Untitled Document
Sign Up | Login    
ಎನ್ ಜಿ ಒಗಳ ಮೇಲೆ ಕೇಂದ್ರದ ಹದ್ದಿನ ಕಣ್ಣು!

.

ಕೇಂದ್ರ ಗುಪ್ತಚರ ಇಲಾಖೆ ಎನ್ ಜಿ ಒಗಳ ಚಟುವಟಿಕೆ ಬಗ್ಗೆ ಸಂಶಯವ್ಯಕ್ತಪಡಿಸಿ ಕೇಂದ್ರ ಸರ್ಕಾರಕ್ಕೆ ಕಳೆದ ವಾರ ವರದಿ ಸಲ್ಲಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಇದರ ಜೊತೆ ಜೊತೆಗೆ ಪ್ರಧಾನಮಂತ್ರಿ ಕಚೇರಿಯಿಂದಲೂ ಕೇಂದ್ರದ ಎಲ್ಲ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಎನ್ ಜಿ ಒಗಳ ಬಗ್ಗೆ ನಿಗಾವಹಿಸುವಂತೆ ಎರಡು ಬಾರಿ ಪತ್ರ ರವಾನೆಯಾಗಿದೆ ಎಂಬ ಸುದ್ದಿ ಬಹಿರಂಗವಾಗಿದೆ.
ಪ್ರಧಾನ ಮಂತ್ರಿ ಕಚೇರಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ನೃಪೇಂದ್ರ ಮಿಶ್ರಾ ಜೂ.3 ಹಾಗೂ 5ರಂದು ಈ ಪತ್ರಗಳನ್ನು ರವಾನಿಸಿದ್ದಾರೆ.

ಜೂ.3ರಂದು ಕಳುಹಿಸಿದ ಮೊದಲ ಪತ್ರದಲ್ಲಿ, ವಿವಿಧ ಸಚಿವಾಲಯಗಳ ಜತೆ ಕೆಲಸ ಮಾಡುತ್ತಿರುವ ಸ್ವಾಯತ್ತ ಸಂಸ್ಥೆಗಳು ಹಾಗೂ ಎನ್ ಜಿ ಒ ಗಳು ಹಾಗೂ ಅವುಗಳ ಕೆಲಸದ ಮಾಹಿತಿ ಕೇಳಲಾಗಿತ್ತು. ಸಚಿವಾಲಯದ ಯಾವ ಪ್ರಾಜೆಕ್ಟ್ ನಡಿ ಅವು ಕೆಲಸ ಮಾಡುತ್ತಿವೆ, ಹಿನ್ನೆಲೆ, ಮೂಲ ಸೇರಿದಂತೆ ಒಟ್ಟಾರೆ ಅವುಗಳ ಸ್ಥೂಲ ಪರಿಚಯವನ್ನೇ ಕೇಳಲಾಗಿದೆ. ಪಿಎಂಒ ದಿಂದ ಇದೇ ಮೊದಲ ಬಾರಿಗೆ ಇಂತಹ ಮಾಹಿತಿಗಳನ್ನೆಲ್ಲ ಸಂಗ್ರಹಿಸಲಾಗುತ್ತಿದೆ ಎಂಬುದನ್ನೂ ಪಿಎಂಒ ಕಚೇರಿ ಮೂಲಗಳು ದೃಢೀಕರಿಸಿವೆ. ಆದರೆ, ಈ ವಿಚಾರವಾಗಿ ನೃಪೇಂದ್ರ ಮಿಶ್ರಾ ಮಾಧ್ಯಮಗಳಿಗೆ ಯಾವುದೇ ಮಾಹಿತಿ ನೀಡಿಲ್ಲ.

ಇನ್ನು ಜೂ. 5ರಂದು ಕಳುಹಿಸಿದ ಎರಡನೇ ಪತ್ರದಲ್ಲಿ, ಎನ್ ಜಿ ಒಗಳ ಆಡಳಿತ ಮಂಡಳಿಯಲ್ಲಿ ಯರ್ಯಾರಿದ್ದಾರೆ, ಅವರಿಗೆ ಫಂಡಿಂಗ್ ಎಲ್ಲಿಂದ ಬರುತ್ತಿದೆ, ಸಚಿವಾಲಯಗಳ ಜತೆ ಅವುಗಳ ಕೆಲಸ, ಕಾರ್ಯಗಳು ಹೇಗೆ ನಡೆಯುತ್ತಿವೆ, ಎಷ್ಟು ಜನ ವಿದೇಶಿಯರಿದ್ದಾರೆ, ಅವರ ಸಂಪೂರ್ಣ ವಿವರ, ಸಮಾಜದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಏನು? ಫಾರಿನ್ ಕಾಂಟ್ರಿಬ್ಯೂಶನ್ ಆ್ಯಕ್ಟ್ ಪ್ರಕಾರ ಕ್ಲಿಯರೆನ್ಸ್ ಪಡೆದುಕೊಂಡಿದ್ದಾರೆಯೇ? ಅಂತಾರಾಷ್ಟ್ರೀಯ ಫಂಡಿಂಗ್ ಎಲ್ಲೆಲ್ಲಿಂದ ಬರುತ್ತಿದೆ ಎಂಬಿತ್ಯಾದಿ ವಿವರ ಸಂಗ್ರಹಿಸುವಂತೆ ಸೂಚಿಸಲಾಗಿದೆ.

ಗುಪ್ತಚರ ವರದಿಯಲ್ಲೇನಿತ್ತು?

ದೇಶದ ಆರ್ಥಿಕ ಭದ್ರತೆಗೆ ಕೆಲವು ಎನ್ ಜಿ ಒ ಗಳು ಅಪಾಯ ತಂದೊಡ್ಡುವ ಕೆಲಸ ಮಾಡುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಗ್ರೀನ್ ಪೀಸ್, ಗುಜರಾತಿನ ಮಾಲ್ ಧಾರಿ ರೂರಲ್ ಆ್ಯಕ್ಷನ್ ಗ್ರೂಪ್, ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್, ಮೂವ್ ಮೆಂಟ್ ಫಾರ್ ಸೆಕ್ಯುಲರ್ ಡೆಮಾಕ್ರಸಿ ಮತ್ತು ಇತರೆ ಎನ್ ಜಿ ಒಗಳು ಈ ಪಟ್ಟಿಯಲ್ಲಿವೆ ಎಂದು ಗುಪ್ತಚರ ಇಲಾಖೆಯ ಜಂಟಿ ನಿರ್ದೇಶಕ ಎಸ್. ಎ. ರಿಜ್ವಿ ವರದಿ ಸಲ್ಲಿಸಿದ್ದರು.

ಎನ್ ಜಿ ಒಗಳ ನಿರಾಕರಣೆ

ಗುಪ್ತಚರ ವರದಿಯನ್ನು ಎನ್ ಜಿ ಒ ಗಳು ಖಂಡಿಸಿದ್ದು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದರೆ ಇದುವೇನಾ ಎಂದು ಪ್ರಶ್ನಿಸಿವೆ. ಈ ವರದಿ ಎನ್ ಜಿ ಒಗಳಲ್ಲಿ ತಲ್ಲಣ ಉಂಟು ಮಾಡಿದ್ದು, ಬಹಳಷ್ಟು ಪ್ರತಿರೋಧ ವ್ಯಕ್ತಪಡಿಸ ತೊಡಗಿವೆ.

ವರದಿ ಎಫೆಕ್ಟ್?

ಗುಪ್ತಚರ ಇಲಾಖೆಯ ಈ ವರದಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹೀಗಾಗಿಯೇ ಇದರ ಫಾಲೋ ಅಪ್ ಎನ್ನುವಂತೆ ಪಿಎಂಒ ಅಧೀನ ಸಚಿವಾಯಗಳಿಗೆ ಎರಡು ಪತ್ರ ರವಾನಿಸಿದ್ದು ಎಂಬ ಮಾತು ವ್ಯಾಪಕವಾಗಿದೆ.

ಈ ನಡುವೆ, ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಎನ್ ಜಿ ಒ ಗಳಿಗೆ ಪಿಎಂಒ ಕಚೇರಿಯಿಂದ ಪ್ರಶ್ನಾವಳಿ ಪತ್ರ ರವಾನೆಯಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಅವುಗಳ ಉತ್ತರ ಬಂದ ಬಳಿಕ, ಸಚಿವಾಲಯಗಳ ವರದಿ ಆಧರಿಸಿ ಮುಂದಿನ ಕ್ರಮವನ್ನು ಮೋದಿ ಸರ್ಕಾರ ಕೈಗೊಳ್ಳುವ ನಿರೀಕ್ಷೆ ಇದೆ.

ಸರಿಯೋ ತಪ್ಪೋ?

ದೇಶದ ಭದ್ರತೆ ವಿಚಾರ ಬಂದಾಗ, ಅದು ಆರ್ಥಿಕ ಭದ್ರತೆ ಇರಬಹುದು ಅಥವಾ ರಕ್ಷಣಾ ವಿಷಯದ್ದಾಗಿರಬಹುದು ಸರ್ಕಾರ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಹಿತಿ ಕಲೆ ಹಾಕಿದ ಕೂಡಲೇ ಎನ್ ಜಿ ಒಗಳು ಗಲಿಬಿಲಿಗೊಳ್ಳಬೇಕಾದ ಅವಶ್ಯಕತೆ ಏನಿಲ್ಲ. ಎಲ್ಲಾ ಎನ್ ಜಿ ಒಗಳನ್ನು ಸರ್ಕಾರ ನಿಷೇಧಿಸಿದಲ್ಲಿ ಆಗ ಅದನ್ನು ಖಂಡಿಸಬೇಕಾಗುತ್ತದೆ. ಈಗ ಅಂತಹ ಅತಿರೇಕದ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಕಾದು ನೋಡುವ ತಂತ್ರ ಅನುಸರಿಸುವುದು ಲೇಸು.

 

Author : ರಾಜಾ ಗುರು 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited