Untitled Document
Sign Up | Login    
ಮೋದಿ ಬಹಿಷ್ಕರಿಸಿದವರು ಬಾಂಧವ್ಯಕ್ಕೆ ಮುಂದಾದ್ರು!

.

ಸೆಪ್ಟೆಂಬರ್ ಅಂತ್ಯಕ್ಕೆ ಮೋದಿ- ಒಬಾಮ ಮಾತುಕತೆ

ಅಂದು ಗುಜರಾತಿನ ಮುಖ್ಯಮಂತ್ರಿಯಾಗಿದ್ರು ನರೇಂದ್ರ ಮೋದಿ. 2002ರಲ್ಲಿ ನಡೆದ ಗೋಧ್ರೋತ್ತರ ಗಲಭೆ ನೆಪವೊಡ್ಡಿ 2005ರಲ್ಲಿ ಅಮೆರಿಕ, ಬ್ರಿಟನ್ ಸೇರಿದಂತೆ ಕೆಲವು ರಾಷ್ಟ್ರಗಳು ನರೇಂದ್ರ ಮೋದಿಗೆ ಬಹಿಷ್ಕಾರ ಹಾಕಿದ್ದವು. 2014ರ ಬದಲಾದ ಸನ್ನಿವೇಶದಲ್ಲಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಜತೆಗೆ ಬಾಂಧವ್ಯ ವೃದ್ಧಿಗೆ ಇದೇ ರಾಷ್ಟ್ರಗಳು ಮುಂದಾಗಿವೆ. ಇದಕ್ಕೆ ಪ್ರಧಾನಮಂತ್ರಿ ಸಚಿವಾಲಯವೂ ಸಕಾರಾತ್ಮಕ ಸ್ಪಂದನೆ ನೀಡಿರುವುದು ಮಹತ್ವದ ಬೆಳವಣಿಗೆ.

ವಾಷಿಂಗ್ಟನ್ ನಲ್ಲಿ ಸೆಪ್ಟೆಂಬರ್ 30ಕ್ಕೆ ದ್ವಿಪಕ್ಷೀಯ ಮಾತುಕತೆ ನಡೆಸಲು ಉದ್ದೇಶಿಸಿದ್ದೇವೆ, ನೀವು ಬರಬೇಕು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಕಳೆದ ತಿಂಗಳು ಆಹ್ವಾನ ಕಳುಹಿಸಿದ್ದರು. ಇದೀಗ ಪ್ರಧಾನಿ ಮೋದಿ ಅಮೆರಿಕದ ಆಹ್ವಾನವನ್ನು ಪರಿಗಣಿಸಿದ್ದಾರೆ. ಆದರೆ, ಅದೇ ದಿನ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಲಿರುವುದರಿಂದ ಮಾತುಕತೆ ದಿನಾಂಕವನ್ನು ಸೆಪ್ಟೆಂಬರ್ 26ಕ್ಕೆ ಹಿಂದೂಡಲು ಭಾರತ ಕೇಳಿಕೊಂಡಿದೆ. ಈ ನಿಟ್ಟಿನಲ್ಲಿ ಮಾತಕತೆ ನಡೆಯುತ್ತಿದೆ. ಒಟ್ಟಿನಲ್ಲಿ ಇದೊಂದು ಸಕಾರಾತ್ಮಕ ವಿಷಯವೆಂಬ ಚರ್ಚೆ ನಡೆಯುತ್ತಿದೆ. ಮೋದಿ- ಒಬಾಮರ ಬಹುನಿರೀಕ್ಷಿತ ಮಾತುಕತೆ ಮೂಲಕ ಎರಡೂ ದೇಶಗಳ ನಡುವಿನ ಬಾಂಧವ್ಯದಲ್ಲಿ ಹೊಸ ಯುಗವೊಂದು ಆರಂಭವಾಗಲಿದೆ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.

ಸಕಾರಣವಿಲ್ಲದೆ ತನ್ನ ಮೇಲೆ ಬಹಿಷ್ಕಾರ ಹೇರಿದ್ದ ಅಮೆರಿಕದ ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬಂತೆ, ಅದರ ಎಲ್ಲ ರೀತಿಯ ನಡೆಗಳಿಗೂ ಬೇಕೋ ಬೇಡವೋ ಎಂಬಂತೆ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿರುವುದಕ್ಕೆ ಅವರ ನಡವಳಿಕೆಯೇ ಪೂರಕ. ಲೋಕಸಭಾ ಫಲಿತಾಂಶ ಪ್ರಕಟವಾದ ಕೂಡಲೇ, ಅಮೆರಿಕದ ವಿದೇಶಾಂಗ ಸಚಿವ ಜಾನ್ ಕೆರ್ರಿ ಅವರು ಮೋದಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಅದೇ ರೀತಿ ಒಬಾಮ ಕೂಡಾ ಕರೆ ಮಾಡಿ ಅಭಿನಂದಿಸಿದ್ದರು. ಇದಕ್ಕೆ ವಿಳಂಬವಾಗಿ ತಣ್ಣನೆ ಪ್ರತಿಕ್ರಿಯೆ ನೀಡಿದ್ದರು. ಈ ನಡುವೆ, ಪ್ರಮಾಣ ವಚನ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸಿ ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದರು. ಅಷ್ಟೇ ಅಲ್ಲ, ಯಾವಾಗ ಅಮೆರಿಕ ತನ್ನ ಮೇಲೆ ನಿಷೇಧ ಹೇರಿತೋ ಅಂದಿನಿಂದಲೇ ಅಮೆರಿಕದ ಬಗ್ಗೆ ಆಸಕ್ತಿ ತೋರುವುದನ್ನೇ ಮೋದಿ ಬಿಟ್ಟುಬಿಟ್ಟಿದ್ದರು. ಪ್ರಧಾನಿಯಾದ ಬಳಿಕವೂ ಮೋದಿ ಇದೇ ನಿಲುವು ಮುಂದುವರಿಸಿದ್ದು ಅಮೆರಿಕಕ್ಕೆ ಭಾರಿ ತಲೆನೋವಾಗಿ ಪರಿಣಮಿಸಿತ್ತು. ಭಾರತದ ನೆರವಿಲ್ಲದೆ ಅಮೆರಿಕ ಏನೂ ಮಾಡಲಾಗದು ಎಂಬುದನ್ನು ಅರಿತಿರುವ ಒಬಾಮ, ಈಗಾಗಲೇ ಆಗಿ ಹೋಗಿರುವ ತಪ್ಪನ್ನು ಸರಿಪಡಿಸಲು ಮುಂದಾಗಿದ್ದಾರೆ. ಹೀಗಾಗಿಯೇ ಅಮೆರಿಕಕ್ಕೆ ಆಗಮಿಸುವಂತೆ ಮೋದಿಗೆ ಆಹ್ವಾನ ನೀಡಲಾಗಿದೆ. ಇದು ಮೋದಿಯವರ ರಾಜತಾಂತ್ರಿಕತೆಗೆ ಸಿಕ್ಕ ಮೊದಲ ಜಯ ಎಂದು ಬಣ್ಣಿಸಲಾಗುತ್ತಿದೆ.

ಅಮೆರಿಕ ಪೀಕಲಾಟಕ್ಕೆ ಸಿಲುಕಿದ್ದು ಹೀಗೆ: ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮರುವರ್ಷವೇ ಮೊದಲ ವಿಧಾನ ಸಭೆ ಚುನಾವಣೆ ಎದುರಿಸಿದ್ದ ಮೋದಿಗೆ 2002 ಭಾರಿ ಸವಾಲಿನ ವರ್ಷವಾಗಿತ್ತು. ಗೋಧ್ರಾ ಹತ್ಯಾಕಾಂಡದ ಬೆನ್ನಲ್ಲೇ ನಡೆದ ಗೋಧ್ರೋತ್ತರ ಗಲಭೆ ಜಗತ್ತಿನ ಗಮನ ಸೆಳೆದಿತ್ತು. ಇದಾಗಿ ಮೂರು ವರ್ಷದ ಬಳಿಕ 2005ರಲ್ಲಿ ಅಮೆರಿಕ ನರೇಂದ್ರ ಮೋದಿ ಅವರ ವೀಸಾ ಮೇಲೆ ನಿರ್ಬಂಧ ಹೇರಿತ್ತಲ್ಲದೇ, ಅಧಿಕೃತ ಬಹಿಷ್ಕಾರವನ್ನೂ ಹಾಕಿತ್ತು. ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಮೋದಿ ಹೆಸರು ಚಾಲ್ತಿಗೆ ಬಂದಾಗಲೇ ಅಮೆರಿಕದ ಆಡಳಿತಕ್ಕೆ ಕೊಂಚ ಬಿಸಿ ಮುಟ್ಟಿತ್ತು. ಆದರೂ, ವೀಸಾ ನಿಷೇಧ ಹಿಂಪಡೆಯಬೇಕು ಎಂಬ ಆಗ್ರಹ ಜೋರಾಗಿ ಕೇಳಿದಾಗ, ಮೋದಿ ಅರ್ಜಿ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂಬ ತಣ್ಣನೆ ಪ್ರತಿಕ್ರಿಯೆ ನೀಡಿತ್ತು. ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದ ಬಳಿಕ, 2014ರ ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ನ್ಯಾನ್ಸಿ ಪೊವೆಲ್ ಗುಜರಾತಿನ ಗಾಂಧಿನಗರಕ್ಕೆ ಭೇಟಿ ನೀಡಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಅದು ಫಲಪ್ರದವಾಗಿರಲಿಲ್ಲ.

ಮೋದಿ ಅವರೊಂದಿಗಿನ ಬಿಕ್ಕಟ್ಟು ಉಭಯದೇಶಗಳ ಬಾಂಧವ್ಯ ವೃದ್ಧಿಗೆ ತೊಡಕಾಗಬಹುದೆಂಬ ಚರ್ಚೆ ಆಗಲೇ ಶುರುವಾಗಿತ್ತು. ಆದರೆ, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಾರದು; ಮತ್ತೆ ಸಮ್ಮಿಶ್ರ ಸರ್ಕಾರ ಬರಬಹುದೆಂಬ ನಿರೀಕ್ಷೆ ಇತ್ತೇನೋ ? ಒಬಾಮ ಸರ್ಕಾರದ ನಿಲುವಿನಲ್ಲೇನೂ ಬದಲಾವಣೆ ಕಾಣಲಿಲ್ಲ. ಮೇ 16ರಂದು ಫಲಿತಾಂಶ ಪ್ರಕಟವಾಗುತ್ತಿರುವಂತೆ ಅಮೆರಿಕ ಬೆಚ್ಚಿ ಬಿತ್ತು. ಇದುವರೆಗೆ ಮೋದಿ ವಿಚಾರದಲ್ಲಿ ತಣ್ಣಗೆ ಪ್ರತಿಕ್ರಿಯೆ ನೀಡುತ್ತಿದ್ದ ಒಬಾಮ ಸರ್ಕಾರಕ್ಕೆ, ಅದೇ ರೀತಿ ತಣ್ಣನೆ ಪ್ರತಿಕ್ರಿಯೆ ಮೋದಿ ಅವರಿಂದಲೂ ಸಿಗುತ್ತಿದೆ ಎಂಬ ಅರಿವಾಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಲೆಕ್ಕಾಚಾರ ತಲೆಕೆಳಗಾಗಿ ತನ್ನ ನಡೆ ತನಗೇ ತಿರುಗುಬಾಣವಾಗುತ್ತಿದೆ ಎಂಬುದು ಅರಿವಾಯಿತು.

ಕಳೆದ ತಿಂಗಳು ಅಮೆರಿಕ ಭೇಟಿಗೆ ನೀಡಿದ್ದ ಆಹ್ವಾನಕ್ಕೂ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ, ಮೋದಿ ಅವರೊಂದಿಗಿನ ಬಿಕ್ಕಟ್ಟು ಪರಿಹರಿಸಲು ದಕ್ಷಿಣ ಏಷ್ಯಾ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ವ್ಯವಹಾರದ ಸಹಾಯಕ ಸಚಿವೆ ಗುಜರಾತಿ ಮೂಲದ ನಿಶಾ ದೇಸಾಯಿ ಬಿಸ್ವಾಲ್‍ರನ್ನು ನವದೆಹಲಿಗೆ ಕಳುಹಿಸಲು ಒಬಾಮ ತೀರ್ಮಾನಿಸಿದರು ಎನ್ನುತ್ತಿವೆ ಮೂಲಗಳು.

ಅಂದ ಹಾಗೆ, ಅಮೆರಿಕದ ಸಹಾಯಕ ಸಚಿವೆ ನಿಶಾ ದೇಸಾಯಿ ಬಿಸ್ವಾಲ್ ನೇತೃತ್ವದ ನಿಯೋಗ ಚೀನಾ ಪ್ರವಾಸ ಮುಗಿಸಿ ಜೂನ್ 8ರಂದು ನವದೆಹಲಿಗೆ ಭೇಟಿ ನೀಡಲಿದೆ. ಈ ಸಂದರ್ಭದಲ್ಲಿ ಭಾರತದ ಪ್ರಧಾನಿಯವರ ಜತೆಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಯ ಕುರಿತು ಅವರು ಮಾತುಕತೆ ನಡೆಸಲಿದ್ದಾರೆ. ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಎಸ್.ಜೈಶಂಕರ್ ಕೂಡಾ ಅಂದೇ ನವದೆಹಲಿಗೆ ಆಗಮಿಸಿ, ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ವರದಿ ನೀಡಲಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಪ್ರಧಾನಿ ಸಚಿವಾಲಯ ಅಮೆರಿಕದ ಆಹ್ವಾನ ಪರಿಗಣಿಸಿ ಸೆಪ್ಟೆಂಬರ್ ನಲ್ಲಿ ಪ್ರಧಾನಿ ಪ್ರವಾಸಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಮೋದಿ ತಣ್ಣನೆ ನಡೆಯಿಂದಾಗಿ ಮುಜುಗರಕ್ಕೆ ಒಳಗಾಗಿರುವ ಅಮೆರಿಕ, ಮಾತುಕತೆ ದಿನಾಂಕ ಹಿಂದೂಡಬೇಕೆಂಬ ಭಾರತದ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬಹುದೆಂಬ ನಿರೀಕ್ಷೆ ಇದೆ.

 

Author : ರಾಜಾ ಗುರು 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited