Untitled Document
Sign Up | Login    
ಚುನಾವಣೆ, ಫಲಿತಾಂಶ ಹಾಗೂ ರಾಜಕಾರಣ

.

ಪ್ರತಿಯೊಂದು ಚುನಾವಣೆ ಮುಗಿದ ಬಳಿಕ ನಮ್ಮ ದೇಶದಲ್ಲಿ ಒಂದಷ್ಟು ರಾಜಕೀಯ ಬೆಳವಣಿಗೆಗಳಾಗುವುದು ಸಹಜ. ಈ ಬಾರಿ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಂಡರಿಯದ ಸೋಲು ಅನುಭವಿಸಿ ಆಘಾತಕ್ಕೆ ಒಳಗಾಗಿದೆ. ಬಿಜೆಪಿಗೂ ಇದೇ ಮೊದಲ ಬಾರಿ ಸ್ಪಷ್ಟ ಬಹುಮತ ಸಿಕ್ಕಿರುವುದರಿಂದ ದೃಢಚಿತ್ತದಿಂದ ಅಧಿಕಾರ ಸ್ಥಾನದಲ್ಲಿ ಕುಳಿತಿದೆ. ಉಭಯ ಪಕ್ಷಗಳಲ್ಲೂ ಈಗ ಪಕ್ಷ ಪುನರ್ ಸಂಘಟನೆ ವಿಷಯ ಚರ್ಚೆಗೊಳಗಾಗುತ್ತಿದೆ.

ನಮ್ಮ ದೇಶದಲ್ಲಿ ಈ ಸಲ(2014 ಮಾರ್ಚ್- ಮೇ) ನಡೆದ ಸಾರ್ವತ್ರಿಕ ಚುನಾವಣೆ 'ಐತಿಹಾಸಿಕ'ವೆಂದು ಪರಿಗಣಿಸಲ್ಪಟ್ಟಿತು. ಇದಕ್ಕೆ ಕಾರಣ ಒಂಭತ್ತು ಹಂತಗಳ ಮತದಾನ ಪ್ರಕ್ರಿಯೆ ಹಾಗೂ ತಂತ್ರಜ್ಞಾನವನ್ನು ಒಳಗೊಂಡ ಪ್ರಚಾರ, ಮತದಾರರು ಸ್ಪಷ್ಟ ಬಹುಮತದೊಂದಿಗೆ ಏಕ ಪಕ್ಷವನ್ನು ಅಧಿಕಾರಸ್ಥಾನದಲ್ಲಿ ಕೂರಿಸಿದ್ದು ಇದಕ್ಕೆ ಕಾರಣ. ಈ ಫಲಿತಾಂಶದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ವಿಚಾರ ವಿಚಾರವನ್ನು ಇತಿಹಾಸದ ಜತೆ ತಳುಕು ಹಾಕಿ ಅವಲೋಕಿಸಿದರೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಂದೆ ಬಹುತೇಕ ಸಮಾನ ಸವಾಲುಗಳಿವೆ.

ಕಳೆದ ಮೂರು ದಶಕಗಳತ್ತ ತಿರುಗಿ ನೋಡಿ. ಬಹುತೇಕ ಮೈತ್ರಿ ರಾಜಕಾರಣ, ಮೈತ್ರಿ ಸರ್ಕಾರದ್ದೇ ಕಾರುಬಾರು. ಸ್ವಾತಂತ್ರ್ಯ ಬಂದ ಆರಂಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯ ಪಕ್ಷವೇ ಇರಲಿಲ್ಲ. ಹೀಗಾಗಿ 1977ರ ತನಕವೂ ಸರಿಯಾದ ವಿಪಕ್ಷವೇ ಇರಲಿಲ್ಲ. ಮೊದಲ ಆಡಳಿತ ಪಕ್ಷ ಹಾಗೂ ಮೊದಲ ಅಧಿಕೃತ ವಿಪಕ್ಷ ಎಂಬ ಕೀರ್ತಿ ಕಾಂಗ್ರೆಸ್ ಪಕ್ಷದ ಪಾಲಾಗಿದೆ.

ಹೆಚ್ಚು ಕಡಿಮೆ ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ದೇಶಾದ್ಯಂತ ಉತ್ತಮ ಜನಬೆಂಬಲ ಇತ್ತು. 1975ರ ತುರ್ತುಪರಿಸ್ಥಿತಿ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗಿತ್ತು. ಅದು 1977ರಲ್ಲಿ. ಜನತಾ ಪಕ್ಷಗಳ ಒಕ್ಕೂಟದ ಸರ್ಕಾರ ಅದಾಗಿತ್ತು. ನಾಯಕರ ಭಿನ್ನಮತದ ಕಾರಣ ಈ ಮೈತ್ರಿ ಸರ್ಕಾರ ಪೂರ್ಣಾವಧಿ ಬಾಳಿಕೆ ಬರಲಿಲ್ಲ. ಮತ್ತೆ ಎರಡು ಅವಧಿಗೆ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಿತು. 90ರ ದಶಕದ ಮಧ್ಯಭಾಗದಲ್ಲಿ ಮತ್ತೆ ಮೈತ್ರಿರಾಜಕೀಯ ಗರಿಗೆದರಿತ್ತು. ಸರ್ಕಾರ ಅಸ್ತಿತ್ವಕ್ಕೆ ಬಂದರೂ ಪೂರ್ಣಕಾಲ ಬಾಳಲಿಲ್ಲ.

ಕೊನೆಗೆ 1999ರಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ರಚನೆಯಾಗಿತ್ತು. ವಾಜಪೇಯಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪಕ್ಷಗಳು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ರಚಿಸಿಕೊಂಡು ಕೇಂದ್ರದಲ್ಲಿ ಆಡಳಿತಸ್ಥಾನದಲ್ಲಿ ಕುಳಿತವು. ಈ ಮೈತ್ರಿಕೂಟ ಪೂರ್ಣಅವಧಿ ಆಳ್ವಿಕೆ ನಡೆಸಿ ಜನಪ್ರಿಯತೆ ಗಳಿಸಿತು. ಆದರೆ, ಮತ್ತೊಂದು ಅವಕಾಶ ಬಿಜೆಪಿ ನೇತೃತ್ವದ ಈ ಮೈತ್ರಿಕೂಟಕ್ಕೆ ಸಿಗಲಿಲ್ಲ. ನಂತರದ ಎರಡು ಅವಧಿ ಕಾಂಗ್ರೆಸ್ ನೇತೃತ್ವದ ಯುಪಿಎ ಪಾಲಾಯಿತು. ಈ ಮೈತ್ರಿಕೂಟ ಸರ್ಕಾರ ಕೂಡಾ ಪೂರ್ಣ ಅವಧಿ ಆಳ್ವಿಕೆ ನಡೆಸಿತು.

ಆದರೆ, ಯುಪಿಎ ಆಳ್ವಿಕೆಯ ಎರಡು ಅವಧಿ ಭ್ರಷ್ಟಾಚಾರ ಹಾಗೂ ಅಸ್ಥಿರ ರಾಜಕೀಯದಿಂದಾಗಿ ಕಳೆದುಹೋಯಿತು. ದೇಶದ ಆರ್ಥಿಕತೆ ಕುಸಿಯಿತು. ಇದು ಬಿಜೆಪಿಗೆ ವರದಾನವಾಯಿತು. ಕಳೆದೊಂದು ದಶಕದಲ್ಲಿ ಗುಜರಾತಿನ ಬಿಜೆಪಿ ಆಡಳಿತ, ಅಲ್ಲಿನ ಅಭಿವೃದ್ಧಿ ದೇಶದ ಹೆಚ್ಚೇಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಯಿತು. ಎರಡು ವರ್ಷಗಳ ಹಿಂದೆಯೇ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಹೆಸರು ಪ್ರಧಾನಮಂತ್ರಿ ಅಭ್ಯರ್ಥಿ ಸ್ಥಾನಕ್ಕೆ ಕೇಳಲ್ಪಟ್ಟಿತ್ತು.

ನೋಡು ನೋಡುತ್ತಿರುವಂತೆ ನರೇಂದ್ರ ಮೋದಿ ದೇಶಾದ್ಯಂತ ಮನೆ ಮಾತಾದರು. ಮೋದಿ ಹವಾ ಬೀಸತೊಡಗಿತು. ಬಿಜೆಪಿಯಲ್ಲೂ ಸಂಘಟನಾತ್ಮಕ ಬದಲಾವಣೆಗಳಾದವು. ರಾಜನಾಥ್ ಸಿಂಗ್ ಮತ್ತೊಮ್ಮೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದರು. ನರೇಂದ್ರ ಮೋದಿಯವರನ್ನು ಹಂತ ಹಂತವಾಗಿ ಮುಂಚೂಣಿಗೆ ತರುವಲ್ಲಿ ರಾಜನಾಥ್ ಸಿಂಗ್ ಪ್ರಮುಖ ಪಾತ್ರವಹಿಸಿದರು.

ರಾಜಕೀಯ ಲೆಕ್ಕಾಚಾರ: ಸತತ ಎರಡು ಅವಧಿಯ ನಿರಂತರ ಸೋಲು ಬಿಜೆಪಿಯ ನಾಯಕತ್ವವನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿತು. ಕಳೆದ 15 ವರ್ಷಗಳ ಮೈತ್ರಿ ಆಡಳಿತದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಇರಲಿಲ್ಲ. ಪಕ್ಷದ ವಿಚಾರಕ್ಕೆ ಬಂದರೆ ಕಾಂಗ್ರೆಸ್ ನಲ್ಲಿ ನೆಹರು ಗಾಂಧಿ ಕುಟುಂಬವೇ ಹೈಕಮಾಂಡ್. ಆದರೆ, ಬಿಜೆಪಿಯಲ್ಲಿ ಹಾಗಲ್ಲ. ಸಂಘಟನಾತ್ಮಕ ರಚನೆ ಇದೆ. ನಿರ್ಧಾರ ತೆಗೆದುಕೊಳ್ಳುವುದಕ್ಕೂ ಒಂದು ಕ್ರಮವಿದೆ. ಇದಕ್ಕೂ ಮೀರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿವಾರ ಸಂಘಟನೆಯಲ್ಲಿ ಬಿಜೆಪಿಯೂ ಒಂದು. ಹೀಗಾಗಿ ಸಂಘ ಇಲ್ಲಿ ಹಿರಿಯ ಯಜಮಾನನಂತೆ. ಇಂತಹ ವಾತಾವರಣದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಸಂಘದ ನಡುವಿನ ಬಾಂಧವ್ಯ ಕೂಡಾ ಪ್ರಾಮುಖ್ಯತೆ ಪಡೆಯುತ್ತದೆ. ಈ ಬಾರಿ ಎಲ್ಲವೂ ಸುಸೂತ್ರವಾಗಿ ನಡೆದಿತ್ತು. ರಾಜನಾಥ್ ಸಿಂಗ್ ಅಧ್ಯಕ್ಷರಾಗುತ್ತಿದ್ದಂತೆ ಎಲ್ಲವೂ ಬದಲಾದವು. ಮೋದಿ ಅಲೆ ಗುರಿತಿಸಿದ ಸಂಘ ಪರಿವಾರ ಒಂದಾಗಿ ಕೆಲಸ ಮಾಡಿತು. ಮತದಾರರ ಮನಮುಟ್ಟುವಲ್ಲಿ ಸಫಲವಾಯಿತು.

ದೇಶದ ಜನತೆ ಕೂಡಾ ಮೈತ್ರಿ ಸರ್ಕಾರಗಳ ಪಡಿಪಾಡಲು, ಅವುಗಳ ರಾಜಕೀಯ ಇಚ್ಛಾಶಕ್ತಿಯ ಕೊರತೆ, ವೀಕ್ನೆಸ್ ಕಂಡು ಬೇಸತ್ತಿದ್ದರು. ಅಷ್ಟೇ ಅಲ್ಲ, ಪ್ರಾದೇಶಿಕವಾಗಿ ರಾಜಕೀಯ ಪಕ್ಷಗಳು ಪ್ರಾಬಲ್ಯ ಪಡೆಯುತ್ತಿರುವ ಬೆಳೆವಣಿಗೆಯಿಂದ ರಾಷ್ಟ್ರದ ಮೇಲಾಗುತ್ತಿರುವ ಪರಿಣಾಮವನ್ನೂ ಅರಿಯತೊಡಗಿದ್ದರು.ಇವೆಲ್ಲದರ ಒಟ್ಟು ಪರಿಣಾಮವೇ ಈ ಬಾರಿಯ ಚುನಾವಣಾ ಫಲಿತಾಂಶ.

ಮತದಾರನ ಲೆಕ್ಕಾಚಾರ: ಚುನಾವಣಾ ಪೂರ್ವದಲ್ಲಿ ಬಿಜೆಪಿ ಪ್ರಾದೇಶಿಕ ಪಕ್ಷಗಳೊಡನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಮತದಾರರು ಬಿಜೆಪಿ ನೇತೃತ್ವದ ಎನ್ ಡಿಎಯನ್ನೇ ಆಯ್ಕೆ ಮಾಡಿದರು. ಅದರಲ್ಲೂ ಬಿಜೆಪಿ ನೀಡಿದ ಸ್ಪಷ್ಟ ಬಹುಮತ, ದೇಶದ ಆಡಳಿತಕ್ಕೆ ಬೇಕಾದ ಕೆಲವು ದೃಢ ನಿರ್ಧಾರಕ್ಕೆ ಪೂರಕ.

ಇತಿಹಾಸದ ಕಡೆಗೆ ತಿರುಗಿದರೆ ತುರ್ತುಪರಿಸ್ಥಿತಿ ಬಳಿಕ ನಡೆದ 1977ರ ಚುನಾವಣೆಯಲ್ಲಿ ಜನತಾ ಪಕ್ಷಗಳ ಒಕ್ಕೂಟದ ಸರ್ಕಾರ ರಚನೆಯಾಯಿತು. ಆದರೆ, ಆಂತರಿಕ ಕಚ್ಚಾಟದಿಂದ ಅವಧಿಪೂರ್ಣಗೊಳಿಸುವ ಮೊದಲೇ ಪತನವಾಯಿತು. ಪರಿಣಾಮ ಏನಾಯಿತು ಎಂದರೆ, ಮತದಾರರು ಕೂಡಲೇ ಎಚ್ಚೆತ್ತುಕೊಂಡು 1979ರ ಚುನಾವಣೆಯಲ್ಲಿ ಇಂದಿರಾಗಾಂಧಿಗೆ ಸ್ಪಷ್ಟ ಬಹುಮತ ನೀಡಿದರು.

ಅದೇ ರೀತಿ ಮತದಾರರು ಈ ಬಾರಿ ನರೇಂದ್ರ ಮೋದಿಯವರಿಗೂ ಸ್ಪಷ್ಟ ಬಹುಮತ ನೀಡುತ್ತಾರೆಂಬ ಸೂಚನೆ ವಿಧಾನಸಭಾ ಚುನಾವಣೆಗಳ ಫಲಿತಾಂಶ ನೀಡಿದ್ದವು. 2009ರ ಹಾಗೂ ನಂತರದ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ ಇದು ಮನವರಿಕೆಯಾದೀತು. ದೆಹಲಿ ಬಿಟ್ಟು ಉಳಿದೆಲ್ಲಾ ರಾಜ್ಯಗಳಲ್ಲೂ ಒಂದು ಪಕ್ಷಕ್ಕೇ ಮತದಾರರು ಬಹುಮತ ನೀಡಿದ್ದಾರೆ. ಇದುವೇ ಲೋಕಸಭಾ ಚುನಾವಣೆಯಲ್ಲೂ ಆವರ್ತನೆಯಾಗಿದೆ.


ಪರಿಣಾಮವೇನು?: ಕೇಂದ್ರದಲ್ಲಿ ಬಿಜೆಪಿಯ ಗೆಲುವಿನೊಂದಿಗೆ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಕುಸಿದಂತೆ ಕಂಡುಬರತೊಡಗಿದೆ. ಜಾತಿ ರಾಜಕಾರಣಕ್ಕೂ ಒಂದು ಮುಕ್ತಾಯ ಕಾಣಬಹುದೆಂಬ ನಿರೀಕ್ಷೆಯೂ ಇದೆ. ಪ್ರಾದೇಶಿಕ ಪ್ರಾಧಾನ್ಯತೆ ಮತ್ತು ರಾಷ್ಟ್ರೀಯ ಪ್ರಾಧಾನ್ಯತೆಯನ್ನು ಮತದಾರರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವೇ ಇದಕ್ಕೆ ಸಾಕ್ಷಿ. ಇಲ್ಲಿ ಕಾಂಗ್ರೆಸ್ ನೆಹರು ಗಾಂಧಿ ಕುಟುಂಬದ ಸೀಟುಗಳನ್ನಷ್ಟೇ ಕಾಯ್ದುಕೊಳ್ಳಲು ಸಫಲವಾಗಿದೆ.

ಮುಂದೇನು?: ಮೋದಿ ನೇತೃತ್ವದಲ್ಲಿ ಸಂಪುಟ ರಚನೆಯಾಗಿದೆ. ಪಕ್ಷ ಸಂಘಟನೆ ಜವಾಬ್ದಾರಿ ಹೊತ್ತ ಪ್ರಮುಖರು ಸಂಪುಟ ಸೇರಿದ್ದಾರೆ. ಭರ್ಜರಿ ಗೆಲುವು ದಾಖಲಿಸಿದ ಬಿಜೆಪಿಯಲ್ಲೂ ಈಗ ಸಂಘಟನಾತ್ಮಕ ಪುನಾರಚನೆಗೆ ಗಮನಕೊಡಬೇಕು. ಸಮರ್ಥರನ್ನು ಆಯ್ಕೆ ಮಾಡಿ ಪಕ್ಷ ಸಂಘಟನೆ ಕೆಲಸ ವಹಿಸಬೇಕು. ಇದೇ ವೇಳೆ, ಆಡಳಿತ ಚುಕ್ಕಾಣಿ ಹಿಡಿದು ಉತ್ತಮ ಕೆಲಸಗಳ ಮೂಲಕ ಜನಮನ್ನಣೆ ಗಳಿಸಬೇಕು. ಗುಜರಾತಿನಲ್ಲಿ ಪಕ್ಷಕ್ಕಿಂತ ಹೆಚ್ಚು ದೊಡ್ಡವರಾಗಿ ಮೋದಿ ಬೆಳೆದರು ಎಂಬ ಆರೋಪವಿದೆ. ಈಗ ಅಲ್ಲಿ ಅವರಿಲ್ಲ. ಹೀಗಾಗಿ ಅವರ ಪಕ್ಷ ಸಂಘಟನೆ ಎಷ್ಟು ಬಲವಾಗಿತ್ತು ಎಂಬುದು ಮುಂದಿನ ವಿಧಾನ ಸಭಾ ಚುನಾವಣೆ ವೇಳೆ ಬಹಿರಂಗವಾದೀತು.

ಕಾಂಗ್ರೆಸ್ ವಿಚಾರಕ್ಕೆ ಬಂದರೆ, ನೆಹರು - ಗಾಂಧಿ ಕುಟುಂಬದ ಕುಡಿ 'ರಾಹುಲ್ ಗಾಂಧಿ'ಯನ್ನೇ ಮುಂದಿಟ್ಟು ಚುನಾವಣೆ ಎದುರಿಸಿದರೂ ಅದು ಫಲಪ್ರದವಾಗಲಿಲ್ಲ. ಈಗ ರಾಹುಲ್ ನಾಯಕತ್ವದ ಬಗ್ಗೆ ವ್ಯಾಪಕ ವಿರೋಧವೂ ಕಂಡುಬಂದಿದೆ. ಹೀಗಾಗಿ ಇಲ್ಲೂ ಪಕ್ಷದ ಸಂಘಟನಾತ್ಮಕ ಪುನಾರಚನೆ ಮಾತುಕತೆ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಈ ಎಲ್ಲ ಬೆಳವಣಿಗೆ ರಾಷ್ಟ್ರ ರಾಜಕಾರಣದಲ್ಲೊಂದು ಹೊಸ ಮಜಲನ್ನು ತೆರೆದಿರುವುದು ವಾಸ್ತವ.

 

Author : ರಾಜಾ ಗುರು 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited