Untitled Document
Sign Up | Login    
ಬಗದಲ್ ಗ್ರಾಮದ ರೈತ ಕೃಷಿ ಪಂಡಿತ


ಕೃಷಿಯಲ್ಲಿ ಅಪಾರ ನಂಬಿಕೆ, ವಿಶ್ವಾಸವಿಟ್ಟು ಕಳೆದ 40 ವರ್ಷದಿಂದ ಹಗಲಿರುಳು ಶ್ರಮಪಟ್ಟು ನಿರಂತರ ಲಾಭ ಪಡೆಯುತ್ತಿರುವ ಬೀದರ ಜಿಲ್ಲೆಯ ಬಗದಲ್ ಗ್ರಾಮದ ಜನಾಬ್ ಅಲ್ ಹಜ್ ಶಾಹ ಖಲೀಫಾ ಮಹ್ಮದ್‌ಇದ್ರಿಸ್ ಅಹ್ಮದ್‌ಸಾಬ್ ಯಶಸ್ವಿ ಪ್ರಗತಿಪರ ರೈತರು. ಕೃಷಿಯಲ್ಲಿ ಹೊಸ ಹೊಸ ಅನ್ವೇಷಣೆ ಹಾಗೂ ಸೃಜನಾತ್ಮಕ ಕಾರ್ಯ ಚಟುವಟಿಕೆಗಳನ್ನು ಕೈಗೊಂಡು ಸುತ್ತಮುತ್ತಲಿನ ರೈತರ ಅಭಿವೃದ್ಧಿಗೂ ಶ್ರಮಿಸುತ್ತಿರುವ ಖಾದ್ರಿಯವರ ಸಾಧನೆಗಾಗಿ ರಾಜ್ಯ ಸರ್ಕಾರ 2012-13ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಯ ದ್ವಿತೀಯ ಬಹುಮಾನ ನೀಡಿ ಗೌರವಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಫೆಬ್ರವರಿ 19ರಂದು ಸ್ವೀಕರಿಸಿದ ಪ್ರಶಸ್ತಿಯು 50,000 ರೂ. ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಕೃಷಿ ಪಂಡಿತ ಪ್ರಶಸ್ತಿಯನ್ನು 2001-02ರಿಂದ ನೀಡುತ್ತಿದ್ದು, 2012-13ನೇ ಸಾಲಿನವರೆಗೆ ಒಟ್ಟು 190 ರೈತರಿಗೆ ಪ್ರಶಸ್ತಿ 65 ಲಕ್ಷ ರೂ. ಬಹುಮಾನ ನೀಡಲಾಗಿದೆ.

ಕುಟುಂಬದಲ್ಲಿರುವ 10-15 ಜನ ಸದಸ್ಯರೊಂದಿಗೆ 16.15 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಮತ್ತು ಬೆಳೆ ವೈವಿಧ್ಯತೆಯನ್ನು ಕಳೆದ 15 ವರ್ಷದಿಂದ ಯಶಸ್ವಿಯಾಗಿ ಅಳವಡಿಸಿಕೊಂಡು ಎಲ್ಲಾ ನಿರ್ವಹಣಾ ವೆಚ್ಚ ಹೊರತುಪಡಿಸಿ ವಾರ್ಷಿಕ 15 ಲಕ್ಷ ರೂ.ಗಿಂತ ಅಧಿಕ ಲಾಭ ಪಡೆಯುತ್ತಿದ್ದಾರೆ. ಕಬ್ಬಿನ 20 ವಿವಿಧ ತಳಿಗಳ ಸಾಗುವಳಿ ಮಾಡಿದ್ದು, ವಿಶೇಷವಾಗಿ ಮೂರು ಕಣ್ಣಿನ ಕುದರತ್ ಕಾ ಕರೀಷ್ಮಾ ಕಬ್ಬಿನ ತಳಿಯನ್ನು ಹಾಗೂ ದೇಶ ವಿದೇಶಗಳಿಂದ ಹೊಸ ತಳಿಗಳ ಬೀಜಗಳನ್ನು ಸಹ ತಯಾರಿಸಿ ರೈತರಿಗೆ ವಿತರಿಸಿ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

ನಾಗಪುರದಲ್ಲಿ ಜರುಗಿದ ಕೃಷಿ ಮೇಳದಲ್ಲಿ ಇವರು ಪ್ರದರ್ಶಿಸಿದ ಒಂದು ಕಬ್ಬಿನ ದಂಟು 4 ಕೆ.ಜಿ.ಯಷ್ಟಿತ್ತು. ಕಳೆದ ವರ್ಷ 3 ಎಕರೆ ಜಮೀನಿನಲ್ಲಿ 115 ಮೆ.ಟನ್ ಕಬ್ಬಿನ ಇಳುವರಿ ಪಡೆದು 2.50 ಲಕ್ಷ ರೂ. ಆದಾಯ ಪಡೆದಿದ್ದಾರೆ. 10 ಎಕರೆ ಜಮೀನಿನಲ್ಲಿ 26 ತಳಿ ಮಾವು, ಮೋಸಂಬಿ, ಸಪೋಟ, ಲಿಂಬೆ, ಪಪ್ಪಾಯಿ, ದಾಳಿಂಬೆ, ಹಲಸು ಮುಂತಾದ ಹಣ್ಣಿನ ಗಿಡಗಳ ಮಧ್ಯೆ ಶೇಂಗಾ, ಸೋಯಾಅವರೆ, ಗೋಧಿ, ಮೆಣಸಿನಕಾಯಿ, ಬದನೆಕಾಯಿ, ಗುಲಾಬಿ ಬೆಳೆಗಳನ್ನು ಆಂತರಿಕ ಮಿಶ್ರ ಬೆಳೆಗಳಾಗಿ ಬೆಳೆಯುತ್ತಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ವರ್ಷವಿಡೀ ಆಹಾರ ಸುಭದ್ರತೆ ದೊರಕಿದೆ. ಕಳೆದ ವರ್ಷ 4 ಟನ್ ಲಿಂಬೆಹಣ್ಣು ಬೆಳೆದು 60 ಸಾವಿರ ರೂ. ಗಳಿಸಿದ್ದಾರೆ. ಒಂದು ಎಕರೆ ಜಮೀನನ್ನು ಹೊಸ ಹೊಸ ತಳಿಗಳ ಪ್ರಾತ್ಯಕ್ಷಿಕೆಗಾಗಿ ಕಾಯ್ದಿರಿಸಿದ್ದಾರೆ. ಬದುಗಳಲ್ಲಿ ಸಾಗುವಾನಿ ಗಿಡಗಳನ್ನು ಬೆಳೆದು ಕೃಷಿ ಅರಣ್ಯಕ್ಕೆ ಒತ್ತು ನೀಡಿದ್ದಾರೆ.

ವಿವಿಧ ತಳಿಗಳ ಹಸು, ಎಮ್ಮೆ, ಮೇಕೆ, ಕುರಿ, ಸೇರಿದಂತೆ 200 ಜಾನುವಾರುಗಳ ಸಾಕಣೆ ಮಾಡಿದ್ದಾರೆ. ಪಶು ವೈದ್ಯರ ನೆರವಿನಿಂದ ಜರ್ಸಿ ಆಕಳು ಮತ್ತು ಜಾಫ್ರಾಬಾದಿ ಗಿರ್ರ, ಮುರ್ರಾ ಎಮ್ಮೆಗಳಿಂದ ಹೈನೋದ್ಯಮ ಕೈಗೊಂಡು 5 ಲಕ್ಷ ರೂ.ಗಳ ಲಾಭಂಶ ಪಡೆಯುತ್ತಿದ್ದಾರೆ. ನೇಫಿಯರ್ ಮೇವು ಮತ್ತು ಆಜೋಲದಿಂದ ಸ್ವಂತ ಪಶು ಆಹಾರ ತಯಾರಿಸಿ ಜಾನುವಾರುಗಳಿಗೆ ನೀಡುವರು. ಮಣ್ಣಿನ ಫಲವತ್ತತೆ ಕಾಪಾಡಲು ಯಥೇಚ್ಛವಾಗಿ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಸದ್ಬಳಕೆ ಮಾಡುತ್ತಿದ್ದಾರೆ.
ಸಮರ್ಥ ನೀರಿನ ಬಳಕೆಗಾಗಿ ಹನಿ ನೀರಾವರಿ ಪದ್ಧತಿಯಲ್ಲದೆ ವಿದ್ಯುತ್ ಕೊರತೆಯಾದಾಗ ಬೆಳೆಗಳಿಗೆ ನೀರೊದಗಿಸಲು 4ಲಕ್ಷ ಲೀಟರ್ ಸಾಮರ್ಥ್ಯದ ನೀರು ಶೇಖರಣಾ ತೊಟ್ಟಿ ನಿರ್ಮಿಸಿದ್ದಾರೆ. ಮುಂದೆ ಹನಿ ನೀರಾವರಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸಿಕೊಳ್ಳುವ ಇಂಗಿತ ಹೊಂದಿದ್ದಾರೆ. ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮುಂತಾದ ಕೃಷಿ ಉಪಕರಣ ಮತ್ತು ಕೃಷಿ ಯಂತ್ರೋಪಕರಣಗಳನ್ನು ಸಂಗ್ರಹಿಸಿಟ್ಟುಕೊಂಡು ಸಮರ್ಪಕವಾಗಿ ಉಪಯೋಗಿಸುತ್ತಿದ್ದಾರೆ.

ಪ್ರಾರಂಭದಲ್ಲಿ ಕೇವಲ 3 ಎಕರೆ ಇತ್ತು. ಕಠಿಣ ಪರಿಶ್ರಮದಿಂದ ಈಗ 16 ಎಕರೆ ಭೂಮಿ ಒಡೆಯ. ಬ್ರಹ್ಮಚಾರಿಯಾದ ನನಗೆ 58 ವರ್ಷ ವಯಸ್ಸು. ಕೃಷಿ ಚಟುವಟಿಕೆ ಉತ್ಸಾಹ ಇನ್ನೂ ಕುಗ್ಗಿಲ್ಲ. ’ಆಳಾಗಿ ದುಡಿ ಅರಸಾಗಿ ಉಣ್ಣು’ ಎಂಬುದನ್ನು ನಂಬಿದರೆ ಭೂತಾಯಿ ಎಂದಿಗೂ ಕೈ ಬಿಡುವುದಿಲ್ಲ. ನನ್ನ ಸಾಧನೆಗೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಅಧಿಕಾರಿಗಳ ಸಹಕಾರ ಸಿಕ್ಕಿದೆ. ಕೃಷಿ ಪಂಡಿತ ಪ್ರಶಸ್ತಿಯು ಇಡೀ ರೈತ ಸಮುದಾಯಕ್ಕೆ ಸಂದ ಪ್ರಶಸ್ತಿಯಾಗಿದೆ ಎನ್ನುವ ಖಾದ್ರಿಯವರು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಕೃಷಿ ಕ್ಷೇತ್ರದ ಗಣನೀಯ ಸಾಧನೆಗಾಗಿ ಖಾದ್ರಿ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ 2013ರ ನವೆಂಬರ್‌ನಲ್ಲಿ ಆಯೋಜಿಸಿದ ಐದು ದಿನಗಳ ಅಂತರರಾಷ್ಟ್ರೀಯ ಕೃಷಿ ಮೇಳದ ಅಂಗವಾಗಿ ದಿವಂಗತ ಮಾಜಿ ಸಚಿವ ಸಿ. ಭೈರೇಗೌಡ ಸ್ಮಾರಕ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಸಂದಿದೆ. ಈಗ ರಾಜ್ಯ ಸರ್ಕಾರದ 2012-13ನೇ ಸಾಲಿನ ಕೃಷಿ ಪಂಡಿತ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇವರ ಮೊಬೈಲ್ ಸಂಖ್ಯೆ 9448478610

 

Author : ಸಂಗ್ರಹ ವರದಿ .

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited