Untitled Document
Sign Up | Login    
ವಿಶ್ವಗುರುವಾಗಬೇಕು ಭಾರತ !

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂಧರ 150ನೇ ಜನ್ಮ ವರ್ಷಾಚರಣೆಯ ದಿನವಿದು. ಕಳೆದ ವರ್ಷವಿಡೀ ವಿವೇಕಾನಂದರ ಜೀವನಾದರ್ಶಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ದೇಶಾದ್ಯಂತ ನಡೆದಿದೆ. ವಿಶ್ವಮಾರ್ಗದರ್ಶಕ ಪಾತ್ರದಲ್ಲಿ ಭಾರತ ಎಂಬ ವಿವೇಕಾನಂದರ ಪರಿಕಲ್ಪನೆಯನ್ನು ಇಲ್ಲಿ ಹೇಳ ಬಯಸುತ್ತೇನೆ.

ಸ್ವಾಮಿ ವಿವೇಕಾನಂದರು ಒಂದು ಕಡೆ ಹೀಗೆ ತಿಳಿಸುತ್ತಾರೆ: ' ಭರತಖಂಡ ಪ್ರಪಂಚಕ್ಕೆ ನೀಡುವ ದಾನವೇ ಅಧ್ಯಾತ್ಮ ವಿದ್ಯೆ'. ಇಡೀ ವಿಶ್ವದ ಜಗದ್ಗುರುವಾಗಿ ಶಾಂತಿ, ನೆಮ್ಮದಿ, ಸಮಾಧಾನಗಳನ್ನು ಬೀರುವ ಅಧ್ಯಾತ್ಮ ವಿದ್ಯೆಯನ್ನು ಪ್ರಪಂಚಕ್ಕೆ ತಿಳಿಸುವ ಮಹಾಶಕ್ತಿಯೇ ಭಾರತ. ಭರತ ಭೂಮಿಯ ಈ 'ಅಧ್ಯಾತ್ಮ ಶಕ್ತಿ'ಯ ಬಗ್ಗೆ ಇಡೀ ವಿಶ್ವದ ಮಹಾನ್ ದಾರ್ಶನಿಕರು, ಚಿಂತಕರು, ಬುದ್ಧಿಜೀವಿಗಳು ಈ ವಿಚಾರದಲ್ಲಿ ನಿಸ್ಸಂದೇಹವಾಗಿ ಒಮ್ಮತಕ್ಕೆ ಬರುತ್ತಾರೆ. ಅದೇ ಭಾರತದ ಅಧ್ಯಾತ್ಮ ಶಕ್ತಿ. ಈ ಅಧ್ಯಾತ್ಮ ಶಕ್ತಿಯ ಅದ್ಭುತಕ್ಕೆ ಮಾರು ಹೋಗದವರೇ ಇಲ್ಲ. 18ನೇ ಶತಮಾನದ ಅತ್ಯಂತ ಮೇಧಾವಿ ಹಾಗೂ ಮಹಾನ್ ಜ್ಞಾನಿ ಎಂದೆನಿಸಿಕೊಂಡಿದ್ದ ಪ್ರೊ.ಮ್ಯಾಕ್ಸ್ ಮುಲ್ಲರ್ ತನ್ನ ಅತ್ಯಂತ ಪ್ರಭಾವಪೂರ್ಣ ಕೇಂಬ್ರಿಡ್ಜ್ ಉಪನ್ಯಾಸ(1182)ರಲ್ಲಿ ಭಾರತದ ಬಗ್ಗೆ ಹೀಗೆ ತಿಳಿಸುತ್ತಾನೆ.

"If I were asked under what sky the
human mind has move fully developed some
of its choicest gifts, has most deeply pondered
on the greatest problems of life, and has found
solutions of some of them will deserve the
attention even of those who have studied Pluto
and Kant, I should point to India"

ಹೇಗೆ ಭಾರತದ ಅಧ್ಯಾತ್ಮ ಶಕ್ತಿ ವಿಶ್ವದ ದಾರ್ಶನಿಕರಿಗೂ ಮಾರ್ಗದರ್ಶನ ನೀಡಿತ್ತು ಎಂಬುದನ್ನು ಈ ಮೇಲಿನ ವಾಕ್ಯಗಳ ಮೂಲಕ ಅರಿಯಬಹುದಾಗಿದೆ. ಈ ಪವಿತ್ರ ಭಾರತವು "ವಿಶ್ವಗುರು''ವಾಗಿ ಸದಾ ಶಾಂತಿ, ನೆಮ್ಮದಿ, ಸಮಾಧಾನದ ತಾರಕ ಮಂತ್ರವನ್ನು ಬೋಧಿಸುತ್ತಿದೆ. ಕಾರಣಾಂತರದಿಂದ ಹಾಗೂ ವಸ್ತುಸ್ಥಿತಿಯ ಪ್ರಭಾವದಿಂದ ನಾವಿಂದು ಈ ಮಹಾನ್ ಪರಂಪರೆಯನ್ನು ಮರೆತಂತಿದೆ. ಈ ನಿಟ್ಟಿನಲ್ಲಿ ವಿಶ್ವಮಾನವ ಸ್ವಾಮಿ ವಿವೇಕಾನಂದರು ಭಾರತಮಾತೆಯ ಈ ಅದ್ಭುತ ಪರಂಪರೆಯನ್ನು ಮತ್ತೆ ಮತ್ತೆ ನಮಗೆ ಮನದಟ್ಟಾಗುವಂದದಿ ತಮ್ಮ ಪಾಂಚಜನ್ಯ ಸದೃಶ ಸಿಂಹನಾದದಿಂದ ಮತ್ತೆ ಭಾರತವನ್ನು ಬಡಿದೇಳುವಂತೆ ಮಾಡಿದ್ದಾರೆ. ಸ್ವಾಮಿ ವಿವೇಕಾನಂದರ "ಮಾತೃಭೂಮಿ''ಯ ಪರಿಕಲ್ಪನೆ ನಮಗಿಂದು ಅರಿವಿಗೇ ಬರುತ್ತಿಲ್ಲ. ಈಗಲಾದರೂ ಎಚ್ಚೆತ್ತುಕೊಂಡು ಸ್ವಾಮಿ ವಿವೇಕಾನಂದರು ಮೊಳಗಿಸಿದ ಸಿಂಹನಾದವನ್ನು ಅರಿತು "ನವಭಾರತ'' ನಿರ್ಮಾಣಕ್ಕೆ ಕಂಕಣಬದ್ಧರಾಗೋಣ. "ಭಾರತ" ಎಂಬ ಪವಿತ್ರ ಭೂಮಿ ಇಡೀ ವಿಶ್ವವನ್ನು ಅಧ್ಯಾತ್ಮ ಬಲದಿಂದ ಗೆಲ್ಲುವ ಶಕ್ತಿ ಪಡೆದಿದೆ. ಆದರೆ, ದುರದೃಷ್ಟವಶಾತ್ ಈ ಶಕ್ತಿ ನಮ್ಮಲ್ಲಿಯೇ ಸುಪ್ತವಾಗಿ ಅಡಗಿಹೋಗಿದೆ. ಈಗ ನಮಗಿಂದು ಬೇಕಿರುವುದು, ನಮ್ಮ ಭರವಸೆಯಿರುವುದು ಇಂದಿನ ಯುವ ಪೀಳಿಗೆಯ ಮೇಲೆ. " ಯುವಪೀಳಿಗೆಯಿಂದಲೇ ನನ್ನ ಕರ್ಮಠರು ಬರುವರು. ಅವರು ಕೆಚ್ಚೆದೆಯ ಸಿಂಹಗಳಂತೆ ಇಡೀ ಯೋಜನೆಯನ್ನು ಕಾರ್ಯಗತಗೊಳಿಸುವರು. ನಾನು ರೂಪುರೇಷೆಗಳನ್ನೆಲ್ಲಾ ನಿರೂಪಿಸಿ ಅದಕ್ಕಾಗಿ ನನ್ನ ಜೀವನವನ್ನೆ ಕೊಟ್ಟಿರುವೆನು'' ಎಂಬ ಸ್ವಾಮಿ ವಿವೇಕಾನಂದರ ಮಾತುಗಳನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ.

ಸ್ವಾಮಿ ವಿವೇಕಾನಂದರು ತಮ್ಮ ಸರ್ವಸ್ವವನ್ನು "ಭಾರತಾಂಬೆ''ಗೆ ಸಮರ್ಪಿಸಿ ಭಾರತದ ಸಂಪ್ರದಾಯ, ಪರಂಪರೆಯನ್ನು ಉಳಿಸಲು ಅರ್ಹನಿಷಿ ದುಡಿದ ಚೇತನ. ನಾವು ಇಂದು ಮಾಡಬೇಕಾದ ಮುಖ್ಯ ಕಾರ್ಯವೆಂದರೆ "ಮಾತೃಭೂಮಿ''ಯನ್ನು ರಕ್ಷಿಸುವುದು. ಮಾತೃಧರ್ಮ ರಕ್ಷಣೆಯ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮಲ್ಲಿಯೇ ಸಂಘಟನೆ ಇಲ್ಲ. ಪ್ರೀತಿ ವಿಶ್ವಾಸವಿಲ್ಲ. ನಮ್ಮಲ್ಲಿಯೇ ಒಡಕು, ದ್ವೇಷ, ಅಸೂಯೆ, ಈರ್ಷ್ಯೆ ಇವೆಲ್ಲಾ ತುಂಬಿರುವಾಗ ನಾವು ಹೇಗೆ ತಾನೆ ನಮ್ಮ ರಾಷ್ಟ್ರಧರ್ಮವನ್ನು ರಕ್ಷಿಸಲು ಸಾಧ್ಯ? ಇಂದು ನಾವು ಕಾಣುತ್ತಿರುವ ಭಾರತ ಏಕೆ ಪರಕೀಯರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ? ಎಲ್ಲಿ ಹೋಯಿತು ಆ ತೇಜಸ್ಸು, ಶಕ್ತಿ, ಸಿಂಹಸದೃಶ ಧ್ವನಿ? ಇದಕ್ಕೆ ಉತ್ತರ ಬೇರಾರೂ ನೀಡಬೇಕಿಲ್ಲ. ಉತ್ತರಿಸುವ ದಾಯಿತ್ವ ನಮ್ಮದೇ !

ಭಾರತೀಯರಿಗೆ ಇಂದು ಬೇಕಿರುವುದು, ಸ್ವಾಮಿ ವಿವೇಕಾನಂದರ ವಾಣಿಯಲ್ಲಿ ಹೇಳುವುದಾದರೆ, "ನನ್ನ ಸ್ವದೇಶವಾಸಿಗಳೇ, ಸ್ನೇಹಿತರೇ, ಮಕ್ಕಳೇ ನಮ್ಮ ರಾರ್ಷ್ಟ್ರನೌಕೆಯು ಭವಸಾಗರದ ಮೇಲೆ ಕೋಟ್ಯಂತರ ಜೀವಿಗಳನ್ನು ಪಾರುಗಾಣಿಸಿದೆ. ಹಲವು ಶತಾಬ್ದಿಗಳಿಂಧ ಕಡಲಿನ ಮೇಲೆ ಸಂಚರಿಸಿ ಕೋಟ್ಯಂತರ ಜೀವಿಗಳನ್ನು ಅಮೃತತ್ವದ ಕಡೆಗೆ ಒಯ್ದಿದೆ. ಇಂದು ಬಹುಶಃ ನಿಮ್ಮ ಅಜಾಗರೂಕತೆಯಿಂದಲೇ ಹಡಗು ಶಿಥಿಲವಾಗಿದೆ. ರಂಧ್ರ ಬಿದ್ದಿದೆ. ಇದನ್ನು ಈಗ ನಿಂದಿಸುವಿರಾ? ಪ್ರಪಂಚದಲ್ಲಿ ಎಲ್ಲಕ್ಕಿಂಥ ಮಹತ್ಕಾರ್ಯವನ್ನು ಸಾಧಿಸಿದ ಪವಿತ್ರತಮ ವಸ್ತುವಿನ ಮೇಲೆ ನಿಂದೆಯ ಬಾಣವನ್ನು ಕರೆಯುವುದು ತರವೇ? ಎಂದಿಗೂ ಮಾತೃಭೂಮಿಯನ್ನು ನಿಂದಿಸದಿರಿ. ಭಾರತಾಂಬೆಯೇ ನಮ್ಮ ಸರ್ವಸ್ವ ! ಈ ಮಾತೃಭಕ್ತಿಯನ್ನು ನಾವಿಂದು ಬೆಳೆಸಬೇಕಾಗಿದೆ. ನವಭಾರತವನ್ನು ನಿರ್ಮಾಣ ಮಾಡೋಣ''.


(ಕೃಪೆ - ಧ್ಯೇಯಕಮಲ)

 

Author : ಸ್ವಾಮಿ ಜಪಾನಂದ, ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ 

More Articles From Religion & Spirituality

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited