Untitled Document
Sign Up | Login    
ಕಾಶ್ಮೀರ ಸಮಸ್ಯೆಗೆ ಕೊನೆಯೆಂದು?

.

ಫೆಬ್ರವರಿ 22, 1994 ರಂದು ನಮ್ಮ ಪಾರ್ಲಿಮೆಂಟಿನ ಎರಡೂ ಸದನಗಳು ಒಮ್ಮತದಿಂದ "ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಅಕ್ರಮವಾಗಿ ತಾನು ಆಕ್ರಮಿಸಿರುವ ಭಾಗಗಳನ್ನು ಭಾರತದ ವಶಕ್ಕೆ ನೀಡಬೇಕು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕು'' ಎಂಬ ನಿರ್ಣಯವನ್ನು ಸ್ವೀಕರಿಸಿವೆ. ನಿರ್ಣಯ ಮಾತ್ರ ಆಗಿದೆ. ಅಂದಿನಿಂದ ಇಂದಿನತನಕ ಅದೆಷ್ಟೋ ಫೆಬ್ರವರಿ ೨೨ ಕಳೆದುಹೋಗಿವೆ! ಆದರೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಏನು ಪ್ರಯತ್ನ ಆಗುತ್ತಿದೆ ಎಂದರೆ, ಉತ್ತರ ಮಾತ್ರ ನಿರಾಶಾದಾಯಕ.

ಮುಜಫರಾಬಾದ್ _ ಈ ಹೆಸರು ಕೇಳಿದೊಡನೆ ನೀವು ಇದು ಪಾಕಿಸ್ತಾನದ ನಗರವಲ್ಲವೇ? ಎಂದು ಕೇಳಬಹುದು. ಅಲ್ಲ. ಅದು ಭಾರತದ್ದೇ ಭಾಗ. ಆದರೆ, ಈಗ ಮಾತ್ರ ನಮಗೆ ಅದು ಪಾಕಿಸ್ತಾನದ್ದೇ ಎಂದು ನಮಗನಿಸುವ ಹಾಗಾಗಿದೆ. ಕೇವಲ ಮುಜಫರಾಬಾದ್ ಮಾತ್ರವಲ್ಲ, ಮೀರ್‌ಪುರ್, ಪೂಂಚ್‌ನ ಹಲವು ಭಾಗಗಳು ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರಾಂತಗಳೂ ಇಂದು ನಮ್ಮ ಬಳಿಯಿಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದ ಧೂರ್ತ ಯೋಜನೆಯಂತೆ ಮತಾಂಧ ಆಕ್ರಮಣಕಾರರು ಜಮ್ಮು ಕಾಶ್ಮೀರವನ್ನು ಇಂಚಿಂಚಾಗಿ ನುಂಗಲು ಪ್ರಾರಂಭಿಸಿದರು. ಪಾಕಿಸ್ತಾನದ ಸೈನ್ಯವೇ ಅವರಿಗೆ ಶಸ್ತ್ರಾಸ್ರಗಳನ್ನು ಕೊಟ್ಟು ಅವರನ್ನು ಮುನ್ನಡೆಸುತ್ತಿತ್ತು. ಹೆಸರಿಗೆ ಮಾತ್ರ ಅವರು ಬುಡಕಟ್ಟು ಜನರು. ಆದರೆ, ಎಲ್ಲ ಯೋಜನೆಯೂ ಪಾಕಿಸ್ತಾನದ ಸೈನ್ಯದ್ದೇ! ಜಮ್ಮು ಕಾಶ್ಮೀರದ ಈ ಭಾಗಗಳ ಮೇಲೆ ಅವರ ಆಕ್ರಮಣ ನಡೆದಾಗ ಅಲ್ಲಿ ನಡೆದ ಅತ್ಯಾಚಾರಗಳಿಗೆ ಲೆಕ್ಕವಿಲ್ಲ. ಬಲಿಯಾದ ಜೀವಗಳೆಷ್ಟೆಂದು ಎಣಿಸಿದವರಿಲ್ಲ! ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ಮಾನ ಕಳೆದುಕೊಳ್ಳುವುದಕ್ಕಿಂತ ಸಾವೇ ಮೇಲೆಂದು ಬಾವಿಗೋ ನದಿಗೋ ಹಾರಿದರು. ಭಾರತಕ್ಕೆ ಬರುವ ಟ್ರೈನ್‌ಗಳಲ್ಲೆಲ್ಲಾ ಜನರ ಜೊತೆಗೆ ಹೆಣದ ರಾಶಿಯೂ ಬರುತ್ತಿತ್ತು! ಇಂತಹ ಭಯಾನಕ ಪರಿಸ್ಥಿತಿಯಲ್ಲೂ ಭಾರತಕ್ಕೆ ಬರುವವರನ್ನು ಸುರಕ್ಷಿತವಾಗಿ ತಲುಪಿಸಲು ಅದೆಷ್ಟೋ ಜನ ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡಿದರು, ಬಲಿದಾನ ಮಾಡಿದರು.

ಭಾರತದ ಸೈನ್ಯ ಶ್ರೀನಗರವನ್ನು ತಲುಪುವ ಹೊತ್ತಿಗಾಗಲೇ ಪಾಕಿಸ್ತಾನದ ಆಕ್ರಮಣಕಾರರು ಜಮ್ಮು ಕಾಶ್ಮೀರದ ಈ ಭಾಗಗಳನ್ನು ವಶಪಡಿಸಿಕೊಂಡಿದ್ದರು. ನಮಗೆ ಇನ್ನು ಒಂದು ವಾರ ಸಮಯ ಕೊಡಿ, ಪಾಕಿಸ್ತಾನ ವಶಪಡಿಸಿಕೊಂಡ ಭಾಗಗಳನ್ನು ಪುನಃ ಗೆದ್ದುಕೊಡುತ್ತೇವೆಂದು ನಮ್ಮ ಸೇನಾನಾಯಕರು ಹೇಳಿದರೂ ಕೇಳದೇ ನಮ್ಮ ಸರ್ಕಾರ ವಿಶ್ವಸಂಸ್ಥೆಗೆ ದೂರು ಕೊಂಡೊಯ್ಯಿತು. ಕದನ ವಿರಾಮ ಘೋಷಣೆಯಾಯಿತು. ನಮ್ಮ ದೇಶದ ಭೂಭಾಗ ಪಾಕಿಸ್ತಾನದ ಬಳಿಯೇ ಉಳಿಯಿತು. ಇಂದಿಗೂ ಅದು ಹಾಗೆಯೇ ಇದೆ! ಈ ಪಾಕ್ ಆಕ್ರಮಿತ ಕಾಶ್ಮೀರ ಇಂದಿಗೂ ನಮ್ಮ ದೌರ್ಬಲ್ಯವನ್ನು ಅಣಕಿಸುವಂತಿದೆ.

ಪಾಕಿಸ್ತಾನವು ಇದನ್ನು ತನ್ನ ಬಳಿಯಿಟ್ಟುಕೊಂಡಿದ್ದರೂ ಕಾನೂನಿನ ಪ್ರಕಾರ ಪಾಕಿಸ್ತಾನಕ್ಕೆ ಅದರ ಮೇಲೆ ಯಾವ ಹಕ್ಕೂ ಇಲ್ಲ. ಮಹಾರಾಜ ಹರಿಸಿಂಗರು ೧೯೪೭ರ ಅಕ್ಟೋಬರ್ ೨೬ರಂದು ಭಾರತದಲ್ಲಿ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಿದರು. ಇದನ್ನು ಪಾಕಿಸ್ತಾನದ ಕೋರ್ಟುಗಳೂ ಒಪ್ಪಿಕೊಂಡಿವೆ. ೧೯೯೪ರಲ್ಲಿ ಮುಜಫರಾಬಾದ್ ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿಯುತ್ತಾ ಗಿಲ್ಗಿಟ್-ಬಾಲ್ಟಿಸ್ತಾನ್‌ಗಳು ಆಜಾದ್ ಕಾಶ್ಮೀರ(ಪಾಕ್ ಆಕ್ರಮಿತ ಕಾಶ್ಮೀರ)ದ ಭಾಗವಲ್ಲ ಬದಲಾಗಿ ಅದು ಜಮ್ಮು ಕಾಶ್ಮೀರದ ಭಾಗ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟು ಹೇಳಿದೆ. ಜೊತೆಗೆ ಈ ಪ್ರದೇಶದ ಜನರ ಕೋರ್ಟು ಖಟ್ಲೆಗಳು ತನ್ನ ವ್ಯಾಪ್ತಿಗೆ ಬರುವುದಿಲ್ಲವೆಂದೂ ಕೂಡಾ ಅಭಿಪ್ರಾಯಪಟ್ಟಿದೆ! ಪಾಕಿಸ್ತಾನದ ಸಂವಿಧಾನದಲ್ಲಿ ಈ ಪ್ರದೇಶವು ಸೇರಿಲ್ಲವಾದ್ದರಿಂದ ಅಲ್ಲಿನ ಜನರಿಗೆ ಇತ್ತ ಭಾರತದ ಸಂವಿಧಾನವೂ ಇಲ್ಲ, ಅತ್ತ ಪಾಕಿಸ್ತಾನದ ಸಂವಿಧಾನದ ಹಕ್ಕುಗಳ ಬಗ್ಗೆಯೂ ಖಾತ್ರಿಯಿಲ್ಲ ಎಂಬ ಪರಿಸ್ಥಿತಿಯಿದೆ. ಒಂದು ರೀತಿಯಲ್ಲಿ ಅವರದ್ದು ತ್ರಿಶಂಕು ಸ್ವರ್ಗ.

ಪಾಕಿಸ್ತಾನ ತಾನು ಈ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಷ್ಟೇ ಅಲ್ಲದೇ, ಬಾಲ್ಟಿಸ್ತಾನ್ ಪ್ರಾಂತ್ಯದ ರಾಸ್ಕಮ್ ಮತ್ತು ಷಕ್ಸ್ಗಮ್ ಕಣಿವೆಗಳನ್ನು ಚೀನಾಕ್ಕೆ ಬಿಟ್ಟುಕೊಟ್ಟಿದೆ. ಇತ್ತೀಚಿನ ವರದಿಗಳ ಪ್ರಕಾರ ಗಿಲ್ಗಿಟ್ ಪ್ರಾಂತ್ಯದ ಕೆಲವು ಪ್ರದೇಶಗಳನ್ನು ಚೀನಾಕ್ಕೆ ೫೦ ವರ್ಷಗಳ ಲೀಸ್ ಆಧಾರದ ಮೇಲೆ ಕೊಡುವ ಯೋಚನೆಯನ್ನೂ ಮಾಡುತ್ತಿದೆಯಂತೆ. ಈಗಾಗಲೇ, ಪಾಕ್ ಆಕ್ರಮಿತ ಪ್ರದೇಶಗಳಲ್ಲಿ ರೈಲ್ವೇ ಹಳಿ, ಸೇತುವೆ ನಿರ್ಮಾಣ ಕಾರ್ಯಗಳಲ್ಲೂ ಚೀನಾ ತೊಡಗಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಪಾಕಿಸ್ತಾನದ ಗ್ವಾದರ್ (ಚೀನಾ ನಿರ್ಮಿಸಿದ ಬಂದರು ಇದು) ಬಂದರಿಗೆ ರಸ್ತೆ ಮತ್ತು ರೈಲು ಮಾರ್ಗಗಳಾದರೆ ಗಲ್ಫ್ ದೇಶಗಳಿಂದ ಆಮದು ಮಾಡಿಕೊಳ್ಳುವ ತೈಲ ಸಾಗಾಟ ಸುಲಭ ಎನ್ನುವುದು ಚೀನಾದ ಒಂದು ಲೆಕ್ಕಾಚಾರ. ನಿರ್ಮಾಣ ಕಾರ್ಯಗಳ ಜೊತೆಗೇ ತನ್ನ ಸೈನಿಕರನ್ನೂ ಅಲ್ಲಿ ನಿಯೋಜಿಸಿದೆ ಚೀನಾ. ಹೀಗೆ ನಿಧಾನವಾಗಿ ಪಾಕ್ ಆಕ್ರಮಿತ ಕಾಶ್ಮೀರದ ನಿಯಂತ್ರಣವನ್ನು ತೆಗೆದುಕೊಳ್ಳುತ್ತಿದೆ ಅದು. ಶತ್ರುವಿನ ಶತ್ರು ಮಿತ್ರ ಎಂಬಂತೆ ಪಾಕಿಸ್ತಾನಕ್ಕೂ ಚೀನಾ ಸಹಜವಾಗಿಯೇ ಮಿತ್ರನಾಗಿದೆ!

೧೯೬೫ರ ಯುದ್ಧದಲ್ಲಿ ಚೀನಾ ನಮ್ಮಿಂದ ಕಿತ್ತುಕೊಂಡ ಅಕ್ಸಾಯ್ ಚಿನ್ ಇನ್ನೂ ಅದರ ಬಳಿಯೇ ಇದೆ. ಹಾಗಾಗಿ ಇತ್ತ ಲಡಾಖ್ ಕಡೆಯಿಂದಲೂ ಅತ್ತ ಗಿಲ್ಗಿಟ್ ಕಡೆಯಿಂದಲೂ ಭಾರತವನ್ನು ಸುತ್ತುವರಿಯುವುದು ಚೀನಾಕ್ಕೆ ಬಹಳ ಸುಲಭ! ಗಿಲ್ಗಿಟ್ ಪ್ರದೇಶ ಪ್ರಪಂಚದ ಅತ್ಯಂತ ಆಯಕಟ್ಟಿನ ಯುದ್ಧಭೂಮಿ. ಅಲ್ಲಿಂದ ಪಾಕಿಸ್ತಾನ, ಚೀನಾ, ರಷ್ಯಾ, ಆಫ್ಘಾನಿಸ್ತಾನ ಎಲ್ಲವೂ ಅತ್ಯಂತ ಹತ್ತಿರ. ಕ್ಷಿಪಣಿಗಳನ್ನು ನಿಯೋಜಿಸಲು ಪ್ರಶಸ್ತ ಸ್ಥಳ! ಅದಕ್ಕಾಗಿಯೇ ಚೀನಾಕ್ಕೂ ಅದರ ಮೇಲೆ ಕಣ್ಣು. ಆದರೆ, ನಮ್ಮ ಕೇಂದ್ರ ಸರ್ಕಾರ ಮಾತ್ರ ಎಲ್ಲ ಗೊತ್ತಿದ್ದೂ ನಿದ್ರೆ ಮಾಡುತ್ತಿದೆ.

ನಿರಾಶ್ರಿತರ ಪರಿಸ್ಥಿತಿ

೧೯೪೭ರ ದೇಶ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನೀ ಆಕ್ರಮಣಕಾರರ ಹಿಂಸೆ, ಅತ್ಯಾಚಾರಗಳಿಂದ ತಪ್ಪಿಸಿಕೊಳ್ಳಲು ಮುಜಫರಾಬಾದ್, ಮೀರ್‌ಪುರ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಪೂಂಚ್ ಪ್ರದೇಶಗಳಿಂದ ತಮ್ಮದೆಲ್ಲವನ್ನೂ ಅಲ್ಲೇ ಬಿಟ್ಟು ಬಂದ ನಿರಾಶ್ರಿತರ ಸಂಖ್ಯೆ ಈಗ ಸುಮಾರು ೧೦ ಲಕ್ಷ. ತಮ್ಮದೆನ್ನುವ ಭೂಮಿಯಿಲ್ಲ. ತಮ್ಮ ಊರಿನಲ್ಲಿ ಬಿಟ್ಟುಬಂದ ಜಾಗಕ್ಕೆ ಪರಿಹಾರವೂ ಇಲ್ಲ, ಅಲ್ಲಿಗೆ ಪುನಃ ಹೋಗುವ ಹಾಗೂ ಇಲ್ಲ. ಇಂತಹ ಅತಂತ್ರ ಸ್ಥಿತಿ ಅವರದ್ದು. ಜಮ್ಮ ಕಾಶ್ಮೀರ ವಿಧಾನಸಭೆಯಲ್ಲಿ ಇಂದಿನ ಪಾಕ್ ಆಕ್ರಮಿತ ಪ್ರದೇಶಗಳನ್ನು ಪ್ರತಿನಿಧಿಸುವ ೨೪ ಸ್ಥಾನಗಳಿವೆ. ಆದರೆ, ಸ್ವಾತಂತ್ರ್ಯ ಬಂದಲ್ಲಿಂದ ಇಂದಿನವರೆಗೆ ಆ ಸ್ಥಾನಗಳಿಗೆ ಚುನಾವಣೆ ನಡೆದೇ ಇಲ್ಲ. ಆ ಭಾಗದ ಜನರ ಪೈಕಿ ೩೫% ಜನರು ಇಂದಿಗೂ ಜಮ್ಮುವಿನ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಆದರೂ ವಿಧಾನಸಭೆಯಲ್ಲಾಗಲೀ ಲೋಕಸಭೆಯಲ್ಲಾಗಲೀ ಅವರ ಪ್ರತಿನಿಧಿಗಳಿಲ್ಲ. ಹಾಗಾಗಿ ಅವರ ಗೋಳನ್ನು ಕೇಳುವವರೇ ಇಲ್ಲ.

ಪಾಕಿಸ್ತಾನದಿಂದ ಬಂದ ಹಿಂದುಗಳು ದೇಶದ ಬೇರೆ ಬೇರೆ ಕಡೆ ನೆಲೆಸಿದರು. ಹಾಗೆಯೇ ಜಮ್ಮುವಿನಲ್ಲೂ ಸುಮಾರು ೨ ಲಕ್ಷ ಜನರಿದ್ದಾರೆ. ಆದರೆ, ಇವರು ಇಂದಿಗೂ ನಿರಾಶ್ರಿತರಾಗಿಯೇ ಇದ್ದಾರೆ. ಇವರಲ್ಲಿ ಹೆಚ್ಚಿನವರು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳಿಗೆ ಸೇರಿದವರು. ಇದಕ್ಕಿಂತ ಹೆಚ್ಚಿನ ಇನ್ನೊಂದು ನರಕವಿರಲಾರದು ಎಂಬಷ್ಟು ದೀನ ಸ್ಥಿತಿ ಅವರದ್ದು. ಭಾರತದ ಬೇರೆ ಬೇರೆ ಕಡೆಗಳಿಗೆ ಹೋಗಿ ನೆಲೆಸಿದವರು ಇಂದು ನಮ್ಮಂತೆಯೇ ಬದುಕುತ್ತಿದ್ದಾರೆ. ಆದರೆ, ಜಮ್ಮು ಕಾಶ್ಮೀರದಲ್ಲಿರುವ ಈ ನಿರಾಶ್ರಿತರಿಗೆ ಮಾತ್ರ ತಾರತಮ್ಯ. ವಿಧಾನಸಭೆಗೆ ಮತದಾನದ ಹಕ್ಕೂ ಇಲ್ಲ. ಅದಿರಲಿ, ಅವರನ್ನು ನೋಂದಣಿ ಮಾಡುವ ಕೆಲಸವೂ ನಡೆದಿಲ್ಲ. ಅವರು ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕುವಂತಿಲ್ಲ. ಅವರಿಗೆ ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ಪ್ರೊಫೆಷನಲ್ ಕೋರ್ಸ್‌ಗಳಿಗೂ ಜಮ್ಮ ಕಾಶ್ಮೀರದಲ್ಲಿ ಪ್ರವೇಶವಿಲ್ಲ. ಅವರ ಮಕ್ಕಳಿಗೆ ಸರ್ಕಾರದಿಂದ ಸಿಗುವ ವಿದ್ಯಾರ್ಥಿವೇತನವೂ ಇಲ್ಲ.

ಇನ್ನು, ೧೯೮೯-೯೦ರ ಸಮಯದಲ್ಲಿ ಕಾಶ್ಮೀರ ಕಣಿವೆಯಿಂದ ಹೊರದಬ್ಬಲ್ಪಟ್ಟವರದ್ದು ಮತ್ತೊಂದು ಕತೆ. ಸುಮಾರು ೫ ಲಕ್ಷದಷ್ಟಿರುವ ಅವರುಗಳು ಜಮ್ಮು ಮತ್ತು ದೆಹಲಿಯ ಸ್ಲಂಗಳಲ್ಲಿ ದಿನ ತಳ್ಳುತ್ತಿದ್ದಾರೆ. ಲಕ್ಷಗಟ್ಟಲೆ ಬೆಲೆಯ ಸೇಬಿನ ತೋಟವನ್ನೂ, ತಮ್ಮ ಮನೆಗಳನ್ನೂ, ಅಂಗಡಿಗಳನ್ನೂ ಹೇಗಿತ್ತೋ ಹಾಗೆಯೇ ಬಿಟ್ಟು ಬಂದವರು ಇವರು. ಭಯೋತ್ಪಾದಕರು ಊಟ ಕೇಳಿದರು, ಕೊಟ್ಟೆವು. ಹಣ ಕೇಳಿದರು, ಕೊಟ್ಟೆವು. ಮತ್ತೆ ಬಂದವರು ನಿಮ್ಮ ಮಗಳನ್ನು ಕಳುಹಿಸಿ ಎಂದು ಕೇಳಿದರು. ಇನ್ನು ಇದು ಸಾಧ್ಯವಿಲ್ಲ ಎಂದು ಅಲ್ಲಿನದೆಲ್ಲವನ್ನೂ ಬಿಟ್ಟು ಬಂದೆವು ಎನ್ನುತ್ತಾರೆ ಅವರು. ಅವರಿಗೆ ಬೇರೆ ಪುನರ್ವಸತಿಯೂ ಆಗಿಲ್ಲ, ಪರಿಹಾರವೂ ಸಿಗಲಿಲ್ಲ. ಅಲ್ಲಿಗೇ ಹಿಂತಿರುಗಿ ಓಗಿ ಜೀವನ ಮಾಡುವ ಪರಿಸ್ಥಿತಿಯಿನ್ನೂ ನಿರ್ಮಾಣವಾಗಿಲ್ಲ. ಹೋದರೆ, ಮತಾಂಧರ ಅಟ್ಟಹಾಸಕ್ಕೆ ಪುನಃ ಬಲಿಯಾಗುವ ಭೀತಿ.

ಇದೆಲ್ಲಾ ಈಗ ಮತ್ತೆ ನೆನಪಾಗಲು ಕಾರಣವಿದೆ. ಫೆಬ್ರವರಿ ೨೨, ೧೯೯೪ರಂದು ನಮ್ಮ ಪಾರ್ಲಿಮೆಂಟಿನ ಎರಡೂ ಸದನಗಳು ಒಮ್ಮತದಿಂದ ’ಜಮ್ಮೂ ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಅಕ್ರಮವಾಗಿ ತಾನು ಆಕ್ರಮಿಸಿರುವ ಭಾಗಗಳನ್ನು ಭಾರತದ ವಶಕ್ಕೆ ನೀಡಬೇಕು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸಬೇಕು’ ಎಂಬ ನಿರ್ಣಯವನ್ನು ಸ್ವೀಕರಿಸಿವೆ. ನಿರ್ಣಯ ಮಾತ್ರ ಆಗಿದೆ. ಅಂದಿನಿಂದ ಇಂದಿನತನಕ ಅದೆಷ್ಟೋ ಫೆಬ್ರವರಿ ೨೨ ಕಳೆದುಹೋಗಿವೆ! ಆದರೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಏನು ಪ್ರಯತ್ನ ಆಗುತ್ತಿದೆ ಎಂದರೆ, ಉತ್ತರ ಮಾತ್ರ ನಿರಾಶಾದಾಯಕ. ಪಾಕ್ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯುವುದು ಹಾಗಿರಲಿ, ನಮ್ಮ ಬಳಿಯಿರುವ ಜಮ್ಮು ಮತ್ತು ಕಾಶ್ಮೀರಕ್ಕೇ ಇನ್ನೂ ಹೆಚ್ಚಿನ ಸ್ವಾಯತ್ತತೆ ನೀಡುವ ಮಾತುಕತೆ ನಡೆಯುತ್ತಿದೆ.

ವಾಸ್ತವವಾಗಿ, ಸಮಸ್ಯೆಯಿರುವುದು ಜಮ್ಮು ಕಾಶ್ಮೀರದಲ್ಲಲ್ಲ. ಅದಿರುವುದು ದೆಹಲಿಯಲ್ಲಿ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳೊಂದಿಗೆ ಸ್ನೇಹಹಸ್ತ ಚಾಚಿ ಅವರನ್ನು ಮಾತುಕತೆಗೆ ಕರೆಯುತ್ತಿದೆ ನಮ್ಮ ಸರ್ಕಾರ. ಮೊದಲು ಅದ್ನು ನಿಲ್ಲಿಸಬೇಕು. ಪ್ರತ್ಯೇಕತಾವಾದ ಇರುವುದು ಕಾಶ್ಮೀರ ಕಣಿವೆಯ ೫ ಜಿಲ್ಲೆಗಳಲ್ಲಿ ಮಾತ್ರ. ಜಮ್ಮು ಮತ್ತು ಲಡಾಖ್‌ನ ಜನರು ದೇಶಭಕ್ತರು, ಅವರ ನಿಷ್ಠೆ ಭಾರತಕ್ಕೆ. ಆದರೆ, ಅವರಿಗೆ ಸರ್ಕಾರ ಯಾವ ಮನ್ನಣೆಯನ್ನೂ ನೀಡಿಲ್ಲ. ಕೆಲವಷ್ಟು ವರ್ಷಗಳ ಕಾಲ ಹುರಿಯತ್ ನಾಯಕರೊಂದಿಗೆ ಮಾತನಾಡುವುದನ್ನು ಬಿಟ್ಟು, ನೀವು ಗಲಾಟೆ ಮಾಡಬೇಡಿ, ಸುಮ್ಮನಿರಿ ಎಂದು ಓಲೈಸಿ ಅವರಿಗೆ ಇಂಟೆಲಿಜೆನ್ಸ್ ವಿಭಾಗದ ಮೂಲಕ ಪ್ರತಿವರ್ಷ ಕೋಟಿಗಟ್ಟಲೆ ಹಣ ನೀಡುವುದನ್ನು ನಿಲ್ಲಿಸಿದರೆ, ಎಲ್ಲವೂ ತನ್ನಿಂದ ತಾನೇ ತಣ್ಣಗಾಗುತ್ತದೆ. ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಕೊನೆಗೊಳ್ಳುತ್ತದೆ.

ಈಗ ಬೆಂಗಳೂರಿನಲ್ಲಿರುವ ಶ್ರೀನಗರದಲ್ಲೇ ಹುಟ್ಟಿ ಬೆಳೆದ ದಿಲೀಪ್ ಕಾಚ್ರೂ ಅವರ ಅನುಭವ ಹೀಗಿದೆ ನೋಡಿ. ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದ ಅವರ ತಂದೆ ಪಡಿತರ ವಿತರಣೆ ಮಾಡುತ್ತಿದ್ದಾಗ ಕ್ಯೂನಲ್ಲಿರುವ ಒಬ್ಬ ಇದ್ದಕ್ಕಿದ್ದ ಹಾಗೇ, ’ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಹಾಕಿದ. ಕೂಡಲೇ ಅಲ್ಲಿದ್ದ ಸರ್ಕಾರಿ ಅಧಿಕಾರಿಗಳೆಲ್ಲ ಅವನನ್ನು ಸಮಾಧಾನ ಮಾಡಿ ಅವನು ಕೇಳಿದಷ್ಟು ಪಡಿತರ ಕೊಟ್ಟು ಕಳುಹಿಸಿದರು. ಆಮೇಲೆ ಸಂಜೆ ಅವನು ಸಿಕ್ಕಿದಾಗ ಇವರು ಕೇಳಿದರು, ನೀನು ಏಕೆ ಹಾಗೆ ಘೋಷಣೆ ಹಾಕಿದೆ ಬೆಳಿಗ್ಗೆ ಎಂದು. ಹಾಗೆ ಮಾತನಾಡಿದರೆ ಮಾತ್ರ ಸರ್ಕಾರಿ ಅಧಿಕಾರಿಗಳು ನಮಗೆ ಮನ್ನಣೆ ನೀಡುತ್ತಾರೆ, ನಮಗೆ ಬೇಕಾದಷ್ಟು ಅಕ್ಕಿ, ಗೋಧಿ ಸಿಗುತ್ತದೆ. ನಮ್ಮ ಕೆಲಸ ಬೇಗ ಆಗುತ್ತದೆ. ಇಲ್ಲವಾದರೆ, ನಮ್ಮನ್ನು ಯಾರೂ ಮಾತನಾಡಿಸುವುದಿಲ್ಲ ಎಂದ! ಇಂತಹವರನ್ನು ನಿರ್ಲಕ್ಷಿಸಿ, ಜಮ್ಮು ಕಾಶ್ಮೀರದ ನೈಜ ಪ್ರತಿನಿಧಿಗಳಾದ ರಾಷ್ಟ್ರವಾದಿ ನಾಯಕರೊಂದಿಗೆ ನಮ್ಮ ಸಂಬಂಧಗಳನ್ನು ಬಲಪಡಿಸುವುದೇ ಜಮ್ಮು ಕಾಶ್ಮೀರ ನಮ್ಮೊಂದಿಗೆ ಗಟ್ಟಿಗೊಳ್ಳಲು ಇರುವ ಪರಿಹಾರ.

ಜಮ್ಮುವಿನ ನಿರಾಶ್ರಿತರ ಶಿಬಿರದಲ್ಲಿ ಇಂದಿಗೂ ಟೆಂಟ್‌ನಲ್ಲೇ ಜೀವಿಸುತ್ತಿರುವ ಮುಜಫರಾಬಾದಿನ ವೃದ್ಧರ ಬಳಿ ನೀವು ಸುಮ್ಮನೆ ಮಾತನಾಡಿ ನೋಡಿ. ಯಾವುದೇ ಮಾತನಾಡಿದರೂ, ಎಲ್ಲೆಲ್ಲೋ ಸುತ್ತಿ ಬಂದು ಕೊನೆಗೆ ’ನಾವು ಮುಜಫರಾಬಾದಿನಲ್ಲಿದ್ದಾಗ…’ ಎಂದು ತಮ್ಮ ನೆನಪನ್ನು ಬಿಚ್ಚಿಡುತ್ತಾರೆ. ನಿಮಗಿನ್ನೂ ಅದು ಮರೆತಿಲ್ಲವೇ ಎಂದರೆ, ಹೇಗೆ ಮರೆಯಲಿ ನನ್ನ ಊರನ್ನು ಎಂದು ನಮಗೇ ಪ್ರಶ್ನಿಸುತ್ತಾರೆ. ನಿಜ, ಮುಜಫರಾಬಾದ್ ಪಾಕಿಸ್ತಾನದ ವಶದಲ್ಲಿದ್ದರೇನಂತೆ. ಅದು ನಮ್ಮದಲ್ಲವೇ? ಅದನ್ನು ಮರೆಯಲಾಗದು. ಮರೆಯಬಾರದು.

(ಕೃಪೆ-samvada.org)

 

Author : ರಾಧಾಕೃಷ್ಣ ಹೊಳ್ಳ ಎಸ್. ಎಲ್. 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited