Untitled Document
Sign Up | Login    
ರೇಲ್ವೆ ಅಭಿವೃದ್ಧಿ, ಗುಜರಿ ಹಾಗೂ ದರ ಏರಿಕೆ!


ರೇಲ್ವೆ ಪ್ರಯಾಣದರ ಏರಿಕೆ ಸುದ್ದಿಯೇ ಈಗ ಎಲ್ಲೆಡೆ ಚರ್ಚೆಯಲ್ಲಿದೆ. ಕರ್ನಾಟಕದವರೇ ಆದ ಡಿ.ವಿ.ಸದಾನಂದ ಗೌಡ ರೇಲ್ವೆ ಸಚಿವರಾಗಿದ್ದಾರೆ. ಪ್ರಯಾಣದರ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡಿರುವ ಸಚಿವರು, ಪ್ರಯಾಣಿಕರ ನಿರೀಕ್ಷೆಗೆ ತಣ್ಣೀರೆರಚಿ, ಆಘಾತ ಎದುರಿಸಲು ಸಜ್ಜಾಗಿ ಎಂಬ ಸಂದೇಶ ರವಾನಿಸಿದ್ದಾರೆ.

ಸಚಿವ ಸದಾನಂದ ಗೌಡರು, ರೇಲ್ವೆ ಪ್ರಯಾಣದರ ಏರಿಕೆ ಮಾಡದೆ ಇದ್ದುದರಲ್ಲೇ ಹೊಂದಾಣಿಕೆ ಮಾಡಿಕೊಂಡು ಸಂಪನ್ಮೂಲ ಕ್ರೋಢೀಕರಿಸಬಹುದೆಂಬ ನಿರೀಕ್ಷೆ ಹಲವರಲ್ಲಿತ್ತು. ಆದರೆ, ಈ ಹಿಂದಿನ ಸರ್ಕಾರದಲ್ಲಿದ್ದ ರೇಲ್ವೆ ಸಚಿವ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಮೇ 16ರಂದು ಅನುಷ್ಠಾನಗೊಳಿಸಲು ಹೊರಟಿದ್ದ ನಿರ್ಣಯವನ್ನಷ್ಟೇ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಸಚಿವ ಸದಾನಂದಗೌಡರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವುದು ಪ್ರಯಾಣಿಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಯುಪಿಎ ಸರ್ಕಾರದ ಕೊನೇ ಘಳಿಗೆಯಲ್ಲಿ ಅಂದಿನ ರೇಲ್ವೆ ಸಚಿವ ಖರ್ಗೆ ಪ್ರಯಾಣದರವನ್ನು ಶೇ.14.2ರಷ್ಟೂ ಹಾಗೂ ಸರಕು ಸಾಗಣೆ ದರವನ್ನು ಶೇಕಡ 6.5ರಷ್ಟು ಹೆಚ್ಚಿಸಲು ತೀರ್ಮಾನಿಸಿದ್ದರು. ಈಗಿನ ಬೆಳವಣಿಗೆ ಪ್ರಕಾರ, ಅಂದು ತಡೆ ಹಿಡಿದಿದ್ದ ಈ ಏರಿಕೆ ಪ್ರಮಾಣ ಮುಂದಿನ ತಿಂಗಳು ಅನುಷ್ಠಾನಕ್ಕೆ ಬರಲಿದೆ.

ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ರೇಲ್ವೆ ಪ್ರಯಾಣದರ ಏರಿಕೆ ಖಂಡಿಸಿ ಓದುಗರ ಪತ್ರಗಳು ಪ್ರಕಟವಾಗಿವೆ. ಇನ್ನು ಕೆಲವು ಲೇಖನಗಳು ಪ್ರಕಟವಾಗಿವೆ. ಯುಪಿಎ ಸರ್ಕಾರ ರೇಲ್ವೆ ಪ್ರಯಾಣದರ ಏರಿಕೆ ಮಾಡಿದಾಗ ಅದನ್ನು ಖಂಡಿಸಿ ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮಾಡಿದ್ದ ಟ್ವೀಟನ್ನು ಕೂಡಾ ಪತ್ರಿಕೆಗಳು ಮರುಪ್ರಕಟಿಸಿ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿವೆ.

ಇಲಾಖೆಯ ಮಾಹಿತಿ ಪ್ರಕಾರ, ಪ್ರತಿದಿನ ರೇಲ್ವೆಗೆ 30 ಕೋಟಿ ರೂ. ನಷ್ಟವಾಗುತ್ತಿದೆ. ಅಂದರೆ ವಾರ್ಷಿಕ 10950 ಕೋಟಿ ರೂ. ನಷ್ಟವಾಗುತ್ತಿದೆ ಎಂದಾಯಿತು. ಈಗಿನ ಲೆಕ್ಕಾಚಾರ ಪ್ರಕಾರ ದರ ಏರಿಕೆಯಿಂದಾಗಿ ಇಲಾಖೆಗೆ ವಾರ್ಷಿಕ 8000 ಕೋಟಿ ರೂ. ಲಾಭವಾಗಲಿದೆ.

ರೇಲ್ವೆ ನಷ್ಟದಲ್ಲಿದೆ ಎಂದು ಹೇಳುವುದೇ ಆದಲ್ಲಿ, ನಷ್ಟ ಯಾಕಾಗಿದೆ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ರೇಲ್ವೆಗೆ ಬರಬೇಕಾದ ಆದಾಯ ಎಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆಹಚ್ಚಬೇಕು. ನಕಲಿ ಟಿಕೆಟ್ ರ್ಯಾಕೆಟ್, ಟಿಕೆಟ್ ರಹಿತ ಪ್ರಯಾಣ ಇವುಗಳಿಗೆ ಕಡಿವಾಣ ಬೀಳಬೇಕು. ಅಷ್ಟೇ ಅಲ್ಲ, ರೇಲ್ವೆ ವ್ಯವಸ್ಥೆ ಸುಧಾರಣೆಯಿಂದ ಲಾಭವಾಗುವುದಿದ್ದಲ್ಲಿ ಅಂತಹ ಅವಕಾಶಗಳ ಬಗ್ಗೆಯೂ ಸರ್ಕಾರ ಗಮನಹರಿಸುವುದು ಒಳಿತು.

ರೈಲ್ವೆ ಇಲಾಖೆ ಮೂಲಗಳ ಪ್ರಕಾರ, ರೇಲ್ವೆ ಬಹುಕಾಲದಿಂದ ಹಳೆಯ ಅನುಪಯೋಗಿ ವಸ್ತುಗಳು ಅರ್ಥಾತ್ ಗುಜರಿ ಮಾರಾಟ ಮಾಡಿಲ್ಲ. ದೇಶಾದ್ಯಂತ ವಿವಿಧೆಡೆ ರೇಲ್ವೆ ವ್ಯಾಪ್ತಿಯಲ್ಲಿ ಮಿಲಿಯನ್ ಟನ್ ಗಟ್ಟಲೆ ಗುಜರಿ ವಸ್ತುಗಳು ಹಾಗೇ ಬಿದ್ದಿವೆ. ಅವುಗಳ ವಿಲೇವಾರಿ ಮಾಡಿದಲ್ಲಿ, ಒಂದಷ್ಟು ಇಡಗಂಟು ಸಿಗುವುದರಲ್ಲಿ ಸಂಶಯವೇ ಇಲ್ಲ. ಸಚಿವರು ಈ ನಿಟ್ಟಿನಲ್ಲೇಕೆ ಗಮನಹರಿಸಿ ಈ ವರ್ಷದ ಮಟ್ಟಿಗೆ ಪ್ರಯಾಣದರ ಏರಿಕೆ ತಡೆಯಬಾರದು?.

 

Author : ರಾಜಾಗುರು 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited