Untitled Document
Sign Up | Login    
ಸ್ವಾತಂತ್ರ್ಯ ಹೋರಾಟದ ಕ್ರಾಂತಿಗೆ ಕಾರಣ ಪುರುಷ, ವಾಸುದೇವ್ ಬಲವಂತ ಫಡಕೆ


1879!, ಸಾಮಾನ್ಯ ಜನರಿಗೆ, ಇಂದಿನ ಪೀಳಿಗೆಯ ಮಟ್ಟಿಗೆ ಇದು ಬ್ರಿಟೀಷ್ ಸಾಮ್ರಾಜ್ಯದ ದಾಸ್ಯದಲ್ಲಿದ್ದ ಭಾರತದ ಒಂದು ಕಾಲಮಾನ. ಪ್ರಸ್ತುತದ ದಿನಗಳಲ್ಲಿ ಹಿಂದೂಸ್ಥಾನದ ಹಿರಿಮೆಯನ್ನು ಹೀಗಳೆಯುತ್ತಾ ಕ್ರಾಂತಿಕಾರಿಗಳನ್ನೂ ಕಾಮ್ರೆಡ್ ಗಳ ಪಟ್ಟಿಗೆ ಸೇರಿಸುವ ಪೊಳ್ಳು ಜಾತ್ಯಾತೀತವಾದಿಗಳಿಗೆ 1879 ಎಂದರೆ ಭಗತ್ ಸಿಂಗ್, ಚಂದ್ರಶೇಖರ್ ಆಜಾದರು ಇನ್ನೂ ಹುಟ್ಟಿರದ ಸ್ವಾತಂತ್ರ್ಯ ಹೋರಾಟದ ಅಧ್ಯಾಯಕ್ಕೆ ಮಾತ್ರ ಸೀಮಿತ!.

ಆದರೆ ಒಬ್ಬ ನಿಜವಾದ ರಾಷ್ಟ್ರಪ್ರೇಮಿಗೆ, 1879ನೇ ಇಸ್ವಿ ಭಾರತದ ಗಣತಂತ್ರ ವ್ಯವಸ್ಥೆ ಆಸೆಯನ್ನು ಬಡಿದೆಬ್ಬಿಸಿದ ಮಹತ್ವವಾದ ವರ್ಷ. ಆ ವೇಳೆಗಾಗಲೇ ಬ್ರಿಟೀಷರ ದಾಸ್ಯದಿಂದ ಬಳಲಿ ಹೋಗಿದ್ದ ನಿಸ್ತೇಜ ಭಾರತೀಯರಿಗಂತೂ ಮೊಘಲ್ ಸಾಮ್ರಾಜ್ಯವನ್ನು ಮೆಟ್ಟಿ ಮರಾಠರ ಅಧಿಪತ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮತ್ತೊಮ್ಮೆ ಹುಟ್ಟಿ ಬಂದು ಬ್ರಿಟೀಷರ ದಾಸ್ಯದಿಂದ ಮುಕ್ತಗೊಳಿಸಿಯಾನು ಎಂಬ ಆಶಾಕಿರಣದ ಉಗಮಸ್ಥಾನ. ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ 1879ರ ಕಾಲಘಟ್ಟದಲ್ಲಿ ಪ್ರಕಟವಾಗುವುದು ಭಾರತದ ಗಣತಂತ್ರ ವ್ಯವಸ್ಥೆಗೆ ಅಂದೇ ಭದ್ರ ಬುನಾದಿ ಹಾಕಿ ಕ್ರಾಂತಿ ಕಿಡಿ ಹೊತ್ತಿಸಿದ್ದ ಅಭಿನವ ಶಿವಾಜಿಯ ಹೋರಾಟದ ಅಧ್ಯಾಯ! ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲು ಹಾಕಿ ತನ್ನ ಹೆಸರಿನಿಂದಲೇ ಸರ್ಕಾರವನ್ನು ರೊಚ್ಚಿಗೆಬ್ಬಿಸುತ್ತಿದ್ದ "ವಾಸುದೇವ್ ಬಲವಂತ ಫಡಕೆ" ಎಂಬ ಅದಮ್ಯ ಚೇತನ ಅಸ್ತಂಗತ ಪೇಶ್ವೆಗಳ ನಾಡಿನಲ್ಲಿ ಕ್ರಾಂತಿ ಕಿಡಿಯನ್ನು ಹೊತ್ತಿಸಿದ್ದು 1879ರಲ್ಲೇ !

ದೃಢಸ್ವಭಾವ, ನಾಯಕರನ್ನು ದೇಶಕ್ಕೆ ನೀಡಿದ ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆ ವಾಸುದೇವ್ ಬಲವಂತ ಫಡಕೆ ಮನೆತನದ ಮೂಲ. ಬ್ರಿಟಿಷರ ವಿರುದ್ಧ ಹೋರಾಟ ನಡೆಸುವುದು ವಾಸುದೇವ್ ಬಲವಂತ ಫಡಕೆಗೆ ರಕ್ತಗತವಾಗಿಯೇ ಬಂದಿದ್ದ ಬಳುವಳಿ. ಆಂಗ್ಲರಿಗೆ ಯಾವ ಮನೆತನದ ಹೆಸರಿ ಕೇಳಿದರೆ ಮೈಯೆಲ್ಲ ಧಗಧಗ ಉರಿಯುತ್ತಿತ್ತೋ ಅದೇ ಚಿತ್ಪಾವನ ಸುಸಂಸ್ಕೃತ ಬ್ರಾಹ್ಮಣ ಕುಟುಂಬದಲ್ಲಿ 1845 ನ.4ರಂದು ವಾಸುದೇವ್ ಬಲವಂತ ಫಡಕೆಯ ಜನನವಾಗಿತ್ತು. ವಾಸುದೇವನ ಆರಾಧ್ಯ ದೈವವಾಗಿದ್ದ ಶಿವಾಜಿ ಸ್ವಂತ ಪರಾಕ್ರಮದಿಂದ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದಾಗ ಪ್ರಮುಖ ಕೋಟೆಯಾಗಿದ್ದ ಕರ್ನಾಳ ಕೋಟೆಗೆ, ಎರಡನೇ ಬಾಜಿರಾಯರ ಕಾಲದಲ್ಲಿ ವಾಸುದೇವನ ಅಜ್ಜ ಅನಂತ್ ರಾವ್ ಫಡಕೆ ಕಿಲ್ಲೇದಾರರು. ವಾಸುದೇವನ ಮೇಲೆ ತಾತನ ಪ್ರಭಾವ ಬಹಳ, ಅವರು ಹೇಳಿದ್ದನ್ನು ಮೈಯೆಲ್ಲಾ ಕಿವಿಮಾಡಿಕೊಂಡು ತದೇಕಚಿತ್ತದಿಂದ ಕೇಳುತ್ತಿದ್ದದ್ದೇ ಬಾಲ್ಯದಲ್ಲಿ ವಾಸುದೇವ್ ಬಲವಂತ ಫಡಕೆ ಕಾಯಕ.....

"ಶರೀರದಲ್ಲಿ ಉಸಿರು ಇರೋ ಕೊನೆಯ ಕ್ಷಣದವರೆಗೂ ದುಡಿಯಬೇಕು ಉಸಿರು ನಿಂತಾಗಲೇ ದುಡಿಮೆ ನಿಲ್ಲಬೇಕು, ಸಸಿ ನೆಟ್ಟವರೇ ಫಲ ತಿನ್ನಬೇಕೋ? ಮುಂದೆ ಬರುವವರು ಅದನ್ನು ತಿನ್ನುತ್ತಾರೆ ನಾವು ನೆಡುವ ಸಸಿ ಅವರಿಗೋಸ್ಕರ ಎಂದು ತಾತಾ ಹೇಳಿದ್ದ ಈ ಎರಡು ಮಾತುಗಳೇ ವಾಸುದೇವ್ ಬಲವಂತ ಫಡಕೆ ಅವರ ಜೀವನದ ದಿಕ್ಕನ್ನೇ ಬದಲಿಸಿಬಿಟಿತ್ತು. ಮುಂದಿನ ಪೀಳಿಗೆಗಾಗಿ ಅದರ ಶ್ರೇಯಸ್ಸಿಗಾಗಿ ಶರೀರದಲ್ಲಿ ಕೊನೆಯ ಶಕ್ತಿ ಇರೋವರೆಗೂ ಬೆವರು ಹರಿಸಬೇಕು ದುಡಿಯಬೇಕು ಎಂದು ಅಂದೇ ನಿರ್ಧರಿಸುತ್ತಾನೆ!

ಆಂಗ್ಲರೆಂದರೆ ರಾವಣ ಕುಂಭಕರ್ಣರಂಥ ರಾಕ್ಷಸ ಕುಲದವರು ತಾನು ಶ್ರೀರಾಮನ ಪಡೆಯವನು ಎಂಬ ಕಲ್ಪನೆ ಹೊತ್ತಿದ್ದ ವಾಸುದೇವನ ಜೊತೆಜೊತೆಯಲ್ಲಿಯೇ ಕ್ರಾಂತಿಯ ಭಾವನೆಗಳೂ ಬೆಳೆದವು ಪ್ರಚೋದನೆಗೊಂಡವು. ರಾಣಿ ಲಕ್ಷ್ಮೀ ಬಾಯಿ,ತಾತ್ಯಾಟೋಪೆ, ಕುಂವರಸಿಂಹ ಮುಂತಾದ ನೂರಾರು ಧೀರ ವ್ಯಕ್ತಿತ್ವಗಳು ಪೌರುಷದ ಸಂಕೇತವಾಗಿ ಫಡಕೆ ಅಂತರಂಗದಲ್ಲಿ ಸಂಚಾರ ಮಾಡುತ್ತಲೇ ಇತ್ತು. 1859ರಲ್ಲಿಮುಂಬೈ ನ ಗ್ರೇಟ್ ಪೆನಿನ್ಸುಲಾರ್ ರೈಲ್ವೇಸ್ ಇಲಾಖೆಯಲ್ಲಿ ವೃತ್ತಿ ಆರಂಭಿಸಿದ, ನಂತರ ಆತ ಸೇರಿಕೊಂಡಿದ್ದು ಮಿಲಿಟರಿ ಫೈನಾನ್ಸ್ ಕಚೇರಿಗೆ. ಆಂಗ್ಲರೆಂದರೆ ಸಿಡಿದೇಳುತ್ತಿದ್ದ ಆತನ ಸ್ವಭಾವ ಆಗಿನ್ನೂ ಗಟ್ಟಿ ಸ್ವರೂಪ ಪಡೆದುಕೊಂಡಿರಲಿಲ್ಲ. ಒಳಗೊಳಗೇ ಸ್ವರಾಜ್ಯದ ಕುರಿತಾದ ವಿಚಾರ ಪ್ರವಹಿಸುತ್ತಲೇ ಇತ್ತು.

ಈ ಮಧ್ಯೆ ಫಡಕೆ ಅಂತರಾತ್ಮದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಬೆಂಕಿ ಸ್ಫೋಟಗೊಳ್ಳುವಂತಹ ಘಟನೆಯೊಂದು ನಡೆದುಹೋಗುತ್ತದೆ. ಶಿರಢೋಣ್ ನಲ್ಲಿದ್ದ ತಾಯಿಗೆ ಖಾಯಿಲೆ. ಸ್ಥಿತಿ ಗಂಭೀರ, ಆದರೆ ಅವನು ಕೆಲಸ ನಿರ್ವಹಿಸುತ್ತಿದ್ದದ್ದು ಬ್ರಿಟೀಷರ ಸರ್ಕಾರದಲ್ಲಿ. ರಜೆ ಕೇಳಿದರೂ ದೊರೆಯುವುದಿಲ್ಲ. ಬ್ರಿಟೀಷ್ ಅಧಿಕಾರಿಗಳ ಕೃಪಾಕಟಾಕ್ಷದಿಂದ ರಜೆ ದೊರೆಯುವ ವೇಳೆಗೆ ತನ್ನ ತಾಯಿ ಸರಸ್ವತಿ ಬಾಯಿ ನಿಧರನಾಗಿರುತ್ತಾರೆ. ಮೊದಲೇ ಬ್ರಿಟೀಷರನ್ನು ಕಂಡರೆ ಕೆಂಡ ಕಾರುತ್ತಿದ್ದ ವಾಸುದೇವ ಬಲವಂತ ಫಡಕೆಗೆ ಬೆಂಕಿಗೆ ಆಜ್ಯ ಸುರಿದ ರೀತಿ ಈ ಘಟನೆ ಸಂಭವಿಸಿಬಿಡುತ್ತದೆ. ಮುಂದೆ ಆಕೆಯ ವಾರ್ಷಿಕ ಶ್ರಾದ್ಧಕ್ಕೆ ರಜೆಕೊಡಲೂ ಐರೋಪ್ಯ ಅಧಿಕಾರಿಗಳ ತಕರಾರು..... ಒಂದರ ಹಿಂದೆ ಒಂದರಂತೆ ನಡೆದ ಘಟನೆಗಳು ಫಡಕೆಯ ಚಿಂತನೆಯ ವಿಧಾನವನ್ನೇ ಮೂಲಭೂತವಾಗಿ ಬದಲಾಯಿಸಿಬಿಟ್ಟಿದ್ದವು. ಅವನು ವಯಕ್ತಿಕ ಜೀವನದಲ್ಲಿ ಅನುಭವಿಸಿದ್ದ ಆಂಗ್ಲ ಗುಲಾಮಗಿರಿ ಅವನಿಗೊಂದು ಸಾರ್ವತ್ರಿಕ ಸತ್ಯದ ಅರಿವು ಮೂಡಿಸಿತ್ತು. ಹೆತ್ತ ಮಾತೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ ಆದರೆ ಭಾರತ ಮಾತೆಯನ್ನು ಬ್ರಿಟೀಷರ ಬಂಧನದಿಂದ ಮುಕ್ತಗೊಳಿಸಬೇಕು ಎಂಬ ಅಚಲ ನಿರ್ಧಾರ. ಸರಸ್ವತಿಬಾಯಿ ಕುಳಿತಿದ್ದ ಹೃದಯ ಮಂದಿರದಲ್ಲಿ ನೆಲದಾಯಿಯ ಮೂರ್ತಿ ಪ್ರತಿಷ್ಠಾಪನೆಯಾಗಿತ್ತು. ತಾಯಿಯ ಚಿತೆಯ ಬೂದಿಯಿಂದ ಹೊರ ಹಾರಿದ್ದ ಒಂದು ಬೆಂಕಿ ಕಿಡಿ ಫಡಕೆ ಮನದಲ್ಲಿ ಜ್ವಾಲಾ ಮುಖಿಯ ರೂಪ ತಳೆದಿತ್ತು. ಮುಂದಿನದು ಬ್ರಿಟಿಷರ ಪಾಲಿನ ಕರಾಳದಿನಳೇ ಸರಿ..... ಭಾರತದ ಬಿಡುಗಡೆಯ ಯಜ್ನದಲ್ಲಿ ತನ್ನ ಶರೀರ ಆಹುತಿಯಾಗಬೇಕು ಎಂದು ಶಪಥ ಮಾಡಿದ್ದ ವಾಸುದೇವ ಬಲವಂತ ಫಡಕೆ ಸ್ವಾತಂತ್ರ್ಯ ಹೋರಾಟ ಸಂಗ್ರಾಮದಲ್ಲಿ ಸಾಕ್ಷಾತ್ ಧಧೀಚಿಯಂತೆಯೇ ಬಿಂಬಿತವಾಗಿದ್ದ.
ಫಡಕೆ ತನ್ನ ಹೋರಾಟದ ಪೂರ್ವಭಾವಿಯಾಗಿ ದೇಶವ್ಯಾಪಿ ಪರ್ಯಟನೆ ಕೈಗೊಂಡರು, ಕಾವಿ ಬಟ್ಟೆ ಧರಿಸಿ ಸಾಕ್ಷಾತ್ ಪರಿವ್ರಾಜಕನಂತೆಯೇ ಜೋಳಿಗೆಹಿಡಿದು ಬ್ರಿಟೀಷರ ದಬ್ಬಾಳಿಕೆಯಿಂದ ನಲುಗುತ್ತಿದ್ದ ಭಾರತದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಪಾದಾಚಾರಿಯಾಗಿ ಹೊರಟ. ಆದರೆ ಫಡಕೆಯ ಕ್ರಾಂತಿಯೆಲ್ಲವೂ ಗಾಂಧಿಗಿರಿಯೆಂಬ ಹೆಮ್ಮರದ ಕೆಳಗೆ ಹೂತು ಹೋಗಿದೆ. ರಾಜ್ಯಾಂಗ ಬದ್ಧವಾಗಿ ಹೋರಾಟ ನಡೆಸಿದರೆ ಶತಮಾನಗಳೇ ಬೇಕು ಎಂಬುದು ಫಡಕೆ ನಿರ್ಧಾರ. ಭಾಷಣ, ಪತ್ರಿಕಾಲೇಖನಗಳ ಮೂಲಕ ಸ್ವರಾಜ್ಯ ಸಾಧ್ಯವಿಲ್ಲ ಸಶಸ್ತ್ರ ಬಂಡಾಯ ಮೂಲಕ ಸ್ವತಂತ್ರ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂಬುದನ್ನು ಅರಿತ ಫಡಕೆ, ತನ್ನದೇ ಆದ ಸ್ಪಷ್ಟ ವಿಚಾರಗಳನ್ನು ಬೆಳೆಸಿಕೊಂಡಿದ್ದ. ಆದರೆ ಕೊನೆಗೂ ಭಾರತಕ್ಕೆ ಸ್ವಾತಂತ್ರ್ಯ ಬರಲು ಶತಮಾನಗಳೇ ಬೇಕಾಯಿತು ಎಂಬುದು ವಿಪರ್ಯಾಸ!

ಪ್ರಾಪಂಚಿಕ ಜ್ನಾನವೇ ಇಲ್ಲದವರಲ್ಲಿ ಸ್ವಾತಂತ್ರ್ಯ ಹೋರಾಟದ ಸಂದೇಶ ಬಿತ್ತರಿಸಬೇಕು ದೇಶಭಕ್ತಿ ವಿಷಯವಾಗಿ ಹುಟ್ಟಾ ಸೋಮಾರಿಗಳಾಗಿದ್ದವರನ್ನು ಎಬ್ಬಿಸುವಂತಹ ನಗಾರಿ ಬಾರಿಸಬೇಕು ಹಳ್ಳಿ ಹಳ್ಳಿಗಳಲ್ಲಿ ಆಂಗ್ಲರ ವಿರುದ್ಧ ಬಂಡಾಯ ಸಾರಬೇಕು ಎಂದು ಕಾರ್ಯಕ್ರಮ ಹಾಕಿಕೊಳ್ಳುತ್ತಾನೆ ಫಡಕೆ. ಅದರಂತೆಯೇ ಕೈಯಲ್ಲಿನ ತಮಟೆ ಹಿಡಿದು ಆಂಗ್ಲರ ದಬ್ಬಾಳಿಕೆ ವಿರುದ್ಧ ಭಾಷಣ ಮಾಡ ತೊಡಗಿದರೆ, ಆಂಗ್ಲರು ಭಾರತವನ್ನು ಉದ್ಧಾರ ಮಾಡಲೆಂದೇ ಬಂದಿರುವವರು ಎಂಬ ಹೆಡ್ಡತನದ ವಾದ ಮಂಡಿಸುವವರು ಕೆಲವರು, ಫಡಕೆಯನ್ನು ನೋಡಿದವರು "ಯಾರಿರಬಹುದು ಈ ತಲೆ ಕೆಟ್ಟವನು? ಇನ್ನೂ ಪುಣೆ ನಗರವೇ ಎಚ್ಚೆತ್ತಿಲ್ಲ ಆಗಲೇ ಇವನ ಡಂಗುರದ ಬಡಿತವೇಕೆ ಎಂದು ಹಿಯಾಳಿಸಿದ್ದ ಮತ್ತೆ ಕೆಲವರು.

ದಿನ ಕಳೆಯುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟ ನಡೆಸಲು ಫಡಕೆ ತಮ್ಮದೇ ಒಂದು ಗುಪ್ತ ಸಂಘಟನೆ ರಚಿಸಿದ, ಆರಂಭದಲ್ಲಿ ಗುಪ್ತ ಸಂಘಟನೆಯ 4 ಗುಂಪುಗಳೊಂದಿಗೆ ಸ್ವಾತಂತ್ರ್ಯ ಹೋರಾಟ ನಡೆಸಿ, ನಂತರದ ದಿನಗಳಲ್ಲಿ ರಾಮೋಶಿಗಳೆಂಬ ಕಾಡು ಜನರಲ್ಲಿ ರಾಷ್ಟ್ರಭಕ್ತಿ ಬೆಳೆಸಿ ಅನಾಗರಿಕರನ್ನೂ ನಾಗರಿಕರನ್ನಾಗಿ ಮಾಡಿ ಬ್ರಿಟಿಷರ ದಬ್ಬಾಳಿಕೆಯನ್ನು ಭಂಜಿಸಿದ ಹೆಗ್ಗಳಿಕೆ ಆದ್ಯ ಕ್ರಾಂತಿಕಾರಿ ಫಡಕೆಯದ್ದು! ಸ್ವಾತಂತ್ರ್ಯ ಹೋರಾಟದಲ್ಲಿ ಫಡಕೆ ಹಲವು ಮೊದಲುಗಳನ್ನು ಸ್ಥಾಪಿಸಿದ್ದ ಕ್ರಾಂತಿಕಾರಿ. ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡುವ ಪ್ರಭಾತ ಫೇರಿಗಳು ಬರಬರುತ್ತಾ ಬಹಳ ವ್ಯಾಪಕವಾಗಿತ್ತು, ಅದನ್ನು ಮೊದಲು ಜಾರಿಗೆ ತಂದವನೇ ಫಡಕೆ! ಈ ಸಂಘಟನೆಯಲ್ಲಿ ಪಳಗಿ ಫಡಕೆ ಶಿಷ್ಯರಾಗಿ ರಾಷ್ಟ್ರಪ್ರೇಮದ ಪ್ರಥಮ ಪಾಠ ಕಲಿತವರಲ್ಲಿ, ಮುಂದೊಮ್ಮೆ ಬ್ರಿಟೀಷ್ ಸರ್ಕಾರವನ್ನು ಗದಗುಟ್ಟಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕರೂ ಒಬ್ಬರು!
1879ರಲ್ಲಿ ಫಡಕೆ ಹಾಗೂ ಕಾಡು ಜನರಾಗಿದ್ದ ರಾಮೋಶಿಗಳ ಹೋರಾಟ ತೀವ್ರ ಸ್ವರೂಪ ಪಡುಕೊಳ್ಳುತ್ತದೆ. ಹಿಂದವಿ ಸಾಮ್ರಾಜ್ಯ ಸ್ಥಾಪನೆ ಮಾಡಲು ಫಡಕೆ ಆರಾಧ್ಯ ದೈವ ಶಿವಾಜಿ ಯಾವ ಮಾರ್ಗ ಹಿಡಿದಿದ್ದನೋ ಅದೇ ಮಾರ್ಗವನ್ನೇ ಫಡಕೆಯೂ ತುಳಿಯುತ್ತಾನೆ. ಸರ್ಕಾರಕ್ಕೆ ಫಡಕೆ ಒಡ್ಡುತ್ತಿದ್ದ ಸವಾಲುಗಳನ್ನು ತಡೆಯಲಾಗದೇ, ಕ್ರಾಂತಿಕಾರಿ ವಾಸುದೇವ ಬಲವಂತ ಫಡಕೆಯನ್ನು ಹಿಡಿದುಕೊಟ್ಟವರಿಗೆ ನಾಲ್ಕು ಸಾವಿರ ಬಹುಮಾನ ನೀಡಲಾಗುವುದು ಎಂದು ಬ್ರಿಟೀಷ್ ಸರ್ಕಾರ ಆದೇಶ ಹೊರಡಿಸುತ್ತದೆ. ನಂತರದ ವರ್ಷಗಳಲ್ಲಿ ಭೂಗತ ರಾಜಕೀಯ ಕ್ರಾಂತಿಕಾರಿಗಳ ಬಂಧನಕ್ಕೆ ಬಹುಮಾನದ ಪ್ರಲೋಭನೆಯ ಪದ್ಧತಿ ಪ್ರಾರಂಭವಾಗಿದ್ದು ಫಡಕೆ ಕ್ರಾಂತಿಯ ಸಮಯದಲ್ಲೇ.... ಅಷ್ಟರ ಮಟ್ಟಿಗೆ ಬ್ರಿಟೀಷರ ನಿದ್ದೆ ಕದಡಿತ್ತು ಫಡಕೆಯ ಹೋರಾಟ.

ಆದರೆ ಬ್ರಿಟೀಷರು ಹೊರಡಿಸಿದ್ದ ಘೋಷಣಾ ಪತ್ರಕ್ಕೆ ಪ್ರತಿಯಾಗಿ ಮತ್ತೊಂದು ಪತ್ರ ಹೊರಡಿಸಿದ್ದ ಫಡಕೆ, ಮುಂಬೈ ಗೊವರ್ನರ್ ತಲೆ ತಂದವರಿಗೆ 5 ಸಾವಿರ ಬಹುಮಾನ! ಪುಣೆ ಜಿಲ್ಲಾಧಿಕಾರಿ ತಲೆ ತಂದವರಿಗೆ 3 ಸಾವಿರ ಬಹುಮಾನ ಎಂದು ಬಹುಮಾನ ಘೋಷಿಸಿದ್ದ ಈ ಘೋಷಣಾ ಪತ್ರವನ್ನು ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟಿಸದೇ ಇದ್ದರೆ ಅವರ ಬಲಗೈ ಬಲಿಕೊಡಬೇಕಾದೀತು ಎಂದು ಘರ್ಜಿಸಿದ್ದ ಏಕೈಕ ಕ್ರಾಂತಿಕಾರಿ! ಈ ಘಟನೆಯಾದ ಬಳಿಕ ಎಲ್ಲೆಲ್ಲೂ ನಾಮ ಸ್ಮರಣೆಯೇ.... ಫಡಕೆ ಭಾರತದ ಆದ್ಯ ಕ್ರಾಂತಿಕಾರಿಯಾಗಿ ಗುರುತಿಸಿಕೊಂಡರು. ಆದರೆ ಭಾರತದ ದುರ್ದೈವ! ಸತತ 6 ತಿಂಗಳು ಪುಣೆಯ ಬ್ರಿಟೀಷ್ ಅಧಿಕಾರಿಗಳ ಪಾಲಿಗೆ ಅಕ್ಷರಶಃ ಯಮಸ್ವರೂಪಿಯಾಗಿ ಕಾಣಿಸಿಕೊಂಡಿದ್ದ ಫಡಕೆಯನ್ನು ಬ್ರಿಟಿಷ್ ಅಧಿಕಾರಿಗಳು ಹರಸಾಹಸ ಮಾಡಿ 1879ರ ಜು.22ರಂದು ಬಂಧಿಸುತ್ತಾರೆ. ಬ್ರಿಟೀಷ್ ಸಾಮ್ರಾಜ್ಯವನ್ನು ನಿರ್ನಾಮಗೊಳಿಸಲು ಯತ್ನಿಸಿದ ಅಪರಾಧದಡಿ ವಾಸುದೇವ ಬಲವಂತ ಫಡಕೆಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಆ ಸಂದರ್ಭದಲ್ಲಿ ವಾಸುದೇವ ಬಲವಂತ ಫಡಕೆ ತನ್ನ ಕ್ರಾಂತಿಯಿಂದಾಗಿ ಭಾರತಕ್ಕೆ ಚಿರಪರಿಚಿತ.

ಫಡಕೆ ಉಂಟು ಮಾಡಿದ್ದ ಕ್ರಾಂತಿ ಬ್ರಿಟೀಷರಿಗೆ ಎಷ್ಟು ಭಯ ಹುಟ್ಟಿಸಿತ್ತು ಎಂದರೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಖೈದಿಗಳನ್ನು ಅಂಡಮಾನಿಗೆ ಕಳುಹಿಸಲಾಗುತ್ತಿತ್ತು. ಬಹುಮಂದಿ 1857ರ ಹೋರಾಟದಲ್ಲಿ ಭಾಗವಹಿಸಿದ್ದವರು ಅವರಲ್ಲಿ ದೀರ್ಘಕಾಲದ ಶಿಕ್ಷೆ ಅನುಭವಿಸಿ ಕೆಲವರು ಜೈಲಿನಿಂದ ಮುಕ್ತರಾಗಿ ಅಂಡಮಾನ್ ದ್ವೀಪದಲ್ಲೇ ನೆಲೆಸಿದ್ದರು ಒಂದು ವೇಳೆ ಫಡಕೆ ಅಲ್ಲಿಗೆ ಹೋದರೆ ಅವರೊಂದಿಗೂ ಹೇಗಾದರೂ ಸಂಪರ್ಕ ಸಾಧಿಸಿ ಬ್ರಿಟಿಷರಿಗೆ ಮತ್ತೆ ತಲೆ ನೋವಾಗಿ ಪರಿಣಮಿಸುವ ಸಾಧ್ಯತೆಗಳಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಅಂಡಮಾನ್ ಜೈಲಿನ ಬದಲು ಇನ್ನೂ ಸುಭದ್ರವಾದ ಏಡನ್ ಗೆ ಕಳಿಸಲಾಯಿತು. ಮಾತೃಭೂಮಿಯಿಂದ ದೂರವಾದ ಫಡಕೆ ಜೀವಂತ ಶವದ ರೀತಿ ಭಾರತದಿಂದ ದೂರ ಇರುವ ಏಡನ್ ಕಾರಾಗೃಹದಲ್ಲೇ ವೀರ ಮರಣವನ್ನಪ್ಪುತ್ತಾರೆ.
1943 ಫೆ.1, ಶಿರಢೋಣದಲ್ಲಿ ವಾಸುದೇವ ಬಲವಂತ ಫಡಕೆ ನೆನಪಿಗಾಗಿ ಸ್ಥಾಪಿತವಾಗಿದ್ದ ಒಂದು ಸ್ಮೃತಿ ಸ್ತಂಭದ ಮುಂದೆ ಒಬ್ಬ ವ್ಯಕ್ತಿ ನಿಂತಿದ್ದರು. ಕಚ್ಚೆ ಪಂಚೆ ಕೋಟು, ಕಪ್ಪು ಟೋಪಿ ಧರಿಸಿದ್ದ ಆ ವ್ಯಕ್ತಿ, ಸ್ಮೃತಿಸ್ತಂಬವನ್ನು ನೋಡುತ್ತಾ ಇದ್ದಂತೆ ಅವರ ಕಣ್ಣು ಮಂಜು ಗಟ್ಟಿತ್ತು " ನಮ್ಮ ಹೃದಯಗಳಲ್ಲಿ ಧಗಧಗಿಸುತ್ತಿರುವ ಭಾರತ ಸ್ವಾತಂತ್ರ್ಯದ ಜ್ವಾಲೆಯನ್ನು ಹಚ್ಚಿದ್ದು ವಾಸುದೇವ ಬಲವಂತ ಫಡಕೆಯ ಹೃದಯದಲ್ಲಿ ಪ್ರಜ್ವಲಿಸುತ್ತಿದ್ದ ಆ ಪ್ರಳಯಾಗ್ನಿಯೇ. ಈ ಸ್ತಂಬದ ಮೇಲೆ ಬೆಳಗುತ್ತಿರುವ ಪವಿತ್ರ ಜ್ಯೋತಿ ಆ ವೀರ ಹುತಾತ್ಮನಿಗೆ ಯೋಗ್ಯವಾದ ಸ್ಮೃತಿ ಚಿಹ್ನೆ. ನೀವು ಬೆಳಕಿಗಾಗಿ ಹುಡುಕಾಡುವ ಸಂದರ್ಭ ಎದುರಾದರೆ ಈ ಜ್ಯೋತಿ ನಿಮ್ಮ ಹೃದಯಗಳನ್ನು ಬೆಳಗುತ್ತದೆ. ನಿಮಗೆ ದಾರಿ ತೋರುತ್ತದೆ" ಎಂದು ಹೇಳಿದ್ದರು ಹೀಗೆ ಹೇಳಿದ್ದು ಭಾರತದ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ ಕರ್....

ಮೊಟ್ಟ ಮೊದಲಬಾರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾರ್ಗವನ್ನು ಅನುಸರಿಸಿ, ತಿಲಕರು, ಸಾವರ್ಕರ್ ಸೇರಿದಂತೆ ಭಾರತದ ಹೆಮ್ಮೆಯ ಕ್ರಾಂತಿಕಾರಿಗಳಿಗೆ ಮಾರ್ಗದರ್ಶನ ಮಾಡಿದ ವಾಸುದೇವ ಬಲವಂತ ಫಡಕೆ ನಿಧನರಾಗಿದ್ದು 1883 ಫೆ.17ರಂದು. ಫಡಕೆ ಸಾಯಲಿಲ್ಲ, ನರರಕ್ಕಸನಂತಿದ್ದ ಬ್ರಿಟಿಷ್ ಅಧಿಕಾರಿಯನ್ನು ಕೊಂದು ಹಾಕಿದ ಚಾಪೇಕರ್ ಸಹೋದರರ ಬಾಹುಗಳಲ್ಲಿ ಆವಿರ್ಭವಿಸಿದ್ದ. ಗಲ್ಲುಗಂಬವನೇರಿದ ಧೀಂಗ್ರಾನ ದೇಹದಲ್ಲಿ ಫಡಕೆ ವಿಜೃಂಭಿಸಿದ್ದ. ಚಂದ್ರಶೇಖರ ಆಜಾದ್, ಭಗತ್ ಸಿಂಗ್ ರ ಗುಂಡುಗಳಲ್ಲಿ ಫಡಕೆ ಘರ್ಜಿಸಿದ್ದ. ಹೀಗೆ ಒಬ್ಬ ಪರಿವ್ರಾಜಕನಂತೆಯೇ ಇದ್ದು ಕ್ರಾಂತಿ ಹುಟ್ಟಿಗೆ ಕಾರಣರಾದ ಫಡಕೆಯನ್ನು ನೆನೆಯುವುದು ಸ್ವತಂತ್ರ ಭಾರತದ ಪ್ರಜೆಗಳಾಗಿ ನಮ್ಮ ಕರ್ತವ್ಯ!

 

Author : ಶ್ರೀನಿವಾಸ್ ರಾವ್

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited