Untitled Document
Sign Up | Login    
ಮಕರ ಸಂಕ್ರಮಣದ ಹೊತ್ತು..

ಮಕರ ಸಂಕ್ರಮಣದ ಹೊತ್ತು..

ಜಗವನ್ನೆಲ್ಲ ಬೆಳಗುವ ಸೂರ್ಯ ಭೂಲೋಕದ ಪ್ರತ್ಯಕ್ಷ ದೇವರು. ಜಾತಿ, ಮತ ಬೇಧವಿಲ್ಲದೆ ಪ್ರಪಂಚದೆಲ್ಲ ಜನರು ಆರಾಧಿಸುವ ಏಕೈಕ ದೇವರೂ ಹೌದು. ಹಿಂದೂ ಧಾರ್ಮಿಕ ಪರಂಪರೆಯಲ್ಲಿ ಒಂದು ವರ್ಷದ ಹನ್ನೆರಡು ತಿಂಗಳುಗಳನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂಬೆರಡು ಭಾಗವಾಗಿ ನೋಡಲಾಗುತ್ತದೆ. ಹೀಗೆ ನೋಡುವುದಕ್ಕೂ ಒಂದು ಕಾರಣವಿದೆ. ಸೂರ್ಯ ದೇವರು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎನ್ನುತ್ತಾರೆ. ಗ್ರಹಗಳ ಲೆಕ್ಕಾಚಾರದಲ್ಲಿ ನೋಡಿದರೆ ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳು ಕಾಲ ಇರುತ್ತದೆ. ಪ್ರತಿ ವರ್ಷ ಜನವರಿ 14ರ ವೇಳೆಗೆ ಸೂರ್ಯ ಮಕರ ರಾಶಿ ಪ್ರವೇಶಿಸುತ್ತಾನೆ. ಇಲ್ಲಿಂದಾಚೆಗೆ ಸೂರ್ಯನ ಪಥ ಉತ್ತರಾಭಿಮುಖವಾಗಿದ್ದು, ಮುಂದಿನ ಆರು ತಿಂಗಳು ಇದೇ ದಿಕ್ಕಿನಲ್ಲಿ ಸಂಚರಿಸಿ ಮತ್ತೆ ದಕ್ಷಿಣಕ್ಕೆ ತಿರುಗುತ್ತಾನೆ. ಉತ್ತರಾಭಿಮುಖದ ಸಂಚಾರದ ಕಾಲವನ್ನು ಉತ್ತರಾಯಣ ಎನ್ನುತ್ತಾರೆ.

ಪೌರಾಣಿಕ ಐತಿಹ್ಯಗಳ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಉತ್ತರಾಯಣ ಕಾಲದಲ್ಲಿ ಕೊನೆಯುಸಿರೆಳೆದವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ. ಮಹಾಭಾರತ ಯುದ್ಧದ ವೇಳೆ ಭೀಷ್ಮ ಶರಶಯ್ಯೆಯಲ್ಲಿ ಮಲಗುವಂಥಾದ್ದು ದಕ್ಷಿಣಾಯಣದಲ್ಲಿ. ಆದರೆ, ಭೀಷ್ಮರು ಇಚ್ಛಾಮರಣಿಯಾದ್ದರಿಂದ ದಕ್ಷಿಣಾಯಣ ಕಾಲದಲ್ಲಿ ಕೊನೆಯುಸಿರೆಳೆಯದೇ ಉತ್ತರಾಯಣದಲ್ಲಿ ಪ್ರಾಣ ತ್ಯಜಿಸುತ್ತಾರೆ. ಅದಕ್ಕೆ ಇದೇ ನಂಬಿಕೆ ಕಾರಣ ಎನ್ನುತ್ತದೆ ಐತಿಹ್ಯ. ಇದೇ ರೀತಿ, ಕೃತಯುಗದಲ್ಲಿ ಶಿವ ಪಾರ್ವತಿ ವಿವಾಹ, ಜಗತ್ತಿನ ಸೃಷ್ಟಿಕಾರ್ಯವನ್ನು ಬ್ರಹ್ಮದೇವ ಆರಂಭಿಸಿದ್ದು, ಗೌತಮ ಮಹಾಮುನಿಗಳು ಇಂದ್ರನ ಶಾಪ ವಿಮೋಚನೆ ಮಾಡಿದ್ದು, ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಅವತರಿಸಿದ್ದು ಇವೆಲ್ಲವೂ ಉತ್ತರಾಯಣ ಕಾಲದಲ್ಲಿಯೇ ಎಂಬುದು ವಿಶೇಷ. ಹೀಗಾಗಿಯೇ ಯಾವುದೇ ಶುಭಕಾರ್ಯಗಳನ್ನು ಉತ್ತರಾಯಣದಲ್ಲೇ ಮಾಡುವಂತೆ ಪುರೋಹಿತರು, ಜ್ಯೋತಿಷಿಗಳು ಸೂಚಿಸುವುದು.

ಇನ್ನು ಹಬ್ಬದ ವಿಚಾರಕ್ಕೆ ಬಂದರೆ, ಇದೇ ಮಕರ ಸಂಕ್ರಮಣ ಕಾಲದ ಹಬ್ಬವನ್ನು ಮಕರಸಂಕ್ರಾಂತಿ ಅಥವಾ ಎಳ್ಳು ಬೆಲ್ಲದ ಹಬ್ಬವೆನ್ನುತ್ತಾರೆ. ಹೊಸ ಬೆಳೆಯ ಫಸಲು ಬಂದ ಸಮಯವೂ ಇದಾಗಿರುವುದರಿಂದ ಅವೆಲ್ಲವನ್ನೂ ರಾಶಿ ಹಾಕಿ ಅದಕ್ಕೆ ಪೂಜೆ ಸಲ್ಲಿಸುವ ಪರಿಪಾಠವೂ ಇದೆ. ಹೀಗಾಗಿ ಇದನ್ನು ಸುಗ್ಗಿ ಹಬ್ಬವೆಂದೂ ಹೇಳುತ್ತಾರೆ. ಸಂಕ್ರಾಂತಿ ಹಬ್ಬದ ದಿನ ಎಳ್ಳು ದಾನ ನೀಡಿದರೆ ಶುಭವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಕೇವಲ ಎಳ್ಳು(ಶನಿಗೆ ಪ್ರಿಯವಾದುದು) ಮಾತ್ರ ದಾನ ನೀಡಿದರೆ, ಆ ಮೂಲಕ ಪಾಪ ಕಳೆದುಕೊಂಡರು ಎಂದು ಹಲವರು ಅಪಾರ್ಥ ಕಲ್ಪಿಸುವ ಕಾರಣ, ಅದರ ಜತೆಯಲ್ಲಿ ಶೇಂಗಾ ಬೀಜ, ಹುರಿಗಡಲೆ, ಬೆಲ್ಲ ಸೇರಿಸಿ ಕೊಡುವ ಪದ್ಧತಿ ಚಾಲ್ತಿಗೆ ಬಂದಿದೆ. ಬಹುತೇಕ ದೇಶದೆಲ್ಲೆಡೆ ವಿವಿಧ ಹೆಸರಿನಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಕೇರಳದ ಶಬರಿಮಲೆಯಲ್ಲಿ ಇದೇ ದಿನ ಮಕರಜ್ಯೋತಿ ಉತ್ಸವ ನಡೆಯುತ್ತಿದ್ದು, ಜಗತ್ಪ್ರಸಿದ್ಧವಾಗಿದೆ.

 

Author : ಬೆಂಗಳೂರು ವೇವ್ಸ್ 

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited