತ್ವದ ಬದಲಾವಣೆಯಾಗಿದೆಯಂತೆ. ಪರಿಣಾಮ ಆಡಳಿತವಲಯದಲ್ಲಿ ಈ ಬಗ್ಗೆ ಒಂದು ಜೋಕ್ ಕೂಡಾ ಚಾಲ್ತಿಗೆ ಬಂದಿದೆ. ಅದೇನಪ್ಪಾ ಅಂದರೆ, ಉತ್ತರಪ್ರದೇಶಕ್ಕೆ ಈಗ ಐದು ಮತ್ತೊಂದು ಅರ್ಧ ಹೀಗೆ ಐದೂವರೆ ಮುಖ್ಯಮಂತ್ರಿಗಳಂತೆ. ಇವರು ಯಾರ್ಯಾರು ಎಂದರೆ, ಆಡಳಿತಾರೂಢ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಅವರ ಸಹೋದರ ಶಿವಪಾಲ್ ಯಾದವ್, ಇನ್ನೊಬ್ಬ ಸಹೋದರ ರಾಮಗೋಪಾಲ್ ಯಾದವ್, ಸಚಿವ ಆಜಂ ಖಾನ್ ಹಾಗೂ 1990ರ ಬ್ಯಾಚಿನ ಐಎಎಸ್ ಅಧಿಕಾರಿ, ಸಿಎಂಗೆ ಕಾರ್ಯದರ್ಶಿಯೂ ಆಗಿರುವ ಅನಿತಾ ಸಿಂಗ್ ಹೀಗೆ ಐವರು ಸಿಎಂಗಳು. ಇನ್ನು ಉಳಿದ ಅರ್ಧ ಯಾರು ಎಂದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರುವ ಅಖಿಲೇಶ್ ಯಾದವ್ ಅಂತೆ!. (http://m.outlookindia.com/story.aspx/?sid=4&aid=287328)

ನೇರವಾಗಿ ಇಂಥದ್ದೊಂದು ಉಲ್ಲೇಖ ಈಗೇಕೆ ಎಂದು ಹುಬ್ಬೇರಿಸಬೇಡಿ. ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಹಲವು ನಿದರ್ಶನಗಳಿವೆ. ಅಖಿಲೇಶ್ ಅಧಿಕಾರ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಕೋಮು ಸಂಘರ್ಷಗಳು ನಡೆದವು ಮತ್ತು ನಡೆಯುತ್ತಲೇ ಇವೆ. ಮಹಿಳೆಯರ ಮೇಲಿನ ದೌರ್ಜನ್ಯವೂ ಹೆಚ್ಚಾಗಿದೆ. ಆರಂಭದ ಉಲ್ಲೇಖ ಮುಜಫರನಗರ ಕೋಮು ಸಂಘರ್ಷ ಹಾಗೂ ದುರ್ಗಾಶಕ್ತಿ ಎಂಬ ಅಧಿಕಾರಿ ಅನಧಿಕೃತ ಮಸೀದಿ ತೆರವಿಗೆ ಆದೇಶ ನೀಡಿದ ಘಟನೆ ಬೆನ್ನಲ್ಲೇ ಹುಟ್ಟಿಕೊಂಡ ಜೋಕ್. ಅದು ಈಗಲೂ ಪ್ರಸ್ತುತವೆನಿಸುವಂತಿದೆ.

ನಿಜ. ಎರಡು ವರ್ಷ ಹಿಂದೆ ಅಖಿಲೇಶ್ ಯಾದವ್ ಉತ್ತರಪ್ರದೇಶದ ಮುಖ್ಯಮಂತ್ರಿಯಾದಾಗ ಎಲ್ಲರಲ್ಲೂ ಅವರ ಬಗ್ಗೆ ಬಹಳ ನಿರೀಕ್ಷೆಗಳಿದ್ದವು. ಅಲ್ಲಿ ಅವರೊಂದಿಷ್ಟು ಬದಲಾವಣೆ ತರಬಹುದೆಂಬ ಭರವಸೆಯೂ ಇತ್ತು. ಎಲ್ಲದಕ್ಕಿಂತ ಹೆಚ್ಚಾಗಿ, ಅಖಿಲೇಶ್ ಯಾದವ್ ನಮ್ಮ ಮೈಸೂರಿನ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ಓದಿದ್ದು ಎಂಬ ಆಪ್ತತೆಯೂ ಕರ್ನಾಟಕದವರಾದ ನಮಗಿತ್ತು. ಹಾಗಾಗಿ ಪತ್ರಿಕೆಗಳಲ್ಲೂ ಅಖಿಲೇಶ್ ಅವರ ಕರ್ನಾಟಕದ ನಂಟೂ ಸುದ್ದಿಯಾಗಿ ರಾರಾಜಿಸಿತ್ತು. ಯುವ ಮುಖ್ಯಮಂತ್ರಿ ಎಂಬ ಹಣೆಪಟ್ಟಿ ಬೇರೆ. ಇದರೊಂದಿಗೆ "ರಾಜಕೀಯದಲ್ಲಿ ಯುವಕರು ಮುಂದೆ ಬರಬೇಕು, ಅವರ ಕೈಗೆ ಆಡಳಿತ ಚುಕ್ಕಾಣಿ ನೀಡಬೇಕು. ಹಿರಿಯರು ಹಿಂದೆ ನಿಂತು ಮಾರ್ಗದರ್ಶನ ಮಾಡಬೇಕು'' ಎಂದಿದ್ದರು.

ಈ ರೀತಿ ಅಖಿಲೇಶ್ ಪರ ಬ್ಯಾಟಿಂಗ್ ಮಾಡಿದವರೆಲ್ಲ ಈಗ ನಿರಾಸೆಗೊಳಗಾಗಿದ್ದಾರೆ. ಉತ್ತರಪ್ರದೇಶ ಹೇಳಿ ಕೇಳಿ ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದು. ಇಲ್ಲಿ ಆಡಳಿತ ನಡೆಸುವುದು ಸುಲಭದ ಕೆಲಸವಲ್ಲ ಎಂಬುದು ಈಗಾಗಲೇ ಅಖಿಲೇಶ್ ಅವರಿಗೆ ಮನವರಿಕೆಯಾದಂತಿದೆ. ಎರಡು ವರ್ಷದಲ್ಲೇ ಅವರಿಗೆ ಸಾಕಷ್ಟು ಅನುಭವಗಳಾಗಿಬಿಟ್ಟಿವೆ. ಕುಟುಂಬದ ಪ್ರಮುಖರು ಸಚಿವ ಸಂಪುಟದಲ್ಲಿ ಪ್ರಭಾವಿಗಳು. ಅದೇ ರೀತಿ, ಪಕ್ಷದಲ್ಲಿ ತಂದೆ ಮುಲಾಯಂ ಸಿಂಗ್ ಪ್ರಭಾವಿ. ಇವರ ನಡುವೆ, ರಾಜ್ಯದಲ್ಲಿ ದಿನವೂ ಅತ್ಯಾಚಾರ ಪ್ರಕರಣಗಳು, ಕೋಮು ಸಂಘರ್ಷ, ಇವುಗಳ ಜತೆಗೆ ವಿದ್ಯುತ್ ಸಮಸ್ಯೆ ಎಲ್ಲವೂ ಸೇರಿ ಅಖಿಲೇಶರನ್ನು ಹೈರಾಣಾಗಿಸಿವೆ.

ಮುಖ್ಯಮಂತ್ರಿ ಪಟ್ಟಕ್ಕೇರುವ ಸಂದರ್ಭದಲ್ಲಿ ಯುವ ಮುಖ್ಯಮಂತ್ರಿ ಹೆಗ್ಗಳಿಕೆ ಹೊತ್ತ ಅಖಿಲೇಶರ ಮುಖದಲ್ಲಿದ್ದ ಲವಲವಿಕೆ ಈಗಿಲ್ಲ. ಅಲ್ಲಿ ಭ್ರಮನಿರಸನ ಮನೆ ಮಾಡಿದೆ. ಹಾಗೆಂದು ಉತ್ತರಪ್ರದೇಶದ ಈಗಿನ ಸನ್ನಿವೇಶಕ್ಕೆ ಅವರೊಬ್ಬರೇ ಹೊಣೆ ಎಂದಲ್ಲ. ಇವರು ಅಧಿಕಾರ ಚುಕ್ಕಾಣಿ ಹಿಡಿವ ಮುನ್ನ ಪಟ್ಟದಲ್ಲಿದ್ದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸರ್ಕಾರದ ಆಡಳಿತದಿಂದ ಜನ ಬೇಸತ್ತಿದ್ದರು. ಇದಕ್ಕೆ ಪೂರಕವಾಗಿ ಸಮಾಜವಾದಿ ಪಕ್ಷ ಯುವ ಮುಖಂಡ ಅಖಿಲೇಶರನ್ನು ಮುಂದೆ ನಿಲ್ಲಿಸಿ ಚುನಾವಣೆ ಎದುರಿಸಿತ್ತು. ಅವರು ರಾಜ್ಯದ ಜನರಲ್ಲಿ ಹೊಸ ಕನಸು ಬಿತ್ತಿದ್ದರು. ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದರು. ಪರಿಣಾಮ, 2007ರಲ್ಲಿ 97 ಸ್ಥಾನಗಳನ್ನಷ್ಟೇ ಗೆದ್ದಿದ್ದ ಸಮಾಜವಾದಿ ಪಕ್ಷ, 224 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿತು. ಅಖಿಲೇಶ್ ಮುಖ್ಯಮಂತ್ರಿಯೂ ಆದರು. ಇದಕ್ಕೂ ಮುನ್ನ, ಅವರು 2000 (ಉಪಚುನಾವಣೆ), 2004 ಮತ್ತು 2009ರ ಲೋಕಸಭಾ ಚುನಾವಣೆಗಳಲ್ಲಿ ಕನೌಜ್ ಕ್ಷೇತ್ರದಲ್ಲಿ ಗೆದ್ದು ಸಂಸದರಾಗಿದ್ದರು. ಈಗ ಈ ಕ್ಷೇತ್ರವನ್ನು ಅಖಿಲೇಶ್ ಪತ್ನಿ ಡಿಂಪಲ್ ಯಾದವ್ ಪ್ರತಿನಿಧಿಸುತ್ತಿದ್ದಾರೆ.

ಮುಲಾಯಂ ಸೂಪರ್ ಸಿಎಂ: ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆಗಿದ್ದರೂ, ಅವರ ತಂದೆ ಮುಲಾಯಂ ಇಲ್ಲಿ ಸೂಪರ್ ಸಿಎಂ. ಯಾಕೆಂದರೆ, ಸರ್ಕಾರದ ಮೇಲಿನ ಬಿಗಿ ಹಿಡಿತ ಇವರ ಕೈಲೇ ಇದೆ. ಇವರ ಮಾತನ್ನೇ ಅಧಿಕಾರಿಗಳು ಹೆಚ್ಚು ಪಾಲಿಸುತ್ತಾರೆ ಎಂಬ ಮಾತಿದೆ. ಈ ಮುಲಾಯಂ ಎಂಥ ಚಾಲಾಕಿ ಎಂದರೆ, ಸಾರ್ವಜನಿಕ ವೇದಿಕೆಯಲ್ಲಿಯೇ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ವರದಿಯಾಗಿದೆ.

ಮುಜಫರನಗರ ಕೋಮು ಸಂಘರ್ಷ ನಿಯಂತ್ರಣಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳದ ಸರ್ಕಾರ, ಕೊನೆಗೆ ಸಂತ್ರಸ್ತರಿಗೆಂದು ತೆರೆದ ಶಿಬಿರಗಳನ್ನೂ ಸಮರ್ಪಕವಾಗಿ ನಿರ್ವಹಿಸಲಿಲ್ಲ. ಊರೇ ಹೊತ್ತಿ ಉರಿಯುತ್ತಿದ್ದ ವೇಳೆ, ಮುಲಾಯಂ ಊರಾದ ಸೈಫೈನಲ್ಲಿ ಪ್ರತಿವರ್ಷದಂತೆ ಉತ್ಸವ ಏರ್ಪಡಿಸಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಐಎಎಸ್ ಅಧಿಕಾರಿ ದುರ್ಗಾಶಕ್ತಿ ನಾಗಪಾಲ್ ವರ್ಗಾವಣೆ-ಅಮಾನತು ಪ್ರಸಂಗದ ಪೇಚು ಅಖಿಲೇಶರ ಢಾಳಾದ ಕಾರ್ಯವೈಖರಿಯನ್ನು ಬಿಂಬಿಸುತ್ತಲೇ ಬಂದವು. ಅವರ ಮೇಲಿನ ಭರವಸೆಯನ್ನು ಕಡಿಮೆ ಮಾಡಿದವು.

ಆದರೂ ಕಾಲ ಮಿಂಚಿಲ್ಲ. ಈಗಿನ್ನೂ ಅಧಿಕಾರಾವಧಿಯ ಎರಡು ವರ್ಷಗಳಷ್ಟೇ ಮುಗಿದಿವೆ. ಇನ್ನೂ ಮೂರು ವರ್ಷ ಅಧಿಕಾರಾವಧಿಯಿದೆ. ಇನ್ನಾದರೂ, ಅವರು "ಅರ್ಧ ಸಿಎಂ''ನ ಇಮೇಜ್ ಕಳೆದುಕೊಂಡು ಇತರೆ ಅನುಭವಿ ಸಿಎಂಗಳ ಮಾರ್ಗದರ್ಶನ ಪಡೆದು ಪೂರ್ಣಪ್ರಮಾಣದ ಅಧಿಕಾರ ಚಲಾಯಿಸಿ ಸಮರ್ಥ ಆಡಳಿತ ನೀಡಿದರೆ ಒಂದು ಉತ್ತಮ ಸಂದೇಶ ರವಾನಿಸಬಹುದು.

 

Author : ರಾಜಾಗುರು 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited