Untitled Document
Sign Up | Login    
ಗೋಕರ್ಣ ಮಹಾಬಲೇಶ್ವರನ ಹುಡುಕಾಟ ಬದಲಾಯ್ತು ಗೂಗಲ್ ಸರ್ಚ್ ವರ್ಡ್ ! ಭಾಗ 2

ಗೋಕರ್ಣ ಕ್ಷೇತ್ರ

ಇದು ಶಾಂಕರ ಪೀಠ

ಅಂದು ಆರಂಭವಾದ ರಘೂತ್ತಮ ಮಠದ ಪೀಠ ಪರಂಪರೆ ಇಲ್ಲಿ ತನಕ ಅವಿಚ್ಛಿನ್ನವಾಗಿ ಹರಿದು ಬಂದಿದೆ.ಇದನ್ನೆಲ್ಲಾ ಉಕ್ಕುಕ್ಕಿ ಅಬ್ಬರಿಸಿ ಎತ್ತೆತ್ತರಕ್ಕೆ ಏರುವ ಅಲೆಗಳ ಭೋರ್ಗರೆವ ಸಮುದ್ರ ಶಾಂತವಾಗಿ ನೋಡುತ್ತಾ ಬಂದಿದೆ.
ಈ ಶಾಂಕರ ಪೀಠದ ಹತ್ತನೆಯ ಗುರುಗಳು ಶ್ರೀಚಿದ್ಭೋಧಭಾರತೀಮಹಾಸ್ವಾಮಿಗಳು.ಅವರ ಕಾಲದಲ್ಲಿ ಅವರಿಗೆ ವಿಜಯನಗರಸಾಮ್ರಾಜ್ಯಸ್ಥಾಪಕರಾದ ಹಾಗೂ ಶೃಂಗೇರಿಶಾರದಾಪೀಠಾಧಿಪತಿಗಳಾದ ಶ್ರೀವಿದ್ಯಾರಣ್ಯಮಹಾಸ್ವಾಮಿಗಳು ತಮ್ಮ ಜ್ಯೇಷ್ಠಪರಂಪರೆಯ ಪೀಠ ಎಂಬ ಹಿನ್ನೆಲೆಯಲ್ಲಿ ಸಿಂಹಾಸನ, ಕಿರೀಟ ಮೊದಲಾದ ರಾಜಲಾಂಛನಗಳನ್ನು ಶ್ರೀಕ್ಷೇತ್ರಾಧೀಶ ಮಹಾಬಲೇಶ್ವರನ ಸನ್ನಿಧಿಯಲ್ಲಿಟ್ಟು ಗೌರವಿಸಿದರು. ಇದೇ ಸಮಯದಲ್ಲಿ ವಿಜಯನಗರದ ದೊರೆ ದೇವರಾಯನೂ ಈ ಧರ್ಮಪೀಠವನ್ನು ರಾಜಗುರುಪೀಠ ಎಂದು ಸ್ಥಿರೀಕರಿಸಿದ ಮಾತ್ರವಲ್ಲ ಇನ್ನೂ ಕೆಲವು ರಾಜಮರ್ಯಾದೆಗಳನ್ನು ಸಮರ್ಪಿಸಿದ.
ಇದೇ ರಘೂತ್ತಮಮಠದ ಪೀಠಾಧಿಪತಿಗಳು ಆಯಾ ಕಾಲಘಟ್ಟದಲ್ಲಿದ್ದ ಆಳರಸರಿಗೆ, ಸಮಾಜಕ್ಕೆ ಧಾರ್ಮಿಕ ಮಾರ್ಗದರ್ಶನ ಮಾಡುತ್ತಿದ್ದರು. ಆ ಕಾಲದ ಅರಸರು ಗೋಕರ್ಣ ಮಹಾಬಲೇಶ್ವರನ ಅಮೃತಪಡಿ, ನಿತ್ಯನೈಮಿತ್ತಿಕ ಕಟ್ಟಲೆಗಳು, ಯತಿಭಿಕ್ಷೆ ಮೊದಲಾದ ಧರ್ಮಕಾರ್ಯಗಳಿಗೆ ಅನೇಕ ಅಗ್ರಹಾರಗಳನ್ನೂ, ಭೂಮಿಯನ್ನೂ ಕಾಣಿಕೆಗಳನ್ನೂ ಉಂಬಳಿಯನ್ನಾಗಿ ಬಿಟ್ಟರು. ಇದೆಲ್ಲವೂ ಕಾಗೆ ಗುಬ್ಬಿ ಕಥೆಗಳಲ್ಲ.ಎಲ್ಲದಕ್ಕೂ ಕಾಲಕಾಲದಲ್ಲಿ ಸಾಕ್ಷೀಭೂತವಾಗಿ ಧರ್ಮಶಾಸನಗಳಿವೆ.

ಕೆಳದಿ ಅರಸರ ಕೇಳ್ಕೆ

ರಘೂತ್ತಮಮಠದ ಹನ್ನೊಂದನೆಯ ಪೀಠಾಧಿಪತಿಗಳಾಗಿ ಬಂದವರು ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು.ಅವರು ಮೊದಲ ರಾಘವೇಶ್ವರಶ್ರೀಗಳು.ಅವರ ಕಾಲ ಸುಮಾರು ಕ್ರಿ. ಶ.1400 ಎಂದು ಗುರುತಿಸಲಾಗಿದೆ. ರಾಘವೇಶ್ವರಶ್ರೀಗಳ ಶಿಷ್ಯರು ಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳು.ಅವರ ಕಾಲದಲ್ಲಿ ಕೆಳದಿಸಂಸ್ಥಾನದ ಅರಸರು ಕೆಳದಿ ಸಂಸ್ಥಾನಕ್ಕೆ ಸೇರಿದ ಹೊಸನಗರ ಸಮೀಪದ ಅಗಸ್ತ್ಯಾಶ್ರಮ ಪ್ರದೇಶದಲ್ಲಿ ನೂತನ ಮಠಾಯತನವೊಂದನ್ನು ನಿರ್ಮಿಸಿದರು. ರಾಮಚಂದ್ರಾಪುರ ಎಂಬ ಹೆಸರಿನಲ್ಲಿ ಉಂಬಳಿಯಾಗಿ ಬಂದ ಪ್ರದೇಶದಲ್ಲಿನ ಮಠಕ್ಕೆ ಶ್ರೀರಾಮಚಂದ್ರಾಪುರಮಠವೆಂದೇ ಹೆಸರಾಯಿತು. ಗೋಕರ್ಣದ ರಘೂತ್ತಮಮಠ ಹಾಗೂ ಶ್ರೀಕ್ಷೇತ್ರ ಗೋಕರ್ಣಮಹಾಬಲೇಶ್ವರ ದೇವಾಲಯಗಳ ಆಡಳಿತವ್ಯವಸ್ಥೆಯೂ ಸಹಜವಾಗಿಯೇ ಹೊಸನಗರದ ಶ್ರೀರಾಮಚಂದ್ರಾಪುರಮಠಕ್ಕೆ ಸಂದಿತು.ಗೋಕರ್ಣ ಶ್ರೀರಘೂತ್ತಮಮಠವು ಮುಂದೆ ನಾಮಾಂತರಗೊಂಡಿತು.

ಈ ನಡುವೆ 1997 ರಲ್ಲಿ ಕರ್ನಾಟಕ ಹಿಂದೂ ರಿಲೀಜಿಯಸ್ ಆಂಡ್ ಚಾರಿಟೇಬಲ್ ಎಂಡೋಮೆಂಟ್ಸ್ ಆಕ್ಟ್ ನಡಿ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಸರಕಾರ ಆಗಲೇ ನೋಟಿಫೈ ಮಾಡಿಬಿಟ್ಟಿತ್ತು.ಏಕರೂಪ ಶಾಸನದಡಿ ಗೋಕರ್ಣ ಸರಕಾರದ ಪಾಲಾಗಿತ್ತು. ಇದು ಸ್ವತಃ ದೇವಾಲಯದ ಉಪಾಧಿವಂತರಿಗೆ ಇಷ್ಟವಾದ ವಿಚಾರವಾಗಿರಲಿಲ್ಲ.ಸರಕಾರದ ಕೈಯಲ್ಲಿ ದೇವಾಲಯ ಇರುವುದು ದೇವರ ಕೆಲಸವನ್ನು ಸರಕಾರದ ಏಜಂಟರಾಗಿ ಮಾಡುವುದು ಉಪಾಧಿವಂತರಿಗೆ ಸಹ್ಯ ಆಗುತ್ತಿರಲಿಲ್ಲ. ಹೀಗೆ ಶ್ರೀಮಠದ ಕೈ ತಪ್ಪಿ ಹೋಗಿದ್ದ ಗೋಕರ್ಣ ಕ್ಷೇತ್ರದ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಅವ್ಯವಸ್ಥೆ ಕಣ್ಣಿಗೆ ರಾಚುತ್ತಿತ್ತು. ಆಧ್ಯಾತ್ಮಿಕ ಕ್ಷೇತ್ರವಾಗಿದ್ದ ಗೋಕರ್ಣ "ವಿಲಾಸಿ ತಾಣ''ವೆಂಬ ಪೊರೆ ಮುಸುಕಿತ್ತು.

ಪುನರುತ್ಥಾನದ ಜವಾಬ್ದಾರಿ ಶ್ರೀ ಮಠಕ್ಕೆ

ವಾಸ್ತವವಾಗಿ ಗೋಕರ್ಣ ದೇವಾಲಯ ಶತಮಾನ ಹಿಂದೆ ಶ್ರೀರಾಮಚಂದ್ರಾಪುರಮಠದ ಆಡಳಿತದಲ್ಲೇ ಇತ್ತು. ಈ ಹಿನ್ನೆಲೆಗಳೆಲ್ಲಾ ಅರೆ ಕ್ಷಣ ವಿಸ್ಮೃತಿಗೆ ಒಳಗಾದಂತೆ ರಾಜ್ಯ ಸರಕಾರ ತಪ್ಪಾಗಿ ಒಂದು ಕೆಲಸ ಮಾಡಿತು.ಅದೇ ಮುಜರಾಯಿ ಇಲಾಖೆಯಲ್ಲಿ ಗೋಕರ್ಣ ದೇವಸ್ಥಾನ ತಪ್ಪಾಗಿ ನೋಟಿಫಿಕೇಶನ್ ಮಾಡಿದ್ದು.

ಉಪಾಧಿವಂತರು ಸುಮ್ಮನೇ ಉಳಿಯಲಿಲ್ಲ.ಅವರೆಲ್ಲಾ ಒಟ್ಟಾಗಿ ಸರಕಾರದ ಮುಂದೆ ನಿಂತರು. ಈ ಕ್ಷೇತ್ರ ಶ್ರೀರಾಮಚಂದ್ರಾಪುರಮಠಕ್ಕೆ ಸೇರಿದ್ದು ಇದನ್ನು ಮಠಕ್ಕೆ ಬಿಟ್ಟುಕೊಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಿದರು. ಇದಕ್ಕೆ ಪೂರಕವಾಗಿ ಗೋಕರ್ಣ ದೇವಸ್ಥಾನದಲ್ಲಿ ಆಡಳಿತ ಪೂರ್ಣವಾಗಿ ಹದಗೆಟ್ಟಿದೆ. ಶ್ರೀಕ್ಷೇತ್ರವು ಧಾರ್ಮಿಕ ವಿಚಾರಗಳ ಮಹತ್ವ ಕಳೆದುಕೊಂಡಿದೆ. ಶ್ರೀಗಳಿಗೇ ಶ್ರೀಕ್ಷೇತ್ರದ ಆಡಳಿತ ಮತ್ತೆ ವಹಿಸಿ ಕೊಡಬೇಕು ಎಂದು ಅನೇಕ ಸ್ಥಳೀಯರು ಮತ್ತು ಸಂಘ ಸಂಸ್ಥೆಗಳೂ ಮನವಿ ಮಾಡಿದ್ದವು.

ರಾಜ್ಯ ಸರಕಾರ ತನ್ನ ಅಚಾತುರ್ಯವನ್ನು ತಿದ್ದಿಕೊಂಡಿತು.ಅದು ಅಗಸ್ಟ್ 14, 2008. ರಾಜ್ಯ ಸರಕಾರ ಶ್ರೀಮಠವನ್ನು ಕೇಳಿಯೇ ಗೋಕರ್ಣದ ಅಧಿಕಾರವನ್ನು ಮಠಕ್ಕೆ ಹಸ್ತಾಂತರಿಸಿತು. ಹೀಗೆ ಗೋಕರ್ಣ ರಾಮಚಂದ್ರಾಪುರ ಮಠದ ತೆಕ್ಕೆಗೆ ಬಂದಿತು. ಕಳೆದು ಹೋದ ಮಗು ಮರಳಿ ತಾಯಿಯನ್ನು ಸೇರಿಕೊಂಡ ಹಾಗೇ ..ಗೋಕರ್ಣ ದೇವಸ್ಥಾನ ಶ್ರೀರಾಮಚಂದ್ರಾಪುರಮಠಕ್ಕೆ ಬಂದ ರೀತಿ ಇದು. ಗೋಕರ್ಣಕ್ಕೆ ಹೊಸ ಭಾಷ್ಯ ಬರೆಯಬೇಕೆಂಬ ರಾಘವೇಶ್ವರಶ್ರೀಗಳ ಇಚ್ಛಿತ ನಡೆ ಗೋಕರ್ಣದ ಆತ್ಮಲಿಂಗದ ತಳದಲ್ಲಿ ಹೊಸ ತರಂಗ ಮೂಡಿಸುತ್ತಿತ್ತು.ಮಹಾಬಲೇಶ್ವರ ದೇವರು ಶ್ರೀಗಳ ಆಗಮನಕ್ಕೆ ಕಾಯುತ್ತಿದ್ದಂತಿತ್ತು. ಇದಕ್ಕೆ ಪೂರಕವಾಗಿ ಗೋಕರ್ಣವನ್ನು ಸರಕಾರವೇ ತಾನೇ ತಾನಾಗಿ ಮಠಕ್ಕೆ ಒಪ್ಪಿಸಿದೆ.ಏಕೆಂದರೆ ಗೋಕರ್ಣ ಇನ್ಯಾರದ್ದೂ ಅಲ್ಲ,ಅದು ರಾಮಚಂದ್ರಾಪುರ ಮಠದ್ದೇ ಎಂಬುದು ಸರಕಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮನದಟ್ಟಾಗಿದೆ..ಮಠವೇ ಅದನ್ನು ಕೇಳಿ ಪಡೆದುಕೊಂಡದ್ದೂ ಇಲ್ಲ.ಗೋಕರ್ಣ ಚಿನ್ನದ ಮೊಟ್ಟೆ ಇಡುವ ಕೋಳಿಯೂ ಅಲ್ಲ.ಅದು ಶ್ರೀಮಠದ ಆದಾಯದ ಮೂಲವೂ ಅಲ್ಲ. ಇಷ್ಟಕ್ಕೂ ರಾಮಚಂದ್ರಾಪುರ ಮಠ, ಹಣದ ಥೈಲಿಯ ಹಿಂದೆ ಹೋಗುವ ಜಾಯಮಾನವುಳ್ಳದ್ದಲ್ಲ. ರಾಘವೇಶ್ವರಶ್ರೀಗಳು ಧರ್ಮಪೀಠ ಮೇಲೆ ಎಂದು ನಂಬಿ ನಡೆಯುತ್ತಿರುವವರು.

ಮುಂದುವರಿಯುವುದು...

 

Author : ಕೆ.ಅಮ್ಮಂಕಲ್ಲು 

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited