Untitled Document
Sign Up | Login    
ನರೇಂದ್ರ ಮೋದಿ ಪ್ರಮಾಣ ವಚನ ಸಾರ್ಕ್ ಕಿರು ಶೃಂಗಕ್ಕೆ ವೇದಿಕೆ !

.

ಭಾರತದ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ರಾಷ್ಟ್ರಗಳ ನಾಯಕರಿಗೆ ಆಹ್ವಾನ ಹೋಗಿದೆ. ಸಾರ್ಕ್ ರಾಷ್ಟ್ರಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿ ಈ ರೀತಿಯ ಆಹ್ವಾನ ಹೋಗಿದ್ದು, ಎಲ್ಲರೂ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಇದು ದಕ್ಷಿಣ ಏಷ್ಯಾ ಅದರಲ್ಲೂ ಸಾರ್ಕ್ ರಾಷ್ಟ್ರಗಳ ಬಾಂಧವ್ಯದ ಹೊಸ ಯುಗದ ಆರಂಭಕ್ಕೆ ಮುನ್ನುಡಿ ಎನ್ನಬಹುದು.

ಭಾರತ, ಪಾಕಿಸ್ತಾನ, ನೇಪಾಳ, ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾಗಳು ಸೇರಿ ಹುಟ್ಟು ಹಾಕಿದ್ದೇ ಪ್ರಾದೇಶಿಕ ಸಹಕಾರಕ್ಕಾಗಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂಘಟನೆ(ಸೌತ್ ಏಷ್ಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋ ಆಪರೇಷನ್ ಅರ್ಥಾತ್ ಸಾರ್ಕ್). ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಹುಟ್ಟುಹಾಕಿದ ಸಂಘಟನೆ ಇದಾಗಿದ್ದು, ಪ್ರಾದೇಶಿಕ ಸಹಕಾರದಲ್ಲಿ ಮಹತ್ವದ ಪಾತ್ರವಹಿಸಿತ್ತು. ಕಳೆದೊಂದು ದಶಕದಿಂದ ಈ ಸಂಬಂಧ ನಾನಾ ಕಾರಣಗಳಿಂದ ಸಡಿಲಗೊಂಡಿತ್ತು.

ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದ ಆಹ್ವಾನ ಸಾರ್ಕ್ ರಾಷ್ಟ್ರಗಳ ನಾಯಕರಿಗೆ ಕಳುಹಿಸುವಂತೆ ನರೇಂದ್ರ ಮೋದಿಯವರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದು, ಅದು ಬಹಳ ಸಕಾರಾತ್ಮಕ ಪರಿಣಾಮ ಬೀರಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಶೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸ ಸೇರಿದಂತೆ ಏಳು ಸಾರ್ಕ್ ರಾಷ್ಟ್ರಗಳ ನಾಯಕರು ಆಹ್ವಾನ ಸ್ವೀಕರಿಸಿದ್ದಾರೆ. ಮೇ 26, 27ರಂದು ಈ ನಾಯಕರು ದೆಹಲಿಯಲ್ಲಿ ಬೀಡು ಬಿಡಲಿದ್ದಾರೆ.

ಮೋದಿಯವರ ಪ್ರಮಾಣ ವಚನ ಸಮಾರಂಭ ಒಂದು ರೀತಿಯಲ್ಲಿ ಸಾರ್ಕ್ ರಾಷ್ಟ್ರಗಳ ಕಿರು "ಶೃಂಗ''ಕ್ಕೆ ಒಂದು ವೇದಿಕೆಯೂ ಆಗಿದೆ. ಶೃಂಗ ಸಭೆಯ ವೇಳೆ ನಡೆಯುವಂತೆ ಇಲ್ಲಿಯೂ ಆತಿಥೇಯ ರಾಷ್ಟ್ರದ ನಾಯಕನ ಜತೆಗೆ ಉಳಿದ ರಾಷ್ಟ್ರಗಳ ನಾಯಕರು ಒಬ್ಬೊಬ್ಬರಾಗಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ದೃಢಪಡಿಸಲು ಇದೊಂದು ಕೊಂಡಿಯಾಗಲಿದೆ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ 2011ರ ನವೆಂಬರ್‍ನಲ್ಲಿ ಮಾಲೆಯಲ್ಲಿ ಸಾರ್ಕ್ ಶೃಂಗ ನಡೆದಿತ್ತು. ಕಳೆದ ವರ್ಷ ನೇಪಾಳದಲ್ಲಿ ಶೃಂಗ ಸಭೆಯ ಆಯೋಜನೆಯಾಗಿತ್ತಾದರೂ ಅಲ್ಲಿನ ರಾಜಕೀಯ ಬೆಳವಣಿಗೆಗಳು ಅದಕ್ಕೆ ಅವಕಾಶ ಕೊಡಲಿಲ್ಲ.

ಪಾಕಿಸ್ತಾನ ಹಾಗೂ ಶ್ರೀಲಂಕಾದ ನಾಯಕರಿಗೆ ಪ್ರಮಾಣ ವಚನ ಸಮಾರಂಭದ ಆಹ್ವಾನ ನೀಡಿದ್ದರ ಬಗ್ಗೆ ವ್ಯಾಪಕ ಟೀಕೆ ಕೇಳಿಬಂದಿವೆ. ಗಡಿಭಾಗದಲ್ಲಿ ಪಾಕಿಸ್ತಾನ ನಿರಂತರ ಕಿರಿಕಿರಿ ಮಾಡುತ್ತಲೇ ಇದ್ದು, ಭಾರತದೊಳಗಿನ ವಿಧ್ವಂಸಕ ಕೃತ್ಯಗಳಿಗೂ ಕುಮ್ಮಕ್ಕು ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ನವಾಜ್ ಷರೀಫ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದು ಸರಿಯಲ್ಲ ಎಂಬ ಕೂಗು ಭಾರತದೊಳಗೆ ಕೇಳಿದರೆ, ಪಾಕಿಸ್ತಾನದಲ್ಲೂ ನವಾಜ್ ಷರೀಫ್ ಈ ಸಮಾರಂಭಕ್ಕೆ ಹೋಗಬಾರದು ಎಂಬ ಕೂಗು ಎದ್ದಿದೆ. ಉಗ್ರ ಸಂಘಟನೆಗಳು ಪ್ರತಿಭಟನೆ ನಡೆಸಲಾರಂಭಿಸಿವೆ. ಆದಾಗ್ಯೂ, ಉಭಯ ದೇಶಗಳ ನಾಯಕರು ತುಸು ರಿಸ್ಕ್ ತೆಗೆದುಕೊಂಡು ಮುನ್ನಡೆಯತೊಡಗಿದ್ದಾರೆ. ಇನ್ನೊಂದೆಡೆ, ಲಂಕಾದಲ್ಲಿ ಅಲ್ಪಸಂಖ್ಯಾತರಾದ ತಮಿಳರ ರಕ್ಷಣೆ ಮಾಡುವಲ್ಲಿ ವಿಫಲರಾದ ಮಹಿಂದಾ ರಾಜಪಕ್ಸ ಅವರನ್ನು ಆಹ್ವಾನಿಸಬಾರದು ಎಂದು ತಮಿಳುನಾಡಿನ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿವೆ. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕೂಡಾ ಸಮಾರಂಭ ಬಹಿಷ್ಕರಿಸುವ ಸಿದ್ಧತೆಯಲ್ಲಿದ್ದಾರೆ. ಆದಾಗ್ಯೂ ನರೇಂದ್ರ ಮೋದಿ ಹಾಗೂ ರಾಜಪಕ್ಸ ಪ್ರತಿರೋಧ ಎದುರಿಸುತ್ತಲೇ ಮುನ್ನಡೆಯಲು ಮುಂದಾಗಿರುವುದು ವಿಶೇಷ.

ಸಾರ್ಕ್ ರಾಷ್ಟ್ರಗಳ ನಾಯಕರಿಗೆ ಪ್ರಜಾಪ್ರಭುತ್ವದ ಶಕ್ತಿ ಏನು ಎಂಬುದನ್ನು ತೋರಿಸುವುದಕ್ಕಾಗಿ ಈ ಆಹ್ವಾನ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ. ಪ್ರಸ್ತುತ, ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದ ಸರ್ಕಾರವೇ ಈಗ ಅಸ್ತಿತ್ವಕ್ಕೆ ಬಂದಿದೆ. ಆದರೂ, ಈ ಹಿಂದೆ ಇದ್ದಂತೆ ಮೈತ್ರಿಧರ್ಮ ಪಾಲನೆ ಮಾಡಬೇಕಾದ ಅನಿವಾರ್ಯತೆ ದೇಶಕ್ಕಿಲ್ಲ. ದೇಶದ ಹಿತಾಸಕ್ತಿಯೊಂದಿಗೆ ರಾಜಿಯಾಗುವುದೂ ಬೇಕಾಗಿಲ್ಲ. ಪ್ರಾದೇಶಿಕವಾಗಿ ಪ್ರಾಬಲ್ಯ ಸಾಧಿಸಬೇಕಾದರೆ, ನೆರೆ ರಾಷ್ಟ್ರಗಳೊಂದಿಗೆ ಬಾಂಧವ್ಯ ದೃಢಗೊಳ್ಳಬೇಕಾದ್ದು ಕೂಡಾ ಅಗತ್ಯ ಎಂಬುದೂ ಸೂಚ್ಯವಾಗಿ ಸಾರಿದಂತಾಗಿದೆ.

ಚೀನಾ ಜತೆಗೆ ಬಾಂಧವ್ಯ ಗಟ್ಟಿಗೊಳಿಸಬೇಕಾದ ಅಗತ್ಯವಿದ್ದರೂ, ಅದಕ್ಕೂ ಮೊದಲು ಅದರಿಂದ ಉಂಟಾಗಬಹುದಾದ ಸಂಭಾವ್ಯ ಬೆದರಿಕೆ ತಡೆಯೊಡ್ಡಲು ಭಾರತ ಗಮನಹರಿಸಬೇಕಾಗಿದೆ. ನಮ್ಮ ದೇಶದ ಮೇಲೆ ಒಂದು ಕಣ್ಣಿಟ್ಟಿರುವ ಚೀನಾ, ಸಾರ್ಕ್ ರಾಷ್ಟ್ರಗಳ ಪೈಕಿ ಬಾಂಗ್ಲಾ, ಲಂಕಾ, ಮಾಲ್ಡೀವ್ಸ್ ಮತ್ತು ಪಾಕಿಸ್ತಾನದ ಜತೆಗಿನ ಬಾಂಧವ್ಯ ಗಟ್ಟಿಗೊಳಿಸಿದೆ. ಅಷ್ಟೇ ಅಲ್ಲ, ಆ ರಾಷ್ಟ್ರಗಳಿಗೆ ಹೆಚ್ಚಿನ ನೆರವನ್ನು ನೀಡಿ ಅಲ್ಲಿ ತನ್ನ ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದೆ. ಸಂಭಾವ್ಯ ಯುದ್ಧದ ಸಂದರ್ಭದಲ್ಲಿ ಈ ನೆಲೆಗಳನ್ನು ಬಳಸುವ ಚೀನಾದ ಈ ಯೋಜನೆ `ಸ್ಟ್ರಿಂಗ್ ಆಫ್ ಪಲ್ರ್ಸ್' ಎಂದೇ ಹೆಸರಾಗಿದೆ. ಲಡಾಖ್ ಹಾಗೂ ಅರುಣಾಚಲಪ್ರದೇಶ ಭಾಗದಲ್ಲಿ ಚೀನಾ ಗಡಿ ಕ್ಯಾತೆ ತೆಗೆಯುತ್ತಿರುವುದು ಹೊಸದೇನಲ್ಲ. ಭದ್ರತೆ ವಿಚಾರದಲ್ಲಿ ಚೀನಾ ಬೆದರಿಕೆಯೊಡ್ಡುತ್ತಿದೆಯಾದರೂ, ವ್ಯಾಪಾರ ವಹಿವಾಟಿನ ಮೂಲಕ ಭಾರತದೊಂದಿಗೆ ಸ್ನೇಹ ಸಂಬಂಧ ಬೆಳೆಸಿಕೊಂಡಿದೆ. ಯಾಕೆಂದರೆ, ಇದಕ್ಕಾಗಿಯೇ ಸಾರ್ಕ್ ರಾಷ್ಟ್ರಗಳ ಜತೆಗಿನ ಬಾಂಧವ್ಯ ಭಾರತದ ಮೊದಲ ಆದ್ಯತೆಯಾಗಬೇಕು ಎಂಬುದು ವಾಸ್ತವ.

 

Author : ಅನೀಷ್ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited