Untitled Document
Sign Up | Login    
ಪ್ರಧಾನಿ ಗಾದಿಗೆ ಮೋದಿ ಬೇಡ ! ಕಾಂಗ್ರೆಸ್ ಮತ್ತೊಂದು ರಣತಂತ್ರ

.

ದೇಶಾದ್ಯಂತ ಆಡಳಿತ ವಿರೋಧಿ ಅಲೆ ಇರುವುದು ಎಲ್ಲರಿಗೂ ಮನವರಿಕೆಯಾಗಿರುವ ವಿಚಾರ. ಕಾಂಗ್ರೆಸ್ ನಾಯಕರು ಇದರಿಂದ ಕಂಗೆಟ್ಟಿದ್ದರೂ, ನರೇಂದ್ರ ಮೋದಿ ಪ್ರಧಾನಿ ಗಾದಿಗೇರುವುದನ್ನು ತಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ಸದ್ಯ ಇದೇ ಅಜೆಂಡಾ ಮುಂದಿಟ್ಟುಕೊಂಡು ಚುನಾವಣೋತ್ತರ ಮೈತ್ರಿಯ ಬಗ್ಗೆ ಗಮನ ಕೇಂದ್ರೀಕರಿಸಿದ್ದಾರೆ. ಪ್ರಾದೇಶಿಕ ಪಕ್ಷಗಳು ಕೆಲವು ಈಗಾಗಲೇ ಬಿಜೆಪಿ ಜತೆ ಕೈ ಜೋಡಿಸಿವೆ. ಇನ್ನು ಕೆಲವು ಕಾದು ನೋಡುವ ತಂತ್ರದ ಅವಕಾಶವಾದಿ ರಾಜಕಾರಣಕ್ಕೆ ಮೊರೆ ಹೋಗಿವೆ. ಹೀಗಾಗಿ ಸಂಭಾವ್ಯ ರಾಜಕೀಯ ಲೆಕ್ಕಾಚಾರದ ವಿಶ್ಲೇಷಣೆ ಹೀಗಿದೆ.

ಎಲ್ಲ ಸಮೀಕ್ಷೆಗಳೂ ಕಾಂಗ್ರೆಸ್ ಸೋಲನ್ನೇ ಹೇಳುತ್ತಿದ್ದು, ಅತಂತ್ರ ಲೋಕಸಭೆ ಕಡೆಗೆ ಬೊಟ್ಟು ಮಾಡುತ್ತಿವೆ. ಏಕ ಪಕ್ಷ ಗದ್ದುಗೆಯೇರಲು ಸಾಧ್ಯವಿಲ್ಲವೆಂಬ ವರದಿಯೇ ಹೆಚ್ಚಾಗಿದೆ. ಕಾಂಗ್ರೆಸ್ ಅಥವಾ ಬಿಜೆಪಿ ಈ ಎರಡು ಪಕ್ಷಗಳು ನೇರವಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಾಗದು. ಅದೇ ರೀತಿ ಈ ಎರಡು ಪಕ್ಷಗಳಲ್ಲಿ ಯಾವುದಾದರೂ ಒಂದರ ಬೆಂಬಲವಿಲ್ಲದೆ ಇತರೆ ಪಕ್ಷಗಳೂ ಅಧಿಕಾರಕ್ಕೇರಲಾಗದು. ಈ ಬಾರಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನಗಳಿಸುವ ನಿರೀಕ್ಷೆ ಇದ್ದು, ಚುನಾವಣಾ ಪೂರ್ವ ಮೈತ್ರಿ ಪ್ರಕಾರ 272ಕ್ಕೂ ಹೆಚ್ಚು ಸ್ಥಾನಗಳನ್ನು ಎನ್ ಡಿಎ ಗೆಲ್ಲಲಿದೆ. ಬಿಜೆಪಿ ಈಗಾಗಲೇ ಹತ್ತು ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದೆ. ಶಿವಸೇನೆ, ಶಿರೋಮಣಿ ಅಕಾಲಿದಳದ ಜತೆಗಿನ ಮೈತ್ರಿ ಹಳೆಯದು. ರಾಮ್ ವಿಲಾಸ್‍ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ, ಹರಿಯಾಣ ಜನಹಿತ ಕಾಂಗ್ರೆಸ್, ತಮಿಳುನಾಡಿನ ಪಿಎಂಕೆ, ಎಂಡಿಎಂಕೆ, ಡಿಎಂಡಿಕೆ ಇತರೆ ಹೊಸ ಮಿತ್ರ ಪಕ್ಷಗಳು.
ಈ ಹಿಂಧೆ ಎನ್‍ಡಿಎ ಮಿತ್ರ ಪಕ್ಷಗಳಾಗಿದ್ದ ಎಐಎಡಿಎಂಕೆ, ಟಿಎಂಸಿ, ಜೆಡಿಯು ಮೊದಲಾದವುಗಳು ಈ ಬಾರಿ ಅಂತರ ಕಾಯ್ದುಕೊಂಡಿವೆ. ಈ ಪಕ್ಷಗಳಿಗೆ ಮುಸ್ಲಿಂ ವೋಟ್‍ಬ್ಯಾಂಕ್ ಕಾಯ್ದುಕೊಳ್ಳುವ ಅನಿವಾರ್ಯತೆ ಎದುರಾಗಿದೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಲಿದೆ ಎಂಬ ಸುಳಿವು ಸಿಕ್ಕಾಕ್ಷಣ ಜೆಡಿಯು ಬಿಜೆಪಿ ಜತೆಗಿನ 17 ವರ್ಷಗಳ ಸುದೀರ್ಘ ಮೈತ್ರಿಯನ್ನು ಕಡಿದುಕೊಂಡಿತು.
ಪರ್ಯಾಯ ರಂಗದ ಕಸರತ್ತು: ಜೆಡಿಯು ನಾಯಕ ನಿತೀಶ್ ಕುಮಾರ್ ನಾಯಕತ್ವದಲ್ಲಿ `ತೃತೀಯ ರಂಗ'ದ ಕಸರತ್ತು ನಡೆಯುತ್ತಿದೆ. ಇನ್ನೊಂದೆಡೆ, ಟಿಎಂಸಿ, ಎಐಎಡಿಎಂಕೆ ಚತುರ್ಥ ರಂಗ ರಚನೆ ಮುನ್ಸೂಚನೆ ನೀಡಿದೆ. ಈ ಎಲ್ಲ ರಾಜಕೀಯ ಕಸರತ್ತುಗಳನ್ನು ಗಮನಿಸುತ್ತಿರುವ ಕಾಂಗ್ರೆಸ್ ಇದೀಗ ಚುನಾವಣೋತ್ತರ ಮೈತ್ರಿ ವಿಚಾರದ ಬಗ್ಗೆ ತಲೆ ಕೆಡಿಸಿಕೊಂಡಿದೆ.
ಕಳೆದೆರಡು ಅವಧಿಯಲ್ಲೂ ಇದೇ ಮಾದರಿಯ ರಣತಂತ್ರದಿಂದಲೇ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದುದು. ಈ ಬಾರಿ ಹೆಚ್ಚು ಸ್ಥಾನ ಗಳಿಸದೇ ಹೋದರೂ, ತೃತೀಯ ರಂಗದ ಪಕ್ಷಗಳ ಪೈಕಿ ಯಾವುದಾದರೂ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚು ಸ್ಥಾನ ಗಳಿಸಿದರೆ ಅದಕ್ಕೆ ಬೆಂಬಲ ನೀಡಿ ಸರ್ಕಾರ ರಚಿಸುವ ಚಿಂತನೆಯಲ್ಲಿ ಕಾಂಗ್ರೆಸ್ಸಿಗರಿದ್ದಾರೆ ಎನ್ನಲಾಗಿದೆ.

ಅವಕಾಶ ಸಿಕ್ಕರೆ ಬಿಜೆಪಿಯೇತರ, ಕಾಂಗ್ರೆಸ್ಸೇತರ ಸರ್ಕಾರ ರಚಿಸುವ ಚಿಂತನೆ ಪ್ರಾದೇಶಿಕ ಪಕ್ಷಗಳದ್ದು. ಹೀಗಾಗಿ ತಮಿಳುನಾಡಿನಲ್ಲಿ ಎಐಎಡಿಎಂಕೆ, ಡಿಎಂಕೆ, ಆಂಧ್ರದಲ್ಲಿ ವೈಎಸ್ಸಾರ್ ಕಾಂಗ್ರೆಸ್, ಟಿಆರ್‍ಎಸ್, ಒಡಿಶಾದಲ್ಲಿ ಬಿಜೆಡಿ, ಉತ್ತರಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿ ಹೋರಾಟ ನಡೆಸುತ್ತಿವೆ. ಯಾವುದೇ ರಾಷ್ಟ್ರೀಯ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿಲ್ಲ. ಇದು ಚಾಣಕ್ಷ ರಾಜಕೀಯ ನಡೆಯಾಗಿದ್ದು, ಗೆದ್ದವರ ಬಾಲ ಹಿಡಿಯುವುದಕ್ಕೆ ಈ ಪಕ್ಷಗಳು ಸಿದ್ಧತೆ ನಡೆಸಿವೆ ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ. ಇದೇನಾದರೂ ನಿಜವಾದಲ್ಲಿ, ಕಾಂಗ್ರೆಸ್ ತಂತ್ರ ಫಲಿಸಬಹುದೇನೋ..

ಕಾಂಗ್ರೆಸ್ ಮಿತ್ರರು - ನ್ಯಾಷನಲ್ ಕಾನ್ಫರೆನ್ಸ್, ಎನ್‍ಸಿಪಿ, ಆರ್‍ಜೆಡಿ, ಆರ್‍ಎಲ್‍ಡಿ, ಐಯುಎಂಎಲ್, ಜೆಎಂಎಂ, ಕೇರಳ ಕಾಂಗ್ರೆಸ್(ಎಂ)
ಬಿಜೆಪಿ ಮಿತ್ರಪಕ್ಷ - ಶಿವಸೇನೆ, ಶಿರೋಮಣಿ ಅಕಾಲಿದಳ, ಹರಿಯಾಣ ಜನಹಿತ ಕಾಂಗ್ರೆಸ್, ಎಲ್‍ಜೆಪಿ, ಎಂಡಿಎಂಕೆ, ಡಿಎಂಡಿಕೆ, ಪಿಎಂಕೆ ಇತ್ಯಾದಿ.
ಬಿಜೆಪಿ ವಿರೋಧಿಗಳು - ಸಿಪಿಎಂ, ಸಿಪಿಐ, ಜೆಡಿ(ಯು), ಎಸ್‍ಪಿ, ಡಿಎಂಕೆ, ಎಂಐಎಂ, ಜೆವಿಎಂ(ಪಿ), ಎಐಯುಡಿಎಫ್
ಗೆದ್ದವರ ಕಡೆಗೆ - ಟಿಆರ್‍ಎಸ್, ಟಿಡಿಪಿ, ವೈಎಸ್ಸಾರ್ ಕಾಂಗ್ರೆಸ್, ಬಿಜೆಡಿ, ಬಿಎಸ್‍ಪಿ, ಎಐಎಡಿಎಂಕೆ, ಟಿಎಂಸಿ, ಎಜಿಪಿ, ಐಎನ್‍ಎಲ್‍ಡಿ, ಜೆಡಿ(ಎಸ್)

 

Author : ಅವಿನಾಶ್ 

More Articles From Opinion

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited