Untitled Document
Sign Up | Login    
ಸಿದ್ದರಾಮಯ್ಯ ಸರ್ಕಾರಕ್ಕೆ ಒಂದು ವರ್ಷ ಬದಲಾವಣೆ ತಂದಿದೆಯೇ ಆಡಳಿತ..?

ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಸಿದ್ದರಾಮಯ್ಯ..

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಿ ಪ್ರಾಮಾಣಿಕವಾಗಿ ಆಡಳಿತ ನಡೆಸುವುದಾಗಿ, ನಾನೊಬ್ಬ ಸಾಮಾನ್ಯ ರೈತನ ಮಗ, ರೈತರ ಸಂಕಷ್ಟದ ಬಗ್ಗೆ ಅರಿವಿದ್ದು, ಜನತೆಯ ಬೇಡಿಕೆಗಳ ಬಗ್ಗೆ ತಕ್ಷಣ ಸ್ಪಂದಿಸುವುದಾಗಿ, ಬಿಜೆಪಿ ಸರ್ಕಾರದಲ್ಲಾದ ದುರಾಡಳಿತವನ್ನು ಬದಲಾಯಿಸಿ ರಾಜ್ಯದಲ್ಲಿ ಕಣ್ಣಿಗೆ ಕಾಣುವಂತಹ ಬದಲಾವಣೆ ತರುವುದಾಗಿ ಘೋಷಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಜಕ್ಕೂ ಅಂತಹ ಬದಲಾವಣೆಯನ್ನು ಮಾಡಿದೆಯೇ....? ಈ ಪ್ರಶ್ನೆಗೆ ರಾಜ್ಯದ ಜನತೆಯೇ ಉತ್ತರ ನೀಡಬೇಕು.

ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಯೋಜನೆಗಳನ್ನು ಜಾರಿ ಮಾಡಿರುವುದರಿಂದ ಸ್ವಲ್ಪಮಟ್ಟಿಗೆ ಬಡ ಜನತೆಗೆ ಅನುಕೂಲಮಾಡಿಕೊಟ್ಟದೆ. ಆದರೆ ಬರಬರುತ್ತಾ ಅನ್ನಭಾಗ್ಯ ಯೋಜನೆ ಸಮರ್ಪಕವಾಗಿ ಜಾರಿಯಾಗದೇ ಅದು ಕನ್ನಭಾಗ್ಯವಾಗಿದೆ ಎಂಬುದು ವಿಪರ್ಯಾಸ.

ಇನ್ನು ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಆಡಳಿತದ ಬಗ್ಗೆ ಮುಖ್ಯಮಂತ್ರಿಗಳೇ ಉತ್ತರಿಸಬೇಕು. ಕಳೆದ ಒಂದು ವರ್ಷದ ಅವಧಿಯಲ್ಲಿ ಅಂತಹ ದೊಡ್ಡಪ್ರಮಾಣದ ಭ್ರಷ್ಟಾಚಾರ ನಡೆದಿಲ್ಲವಾದರೂ ಭ್ರಷ್ಟ ಸಚಿವರುಗಳಿಗೆ ಸಂಪುಟದಲ್ಲಿ ಸ್ಥಾನ ನೀಡಿರುವ ಬಗ್ಗೆ, ವಿಪಕ್ಷನಾಯಕರಾಗಿದ್ದಾಗ ಅಕ್ರಮ ಗಣಿಗಾರಿಕೆ ವಿರುದ್ಧ ತೊಡೆತಟ್ಟಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಕೈಗೊಂಡಿದ್ದ ಸಿದ್ದರಾಮಯ್ಯ, ಈಗ ಮುಖ್ಯಮಂತ್ರಿಯಾದ ಬಳಿಕ ಈ ಬಗ್ಗೆ ಚಕಾರವೆತ್ತದಿರುವುದು ರಾಜ್ಯದ ಜನತೆಗೆ ತಿಳಿಯದೇ ಇಲ್ಲ.

ರಾಜ್ಯದ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬ, ಮೂಲಸೌಕರ್ಯಗಳ ಬಗ್ಗೆ ಮೃದು ಧೋರಣೆ, ನಿರುದ್ಯೋಗ ನಿವಾರಣೆಯಲ್ಲಿ ನಿರ್ಲಕ್ಷ್ಯ ಇವೆಲ್ಲ ಸರ್ಕಾರ ಒಂದು ವರ್ಷ ಪೂರೈಸಿದರೂ ಈ ಬಗ್ಗೆ ಸೂಕ್ತ ಗಮನಕೊಡದಿರುವುದು ಬೇಸರದ ಸಂಗತಿ. ಒಂದು ವರ್ಷದ ಅವಧಿಯಲ್ಲಿ ಎಲ್ಲವೂ ಸಾಧ್ಯವಿಲ್ಲವೆಂದರೂ ಸ್ವಲ್ಪಮಟ್ಟಿನ ಸುಧಾರಣೆ ಕಾಣುವಂತಹ ಬದಲಾವಣೆಯನ್ನು ತರಬಹುದಿತ್ತು. ಬಹುಶಃ ಸರ್ಕಾರದ ಆದಾಯವೆಲ್ಲ ಸಾಲ ಮನ್ನಾ, ಅನ್ನ ಭಾಗ್ಯ ಯೋಜನೆಗಳಿಗೇ ವ್ಯಯವಾಗಿ, ಅಭಿವೃದ್ಧಿ ಕಾರ್ಯಗಳು ಕಡೆಗಣಿಸಲ್ಪಟ್ಟಿತೇನೊ..

ಇನ್ನು ರಾಜ್ಯ ಕಾಂಗ್ರೆಸ್ ನಾಯಕರಲ್ಲಿನ ಭಿನ್ನಾಭಿಪ್ರಾಯ, ಭಿನ್ನಮತಗಳು ಸಿದ್ದರಾಮಯ್ಯ ಆಡಳಿತದ ವೇಗಕ್ಕೆ ಕಡಿವಾಣ ಹಾಕಲು ಕಾರಣವಾಗಿ ಸಮನ್ವಯ ಸಮಿತಿ ರಚನೆಯಾದದ್ದು, ಸಿದ್ದರಾಮಯ್ಯನವರ ಏಕಪಕ್ಷೀಯ ನಿರ್ಧಾರಗಳಿಗೂ ಮೂಗುದಾರ ಹಾಕಿದ್ದು ಕೂಡ ಆಡಳಿತಕ್ಕೆ ಬಯಸಿದ ವೇಗ ನೀಡಲು ಸಾಧ್ಯವಾಗದಿರಲು ಕಾರಣ ಎನ್ನಬಹುದೇನೋ..

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಪ್ರಮುಖ ಸಾಧನೆಗಳನ್ನು ಗಮನಿಸುವಾದರೆ ಅನ್ನಭಾಗ್ಯ, ಕ್ಹೀರಭಾಗ್ಯ, ಸಾಲಭಾಗ್ಯ, ಬಿದಾಯಿ ಸೇರಿ ಹಲವು ಯೋಜನೆಗಳ ಜಾರಿ. ಪರಿಶಿಷ್ಟ ವರ್ಗದ ಅನುದಾನ ನಿಗದ ಯೋಜನೆಯಲ್ಲೇ ಬಳಕೆಗೆ ಕಡ್ಡಾಯ ಕಾಯ್ದೆ ಜಾರಿ. ಪ್ರಣಾಳಿಕೆಯಲ್ಲಿ ಘೋಷಿಸಿದ ಭರವಸೆಗಳ ಪೈಕಿ ಶೇ.60ರಷ್ಟು ಭರವಸೆ ಈಡೇರಿಕೆ - ಇವು ಪ್ರಮುಖ ಸಾಧನೆಗಳು.

ಇನ್ನು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರದ ವೈಫಲ್ಯ, ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿ ಮಾಡುವುದಾಗಿ ಹೇಳಿ ಪ್ರತಿಭಟನೆಗೆ ಕಾರಣರಾಗಿ ನಿರ್ಧಾರ ಬದಲಿಸಿದ್ದು, ಜಾತಿ ಆಧಾರದಲ್ಲಿ ಶಾಲಾ ಮಕ್ಕಳಿಗೆ ಪ್ರವಾಸ ವಿಚಾರದಲ್ಲಿ ಗೊಂದಲ ಸೃಷ್ಟಿ, ಲೋಡ್ ಶೆಡ್ಡಿಂಗ್ ಇಲ್ಲವೆಂದು ಹೇಳಿ ಲೋಡ್ ಶೆಡ್ಡಿಂಗ್ ಆರಂಭಿಸಿದ್ದು, ಭ್ರಷ್ಟ ಅಧಿಕಾರಿಗಳು, ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲ ಹೀಗೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನಬಹುದು.

ಒಂದುವರ್ಷ ಆಡಳಿತ ನಡೆಸಿದ ಸಡಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಂದು ವರ್ಷದ ಸಾಧನೆ ತೃಪ್ತಿ ತಂದಿದೆ. ನನ್ನನ್ನು ಕೇಳಿದರೆ ಎಲ್ಲಾ ಸಚಿವರಿಗೂ ನೂರಕ್ಕೆ ನೂರು ಅಂಕ ಕೊಡುತ್ತೇನೆ. ಸಂಪುಟದ ಸಹೋದ್ಯೋಗಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಆರಂಭದ ದಿನಗಳಲ್ಲಿ ಹಲವು ಭರವಸೆಗಳ ಮಹಾಪೂರವನ್ನು ಹರಿಸಿ, ಕೆಲ ಯೋಜನೆಗಳನ್ನು ಜಾರಿಮಾಡಿ ಕುತೂಹಲಕ್ಕೆ ಕಾರಣವಾಯಿತಾದರೂ ಬರಬರುತ್ತಾ ಮೀನಾಮೇಷವೆಣಿಸುತ್ತಾ ಆರಂಭಶೂರತ್ವ ಪ್ರದರ್ಶಿಸಿತೇನೋ ಎಂಬ ಅಭಿಪ್ರಾಯಕ್ಕೆ ಕಾರಣವಾಗಿದೆ.

ಅಂತೂ ಬಿಜೆಪಿ ನಾಯಕರ ಒಳಜಗಳಗಳಿಂದ ಬೇಸತ್ತ ಜನತೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಆಡಳಿತಕ್ಕೆ ತಂದರೂ ಅವರ ಬಹುತೇಕ ನಿರೀಕ್ಷೆಗಳು ಈಡೇರಲಿಲ್ಲ ಎನ್ನುವುದು ಜನಸಾಮಾನ್ಯರ ಅಳಲು.

 

Author : ಲೇಖಾ ರಾಕೇಶ್

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited