Untitled Document
Sign Up | Login    
ಉದ್ಯಾನನಗರಿಯಲ್ಲಿ ಮರಗಳಿಗಿಂತ ಜನಸಂಖ್ಯೆಯೇ ಹೆಚ್ಚು


ಉದ್ಯಾನನಗರಿ ಎಂಬ ಖ್ಯಾತಿ ಬೆಂಗಳೂರಿನದ್ದು. ಆದರೆ ಇಲ್ಲಿರುವುದು ಕೇವಲ 14,78,412 ಮರಗಳು. ಬೆಂಗಳೂರಿನಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಉಷ್ಣಾಂಶಕ್ಕೆ ಕಾರಣ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆಸಿದ ಅಧ್ಯಯನ ವರದಿಯಲ್ಲಿ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ.

ಬರೋಬ್ಬರಿ 714 ಚದರ ಕಿ.ಮೀ ವಿಸ್ತೀರ್ಣವಿರುವ ಬೆಂಗಳೂರು ನಗರದಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ಮರಗಳಿರುವುದು ಆತಂಕಕಾರಿಯಾಗಿದೆ. ಇದು ಹಿಗೇಯೇ ಮುಂದುವರೆದಲ್ಲಿ ಪರಿಸರ ಏರುಪೆರಿನಿಂದ ಪ್ರಕೃತಿ ವಿಕೋಪ, ರೋಗಗಳು ಬರುವ ಸಾಧ್ಯತೆಯಿದೆ.

ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೋರಿಕೆ ಮೇರೆಗೆ ಐಐಎಸ್ ಸಿಯ ಪರಿಸರ ವಿಜ್ಞಾನ ವಿಭಾಗದ ಹಿರಿಯ ವಿಜ್ನಾನಿ ಡಾ.ಟಿ.ವಿ.ರಾಮಚಂದ್ರ ಹಾಗೂ ಪಿಹೆಚ್ ಡಿ ಸಂಶೋಧನಾ ವಿದ್ಯಾರ್ಥಿಗಳ ತಂಡ ನಗರದಲ್ಲಿ ವಾರ್ಡ್ ವಾರು ಮರಗಣತಿ ನಡೆಸಿವೆ. ಈ ಅಧ್ಯಯನ ವರದಿಯಲ್ಲಿ ಬಹು ದೃಶ್ಯ ಮಾಹಿತಿ ಅಂಕಿ ಅಂಶಗಳನ್ನು ವಿಶ್ಲೇಷಿಸಲಾಗಿದೆ.

ವರ್ತೂರು, ಬೆಳ್ಳಂದೂರು, ಅಗರ, ಅರಮನೆ ನಗರ ವಾರ್ಡ್ ಗಳಲ್ಲಿ 40 ಸಾವಿರಕ್ಕೂ ಹೆಚ್ಚು ಮರಗಳಿವೆ. ಚಿಕ್ಕಪೇಟೆ, ಶಿವಾಜಿನಗರ, ಕೆಂಪಾಪುರ ಅಗ್ರಹಾರ, ಪಾದರಾಯನಪುರ ಹಾಗೂ ಕುಶಾಲನಗರ ವಾರ್ಡ್ ಗಳಲ್ಲಿ 100ಕ್ಕಿಂತ ಕಡಿಮೆ ಮರಗಳಿವೆ. ಈ ವಾರ್ಡ್ ಗಳಲ್ಲಿ 500 ಮಂದಿಗೆ 1 ಮರ ಮಾತ್ರವಿದೆ.

95,82,999 ಜನಸಂಖ್ಯೆ ಹೊಂದಿರುವ ಮಹಾನಗರಿಯಲ್ಲಿ ಕೇವಲ 14 ಲಕ್ಷ ಮರಗಳಿರುವುದರಿಂದ ಉಷ್ಣಾಂಶ ಹೆಚ್ಚುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮರಗಳ ನೆರಳಿನಿಂದ ಸೂರ್ಯನ ಶಾಖ ಹೀರುವಿಕೆ ತಗ್ಗುತ್ತದೆ. ಜತೆಗೆ ಎಲೆಗಳ ಭಾಷ್ಪೀಕರಣದಿಂದ ವಾತಾವರಣಕ್ಕೆ ನೀರಾವಿ ಬಿಡುಗಡೆಯಾಗುವ ಮೂಲಕ ತಾಪಮಾನವನ್ನು ಕಾಪಾಡುತ್ತದೆ. ಹೆಚ್ಚಿನ ಇಂಧನ ಬಳಕೆ, ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ, ಅಧಿಕ ವಾಹಕತೆಯ ಕೃತಕ ವಸ್ತುಗಳ ಬಳಕೆ, ಅರಣ್ಯ ಮತ್ತು ಜಲ ಮೂಲಗಳ ನಾಶ ಮತ್ತಿತರೆ ಕಾರಣಗಳಿಂದ ನಗರಪ್ರದೇಶಗಳ ಉಷ್ಣಾಂಶ ಹಳ್ಳಿಗಳಿಗಿಂತ ಏರಿಕೆಯಾಗುತ್ತಿದೆ ಎಂದು ತಿಳಿಸಲಾಗಿದೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ವರ್ಷಕ್ಕೆ 192ರಿಂದ 328 ಕಿ.ಗ್ರಾಂನಷ್ಟು ಅಂಗಾರಾಮ್ಲವನ್ನು ಉಸಿರಾಟದ ಮೂಲಕ ಬಿಡುಗಡೆ ಮಾಡುತ್ತಾನೆ. ಅಂದರೆ ಉಸಿರಾಟದಿಂದ ಬಿಡುಗಡೆಯಾದ ಅಂಗಾರಾಮ್ಲವನ್ನು ಮಿತಗೊಳಿಸಲು ಒಬ್ಬ ವ್ಯಕ್ತಿಗೆ ಸುಮಾರು 42ರಿಂದ 55 ಮರಗಳ ಅವಶ್ಯಕತೆಯಿದೆ. ಆದರೆ ನಗರೀಕರಣದ ಪರಿಣಾಮ ಇದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಒಬ್ಬ ವ್ಯಕ್ತಿಗೆ ಒಂದು ಮರವಾದರೂ ಬೇಕು. ಮರಗಳಿಲ್ಲದ ಹಿನ್ನಲೆಯಲ್ಲಿ ಇತ್ತೀಚೆಗೆ ನಗರದಲ್ಲಿ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

50 ವರ್ಷಗಳಲ್ಲಿ ಮುಕ್ಕಾಲು ಭಾಗ ಕೆರೆ ಮಾಯವಾಗಿದ್ದು, 1962ರಲ್ಲಿ ನಗರದಲ್ಲಿ 265 ಕೆರೆಗಳಿದ್ದರೆ, ನವೀಕರಣದಿಂದಾಗಿ 2010ರ ವೇಳೆಗೆ 98ಕ್ಕೆ ಕುಸಿದಿದೆ. ಬಹುತೇಕ ಕೆರೆಗಳು ಒತ್ತುವರಿಯಾಗಿ ವಸತಿ ಬಡಾವಣೆಗಳಾಗಿವೆ. ಒಟ್ಟಿನಲ್ಲಿ ನಗರದಲ್ಲಿ 96 ಲಕ್ಷ ಜನರಿದ್ದರೆ, ಕೇವಲ 15ಲಕ್ಷ ಮರಗಳಿವೆ.

ಮರಗಳ ಸಂಖ್ಯೆ, ಜನರ ಆರೋಗ್ಯಕ್ಕೆ ಒಂದಕ್ಕೊಂದು ನಂಟಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಒಂದೇ ಈ ಕೆಲಸ ಮಾಡಲು ಸಾಧ್ಯವಿಲ್ಲ. ಅರಣ್ಯ, ನಗರಾಭಿವೃದ್ಧಿ ಇಲಾಖೆ ಹಾಗೂ ಮಹಾ ನಗರಪಾಲಿಕೆ ಸೇರಿ ಈ ಕೆಲಸ ಮಾಡಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ್ ಆಚಾರ್ಯ ತಿಳಿಸಿದ್ದಾರೆ.

 

Author : ಚಂದ್ರಲೇಖಾ ರಾಕೇಶ್

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited