ಶಿವಾರ್ಪಣ ಮಸ್ತು..
ನಮ್ಮಲ್ಲಿ ಬಹುತೇಕರು ಶಿವರಾತ್ರಿಯಂದು ಎಚ್ಚರದಿಂದಿದ್ದು ಜಾಗರಣೆ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ನಮ್ಮನ್ನು ಕಾಡುವ ಎರಡು ಪ್ರಶ್ನೆಗಳಿವು.. ಶಿವರಾತ್ರಿ ಆಚರಣೆ ಯಾಕೆ ಮತ್ತು ಹೇಗೆ ?
ಶಿವರಾತ್ರಿ ಆಚರಣೆ ಮಾಡುವಾಗ ಎಚ್ಚರದಿಂದ ಇರಬೇಕು ಎಂದು ಅಂತಹ ಮಹತ್ತಾದ ಹಬ್ಬದ ದಿನ ಸಿನಿಮಾ ನೋಡುತ್ತಲೋ, ಇಸ್ಪಿಟ್ ಆಟ ಆಡುತ್ತಲೋ ಅಥವಾ ರಸ್ತೆ ರಸ್ತೆ ಸಂಚರಿಸುತ್ತಲೋ ಇರುವುದು ಸರಿಯೇ?
ಸರಿಯಲ್ಲ ಎಂಬುದೇ ಈ ಪ್ರಶ್ನೆಗೆ ಇರುವ ಉತ್ತರ. ಈ ರೀತಿ ಅಪವಿತ್ರವಾದ ಕೆಲಸಗಳನ್ನು ಮಾಡುತ್ತಾ ತಿರುಗುವುದಕ್ಕಿಂತ ಮಲಗಿ ನಿದ್ರಿಸುವುದೇ ಲೇಸು.
ಶಿವರಾತ್ರಿಯಂದು ತನ್ನ ಭಕ್ತರನ್ನು ಹರಸುವುದಕ್ಕಾಗಿ ಶಿವ ಪರಮಾತ್ಮ ಕೈಲಾಸದಿಂದ ಇಳಿದು ಬರುತ್ತಾನೆ. ಭಗವಂತನ ಸಾನ್ನಿಧ್ಯ ಎಲ್ಲೆಡೆ ಅನುಭವ ವೇದ್ಯವಾಗಿರುತ್ತದೆ. ನಾವು ಪರಮಾತ್ಮನನ್ನು ಮನಸ್ಸು ಮತ್ತು ಹೃದಯಪೂರ್ವಕವಾಗಿ ಬರಮಾಡಿಕೊಳ್ಳಬೇಕು. ಗೌರವಾನ್ವಿತ ಅತಿಥಿ ನಮ್ಮೆಡೆಗೆ ಬರುತ್ತಿರಬೇಕಾದರೆ, ನಾವು ನಮ್ಮ ಪಕ್ಕದ ಮನೆಯಲ್ಲಿ ಹೋಗಿ ಕುಳಿತುಕೊಳ್ಳುವುದು ಎಷ್ಟು ಸರಿ? ಅದೇ ರೀತಿ, ಯಾವಾಗ ಶಿವ ಪರಮಾತ್ಮನು ಕೈಲಾಸದಿಂದ ಇಳಿದು ನಮ್ಮ ಮನೆ ಮತ್ತು ಮನಗಳ ಕಡೆಗೆ ಹೆಜ್ಜೆ ಹಾಕುತ್ತಿರುವಾಗ ನಾವು ನಿದ್ದೆ ಹೋಗುವುದು ಸರಿಯಲ್ಲ.
ನಿದ್ದೆ ಹೋಗುವ ಬದಲು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ಉತ್ತಮ. ಶಿವರಾತ್ರಿಯಂದು ನಮ್ಮ ಮನಸ್ಸನ್ನು ನಾವು ಶಿವನ ಕಡೆಗೆ ಕೊಂಡೊಯ್ಯಬೇಕು. ಅಲ್ಲದೆ ಅವನ ಸಾನ್ನಿಧ್ಯವನ್ನು ಅನುಭವಿಸಬೇಕು. ಉತ್ಸವಗಳು ಅಥವಾ ಪರ್ವ ಕಾಲಗಳಿರುವುದೇ ಧ್ಯಾನ ಮಾಡುವುದಕ್ಕಾಗಿ. ಜೀವಾತ್ಮವನ್ನು ಪರಮಾತ್ಮನಲ್ಲಿ ಲೀನಗೊಳಿಸುವುದಕ್ಕೆ ಇದು ಸರಿಯಾದ ಸಮಯ.
ನಾವೆಷ್ಟೋ ಶಿವರಾತ್ರಿಗಳನ್ನು ಆಚರಿಸಿದ್ದೇವೆ; ಆದರೂ ಇದುವರೆಗೆ ಶಿವ ಯಾಕೆ ನಮ್ಮ ಬಳಿ ಬಂದಿಲ್ಲ? ಈ ಹಿಂದೆ ಆಗಿ ಹೋಗಿರುವ ಪ್ರತಿ ಶಿವರಾತ್ರಿಯಂದೂ ನಾವು ಆತನನ್ನು ಬರಮಾಡಿಕೊಳ್ಳುವಲ್ಲಿ ಸೋತಿದ್ದೇವೆ. ನಮ್ಮ ಕಣ್ಣುಗಳು ಭಗವಂತನನ್ನು ಗುರುತಿಸುವಲ್ಲಿ ಸೋತ ಕಾರಣ ನಾವು ಅವನನ್ನು ನೋಡುವಲ್ಲಿ ವಿಫಲರಾಗಿದ್ದೇವೆ. ನಮ್ಮ ಕಣ್ಣುಗಳು ಬಾಹ್ಯ ಜಗತ್ತನ್ನಷ್ಟೇ ನೋಡಬಲ್ಲವು. ಆದರೆ ನಮ್ಮೊಳಗಿನ ಶಿವನ ಚಿತ್ರವನ್ನು ನೋಡಲಾರವು. ನಮ್ಮ ಕಣ್ಣುಗಳು ಆತನ ದಿವ್ಯ ರೂಪದ ಮೇಲೆ ಕೇಂದ್ರೀಕೃತವಾಗಿರಬೇಕು. ಕಿವಿಗಳು ಭಗವಂತನ ಲೀಲೆಗಳ ಕಥೆಗಳನ್ನು ಆಲಿಸುತ್ತಿರಬೇಕು. ನಾಸಿಕವು ಶಿವಪೂಜೆಯ ಸುಗಂಧವನ್ನು ಆಘ್ರಾಣಿಸುತ್ತಿರಬೇಕು. ನಾಲಗೆಯು ಶಿವ ಪೂಜೆ ಪ್ರಸಾದದ ರುಚಿಯನ್ನು ಅನುಭವಿಸುತ್ತಿರಬೇಕು. ನಾವು ಯಾವಾಗ ನಮ್ಮೆಲ್ಲಾ ಪ್ರಜ್ಞೆ, ಮನಸ್ಸು, ಆತ್ಮವನ್ನು ಶಿವನ ಪಾದಗಳಿಗೆ ಸಮರ್ಪಿಸುತ್ತೇವೆಯೋ ಆಗ ನಮಗೆ ಎಲ್ಲೆಡೆ ಶಿವಾನುಭವವಾಗುತ್ತದೆ. "ಸರ್ವಂ ಶಿವ ಮಯಂ'' ಎಂಬುದೇ ಶಿವರಾತ್ರಿಯ ನಿಜವಾದ ಆಚರಣೆಯ ಅರ್ಥ.
(ಕೃಪೆ - ಹರೇರಾಮ.ಇನ್)