Untitled Document
Sign Up | Login    
ಮಕ್ಕಳಿಗಾಗಿ ಮತ್ತೆ ಕಲಿಕೆ ಮುಂದುವರಿಸಿದಳಾ ಅಮ್ಮ..!

ಮಗಳು ಶ್ವೇತಾ ಜತೆ ಜಯಶ್ರೀ (ಚಿತ್ರಕೃಪೆ- ಅಭಿಜಿತ್ ಮಂಡೆ, ರೆಡಿಫ್)

ಅದು ಮುಂಬಯಿಯ ಅಂಧೇರಿ ಸ್ಲಮ್. ಸಾವಿರಾರು ಕುಟುಂಬಗಳಂತೆ ಇವರದ್ದೂ ಒಂದು ಕುಟುಂಬ. ಹೀಗೆ ಹೇಳಿದರೆ ಹತ್ತರೊಟ್ಟಿಗೆ ಹನ್ನೊಂದು ಎಂಬಂತಾಗಿ ಈ ಅಮ್ಮನ ಸಾಹಸಗಾಥೆ ಮರೆಯಾದೀತು. ಬದುಕು ಹಸನು ಮಾಡಲು ಶಿಕ್ಷಣವೇ ಸೂಕ್ತ ಎಂಬುದನ್ನು ಕಂಡಕೊಂಡ ಅಮ್ಮನ ಸಾಹಸಗಾಥೆ ಇದು..

ಮೊನ್ನೆ ಮಾರ್ಚ್ ತಿಂಗಳಲ್ಲಿ ಹತ್ತನೇ ತರಗತಿ ಪರೀಕ್ಷೆ ನಡೆಯುತ್ತಿತ್ತು. ಆಗ ಮಗಳ ಜತೆಗೆ ಪರೀಕ್ಷೆ ಬರೆಯಲು ಬಂದ ಅಮ್ಮ ಎಲ್ಲರ ಗಮನ ಸೆಳೆದರು. ಈ ಅಮ್ಮನ ಜೀವನಗಾಥೆ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಟಿವಿಗಳಲ್ಲಿ ಪ್ರಸಾರವೂ ಆಯಿತು. ಆ ಅಮ್ಮನ ಮಾತುಗಳಲ್ಲೇ ಜೀವನಾನುಭವ ಕೇಳಿದರೆ, ಸೋತು ಹೈರಾಣಾಗುವ ಅಮ್ಮಂದಿರಲ್ಲಿ ಒಂದಿಷ್ಟು ನವಚೈತನ್ಯ ತುಂಬೀತು..

ನನ್ನ ಹೆಸರು ಜಯಶ್ರೀ.. ಮಹಾರಾಷ್ಟ್ರದ ಕೊಂಕಣ ಭಾಗದ ಕರಾವಳಿಯ ಒಂದು ಪುಟ್ಟ ಗ್ರಾಮದಲ್ಲಿ ಜನಿಸಿದೆ. ತಂದೆ ಮುಂಬಯಿಯ ಟೆಕ್ಸ್ ಟೈಲ್ ಮಿಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬದ ಉಳಿದ ಸದಸ್ಯರು ಗ್ರಾಮದಲ್ಲೆ ಉಳಿದುಕೊಂಡಿದ್ದು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇದು 90ರ ದಶಕದ ಮಾತು. ನನ್ನ ಇಬ್ಬರು ಒಡಹುಟ್ಟಿದವರಂತೆ ನಾನು ಕೂಡಾ ಎಂಟನೇ ತರಗತಿ ಓದಿದ ಬಳಿಕ ಶಾಲೆಗೆ ಹೋಗುವುದನ್ನು ನಿಲ್ಲಿಸಬೇಕಾಯಿತು. ಕೃಷಿ ಕೆಲಸ ನನ್ನನ್ನು ಕೈ ಬೀಸಿ ಕರೆಯುತ್ತಿತ್ತು. ತಂದೆಯನ್ನು ಭೇಟಿ ಮಾಡುವ ನೆಪದಲ್ಲಿ ಮುಂಬಯಿಗೆ ಕೆಲವು ಸಲ ಭೇಟಿ ನೀಡಿದ್ದೆ. ಆ ಮಾಯಾ ನಗರಿ ನನ್ನನ್ನು ಹಿಡಿದಿಟ್ಟುಕೊಂಡಿತು. ಗೇಟ್ ವೇ ಆಫ್ ಇಂಡಿಯಾ, ಮ್ಯೂಸಿಯಂ, ಝೂ ಇತ್ಯಾದಿ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿತು. ಆಗ ಅದೆಲ್ಲವೂ ನನಗೆ ಹೊಸತು. ದೊಡ್ಡ ದೊಡ್ಡ ಕಟ್ಟಡಗಳು, ಪ್ರತಿಯೊಬ್ಬರೂ ಏನೋ ತರಾತುರಿಯಲ್ಲಿದ್ದವರಂತೆ ಕಾಣುತ್ತಿದ್ದರು. ಆ ಬಸ್ ಗಳು ಎಲ್ಲವೂ ನನ್ನನ್ನು ಆಕರ್ಷಿಸಿದವು. ಏನೇ ಆಗಲಿ, ಮುಂದೆ ಮದುವೆ ಬಳಿಕ ಬದುಕು ಎಂಬುದೊಂದಿದ್ದರೆ ಅದು ಮುಂಬಯಿಯಲ್ಲೇ ಆಗಲಿ ಎಂದು ನನ್ನ ಮನಸ್ಸು ನಿರ್ಧರಿಸಿಬಿಟ್ಟಿತ್ತು. ಅದರಂತೆ ನಾನು ಮುಂಬಯಿಯ ಯುವಕನನ್ನೇ ಹುಡುಕಿ ಮದುವೆ ಮಾಡಿಸುವಂತೆ ತಂದೆಯಲ್ಲಿ ಬೇಡಿಕೊಂಡೆ.

ಕೊನೆಗೂ ಅಪ್ಪ ಮುಂಬಯಿ ಸಂಬಂಧ ಹುಡುಕುವಲ್ಲಿ ಯಶಸ್ವಿಯಾದರು. ಮದುವೆ ನಮ್ಮೂರಲ್ಲಿ ಮಾಡಿದರೆ ನಾಲ್ಕು ದಿನಗಳ ಕಾರ್ಯಕ್ರಮ. ವೃಥಾ ಖರ್ಚು. ಹೀಗಾಗಿ ಮುಂಬಯಿಯಲ್ಲೇ ಮದುವೆ ಮಾಡುವಂತೆ ದಂಬಾಲು ಬಿದ್ದೆ. ಇಲ್ಲಾದರೆ ಒಂದೇ ದಿನದಲ್ಲಿ ಎಲ್ಲವೂ ಮುಗಿದು ಬಿಡುತ್ತದೆ. ಹಾಗೆ ಅಂದು 1994ರ ಏಪ್ರಿಲ್ 18 ರಂದು ನನ್ನ ಮದುವೆ ನಡೆದೇ ಬಿಟ್ಟಿತು. ಜಯಂತ್ ಕನಮ್ ಎಂಬ ಯುವಕ ನನ್ನ ಬಾಳಿನಲ್ಲೂ, ಅವನ ಬಾಳಿನಲ್ಲಿ ಜಯಶ್ರೀ ಎಂಬ ನಾನೂ ಪ್ರವೇಶಿಸಿದೆವು. ನಮ್ಮಿಬ್ಬರ ಹೊಸ ಬದುಕು ಅಂದು ಆರಂಭವಾಗಿತ್ತು. ಅವರು ಕಾರ್ ಮೆಕಾನಿಕ್. ನಾನು ಮನೆಗೆಲಸ ನೋಡುತ್ತಿದ್ದೆ. ನಮಗಿಬ್ಬರು ಮಕ್ಕಳೂ ಹುಟ್ಟಿದರು. ಶೀತಲ್ ಮತ್ತು ಶ್ವೇತಾ. ಗಂಡ ಮತ್ತು ಮಕ್ಕಳ ಬೇಕು ಬೇಡಗಳ ಜತೆಗೆ ನನ್ನ ಬದುಕು ಬೆಸೆದು ಹೋಯಿತು. ನನಗೂ ಮತ್ತೆ ಓದಬೇಕು ಎಂದೆನಿಸಲಿಲ್ಲ.

ಅಂಧೇರಿಯ ಈ ಕೊಳಚೆ ಪ್ರದೇಶದ 10 ಚದರ ಅಡಿಯ ಪುಟ್ಟ ಗುಡಿಸಲಲ್ಲೇ ವಾಸ. ಬದುಕಿನಲ್ಲಿ ಏರುಪೇರೇನೂ ಇಲ್ಲದಂತೆ ಹೀಗೆ ಹತ್ತು ವರ್ಷ ಕಳೆದೇ ಹೋಯಿತು. ಬದುಕಿನಲ್ಲಿ ನಮ್ಮರಿವಿಗೆ ಬಾರದಂತೆ ಸಂಕಟ, ಸಂಕಷ್ಟಗಳೂ ಬರುತ್ತವೆ ಎಂದು ಹೇಳುವುದು ಕೇಳಿದ್ದೆ. ಆದರೆ ಅದು ನನ್ನ ಬದುಕಿನಲ್ಲೇ ಆಗತ್ತೆ ಅಂದುಕೊಂಡಿರಲಿಲ್ಲ. 2005ರ ಜುಲೈ ತಿಂಗಳು. ಸಹಜವಾಗಿಯೇ ಅದು ಮಳೆಗಾಲದ ಆರಂಭದ ದಿನಗಳು. ಅಂದು ಜುಲೈ 26. ಮುಂಬಯಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಪ್ರತಿ ದಿನ ಸಂಜೆ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಪತಿ ಜಯಂತ್ ಅಂದು ಮನೆಗೆ ಬರಲಿಲ್ಲ. ಮರುದಿನವೂ ಪತಿಯ ಪತ್ತೆಯೇ ಇಲ್ಲ. ಆತಂಕ, ದುಃಖ, ದುಗುಡಗಳು ನಮ್ಮನ್ನಾವರಿಸಿದವು. ಹುಡುಕದ ಜಾಗ ಇಲ್ಲ. ಹರಕೆ ಹೊತ್ತುಕೊಳ್ಳದ ದೇವರಿಲ್ಲ. ಕೊನೆಗೆ ಸ್ಥಳೀಯ ರಿಕ್ಷಾ ಚಾಲಕನೊಬ್ಬ ಪಶ್ಚಿಮ ಮುಂಬಯಿಯ ಲೋಖಂಡವಾಲಾದಲ್ಲಿ ಅಂದರೆ ನಮ್ಮ ಮನೆಯಿಂದ ಮೂರು ಕಿ.ಮೀ. ದೂರದಲ್ಲಿ ಶವವೊಂದು ಪತ್ತೆಯಾಗಿದೆ ಎಂದ. ಹೋಗಿ ನೋಡಿದರೆ, ಗುರುತು ಹಿಡಿಯಲಾರದ ಸ್ಥಿತಿಗೆ ತಲುಪಿತ್ತು ಅದು. ಕೊನೆಗೆ ಅಂಗಿ ಮತ್ತು ಕುತ್ತಿಗೆಯಲ್ಲಿದ್ದ ಜಾಕೆಟ್ ನೋಡಿ ಅದು ಪತಿಯದ್ದೇ ಶವ ಎಂದು ಗೊತ್ತಾಯಿತು. ಪ್ರವಾಹ ಬಂದ ದಿನ ಮಕ್ಕಳಿಬ್ಬರನ್ನೂ ನಾನು ಕಳೆದುಕೊಂಡು ಬಿಡುತ್ತಿದೆ. ಕುತ್ತಿಗೆ ಮಟ್ಟ ನೀರಿನಲ್ಲಿ ಮುಳುಗಿದ್ದ ಅವರನ್ನು ಹೇಗೋ ರಕ್ಷಿಸಿದ್ದೆ. ಆದರೆ ಪತಿಯನ್ನು ಕಳೆದುಕೊಂಡು ಅಧೀರಳಾದೆ.. ಆ ಪ್ರವಾಹಕ್ಕೆ ಬಲಿಯಾಗಿದ್ದು ನನ್ನ ಪತಿ ಮಾತ್ರ.. ದುರದೃಷ್ಟ ಎಂದರೆ ಇದಲ್ಲದೆ ಮತ್ತೇನು ಹೇಳಿ..

ಅಧೀರಳಾಗಿ ಸುಮ್ಮನೆ ಕೂತರೆ ಮನೆ ನಡೆಯಲಾರದು. ಮಕ್ಕಳ ಹಸಿವು, ಅವರ ಕಲಿಕೆ ಎಲ್ಲದಕ್ಕೂ ಹಣ ಹೊಂದಿಸಬೇಕಾಗಿತ್ತು. ಮನೆಗೆಲಸ, ಅಡುಗೆ ಮಾಡುವ ಕೆಲಸ ಹುಡುಕಿದೆ. ಸಿಕ್ಕಿತು. ಅಲ್ಲಿಂದೀಚೆಗೆ ನನ್ನ ದಿನಚರಿ ಬೆಳಗ್ಗೆ 4.30ಕ್ಕೆ ಆರಂಭವಾಗುತ್ತಿದೆ. ಬೆಳ್ಳಂ ಬೆಳಗ್ಗೆ ನಲ್ಲಿ ನೀರಿಗೆ ಕ್ಯೂ ನಿಂತು, ಬಳಿಕ ಶಾಲೆಗೆ ಮಕ್ಕಳನ್ನು ಹೊರಡಿಸಿ 7.30ಗೆಲ್ಲಾ ಮನೆಗೆಲಸಕ್ಕೆ ಹೊರಟುಬಿಡುತ್ತಿದೆ. ಇದರಿಂದ ಸಿಗುತ್ತಿದ್ದ ಅಲ್ಪ ಆದಾಯವೇ ನಮಗೆ ಶ್ರೀರಕ್ಷೆಯಾಗಿತ್ತು. ಇದೇ ವೇಳೆಗೆ ಹೆಚ್ಚುವರಿ ಕೆಲಸದ ಅನ್ವೇಷಣೆಯಲ್ಲಿದ್ದೆ. ಆಗ ಸರ್ಕಾರಿ ಅಂಗನವಾಡಿಯಲ್ಲಿ 2-6 ವರ್ಷದ ಮಕ್ಕಳಿಗೆ ಅಕ್ಷರ ಹೇಳಿಕೊಡುವ ಕೆಲಸ ಸಿಕ್ಕಿತು. ಇದು ಆದಾಯವನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಿತು.

ಎರಡು ವರ್ಷದ ಹಿಂದೆ ನನ್ನ ದೊಡ್ಡ ಮಗಳು ಶೀತಲ್ 10ನೇ ತರಗತಿ ಪಾಸ್ ಮಾಡಿದಳು. ಸಣ್ಣವಳು 8ನೇ ತರಗತಿ ಪಾಸ್ ಮಾಡಿದ್ದಳು. ಅದೊಂದು ದಿನ ಮಕ್ಕಳಿಬ್ಬರೂ, ಬಾಲ್ಯದಲ್ಲಿ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣ ಮುಂದುವರಿಸುವಂತೆ ಒತ್ತಾಯಿಸಿದರು. ಅದು ಕಷ್ಟವೆಂದು ಗೊಣಗಿದೆ. ಕೊನಗೆ ಅವರು ಪಟ್ಟು ಹಿಡಿದುದರಿಂದ ರಾತ್ರಿ ಶಾಲೆಗೆ ಸೇರಿದೆ. ಇಲ್ಲಿ ಸಂಜೆ 6.30ರಿಂದ ರಾತ್ರಿ 9.30ರ ತನಕ ಪಾಠ ಹೇಳುತ್ತಿದ್ದರು. ಹೀಗಾಗಿ ಬೆಳಗ್ಗೆ 4.30ಕ್ಕೆ ಆರಂಭವಾಗುತ್ತಿದ್ದ ನನ್ನ ದಿನಚರಿ ಎಲ್ಲ ಕೆಲಸ, ಶಿಕ್ಷಣದ ಜತೆಗೆ ರಾತ್ರಿ 11ಗಂಟೆಗೆ ಮುಕ್ತಾಯ ಕಾಣುತ್ತಿತ್ತು.. ಸಣ್ಣ ಮಗಳು ಶ್ವೇತಾ ಕೂಡಾ 10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ಕಾರಣ ಅದು ನನಗೆ ಸ್ವಲ್ಪ ನೆರವಾಯಿತು. ಗೊತ್ತಿಲ್ಲದ ವಿಷಯಗಳನ್ನು ನಾವಿಬ್ಬರೂ ಚರ್ಚಿಸಿ ತಿಳಿದುಕೊಳ್ಳುತ್ತಿದ್ದೆವು. ಶೀತಲ್ ಕೂಡಾ ನೆರವಾಗುತ್ತಿದ್ದಳು. ಹೀಗೆ ಮೊನ್ನೆ ಮಾರ್ಚ್ ನಲ್ಲಿ ಪರೀಕ್ಷೆ ಬರೆದಿದ್ದೇನೆ. ಫಲಿತಾಂಶಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದೇನೆ. ಮುಂದೆ ಪದವಿ ಶಿಕ್ಷಣ ಕೂಡಾ ಪೂರೈಸಬೇಕು. ಹೀಗೆ ಮಾಡಿದರೆ ಅಂಗನವಾಡಿಯಲ್ಲಿ ಬಡ್ತಿ ಸಿಗಬಹುದು ನನಗೆ. ಏನಿಲ್ಲವೆಂದರೂ ನನ್ನ ವೇತನದಲ್ಲಿ ಕನಿಷ್ಠ 3000 ರೂ. ಹೆಚ್ಚಳವಾಗಬಹುದು. ಇದು ನನ್ನ ಕುಟುಂಬಕ್ಕೆ ನೆರವಾದೀತು.. ಇದಕ್ಕಿಂತ ಹೆಚ್ಚೇನೂ ಬೇಡ ನನಗೆ ಈ ಬದುಕಿನಲ್ಲಿ..

(ಕೃಪೆ- ರೆಡಿಫ್)

 

Author : ಸಂಗ್ರಹ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited