Untitled Document
Sign Up | Login    
ಮಹಾಮಹಿಮ ವಿಭೂತಿಪುರುಷನ 'ಶಂಕರಪಂಚಮಿ'

.

ಸನಾತನವೂ ಸದಾತನವೂ ಆದ ಸಮೃದ್ಧನಾಗರಿಕತೆ ಹಾಗೂ ಸಾಂಸ್ಕೃತಿಕಹಿನ್ನೆಯುಳ್ಳ ನಾಡೊಂದು ಲೋಕದಲ್ಲಿದ್ದರೆ ಅದು ಭಾರತ ಮಾತ್ರ. ಇಂತಹ ರಾಷ್ಟ್ರದಲ್ಲಿ ಬದುಕಿನ ಜೀವಸ್ರೋತವಾದ ಧರ್ಮಕ್ಕೆ ತೊಂದರೆ ಬಂದಾಗ ತಾನು ಆವಿರ್ಭವಿಸುವೆನೆಂಬುದು ಭಗವಂತ ನೀಡಿದ ಆಶ್ವಾಸನೆ.
ವೈದಿಕಸಂಸ್ಕೃತಿಯ ತೊಟ್ಟಿಲಾದ ಈ ನಾಡಿನಲ್ಲಿ ಧರ್ಮವಿಪ್ಲವವೊಂದು ಒದಗಿದಾಗ ದಿವ್ಯಚೇತನವೊಂದು ಧರೆಗಿಳಿಯಿತು.ಆ ಚೇತನದ ಉಪಸ್ಥಿತಿಯಿದ್ದುದು ಕೇವಲ ಮೂವ್ವತ್ತೆರಡು ವರ್ಷಗಳ ಕಾಲ ಮಾತ್ರ. ಆದರೆ ಮೂವ್ವತ್ತೆರಡು ಸಹಸ್ರಮಾನಗಳಲ್ಲಿ ಮಾಡಲಸಾಧ್ಯವಾದ ಕಾರ್ಯ ಈ ಸೀಮಿತ ಅವಧಿಯಲ್ಲಿ ಸಂಪನ್ನವಾಯಿತು.

ನೇಪಾಳವೂ ಸೇರಿದಂತೆ ಕಾಲ್ನಡಿಗೆಯಲ್ಲಿ ಸಮಗ್ರ ಭಾರತದ ಪರಿಭ್ರಮಣ. ಮುಂದೆಂದೂ ಈ ನಾಡಿನಲ್ಲಿ ಅಂತಹ ಧರ್ಮಗ್ಲಾನಿಯುಂಟಾಗದಂತೆ ಶಾಶ್ವತವಾದ ಮಠಗಳ ಸ್ಥಾಪನೆ. ಪ್ರಸ್ಥಾನತ್ರಯಕ್ಕೆ ಪ್ರಸನ್ನಗಂಭೀರಶೈಲಿಯ ಅನಿತರಸಾಧಾರಣವಾದ ಭಾಷ್ಯಗ್ರಂಥಗಳ ರಚನೆ . ವೇದಾಂತದರ್ಶನದಲ್ಲಿ ಘನಹಿಮಗಿರಿಯಾಗಿಯೂ ಸಾಮಾನ್ಯಜನರಿಗಾಗಿ ಸುಮಧುರದ್ರಾಕ್ಷಾಪಾಕದ ಸ್ತೋತ್ರಗಳ ಅನುಗ್ರಹ. ತನ್ನ ಅವತಾರಕಾರ್ಯವು ಸಮಾಪ್ತವಾಗಿದೆಯೆನ್ನಿಸಿದಾಗ ಬದರಿಯಲ್ಲಿ ಅಂತರ್ಧಾನ. ನಿಜ, ಇಂತಹ ಅಪೂರ್ವವೂ ಅಸಾಧಾರಣವೂ ಆದ ಕಾರ್ಯಗಳ ಮೂಲಕ ಈ ಲೋಕದಲ್ಲಿ ಜಗದ್ಗುರು ಎಂಬ ಪದಕ್ಕೆ ಸಾರ್ಥಕ್ಯವನ್ನು ನೀಡಿದ ಈ ದಿವ್ಯಚೇತನವನ್ನು ವಿಭೂತಿಪುರುಷನನ್ನು ಜಗತ್ತು ಶ್ರೀಮದಾಚಾರ್ಯಶಂಕರಭಗವತ್ಪಾದರೆಂದು ಗುರುತಿಸಿದೆ ಹಾಗೂ ನತಮಸ್ತಕವಾಗಿ ಗೌರವಿಸಿದೆ.

ಕೇರಳದ ಕಾಲಟಿಯಲ್ಲಿ ಮಕ್ಕಳಿಲ್ಲದೆ ಅದಕ್ಕಾಗಿ ತಪಸ್ಸು ಮಾಡುತ್ತಿದ್ದ ಶಿವಗುರು ಆರ್ಯಾಂಬಾದಂಪತಿಗಳ ಪುತ್ರರೂಪದಲ್ಲಿ ಜನನ. ಶಂಕರನ ಅನುಗ್ರಹರೂಪವೆಂದು ತಂದೆತಾಯಿಗಳಿಂದ ಶಂಕರನೆಂದು ನಾಮಕರಣ. ಶೈಶವದಲ್ಲಿಯೇತಂದೆಯ ಅಕಾಲಿಕಮರಣ.ದಾಯಾದರಿಂದ ಮುಂದಿನ ಲೋಕೋಪದೇಶಕನಿಗೆ ಬ್ರಹ್ಮೋಪದೇಶ. ಆ ಕಾಲದ ಗುರುಕುಲದ ನಿಯಮವಾಗಿದ್ದ ಭಿಕ್ಷೆಗೆ ಹೋದಾಗ ಬಡಬ್ರಾಹ್ಮಣನ ಮನೆಯೊಂದರಲ್ಲಿ ದಾರಿದ್ರ್ಯದ ದರ್ಶನ. ಅನುಕಂಪಗೊಂಡ ಬಾಲಬ್ರಹ್ಮಚಾರಿಯಿಂದ ಲಕ್ಷ್ಮೀಸ್ತೋತ್ರ, ಕನಕಾಮಲಕದ ಸುರಿಮಳೆ.

ಸಂಸಾರದ ನಿಸ್ಸಾರತೆಯ ಅರಿವಿನಿಂದಾಗಿ ಸನ್ಯಾಸದತ್ತ ಒಲವು. ನರ್ಮದಾನದಿಯ ತಟದಲ್ಲಿದ್ದ ಗೋವಿಂದ ಭಗವತ್ಪಾದರಿಂದ ಸನ್ಯಾಸಗ್ರಹಣ. ಭರತಖಂಡದಲ್ಲಿ ಪ್ರಚಲಿತವಾಗಿದ್ದ ನಾಸ್ತಿಕದರ್ಶನದಮೇಲಿನ ಆದರವನ್ನು ದೂರಮಾಡಿ ಅವೈದಿಕವಾದ ಮತಗಳಲ್ಲಿನ ದೋಷಗಳನ್ನು ಪ್ರದರ್ಶಿಸಿ ವೈದಿಕವಾದ ಕರ್ಮಗಳನ್ನು ಪರಿಕ್ಷಾಲಿಸಿದ ಆಚಾರ್ಯರೂ ಇವರೇ. ಕಾಲಪ್ರವಾಹದ ಆಘಾತಕ್ಕೆ ಸಿಲುಕಿ ಮಸುಕಾಗಿದ್ದ ಆರ್ಷೇಯವಾದ ಉಪನಿಷತ್ ಪ್ರಣೀತವಾದ ದರ್ಶನದ ಮಹತ್ವವನ್ನು ಮುಂಗಾಣಿಸಿ ಸನಾತನವಾದ ಧರ್ಮಕ್ಕೆ ಭದ್ರವಾದ ಸ್ಥಾನವನ್ನು ಪ್ರಕಲ್ಪಿಸಿದ್ದರಿಂದಾಗಿ "ಷಣ್ಮತಸ್ಥಾಪನಾಚಾರ್ಯ" ಬಿರುದು. ಸಮಗ್ರರಾಷ್ಟ್ರದಲ್ಲಿ ಏಕತೆ ಹಾಗೂ ಅಖಂಡತೆಗಳನ್ನು ತಮ್ಮ ಏಕಾತ್ಮತಾಸಿದ್ಧಾಂತದಿಂದ ಸರ್ವಮತಸಾಮರಸ್ಯವನ್ನು ಬೋಧಿಸಿದ ಮಹಾವಿಭೂತಿಪುರುಷ ಶ್ರೀಮದಾಚಾರ್ಯರೆಂದರೆ ಅದರಲ್ಲಿ ಅತಿಶಯೋಕ್ತಿಯೇನೂ ಇಲ್ಲ.

ಶ್ರೀಮದಾಚಾರ್ಯರ ವಿಶ್ವಮಾನವತತ್ವ-

ಸಹಜವಾಗಿ ಒಂದೇಕುಟುಂಬದವರಾಗಿರುವುವರಲ್ಲಿ ಅಣ್ಣತಮ್ಮಂದಿರುಗಳಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಆದ್ದರಿಂದ ಅವರು ಪರಸ್ಪರ ಕಚ್ಚಾಡಬಾರದು ಎಂಬುದು ಸಾಮಾನ್ಯವಾದ ತಿಳುವಳಿಕೆ.ಆದರೆ ಅದಕ್ಕಿಂತಲೂ ಒಂದು ಹೆಜ್ಜೆ ಮುಂದುವರೆದು ಈ ಲೋಕದಲ್ಲಿರುವ ಸರ್ವಮನುಷ್ಯರೂ ಸಹೋದರರೇ, ಎಲ್ಲರೂ ಆ ಪರಮಾತ್ಮನ ಮಕ್ಕಳೇ ಭಗವತ್ ಸ್ವರೂಪರೇ, ಎಲ್ಲರೂ ನಿಮ್ಮವರೇ ಆಗಿರುವಾಗ ಪರಸ್ಪರಕಲಹವೇಕೆಂದು ಮೊಟ್ಟಮೊದಲಬಾರಿಗೆ ವಿಶ್ವಭ್ರಾತೃತ್ವದ ಸಂದೇಶವನ್ನು ನೀಡಿದ ಲೋಕದ ಪ್ರಥಮದಾರ್ಶನಿಕರೂ ಶ್ರೀಮದಾಚಾರ್ಯರೇ ಎಂಬುದನ್ನು ಗಮನಿಸಿದಾಗ ಭಾರತೀಯರಾದ ನಮ್ಮಲ್ಲಿ ಹೆಮ್ಮೆ ಗರಿಗೆದರುತ್ತದೆ.

ಯತ್ರ ವಿಶ್ವಂ ಭವತ್ಯೇಕನೀಡಮ್ ಎಂಬ ವೇದೋಕ್ತಿಯು "ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣುಃ ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ " ಎಂಬ ಅವರ ಉಪದೇಶದಲ್ಲಿ ಪ್ರತಿಧ್ವನಿತವಾದಾಗ ಆ ಹೆಮ್ಮೆಗೆ ಕೋಡೂ ಮೂಡುತ್ತದೆ. ಜ್ಣಾನಿಯಾದವನು ಚಂಡಾಲನಾಗಿರಲಿ, ಅಥವಾ ಬ್ರಾಹ್ಮಣನಾಗಿರಲಿ ಆತ ನನ್ನ ಗುರು ಎಂದು ಉದ್ಘೋಷಿಸಿದಂತಹ ದಾರ್ಶನಿಕರನ್ನು ಬೇರೆಲ್ಲಿ ನೋಡಲು ಸಾಧ್ಯ? ಅಷ್ಟೇ ಅಲ್ಲ "ಸರ್ವೇಷಾಂ ಚಾಧಿಕಾರೋ ವಿದ್ಯಾಯಾಮ್" ಸಕಲಮಾನವರೂ ವಿದ್ಯೆಗೆ ಅಧಿಕಾರಿಗಳು, ಅದನ್ನು ತಡೆಯುವುದು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ ಎಂದು ಹೇಳಿದ ಲೋಕದ ಪ್ರಥಮಾಚಾರ್ಯರೂ ಶ್ರೀಶಂಕರರೇ ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ.ಶ್ರೀಮದಾಚಾರ್ಯರುಭಾರತಾದ್ಯಂತ ಓಡಾಡಿ ಮಠಗಳನ್ನು ಸ್ಥಾಪಿಸಿ ಸನಾತನವಾದ ವೈದಿಕ ಸಂಸ್ಕೃತಿಗೆ ಜೀವವನ್ನು ತುಂಬದಿರುತ್ತಿದ್ದರೆ ತಮ್ಮ ವಿಶ್ವಮಾನ್ಯವಾದ ಸುಲಭಸ್ತೋತ್ರಗಳಮೂಲಕ ಜನಮಾನಸವನ್ನು ಒಂದುಗೂಡಿಸದಿರುತ್ತಿದ್ದರೆ ಇಂದು ನಾವು ಭಾರತೀಯರಾಗಿರುತ್ತಿರಲಿಲ್ಲ.

ಇಂತಹ ಮಹಾಮಹಿಮ ವಿಭೂತಿಪುರುಷರ ಪ್ರಥಮಪ್ರಕಾಶವಾಗಿದ್ದು ವೈಶಾಖ ಶುಕ್ಲಪಂಚಮೀ ದಿನ. ಶಾಂಕರಮತಾಭಿಮಾನಿಗಳಿಗೆ ಮಾತ್ರವಲ್ಲ, ಲೋಕದ ಎಲ್ಲ ಆಸ್ತಿಕರಿಗೂ ಈ ದಿನ ಮಾನ್ಯವೇ. ಇಂತಹ ಸಂದರ್ಭದಲ್ಲಿ ಸಿದ್ಧಾಪುರದ ಭಾನ್ಕುಳಿಮಠದಲ್ಲಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀಮದ್ರಾಮಚಂದ್ರಾಪುರಮಠದ ಪೀಠಾಧ್ಯಕ್ಷರಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರ ದಿವ್ಯಸಂಕಲ್ಪ ಹಾಗೂ ಸಾನ್ನಿಧ್ಯಗಳಲ್ಲಿ ಈ ವರ್ಷದ ಶಂಕರಪಂಚಮೀ ಕಾರ್ಯಕ್ರಮವು ಆಯೋಜಿತವಾಗಿದೆ.ವೇದಾಭಿಮಾನಿಗಳನ್ನು,ಆಸ್ತಿಕರಾದ ಭಾವುಕರನ್ನು ಶಾಸ್ತ್ರಕುತೂಹಲಿಗಳನ್ನು,ತಣಿಸುವ,ಪರಿಗಣಿಸುವ ಗೌರವಿಸುವ ವಿವಿಧ ಪ್ರಕ್ರಮಗಳ ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ನಿಜವಾಗಿಯೂ ಇದೊಂದು ಸುಂದರ ಶ್ರದ್ಧಾಸುಮಸಮರ್ಪಣ.

 

Author : ಕೆ. ಸತ್ಯನಾರಾಯಣ ಶರ್ಮಾ ಗೋಕರ್ಣ

Author's Profile

ಲೇಖಕರು ಸಂಸ್ಕೃತ ಪ್ರಾಧ್ಯಾಪಕರು, ಆಧ್ಯಾತ್ಮ ಪರಂಪರೆ ಸಂಶೋಧಕರು.

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited