.
ಲೋಕಸಭಾ ಚುನಾವಣೆಯ ಆರು ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಮುಂದಿನ ನಾಲ್ಕು ಹಂತಗಳಲ್ಲಾಗಿ 311 ಸ್ತಾನಗಳ ಮತದಾನ ನಡೆಯಲಿದೆ. ಮುಂದಿನ ಹಂತಗಳ ಚುನಾವಣೆಯಲ್ಲಿಯೇ ನರೇಂದ್ರ ಮೋದಿ, ಆಡ್ವಾಣಿ, ಸುಷ್ಮಾ, ಸೋನಿಯಾ, ರಾಹುಲ್ ಸೇರಿದಂತೆ ಘಟಾನುಘಟಿ ನಾಯಕರ ಭವಿಷ್ಯ ನಿರ್ಧರಿಸಲ್ಪಡಲಿದೆ.
2009ರ ಚುನಾವಣೆ ಗಮನಿಸಿದರೆ, ಮುಂದಿನ ಹಂತಗಳಲ್ಲಿ ಚುನಾವಣೆ ನಡೆಯುವ 311 ಸ್ಥಾನಗಳ ಪೈಕಿ ಕಾಂಗ್ರೆಸ್ 109ರಲ್ಲಿ ಗೆದ್ದುಕೊಂಡಿತ್ತು. ಬಿಜೆಪಿಗೆ ಕೇವಲ 57 ಸ್ಥಾನಗಳಷ್ಟೇ ದಕ್ಕಿದ್ದವು ಈಗ ಕಾಲ ಚಕ್ರ ಉರುಳಿದೆ. ಈ ಚುನಾವಣೆಯಲ್ಲಿ ಮತದಾರನ ಒಲವು ಯಾರ ಕಡೆಗೆ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ. ಅಷ್ಟೇ ಅಲ್ಲ, "ಮೋದಿ ಅಲೆ''ಯ ಪರೀಕ್ಷಾ ಕಾಲವೂ ಇದಾಗಿದ್ದು, ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಹೇಗೆ ಎದುರಿಸಲಿದೆ ಎಂಬುದೂ ಕುತೂಹಲದ ವಿಚಾರ.
ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ ಐದನೇ ಒಂದು ಭಾಗದಷ್ಟು ಸ್ಥಾನಗಳು(120) ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿವೆ. ಗುಜರಾತ್, ಪಂಜಾಬ್, ತಮಿಳುನಾಡು ಮೊದಲಾದೆಡೆ ಕೂಡಾ ಮುಂದಿನ ಹಂತದಲ್ಲೇ ಚುನಾವಣೆ ನಡೆಯಲಿದೆ. ಆಂಧ್ರ, ತಮಿಳುನಾಡು, ಆಂಧ್ರದಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆಯುವ ನಿರೀಕ್ಷೆ ಇದೆಯಾದರೂ, ಮಿತ್ರ ಪಕ್ಷಗಳ ಸಹಕಾರ ಕೂಡಾ ಇಲ್ಲಿ ಪ್ರಮುಖವಾದುದು. ತಮಿಳುನಾಡಿನಲ್ಲಿ ಬಿಜೆಪಿ ರೈನ್ ಬೋ ಮೈತ್ರಿ (ಏಳು ಪಕ್ಷಗಳ ಮೈತ್ರಿ) ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ರೈನ್ ಬೋ ಮಿತ್ರ ಪಕ್ಷಗಳು 2009ರ ಚುನಾವಣೆಯಲ್ಲಿ ಶೇಕಡ 20ರಷ್ಟು ಮತ ಪಡೆದುಕೊಂಡಿದ್ದು ಈ ಬಾರಿ ಮೈತ್ರಿ ಮಾಡಿಕೊಂಡಿರುವುದು ಅನುಕೂಲವಾಗಲಿದೆ ಎಂಬ ಮಾತು ಕೇಳುತ್ತಿದೆ.
ಆಂಧ್ರದಲ್ಲಿ ಬಿಜೆಪಿ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ವೈಎಸ್ ಆರ್ ಕಾಂಗ್ರೆಸ್ ಸವಾಲನ್ನು ಎದುರಿಸುವ ಸಾಧ್ಯತೆ ಇದೆ. 2009ರಲ್ಲಿ ಪಂಜಾಬಿನಲ್ಲಿ 13 ಸ್ಥಾನಗಳ ಪೈಕಿ ಕಾಂಗ್ರೆಸ್ ಎಂಟನ್ನು ಗೆದ್ದುಕೊಂಡಿತ್ತು. ಈ ಬಾರಿ ಇಲ್ಲಿ ಬಿಜೆಪಿ-ಅಕಾಲಿದಳ ಮೈತ್ರಿಕೂಟ ಮುನ್ನಡೆ ಸಾಧಿಸಬಹುದೆಂಬ ವಿಚಾರ ಪ್ರಚಲಿತದಲ್ಲಿದೆ.
ಕುತೂಹಲ: ಸೋನಿಯಾ ಗಾಂಧಿ(ರಾಯ್ ಬರೇಲಿ), ರಾಹುಲ್ ಗಾಂಧಿ(ಅಮೇಠಿ) ನರೇಂದ್ರ ಮೋದಿ(ವಾರಾಣಸಿ) ಅವರ ಪ್ರಚಾರ ಕಾರ್ಯ ತೀವ್ರಗೊಂಡಿದ್ದು, ಏ.30, ಮೇ 7, ಮೇ 12ರಂದು ಅನುಕ್ರಮವಾಗಿ ಇವರ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೋದಿ ಎದುರಾಳಿ ಎಎಪಿಯ ಸಂಚಾಲಕ ಅರವಿಂದ ಕೇಜ್ರಿವಾಲ್, ಗಾಂಧಿನಗರದಲ್ಲಿ ಬಿಜೆಪಿಯ ಹಿರಿಯ ನಾಯಕ ಆಡ್ವಾಣಿ, ಮೈನ್ ಪುರಿ, ಆಜಂಗಢದಲ್ಲಿ ಮುಲಾಯಂ ಸಿಂಗ್ ಅವರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.