ಮೈತ್ರಿ ಖತಂ..?
ತಮಿಳುನಾಡಿನಲ್ಲಿ ಲೋಕಸಭಾ ಸೀಟು ಹಂಚಿಕೆಯಲ್ಲಿ ತಾರತಮ್ಯ ನೀತಿಯನ್ನು "ಅಮ್ಮಾ'' ಅನುಸರಿಸುತ್ತಿದ್ದಾರೆ. "ಅಮ್ಮಾ'' ಈ ರೀತಿ ಪಕ್ಷಪಾತ ಧೋರಣೆ ಅನುಸರಿಸುತ್ತಾರೆಂದು ಗೊತ್ತಿರಲಿಲ್ಲ ಎಂದು ಅಲವತ್ತುಕೊಳ್ಳಲಾರಂಭಿಸಿದ್ದಾರೆ ಎಡರಂಗ ನಾಯಕರು!
ಹೌದು.. ತಮಿಳುನಾಡು ಹೇಳಿ ಕೇಳಿ ಅಮ್ಮನ ಮನೆ. ಅಮ್ಮನದೇ ಕಾರುಬಾರು. ಕಳೆದ ವಿಧಾನ ಸಭಾ ಚುನಾವಣೆ(2011) ವೇಳೆ ಎಡಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಇದರಲ್ಲಿ 150 ಸ್ಥಾನಗಳಲ್ಲಿ ಎಐಎಡಿಎಂಕೆ, ಸಿಪಿಐ(ಎಂ) 10, ಸಿಪಿಐ 8 ಸ್ಥಾನಗಳಲ್ಲಿ ಗೆದ್ದುಕೊಂಡು 243 ಸ್ಥಾನಗಳ ವಿಧಾನ ಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದುಕೊಂಡಿದೆ.ಇದೇ ರೀತಿ, ಲೋಕಸಭಾ ಚುನಾವಣೆಗೂ ಪೂರ್ವಭಾವಿಯಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಎಡರಂಗ ನಾಯಕರು ಜಯಲಲಿತಾ ನಿವಾಸದಲ್ಲಿ ಕಳೆದ ತಿಂಗಳು ಸುದ್ದಿಗೋಷ್ಠಿ ಕರೆದು ತಿಳಿಸಿದ್ದರು.
ಅಮ್ಮಾ ಪ್ರಧಾನ ಮಂತ್ರಿ ಅಭ್ಯರ್ಥಿಯೂ ಹೌದು. ಆಲ್ಟರ್ನೇಟಿವ್ ಡೆಮಾಕ್ರಟಿಕ್ ಅಲಯನ್ಸ್ ಮಾಡಿಕೊಳ್ಳುತ್ತಿರುವಾಗಿ ಎಡರಂಗ ನಾಯಕರು ಹೇಳಿಕೊಂಡಿದ್ದರು. ಇದೇ ಅವಧಿಯಲ್ಲಿ, ತೃತೀಯ ರಂಗದ ಹವಾ ಆಗ ಬಹಳ ಜೋರಾಗಿ ಬೀಸುತ್ತಿತ್ತು. ಜೆಡಿಯು ನಾಯಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಎಡರಂಗ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಆದರೆ, ಅಷ್ಟರಲ್ಲೇ ತಮಿಳುನಾಡಿನಲ್ಲಿ ನಡೆದ ರಾಜಕೀಯ ಬೆಳವಣಿಗೆ ತೃತೀಯ ರಂಗ ರಚನೆ ವಿಚಾರಕ್ಕೆ ಇನ್ನಷ್ಟು ಇಂಬು ನೀಡಿತು. ಆದರೆ, ಅದನ್ನು ಮುನ್ನಡೆಸುವ ನಾಯಕರಾರು? ನಿತೀಶ್ ಅಥವಾ ಜಯಲಲಿತಾ ಅವರೇ ಎಂಬ ಪ್ರಶ್ನೆ ಕಾಡಿತ್ತು.
ಪ್ರಾದೇಶಿಕ ಪಕ್ಷಗಳನ್ನೊಳಗೊಂಡ ತೃತೀಯರಂಗ ರಚನೆ ಸುಲಭದ ಮಾತಲ್ಲ. ಎಲ್ಲ ಪ್ರಾದೇಶಿಕ ಪಕ್ಷಗಳು ಅವರವರ ರಾಜ್ಯಗಳಲ್ಲಿ ವಿರೋಧಿಗಳಾಗಿದ್ದು, ದೇಶದ ವಿಚಾರದಲ್ಲಿ ಒಂದಾಗಲು ಅವರಿಗೆ ಅವರದ್ದೇ ಆದ ಅಡಚಣೆಗಳು ಕಾಡಬಹುದು. ಎಲ್ಲದಕ್ಕೂ ಮಿಗಿಲಾಗಿ ಅವರವರ ರಾಜ್ಯಗಳಲ್ಲಿ ಸೀಟು ಹಂಚಿಕೆ ವಿಷಯದಲ್ಲೇ ಒಮ್ಮತ ಮೂಡಲಾರದು ಎಂಬ ಮಾತು ಕೇಳಿತ್ತು.
ತೃತೀಯರಂಗ ರಚನೆ ಕಸರತ್ತು ಇನ್ನೇನು ಬಲಗೊಳ್ಳುತ್ತಿದೆ ಎನ್ನುವಾಗಲೇ ತಮಿಳುನಾಡಿನಲ್ಲಿ ಎಐಎಡಿಎಂಕೆ ಮತ್ತು ಎಡಪಕ್ಷಗಳ ನಡುವೆ ಭಿನ್ನಮತ ಶುರುವಾಗಿದೆ. ಸೀಟು ಹಂಚಿಕೆ ವಿಚಾರ ಇತ್ಯರ್ಥವಾಗಿಲ್ಲ. ತಮಿಳುನಾಡಿನ (ಪುದುಚ್ಚೇರಿ ಸೇರಿದಂತೆ) ಒಟ್ಟು 40 ಲೋಕಸಭಾ ಸ್ಥಾನಗಳ ಪೈಕಿ ಎಐಎಡಿಎಂಕೆ ಮಿತ್ರ ಪಕ್ಷಗಳಾದ ನಟ ವಿಜಯಕಾಂತ್ ಅವರ ಪಕ್ಷ ಡಿಎಂಡಿಕೆ, ಎಡಪಕ್ಷಗಳ ಜೊತೆಗೆ ಸೀಟು ಹಂಚಿಕೆ ಮಾಡಿಕೊಳ್ಳಬೇಕಿದೆ. ಆದರೆ, ಅಮ್ಮ ಹೇಳಿದ ಸೂತ್ರ ಮಿತ್ರ ಪಕ್ಷಗಳ ನಾಯಕರಿಗೆ ಇಷ್ಟವಾಗಿಲ್ಲ. ಹೀಗಾಗಿ ಮೈತ್ರಿ ಕಡಿದುಕೊಳ್ಳುವ ಮಾತುಗಳನ್ನಾಡುತ್ತಿದ್ದಾರೆ.
ಈ ಪಕ್ಷಗಳು ಎಐಎಡಿಎಂಕೆ ಮೈತ್ರಿ ಕಡಿದುಕೊಂಡರೆ, ತಮಿಳುನಾಡು ಸರ್ಕಾರಕ್ಕೇನೂ ಆತಂಕವಿಲ್ಲ. ಎಐಎಡಿಎಂಕೆಗೆ ನಿಚ್ಚಳ ಬಹುಮತವಿದ್ದು, ಜಯಲಲಿತಾ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಲೋಕಸಭಾ ಚುನಾವಣೆ ವಿಷಯಕ್ಕೆ ಬಂದರೆ, ಜಯಲಲಿತಾ ಮತ್ತೆ ಎನ್ ಡಿಎ ಮೈತ್ರಿಕೂಟ ಸೇರುವ ಸಾಧ್ಯತೆ ದಟ್ಟವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.