Untitled Document
Sign Up | Login    
ಕೇಂದ್ರ ಸರ್ಕಾರಕ್ಕೆ ‘ಮೋದಿ ಟಚ್’!

ಅಧಿಕಾರಿಗಳಿಗೆ ಹಸ್ತಲಾಘವ ನೀಡುತ್ತಿರುವ ಮೋದಿ

ಕೆಲಸ ಹಂಚಿ ಕೆಲಸ ತೆಗೆದುಕೊಳ್ಳುವುದು ಒಂದು ಕಲೆ. ಅದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿದ್ಧಿಸಿದ ವಿಷಯ ಈಗಾಗಲೇ ಗುಜರಾತಿನಲ್ಲಿ ಸಾಬೀತಾಗಿದೆ. ಈಗ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ನರೇಂದ್ರ ಮೋದಿ ಕಾರ್ಪೊರೇಟ್ ಭಾಷೆಯಲ್ಲಿ ಹೇಳುವುದಾದರೆ ಅವರು ಪ್ರಧಾನಿಯಲ್ಲ, ಭಾರತ ಎಂಬ ಕಂಪನಿಯ ಸಿಇಒ. ಉಳಿದ ಸಚಿವರು ಆಯಾ ವಿಭಾಗದ ಸಿಇಒಗಳು. ಇನ್ನು ಅಧಿಕಾರಿಗಳೇ ಇಲ್ಲಿ ಮುಖ್ಯಪಾತ್ರಧಾರಿಗಳು!

ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಮೋದಿಯವರ ಕಾರ್ಯವೈಖರಿ ಹೇಗಿದ್ದೀತು ಎಂಬ ಕುತೂಹಲ ಎಲ್ಲರಲ್ಲೂ ಸಹಜವಾಗಿಯೇ ಇತ್ತು. ಗುಜರಾತಿನಲ್ಲಿ ಅವರು ಹೇಗೆ ಕೆಲಸ ಮಾಡಿಸಿರಬಹುದೆಂಬ ಕುತೂಹಲ ಸಹಜವಾಗಿಯೇ ದೆಹಲಿಯಲ್ಲಿ ಕುಳಿತ ಅಧಿಕಾರವರ್ಗಕ್ಕೂ ಇತ್ತು. ಇದಕ್ಕೆ ಪೂರಕವಾಗಿ “minimum government and maximum governance’’ ಎಂಬ ಅಜೆಂಡಾವನ್ನು ಮೋದಿ ಬಹಿರಂಗಪಡಿಸಿದರು. ಸಚಿವ ಸಂಪುಟದ ಗಾತ್ರ ಕುಗ್ಗಿಸುವುದಕ್ಕೆ ಏನೇನು ಮಾಡಬಹುದು ವರದಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಕೆಲವು ಪರಸ್ಪರ ಸಂಬಂಧ ಇರುವ ಖಾತೆಗಳನ್ನು ಒಬ್ಬ ಸಚಿವರ ಸುಪರ್ದಿಗೆ ಒಪ್ಪಿಸಿದರು.
ಇದರ ಜತೆಗೆ ಕಳೆದ ಬುಧವಾರ 75 ಸಚಿವಾಲಯಗಳ ಕಾರ್ಯದರ್ಶಿಗಳ ಸಭೆ ಕರೆದರು. ಅಲ್ಲಿ, ಆಡಳಿತದಲ್ಲಿ ಅಧಿಕಾರಿಗಳು ನಿರ್ವಹಿಸಬೇಕಾದ ಪಾತ್ರವೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಈ ಸಭೆಯಲ್ಲಿ ಅಧಿಕಾರಿಗಳು ಹುಬ್ಬೇರಿಸುವಂಥ ಕೆಲವು ಘಟನೆಗಳು ನಡೆದಿವೆ. ಮೊದಲನೆಯದಾಗಿ ಈ ಹಿಂದೆ ಪ್ರಧಾನಿಯಾಗಿದ್ದವರಾರೂ ಈ ರೀತಿ ಅಧಿಕಾರಿಗಳ ಜತೆ ನೇರವಾಗಿ ಮಾತುಕತೆ ನಡೆಸಿರಲಿಲ್ಲ. ಮೋದಿಯವರು ನೋಡಿದರೆ, ಅವರವರ ಇಲಾಖೆಗೆ ಸಂಬಂಧಿಸಿ ಏನಾದರೂ ಹೊಸ ಚಿಂತನೆಗಳಿದ್ದಲ್ಲಿ ನೇರವಾಗಿ ನನ್ನನ್ನು ಭೇಟಿ ಮಾಡಿ ಎಂದಿರುವುದು ಅಧಿಕಾರಿಗಳಲ್ಲಿ ಹೊಸ ಹುರುಪು ಮೂಡಿಸಿದೆ.
ಈ ಸಭೆ ಮುಗಿಸಿ ಹೊರಬಂದ ಅಧಿಕಾರಿಗಳ ಬಾಯಿಯಲ್ಲಿ, ಇದೊಂದು ಹೊಸ ಅನುಭವ. ನಾವಂತೂ ನಮ್ಮ ಇಲಾಖೆಗಳ ಕೆಲಸವನ್ನು ಯಾಂತ್ರಿಕವಾಗಿ ಮಾಡುತ್ತಿದ್ದೆವು. ಹೊಸ ವ್ಯವಸ್ಥೆ ಅಳವಡಿಸುವುದು, ಹೊಸ ಚಿಂತನೆಗಳೊಂದಿಗೆ ಕೆಲಸ ಮಾಡುವುದನ್ನು ಮರೆತೇ ಬಿಟ್ಟಿದ್ದೆವು ಎಂಬ ಮಾತುಗಳು ಕೇಳಿಬಂದಿರುವುದು ಸತ್ಯ.

ಈ ಸಭೆಯಲ್ಲಿ ನಡೆದ ಇನ್ನೊಂದು ವಿಶೇಷವೇನೆಂದರೆ, ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲ ಅಧಿಕಾರಿಗಳಿಗೂ ಹಸ್ತಲಾಘವ ನೀಡಿದರು. ಅವರು ಸಿದ್ಧಪಡಿಸಿ ತಂದಿದ್ದ ಸಂಕ್ಷಿಪ್ತ ಪವರ್ ಪಾಯಿಂಟ್ ಪ್ರಸೆಂಟೇಶನ್ ವೀಕ್ಷಿಸಿದರು. ಅಲ್ಲದೆ, ಈ ವೇಳೆ ಅಧಿಕಾರಿಗಳ ಪ್ರತಿಯೊಬ್ಬರ ಹೆಸರನ್ನೂ ಉಲ್ಲೇಖಿಸಿ ಮಾತನಾಡಿದ್ದು ಇನ್ನಷ್ಟು ಅಚ್ಚರಿಗೆ ಕಾರಣವಾಗಿತ್ತು.

ಮೋದಿ ಎಂದರೆ ಕೆಲಸ !

ಸರ್ಕಾರಿ ನೌಕರರ ಅದರಲ್ಲೂ ಅಧಿಕಾರಿಗಳ ದಿನದ ಕೆಲಸದ ಅವಧಿ ತನ್ನಿಂತಾನೇ ವಿಸ್ತರಿಸಲ್ಪಟ್ಟಿದೆ. ಜವಾಬ್ದಾರಿ ಹೆಗಲೇರಿದೆ. ಈ ನಡುವೆ, ಬೆಳಗ್ಗೆ 9ರಿಂದ ಸಂಜೆ 7ರ ತನಕ ಕೆಲಸದ ಅವಧಿ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ. ಇವನ್ನೆಲ್ಲ ಗಮನಿಸಿದ ಆಡಳಿತಶಾಹಿ ವರ್ಗ ಇದೀಗ “ಮೋದಿ ಎಂದರೆ ಕೆಲಸ’’ ಎಂಬ ತೀರ್ಮಾನಕ್ಕೆ ಬಂದಿದೆ.

ಆಡಳಿತದಲ್ಲಿ ಧನಾತ್ಮಕ ವಾತಾವರಣ ತರಲು ಬಯಸಿರುವ ಮೋದಿ, ಪ್ರತಿಯೊಬ್ಬ ಅಧಿಕಾರಿ ಜತೆಗೆ ಹೀಗೆ ನೇರವಾಗಿ ಮುಕ್ತ ಮಾತುಕತೆ ನಡೆಸಿರುವುದು ಹಲವು ಬದಲಾವಣೆಗೆ ಕಾರಣವಾಗಿರುವುದು ವಾಸ್ತವ. ಅಧಿಕಾರಿಗಳಿಗೆ ಪ್ರಧಾನಿಯವರಿಂದ ಸಿಗುತ್ತಿರುವ ಗೌರವ ಕೂಡಾ ವಿಶೇಷವಾದುದು.

ಪರಿಣಾಮಕಾರಿ ಆಡಳಿತಕ್ಕೆ ತಂತ್ರಜ್ಞಾನ

ತಂತ್ರಜ್ಞಾನ ಬಳಕೆ ವಿಚಾರ ಬಂದಾಗ ಮೋದಿ ಹೆಸರು ತನ್ನಿಂತಾನೆ ಕೇಳಲ್ಪಡುತ್ತದೆ. ಗುಜರಾತಿನ ಆಡಳಿತದಿಂದ ಹಿಡಿದು, ಚುನಾವಣಾ ಪ್ರಚಾರದಲ್ಲಿ ತಂತ್ರಜ್ಞಾನ ಬಳಕೆ ನೋಡಿದವರಿಗೆ ಮೋದಿ ಕೆಲಸ, ಕಾರ್ಯಗಳ ವಿಶೇಷತೆ ಮನದಟ್ಟಾದೀತು. ಅವರು ಅಧಿಕಾರಿಗಳ ಸಭೆಯಲ್ಲೂ ತಂತ್ರಜ್ಞಾನದ ಬಳಕೆ ಬಗ್ಗೆ ಹೇಳಿದ್ದರು. ವಿಶೇಷವಾಗಿ ಅದರಿಂದಾಗುವ ಪ್ರಯೋಜನವನ್ನು ಮನದಟ್ಟು ಮಾಡಿಕೊಟ್ಟರು.

ಅಧಿಕಾರಿಗಳ ಪೈಕಿ ಒಬ್ಬರಿಗಿತ್ತು ವೆಬ್ ಸೈಟ್ !

ಹೌದು.. ಮೋದಿ ಅವರನ್ನು ಇಂಪ್ರೆಸ್ ಮಾಡಿದ ಅಧಿಕಾರಿ ಕೈಗಾರಿಕಾ ನೀತಿ ಮತ್ತು ಪ್ರಮೋಷನ್ ಕಾರ್ಯದರ್ಶಿ ಅಮಿತಾಭ್ ಕಾಂತ್ ಗೆ ಇತ್ತು ವೈಯಕ್ತಿಕ ವೆಬ್ ಸೈಟ್.

ಸಭೆಯ ಬಳಿಕ ಅಮಿತಾಭ್ ಮಾಡಿದ ಟ್ವೀಟ್ ಸಂದೇಶ ಏನಿತ್ತು ಗೊತ್ತೆ? “ಮೊದಲ ಬಾರಿ ನಾನು ನನ್ನ ವೃತ್ತಿ ಜೀವನದಲ್ಲಿ ಮುಕ್ತವಾಗಿ, ಹೆದರದೇ ದೇಶದ ಪ್ರಧಾನಿಯವರ ಜತೆ ಅನಿಸಿಕೆಗಳನ್ನು ಹಂಚಿಕೊಂಡೆ. ಇಷ್ಟೊಂದು ಉತ್ತೇಜನ ಸಿಕ್ಕರೆ ಸಾಕು.. ಹೊಸ ಹೊಸ ಚಿಂತನೆಗಳು ಉಕ್ಕಿ ಹರಿಯಲಿವೆ.’’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದರು.

ಮೋದಿ ಕಾರ್ಯವೈಖರಿ

ಇಷ್ಟೆಲ್ಲ ಉತ್ತೇಜನ ನೀಡುವ ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ. ಪವರ್ ಪಾಯಿಂಟ್ ಪ್ರಸೆಂಟೇಶನ್, ಸಭೆ, ಫಾಲೋ ಅಪ್ ಮೀಟಿಂಗ್ ಹೀಗೆ ಒಂದೇ ಎರಡೆ ದಿನಕ್ಕೆ ಹತ್ತು ಹಲವು ಸಭೆಗಳಲ್ಲಿ ಭಾಗಿಯಾಗುತ್ತಿರುವ ಮೋದಿ ಪೂರ್ಣಪ್ರಮಾಣದ “ವರ್ಕೋಹಾಲಿಕ್ ಕ್ಯಾರೆಕ್ಟರ್’’.

ಬೆಳಗ್ಗೆ 5.30ಕ್ಕೆಲ್ಲಾ ಸಭೆ ನಡೆಸುವ ಪರಿಪಾಠವೂ ಇದೆ ಎಂಬುದನ್ನು ಕೆಲವು ಸಚಿವರು ಬಹಿರಂಗಪಡಿಸಿದ್ದಾರೆ. ಗೃಹಖಾತೆ ರಾಜ್ಯ ಸಚಿವರನ್ನು ಮೋದಿ ಬೆಳಗ್ಗೆ 5.30ಕ್ಕೆ ಕರೆಸಿ ಕೊಂಡಿದ್ದರು. ಅದೇ ರೀತಿ, ಆಹಾರ ಸಂಸ್ಕರಣ ಸಚಿವೆಯನ್ನು ಬೆಳಗ್ಗೆ 9 ಗಂಟೆಗ ಕರೆಸಿ ಸಭೆ ನಡೆಸಿದ್ದರು ಎಂಬುದನ್ನು ಅಧಿಕಾರಿಗಳು ಹೇಳುತ್ತಾರೆ.

ಅದೇ ರೀತಿ ಸ್ವಚ್ಛತೆಗೂ ಆದ್ಯತೆ ನೀಡುವ ಮೋದಿ, ಅದೊಂದು ದಿನ ಒಂದು ಸಚಿವಾಲುಯ ಕಚೇರಿಗೆ ದಿಢೀರ್ ಭೇಟಿ ನೀಡಿದರು. ಆಗ ಅಲ್ಲಿ ಸಿಗರೆಟ್ ಹೊಗೆ ತುಂಬಿರುವುದನ್ನು ಅವರು ಗಮನಿಸಿದರು. ಕೂಡಲೇ ಅವರು ಅಷ್ಟೇ ಸೌಜನ್ಯದಿಂದ ಇಲ್ಲಿ ಯಾಕೆ ನೋ ಸ್ಮೋಕಿಂಗ್ ಬೋರ್ಡ್ ಇಲ್ಲ ಎಂದು ಪ್ರಶ್ನಿಸಿದ್ದರು. ಅಲ್ಲಿದ್ದವರಿಗೆ ಅಷ್ಟೇ ಸಾಕಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಮೋದಿ ಸರ್ಕಾರ್ ಬಂದ ಬಳಿಕ ಅಧಿಕಾರಿಗಳ ವಲಯದಲ್ಲಿ ಒಂದಷ್ಟು ಸಂಚಲನ ಮೂಡಿಸಿರುವುದಂತೂ ವಾಸ್ತವ.

 

Author : ರಾಜಾ ಗುರು 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited