Untitled Document
Sign Up | Login    
ಯಡಿಯೂರಪ್ಪಗೆ ಮಹತ್ವದ ಸ್ಥಾನಮಾನ?

.

ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುವ ಮಹತ್ವದ ಜವಾಬ್ದಾರಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಹೆಗಲೇರುವ ಸಾಧ್ಯತೆ ದಟ್ಟವಾಗಿದೆ. ಲೋಕಸಭಾ ಚುನಾವಣೆ ನಂತರದ ವಿದ್ಯಮಾನಗಳು ಇಂಥದ್ದೊಂದು ಸುಳಿವು ನೀಡಿದೆ.

ಕಳೆದ ವರ್ಷ ವಿಧಾನ ಸಭಾ ಚುನಾವಣೆಗೆ ಬಿಎಸ್ ವೈ ಬಿಜೆಪಿಯಲ್ಲಿರಲಿಲ್ಲ. ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಎದುರಾಗಿದ್ದರಿಂದ ಅವಧಿಗೂ ಮೊದಲೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂತು. ನಂತರ ಪಕ್ಷದಲ್ಲೂ ಅವರು ಕಡೆಗಣಿಸಲ್ಪಟ್ಟಿದ್ದರು. ಹೀಗಾಗಿ ಯಡಿಯೂರಪ್ಪ ಹಾಗೂ ಬೆಂಬಲಿಗರು ಪಕ್ಷಕ್ಕೆ ರಾಜೀನಾಮೆ ನೀಡಿ ಹೊರನಡೆದರು. ಅಷ್ಟೇ ಅಲ್ಲ, ಅಲ್ಪಾವಧಿಯಲ್ಲೇ ಕೆಜೆಪಿ ಕಟ್ಟಿ ವಿಧಾನ ಸಭಾ ಚುನಾವಣೆಯನ್ನೂ ಎದುರಿಸಿದರು. ಫಲಿತಾಂಶ ಬಿಜೆಪಿಗೆ ಭಾರಿ ಹೊಡೆತ. ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದಕ್ಕೂ ಆಗದ ಸ್ಥಿತಿ ನಿರ್ಮಾಣವಾಗಿತ್ತು.

ಬಿಎಸ್ ವೈ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕವಾದರೂ ಬಿಜೆಪಿಯೊಳಗಿನ ಕಚ್ಚಾಟ ನಿಲ್ಲಬೇಕಿತ್ತು. ಆದರೆ ಹಾಗಾಗಲಿಲ್ಲ. ಡಿ.ವಿ.ಸದಾನಂದ ಗೌಡ ಮುಖ್ಯಮಂತ್ರಿಯಾದರು. ಕೆಲವೇ ತಿಂಗಳಲ್ಲಿ ಅವರೂ ರಾಜೀನಾಮೆ ನೀಡಬೇಕಾಗಿ ಬಂತು. ನಂತರ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಹೇಗೋ ಅವಧಿ ಪೂರೈಸಿದರು. ಆದರೆ. ಮತ್ತೆ ವಿಧಾನ ಸಭೆ ಚುನಾವಣೆ ಎದುರಿಸುವುದಕ್ಕೆ ಬಿಜೆಪಿ ನಾಯಕರಲ್ಲಿ ಚೈತನ್ಯವಿರಲಿಲ್ಲ. ಕೆಲವು ಘಟಾನುಘಟಿ ನಾಯಕರು ಬಿಎಸ್ ವೈ ಬೆನ್ನಿಗೆ ನಿಂತಿದ್ದರು. ಗಣಿ ಹಗರಣದ ಸುಳಿಗೆ ಸಿಲುಕಿದ ರೆಡ್ಡಿ ಸಹೋದರರು ಹೈರಾಣಾಗಿ ಹೋದರು. ಶ್ರೀರಾಮುಲು ಬಿಎಸ್ಸಾರ್ ಕಾಂಗ್ರೆಸ್ ಕಟ್ಟಿ ಬೆಳೆಸಲು ಪ್ರಯತ್ನಿಸಿದರಾದರೂ ಅದಕ್ಕೆ ತಕ್ಕ ಯಶಸ್ಸು ಸಿಗಲಿಲ್ಲ.

ವಿಧಾನ ಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು, ಬಿಎಸ್ ವೈ ಬಳಗವನ್ನು ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ ನಡೆಸಿದರು. ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರಬೇಕು, ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಇರಾದೆ ಈ ಪ್ರಯತ್ನದ ಹಿಂದಿತ್ತು. ದೇಶಾದ್ಯಂತ ಮೋದಿ ಅಲೆ ಬೀಸುತ್ತಿರುವುದರ ಲಾಭ ಪಡೆದುಕೊಳ್ಳಲು ಎಲ್ಲರೂ ಮುಂದಾಗಿದ್ದರು. ಆದರೆ ಆಂತರಿಕ ಕಚ್ಚಾಟ ಹಾಗೆಯೇ ಮುಂದುವರಿದಿತ್ತು. ಬಿಎಸ್ ವೈ ಬಳಗವನ್ನು ಮತ್ತೆ ಬಿಜೆಪಿಗೆ ಸೇರಿಸುವುದಕ್ಕೆ ಮತ್ತೊಂದು ಬಣದ ವಿರೋಧವಿತ್ತು.

ಇನ್ನೊಂದೆಡೆ, ನರೇಂದ್ರ ಮೋದಿ ಜತೆಗೆ ಬಿಎಸ್ ವೈ ಒಡನಾಟ ಚೆನ್ನಾಗಿದ್ದುದು ರಾಜ್ಯ ಬಿಜೆಪಿ ನಾಯಕರಿಗೆ ತಿಳಿದಿತ್ತು. ಬಿಎಸ್ ವೈ ಕೂಡಾ ರಾಜ್ಯದ ಪರಿಸ್ಥಿತಿಯನ್ನು ಮೋದಿಯವರಿಗೆ ಮನವರಿಕೆ ಮಾಡಿದ್ದು, ಬೇಷರತ್ತಾಗಿ ಬಿಜೆಪಿ ಸೇರ್ಪಡೆಗೊಂಡರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನ ಕಳೆದುಕೊಂಡರೂ ಉಳಿದ 17ನ್ನು ಉಳಿಸುವಲ್ಲಿ ಇದು ಪ್ರಮುಖ ಪಾತ್ರವಹಿಸಿತ್ತು ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.

ಕೇಂದ್ರದಲ್ಲಿ ಅನಂತ್ ಕುಮಾರ್ ಅವರು ಆಡ್ವಾಣಿ, ಸುಷ್ಮಾ ಸ್ವರಾಜ್ ಮೊದಲಾದವರೊಡನೆ ಸೇರಿ ಮೋದಿ ಹಾದಿಗೆ ಅಡ್ಡಗಾಲು ಹಾಕುವ ಪ್ರಯತ್ನ ನಡೆಸಿದ್ದರು ಎಂಬ ಮಾತು ಆಗ್ಗಾಗೆ ಕೇಳುತ್ತಿತ್ತು. ಸಮಸ್ಯೆ ಸೃಷ್ಟಿಸಿ ಬಳಿಕ ಅದನ್ನು ಪರಿಹರಿಸುವ ಕೆಲಸದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಅನಂತ್ ಕುಮಾರ್ ಚಾಣಕ್ಷ ನಡೆ ಅನುಸರಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಒಂದು ಹಂತದಲ್ಲಿ, ಅನಂತ್ ಕುಮಾರ್ ಅವರಿಗೆ ಮೋದಿ ಎಚ್ಚರಿಕೆ ನೀಡಿದ್ದಾಗಿಯೂ ಮೂಲಗಳು ತಿಳಿಸಿವೆ.

ಇದಾದ ನಂತರವಷ್ಟೇ ನರೇಂದ್ರ ಮೋದಿ ಅವರನ್ನು ಅನಂತ್ ಕುಮಾರ್ ಹೊಗಳಲಾರಂಭಿಸಿದ್ದು, ಚುನಾವಣೆಯಲ್ಲೂ ಮೋದಿ ಹೆಸರನ್ನು ಮುಂದಿಟ್ಟು ಕ್ಷೇತ್ರದ ಜನರ ಮುಂದೆ ಹೋಗಿದ್ದು ಎನ್ನಲಾಗುತ್ತಿದೆ. ಈಗ ಮತ್ತೆ ಕೇಂದ್ರ ಸಚಿವ ಸಂಪುಟ ರಚನೆ ವೇಳೆ ಲಾಬಿ ಆರಂಭವಾಗಿದ್ದು, ಅನಂತ್ ಕುಮಾರ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ.

ಆದರೆ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ನರೇಂದ್ರ ಮೋದಿ ಸಚಿವ ಸಂಪುಟದ ಬಗ್ಗೆ ಕೊನೆ ಘಳಿಗೆ ವರೆಗೂ ಯಾವುದೇ ಕ್ಲೂ ಹೊರಗೆ ಬಿದ್ದಿಲ್ಲ, ಬೀಳುವ ಲಕ್ಷಣವೂ ಕಾಣಿಸುತ್ತಿಲ್ಲ. ಈ ನಡುವೆ ನರೇಂದ್ರ ಮೋದಿಯವರಿಗೆ ಪತ್ರ ಬರೆದ ಯಡಿಯೂರಪ್ಪ, ತಾವು ಹೇಳಿದಂತೆ ಸಚಿವ ಸ್ಥಾನಕ್ಕೆ ನಾನು ಲಾಭಿ ನಡೆಸುವುದಿಲ್ಲ. ರಾಜ್ಯದಲ್ಲಿ ಪಕ್ಷ ಸಂಘಟನೆಯ ಕಡೆಗೆ ಗಮನಹರಿಸುತ್ತೇನೆ. ಪಕ್ಷ ಸಂಘಟನೆ ವಿಚಾರದಲ್ಲಿ ನನಗೆ ನೀಡುವ ಜವಾಬ್ಧಾರಿಯನ್ನು ನಿಭಾಯಿಸುವೆ' ಎಂದು ತಿಳಿಸಿದ್ದಾರೆ. ಈ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ಬಿಎಸ್ ವೈ ಅವರ ಉದ್ದೇಶದ ಬಗ್ಗೆ ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಹುತೇಕ ಮಾಧ್ಯಮಗಳಲ್ಲಿ ರಾಜನಾಥ್ ಸಿಂಗ್ ಅಸಮಾಧಾನ ಎಂಬುದಷ್ಟೇ ಹೈಲೈಟ್ ಆಗಿದ್ದು, ಉಳಿದ ಅಂಶ ನಿರ್ಲಕ್ಷಿಸಲ್ಪಟ್ಟಿದೆ.

ರಾಜ್ಯದಲ್ಲಿ ಪಕ್ಷ ಸಂಘಟನೆ ಕಡೆಗೆ ಗಮನಹರಿಸುತ್ತೇನೆ ಎಂದು ಹೇಳುವ ಮೂಲಕ ಬಿಎಸ್ ವೈ ಸ್ಥಳೀಯ ಪ್ರತಿಕ್ರಿಯೆ ಹೇಗಿರಬಹುದೆಂದು ಪರೀಕ್ಷಿಸುವ ಕೆಲಸ ಮಾಡಿದ್ದಾರೆ. ಹಾಲಿ ಅಧ್ಯಕ್ಷರು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಿಲ್ಲ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ, ಮೊದಲಿನ ಬೆಂಬಲಿಗರೊಂದಿಗೆ ಮತ್ತೆ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಇದು. ಇದಕ್ಕೆ ಮೋದಿಯವರ ಬೆಂಬಲವೂ ಇದ್ದು, ಅನಂತ್ ಕುಮಾರ್ ಅವರಿಗೆ ಕೇಂದ್ರದಲ್ಲಿ ಜವಾಬ್ದಾರಿ ನೀಡಿ, ರಾಜ್ಯದಲ್ಲಿ ಪಕ್ಷ ಸಂಘಟನೆ ಹೊಣೆ ಯಡಿಯೂರಪ್ಪಗೆ ವಹಿಸಿದರೆ ಪಕ್ಷಕ್ಕೂ ಒಳಿತು ಎಂಬ ಅರಿವು ಇರುವ ಕಾರಣವೇ ಇಂಥದ್ದೊಂದು ಬೆಳವಣಿಗೆ ಕಂಡುಬಂದಿದೆ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ. ಇವೆಲ್ಲ ಏನಿದ್ದರೂ, ಕೆಲವೇ ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ.

 

Author : ಅಮೃತೇಶ್ 

More Articles From Politics

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited