Untitled Document
Sign Up | Login    
ಶ್ರೀಶ್ರೀಶ್ರೀ

.

ನೆತ್ತಿ ಸುಟ್ಟು ಹಾಕುವ ಪ್ರಖರ ಬಿಸಿಲು,
ಮೇಲೆಯೂ ಸುಡುಸುಡು ಬೆಂಕಿ
ಕುಳಿತ ಕರಿಯ ಕಾಡುಗಲ್ಲು ಕಾದಿದೆ
ತಳದ ಕೆಳಗೆ ರಣ ಝಳ
ಕೆದರಿ ಹರಡಿದ ಗಂಟು ಕೂದಲ ನಡುವಿಂದ
ತೊಟ್ಟಿಕ್ಕುವ ಹನಿಗಳು ನಿರಂತರ
ಬಂಡೆಗಲ್ಲ ಉಷ್ಣವನ್ನಾರಿಸಲಾರದ ಬೆವರಹನಿ
ಹನಿಕಿಸುತ್ತಲೇ ತಪವ ಮಾಡುವ ಮೊಂಡಮುನಿ
ರಣಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದಾನೆ
ಭಂಡ ಬೈರಾಗಿ.

ಇವ ಅಲೆಮಾರಿಯಂತೆ ಕಾಡು ಸುತ್ತಿ ಮೇಡುಗಳನಲೆದ
ಒಂದಷ್ಟು ದಿನ ಹಿಮದ ತಪ್ಪಲಲಿ
ಬಟ್ಟೆ ಚಂಡಿಮಾಡಿ ಕುಳಿತೇ ಬಿಟ್ಟ
ಎಂದೋ ಒಂದಿನ ಮೈ ಮರಗಟ್ಟಿ ಕೊರಡಿನಂತಾಯಿತು
ಇನ್ನು ಉಳಿಯಲಾರೆ ಎಂದೆನಿಸಿ ಎದ್ದ
ಸುಧೀರ್ಘ ನಿರುದ್ಯೋಗದ ಧ್ಯಾನ
ಕ್ಷೌರವಿಲ್ಲದ ಮುಖದಲ್ಲಿ ಉದ್ದುದ್ದನೆ ಧಾಡಿ
ಆಳಹೊಕ್ಕ ಕಣ್ಣುಗಳಲ್ಲಿ ಬರಬಾರದಾಗಿದ್ದ ಕಾಂತಿ
ಯಾರೋ ಕೊಟ್ಟರು ಈ ಫಕೀರನಿಗೆ;
ತುಂಡು ಕಾವಿ.....
ಚೊಕ್ಕಟವಾಗಿ ಅದ ತೊಟ್ಟ
ಉಳಿದ ಹರಿದ ಭಾಗವ ಜೋಳಿಗೆ ಮಾಡಿ
ಹೆಗಲಿಗೇರಿಸಿ ಪರ್ಯಟನೆಗೆ ಹೊರಟೇ ಬಿಟ್ಟ

ಚಳಿಯಾಗಿರಬೇಕು ಪ್ರಾಯಶಃ
ಕೆಲಕಾಲ ಕಾದ ಕಾಡುಗಲ್ಲ ಬಂಡೆಯ ಮೇಲೆ
ಮೂರ್ಖನ ವ್ಯಥಾ ಧ್ಯಾನ
ಬಿಸಿಯ ಶಾಖ ಹದವಾಗಿ ದೇಹವೇರಿತು.
ನೆಡೆದು ಬಂದ ನಾಡ ಕಡೆ
ಕಾವಿ ವಸ್ತ್ರದಲಿ ಜೋಳಿಗೆಯ ಸಹಿತ
ದಣಿವಾಯಿತು ಮರದ ಬುಡ ಕಂಡಿತ.
ಕುಳಿತ ಅಚ್ಚುಕಟ್ಟಾಗಿ ಪದ್ಮಾಸನದಲಿ
ಸ್ವಲ್ಪ ಸಾವರಿಸಿಕೊಂಬಾಗಲೆ ಕಣ್ಣಿಗೆ ಸಣ್ಣನೆಯ ಜೋಂಪು
ಕುಳಿತಲ್ಲಿಯೆ ಲಘು ನಿದ್ರೆ
ದಾರಿ ಸಾರಿಸುತ್ತಿದ್ದ ಕಮಂಗಿ ಕಂಡ ಇವನ
ಅಯ್ಯಯ್ಯೋ! ಸ್ವಾಮಿಗಳು ಮಹಾಮಹಿಮರು
ನಮ್ಮೂರಿನ ಹೊರಗಿನ ತೋಪಿನಲ್ಲಿ.....?
ಅಷ್ಟಾಂಗಭಕ್ತಿ ಉಕ್ಕುಕ್ಕಿ ಹರಿಯಿತು

ಅಡ್ಡಬಿದ್ದ ಸಾಷ್ಟಾಂಗ ಶಿರಭಾಗಿಸಿದ
ಕೆನ್ನೆ ಕೆನ್ನೆ ಬಡಿದುಕೊಂಡ
ಕಮಂಗಿಯ ಕಪಿಲೀಲೆ ಒಂದಾ ಎರಡಾ......!
ಓಡಿದ ಊರ ಪಡಸಾಲೆಗೆ
ಕೂಗಿದ-ಕಿರುಚಿದ, ಅರಚಿದ ಬಾಯಿ ಬಡೆದುಕೊಂಡ
ಗ್ರಹಚಾರವೂ ಕಾಣೆ ಆಗಷ್ಟೆ ಊರಿಗೆ ಭೀಕರ ಬರ
ಬತ್ತಿದ್ದ ನೀರಿನ ನೆಲೆ-ಸೆಲೆ
ಸಾಕ್ಷಾತ್ ಭಗವಂತ ಹನ್ನೊಂದನೇ ಅವತಾರ ಎತ್ತಿಂದತಾಯಿತು
ಕೇಳಿರಪ್ಪೋ ಕೇಳಿರಿ, ನೊಡಬನ್ನಿ ತೋಪಿಗೆ
ಪ್ರಚಾರದ ಢಂಗುರ ಸಾರಿಸಿದ ಕಮಂಗಿ

ಊರ ಮರಳು ಮಂದಿ ಧಾವಿಸಿದರು
ನಾ...ಮುಂದೆ ತಾನು ಮುಂದೆ.
ತೋಪಿನಲ್ಲಿ ಮತ್ತದೇ ತೇಜಸ್ವಿ ವರ್ಚಸ್ವಿ
ಕಾವಿಧಾರಿ ಮಹಾಮೂರ್ಖ ತೂಕಡಿಸುತ್ತಾ ನರಿಧ್ಯಾನ
ಪೆದ್ದು ಜನ ಸಾಮೂಹಿಕವಾಗಿ ದೇಹ ಬಗ್ಗಿಸಿದರು
ಇನ್ನು ಗ್ರಾಮ ಸಮೃದ್ದವಾಯಿತು
ಸ್ವಾಮಿಗಳ ಪಾದ ಧೂಳಿನಿಂದ ಪುನೀತರಾದೆವು
ಸ್ವಾಮಿಗಳ ಕುರಿತಾಗಿ ದಂತಕತೆಗಳ ಜನನ
ಸ್ವಾಮಿಗಳು ಹಾಗಂತೆ, ಸ್ವಾಮಿಗಳು ಹೀಗಂತೆ
ಸ್ವಾಮಿಗಳು ಅಲ್ಲಿದ್ದರಂತೆ, ಸ್ವಾಮಿಗಳು ಇಲ್ಲಿದ್ದರಂತೆ
ಸಾರ್ವತ್ರಿಕ ಭಜನೆ ಸಣ್ಣಗೆ ಆರಂಭವಾಗಿ ಹೋಯಿತು

ಧಣಿವಾರಿತ್ತು ಗದ್ದಲದ ಸದ್ದು
ಎಚ್ಚರವಾಯಿತು ಮಹಾಮಹಿಮನಿಗೆ
ಕಣ್ತೆರೆದು ನೋಡಿದರೆ ಜನಸ್ತೋಮ
ಸ್ವಾಮಿಗಳು ಧ್ಯಾನ ಮುಗಿಸುವುದನ್ನೆ ಕಾದಿದ್ದವು ಪಾಪ...!
ಒಮ್ಮೆಲೆ ಜಯಜಯಕಾರಗಳ ಅಬ್ಬರ
ಪರಮಪೂಜ್ಯ ಸದ್ಗುರು ಶ್ರೀಶ್ರೀಶ್ರೀ
ನಾಮಕರಣವೂ ಆಯಿತು.
ಪುಷ್ಪಮಾಲೆಯ ಕೊರಳ ಅಲಂಕಾರ
ಫಲೋಧಕಗಳನ್ನು ನೈವಿದ್ಯ
ಪರಾಕಿನ ಮೇಲೆ ಪರಾಕುಗಳು
ಸೂಷ್ಮ ಅರಿತ ಮೇಧಾವಿ....!
ಅಬ್ಬಬ್ಬಾ..! ತಾನೀಗ ಸ್ವಾಮಿ
ಇಲ್ಲವೆಂದರೆ ಧರ್ಮದೇಟು
ಹೌದುಹೌದೆಂದ ರಾಜೋಪಚಾರಗಳ ನೆನೆದು

ನೀರೇ ಕಾಣದ ದೇಹಕ್ಕೆ ಅಭ್ಯಂಜನ
ಹಣೆಗೆ ಕುಂಕುಮ ವಿಭೂತಿಧಾರಣೆ
ಜ್ಯೋತಿಷ್ಯ, ಜಾತಕ, ಸಾಲಾವಳಿ ಕೇಳಿದರೆ
ಬಾಯಿಗೆ ಬಂದಿದ್ದು ಬಡಬಡಿಸಿದ
ಸ್ವಾಮಿಗಳು ಅಪದ್ಧ ನುಡಿಯಲಾರರು
ಸತ್ಯ-ಸತ್ಯ, ಸರ್ವವೂ ಸತ್ಯ, ಮಂಗಳಕರ
ತಳಿರು ತೋರಣಗಳಿಂದ ತೋಪಿಗೆ ಶೃಂಗಾರ
ನಿಧಾನಕ್ಕೆ ಮಠಕ್ಕೆ ಅಡಿಗಲ್ಲು
ಭವ್ಯ ಆಡಂಭರದ ಗುರುಭವನ
ದಾಸೋಹದ ಕೊಟ್ಟಿಗೆಗೆ ಎಕರೆಗಟ್ಟಲೇ ಜಾಗ
ಸ್ವಾಮಿಗಳು ಜಗದ್ಗುರು ಪೀಠಾಧಿಪತಿಯಾದರು
ಅಡ್ಡ ಪಲ್ಲಕ್ಕಿ ಉತ್ಸವಗಳೂ ನೆರವೇರಿತು
ಸದ್ಯ ಕಿರೀಟ ತೊಡಿಸಿ ಅಮರ ಸನ್ಮಾನ
ಸ್ವಾಮಿಗಳಿಗೆ ಈಗ ಮಲಗಲು ಮೆತ್ತನೆಯ ಪಲ್ಲಂಗ
ಜೊತೆಗೊಂದಷ್ಟು ಸುಖನಾಸಿನಿಯರು
ಪ್ರತಿ ಚುನಾವಣೆಯಲ್ಲಿ ಸ್ವಾಮಿಗಳಿಗೆ ರಾಜಮರ್ಯಾದೆ
ಶ್ರೀ ಮಠದಿಂದ ಪುರಸ್ಕ್ರತ ಜನ ನಾಯಕನಿಗೆ-
-ಉಮೇದುವಾರಿಕೆ ಪಕ್ಕಾ
ಪ್ರಸ್ತುತ ಸ್ವಾಮಿಗಳು ವಿದೇಶ ಪ್ರವಾಸದಲ್ಲಿದ್ದಾರೆ
ಲಂಡನ್, ಜರ್ಮನಿ, ಇಟಲಿ, ಕೊನೆಗೆ ಅಮೇರಿಕಾ
ಹಿಂದು ಧರ್ಮದ ಮಹಾ ಪ್ರಚಾರ
ಪರಿವ್ರಾಜಕರ ವಿಜಯ ಸಂಕಲ್ಪ ಯಾತ್ರೆ
ಬಹುಶಃ ಈ ಬಾರಿಯ ಚಾತುರ್ಮಾಸ ವಿದೇಶದಲ್ಲಿ

 

Author : -ವಿಶ್ವಾಸ್ ಭಾರದ್ವಾಜ್ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited