Untitled Document
Sign Up | Login    
ಏಕಪಕ್ಷದತ್ತ ಮತದಾರರ ಒಲವು?

ಸಂಸತ್ ಭವನದ ಸಾಂದರ್ಭಿಕ ಚಿತ್ರ - ಕೃಪೆ ವಿಕಿಪೀಡಿಯ

ಎರಡು ಓ.ಕೆ.; ಮೂರಾದ್ರೆ ಅದು ಗುಂಪು ಅನ್ನೋದು ಮತದಾರರ ಭಾವನೆಯಾಗುತ್ತಿದೆಯೇ? ಹೀಗೊಂದು ಪ್ರಶ್ನೆ ಇತ್ತೀಚೆಗೆ ರಾಜಕೀಯ ಪಡಸಾಲೆಯಲ್ಲಿ ಕೇಳತೊಡಗಿದೆ. ಇದಕ್ಕೆ ಕಾರಣ ಇಲ್ಲದಿಲ್ಲ. 2009ರ ಲೋಕಸಭಾ ಚುನಾವಣೆ ಬಳಿಕ ನಡೆದ ವಿಧಾನ ಸಭಾ ಚುನಾವಣೆಯ ಫಲಿತಾಂಶಗಳೇ ಇದಕ್ಕೆ ಸಾಕ್ಷಿ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.

ಈ ಲೋಕಸಭೆ ಚುನಾವಣೆಯ ಆರಂಭಿಕ ಹಂತದಲ್ಲಿ ಅಂದರೆ ಘೋಷಣೆಗೆ ಮುನ್ನ ರಾಜಕೀಯ ಧ್ರುವೀಕರಣ ಆಗಿರಲಿಲ್ಲ. ಆಗ ಬಿಜೆಪಿಗೆ ಲಭಿಸಬಹುದಾದ ಸ್ಥಾನಗಳು 180-200ರ ಆಸುಪಾಸಿನಲ್ಲಿದ್ದವು. ಮೊದಲ ಐದು ಹಂತದ ಮತದಾನ ಮುಗಿಯುತ್ತಿರುವಂತೆ ಚಿತ್ರಣ ಬದಲಾಗುತ್ತಿದೆ ಎಂಬ ಅಂಶದತ್ತ ಎನ್‍ಡಿಟಿವಿ ಗಮನ ಸೆಳೆದಿದೆ.

ಇದಲ್ಲದೇ, 2009ರಿಂದೀಚೆಗೆ ಸುಮಾರು 20 ರಾಜ್ಯಗಳಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲೂ ಮತದಾರರು ಒಂದು ಪಕ್ಷಕ್ಕೆ ಬಹುಮತ ನೀಡಿದ್ದು ಸ್ಪಷ್ಟವಾಗಿದೆ. 2009ರ ಲೋಕಸಭೆ ಚುನಾವಣೆಯ ಜತೆ ಜತೆಗೆ ನಡೆದ ಆಂಧ್ರಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶಗಳತ್ತ ನೋಡಿ.

ಆಂಧ್ರಪ್ರದೇಶದ ಒಟ್ಟು 294 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 156 ಗೆದ್ದುಕೊಂಡರೆ, ಟಿಡಿಪಿ 92 ಸ್ಥಾನಗಳೊಂದಿಗೆ ವಿಪಕ್ಷ ಸ್ಥಾನದಲ್ಲಿ ಕೂತಿದೆ. ಇನ್ನು ಒಡಿಶಾ ಕಡೆ ನೋಡಿದರೆ, ಅಲ್ಲಿನ 147 ಸ್ಥಾನಗಳ ಪೈಕಿ 103 ಸ್ಥಾನ ಬಿಜೆಡಿಗೂ 26 ಕಾಂಗ್ರೆಸ್ ಪಕ್ಷಕ್ಕೂ ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ – ಎನ್ಸಿಪಿ ಮೈತ್ರಿಕೂಟಕ್ಕೆ 288 ಸ್ಥಾನಗಳ ಪೈಕಿ 145 ಸ್ಥಾನಗಳಲ್ಲಿ ಗೆಲುವು ದಕ್ಕಿದೆ. ಬಿಜೆಪಿ-ಶಿವಸೇನಾ ಮೈತ್ರಿಕೂಟಕ್ಕೆ 89 ಸ್ಥಾನಗಳು.

2010ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 243 ಸ್ಥಾನಗಳ ಪೈಕಿ ಜೆಡಿಯು 115, ಬಿಜೆಪಿ 91 ಸ್ಥಾನ ಪಡೆದುಕೊಂಡಿತ್ತು. ಆಗ ಅಲ್ಲಿದ್ದುದು ಎನ್‍ಡಿಎ ಮೈತ್ರಿಕೂಟದ ಸರ್ಕಾರವಾದ್ದರಿಂದ ಇವೆರಡೂ ಪಕ್ಷಗಳು ಜತೆಯಾಗಿ ಅಧಿಕಾರ ಹಂಚಿಕೊಂಡಿದ್ದವು. ಈಗ ಅಲ್ಲಿರುವುದು ಪಕ್ಷೇತರ ಮತ್ತು ಕಾಂಗ್ರೆಸ್ ಬೆಂಬಲದೊಂದಿಗಿನ ಜೆಡಿಯು ಸರ್ಕಾರ. ಇದೇ ಅವಧಿಯಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 234 ಸ್ಥಾನಗಳ ಪೈಕಿ ಎಐಎಡಿಎಂಕೆ 150 ಸ್ಥಾನಗೆದ್ದುಕೊಂಡಿದೆ. ಡಿಎಂಕೆ 23 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇಲ್ಲಿ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿತ್ತಾದರೂ, ಸ್ಪಷ್ಟ ಬಹುಮತವನ್ನು ಮತದಾರ ಎಐಎಡಿಎಂಕೆಗೇ ನೀಡಿದ್ದ ಎಂಬುದನ್ನು ಇಲ್ಲಿ ಗುರುತಿಸಬಹುದು.

ಇದೇ ರೀತಿ 2010ರಲ್ಲೇ ನಡೆದ ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲೂ ಮತದಾರ ಏಕಪಕ್ಷದ ಬಗ್ಗೆ ಒಲವು ತೋರಿರುವುದು ಸ್ಪಷ್ಟವಾಗಿದೆ. ಪಶ್ಚಿಮ ಬಂಗಾಳದ ಒಟ್ಟು 294 ಸ್ಥಾನಗಳ ಪೈಕಿ 184 ಸ್ಥಾನಗಳು ಟಿಎಂಸಿ ಪಾಲಾಗಿವೆ. ಎಡಪಕ್ಷಗಳು 60ಸ್ಥಾನಗಳೊಂದಿಗೆ ವಿಪಕ್ಷದಲ್ಲಿ ಕೂತಿವೆ. ಉತ್ತರಪ್ರದೇಶದ 403 ಸ್ಥಾನಗಳ ಪೈಕಿ ಸಮಾಜವಾದಿ ಪಕ್ಷ 224ರಲ್ಲಿ ಗೆಲುವು ಸಾಧಿಸಿದೆ. ಬಿಎಸ್ಪಿ 80 ಸ್ಥಾನಗಳೊಂದಿಗೆ ವಿಪಕ್ಷ ಸ್ಥಾನದಲ್ಲಿದೆ.
2012ರಲ್ಲಿ ಗುಜರಾತ್ ವಿಧಾನ ಸಭೆಗೆ ಚುನಾವಣೆ ನಡೆದಿದ್ದು, ಇಲ್ಲಿ ಬಿಜೆಪಿ ನಾಲ್ಕನೇ ಅವಧಿಗೆ ಸ್ಪಷ್ಟ ಬಹುಮತದ ಗೆಲುವು ದಾಖಲಿಸಿದೆ. ಒಟ್ಟು 182 ಸ್ಥಾನಗಳ ಪೈಕಿ 115 ಸ್ಥಾನ ಬಿಜೆಪಿ ಪಾಲಾದರೆ, ವಿಪಕ್ಷ ಕಾಂಗ್ರೆಸ್ 61 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು.

2013ರಲ್ಲಿ ನಡೆದ ಪ್ರಮುಖ ಚುನಾವಣೆ ಎಂದರೆ ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ವಿಧಾನಸಭೆಗಳದ್ದು. ಕರ್ನಾಟಕದ 224 ಸ್ಥಾನಗಳ ಪೈಕಿ 122 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿಯಿತು. ಬಿಜೆಪಿ 41 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಮಧ್ಯಪ್ರದೇಶದ ಒಟ್ಟು 230 ಸ್ಥಾನಗಳ ಪೈಕಿ ಬಿಜೆಪಿ 165, ಕಾಂಗ್ರೆಸ್ 58 ಸ್ಥಾನ ಗೆದ್ದುಕೊಂಡಿತು. ರಾಜಸ್ಥಾನದಲ್ಲಿ 200 ಸ್ಥಾನಗಳ ಪೈಕಿ 163 ಬಿಜೆಪಿ ಪಾಲಾದರೆ, 21 ಕಾಂಗ್ರೆಸ್ ಪಾಲಾಗಿದೆ.

ಈ ಎಲ್ಲ ರಾಜ್ಯಗಳಲ್ಲೂ ಮತದಾರ ಒಂದು ಪಕ್ಷಕ್ಕೇ ಪ್ರಾಮುಖ್ಯತೆ ನೀಡಿರುವುದು ಕಂಡುಬರುತ್ತದೆ. ಇದೇ ಲೆಕ್ಕಾಚಾರ ಹಾಕುವುದಾದರೆ, ಈ ಲೋಕಸಭಾ ಚುನಾವಣೆಯಲ್ಲೂ ಇಂಥದ್ದೇ ಫಲಿತಾಂಶ ಬಂದರೆ ಅಚ್ಚರಿಯೇನಿಲ್ಲ.

 

Author : ಅನೀಷ್ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited