Untitled Document
Sign Up | Login    
ಆಂಗ್ಲ ವ್ಯಾಮೋಹ ಬೇಡ.. ಪರಿಣತಿ ಇರಲಿ..

ಇಪಿಐ ವರದಿ 2011

ಹಾಯ್ ಗುಡ್‌ಮಾರ್ನಿಂಗ್ ಕಿರಣ್..
ಹಾಯ್ ಗುಡ್ ಮಾರ್ನಿಂಗ್ ಉಮೇಶ್..
ಹೌ ಆರ್ ಯು ? ಹ್ಯಾಡ್ ಯುವರ್ ನಾಸ್ಟಾ ?
ಫೈನ್ ವಾಟ್ ಎಬೌಟ್ ಯು ?
ಯಾ.. ಹ್ಯಾಡ್… ಜಸ್ಟ್ ಕಾಲ್ಡ್ ರಿಗಾರ್ಡಿಂಗ್ ಬಿಸಿನೆಸ್ ಮ್ಯಾಟರ್…
ರೀ ಉಮೇಶ್ ನೀವು ಕನ್ನಡದವರಲ್ವಾ ? ಹೌದು… ಯಾಕೆ ? ಏನಿಲ್ಲ… ಹೀಗೆ ಕೇಳಿದೆ…
ಇವಿಷ್ಟು ಮಾತುಕತೆ ಕಿರಣ್ ಮತ್ತು ನನ್ನ ನಡುವಿನದು. ಈ ಘಟನೆ ಬಳಿಕ ಇಬ್ಬರೂ ಕನ್ನಡದಲ್ಲೇ ಮಾತನಾಡಲಾರಂಭಿಸಿದೆವು. ಕೆಲವು ದಿನಗಳ ಹಿಂದೆ ನಡೆದ ಘಟನೆ ಇದು. ಕೆಲಸದ ಒತ್ತಡದಲ್ಲಿ ಘಟನೆ ಮತ್ತೆ ನೆನಪಾಗಿದ್ದು ಮೊನ್ನೆ ಮೊನ್ನೆ ಸಾಹಿತ್ಯ ಸಮ್ಮೇಳನದ ವರದಿಗಳನ್ನು ನೋಡುತ್ತಿದ್ದಾಗವಷ್ಟೇ. ಯೋಚನಾ ಲಹರಿ ಹರಿಯತೊಡಗಿತ್ತು. ಇದಕ್ಕೆ ಸಂಬಂಧಿಸಿದ್ದು ಎನ್ನಬಹುದಾದ ಘಟನೆಗಳು ಒಂದೊಂದಾಗಿ ನೆನಪಾಗ ತೊಡಗಿತ್ತು.

ಮಲೆಯಾಳ ದಿನಪತ್ರಿಕೆಯೊಂದರ ಬೆಂಗಳೂರು ಕಚೇರಿಗೆ ಹೋಗಿದ್ದೆ. ಅಲ್ಲಿನ ಪತ್ರಕರ್ತ ಮಿತ್ರರ ಜೊತೆ ಪತ್ರಿಕೆಯ ಪ್ರಸಾರ ಸಂಖ್ಯೆ ಬಗ್ಗೆ ವಿಚಾರಿಸಿದೆ. ತಕ್ಷಣವೇ ಅವರು ನೀಡಿದ ಉತ್ತರ ಕೂಡಾ ಭಿನ್ನವಾಗಿರಲಿಲ್ಲ. ವರ್ಷದಿಂದ ವರ್ಷಕ್ಕೆ ಪತ್ರಿಕೆಗಳ ಪ್ರಸಾರ ಸಂಖ್ಯೆ ಕುಸಿಯುತ್ತಿದೆ. ಕೇರಳದಲ್ಲಿ ಪ್ರಸಾರ ಸಂಖ್ಯೆ ಹೆಚ್ಚಾಗಿದ್ದರೂ, ಕೇರಳದ ಹೊರಗಿನ ಮಲೆಯಾಳಿಗಳ ಮನೆಯಲ್ಲಿ ಇಂಗ್ಲಿಷ್ ಪತ್ರಿಕೆ ಹಾಕಿಸಿಕೊಳ್ಳುವುದು ಫ್ಯಾಶನ್. ಇನ್ನು ಮಕ್ಕಳಿಗೆ ಆಂಗ್ಲಭಾಷೆಯಲ್ಲೇ ಶಿಕ್ಷಣ. ಇನ್ನು ಪತ್ರಿಕೆಯ ಪ್ರಸಾರ ಸಂಖ್ಯೆ ಕುಸಿಯದೇ ಇರುತ್ತದೆಯೇ ? ಅನ್ನೋ ಉತ್ತರ ಅವರಿಂದ ಬಂತು. ಇಬ್ಬರಿಗೂ ಎದುರಾಗಿದ್ದು ಒಂದೇ ಪ್ರಶ್ನೆ. ಮಾತೃಭಾಷೆಯ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆಯೇ ? ಇಂಗ್ಲಿಷ್ ಪ್ರಾಮುಖ್ಯತೆ ಹೆಚ್ಚಾಗುತ್ತಿದೆಯೇ ? ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನಕ್ಕೆ ಒಂದಿಷ್ಟು ಚರ್ಚೆ ನಡೆಸಿದ್ದೂ ಆುತು.
ಕೊನೆಗೆ ಅಂತರ್ಜಾಲದಲ್ಲಿ ತಾಣಗಳನ್ನು ಜಾಲಾಡಿದಾಗ ಕಂಡ ಅಂಶಗಳು ನಿಜಕ್ಕೂ ಹುಬ್ಬೇರಿಸುವಂಥದ್ದು. ಸಾಮಾನ್ಯವಾಗಿ ಭಾರತ ಎಂದರೆ, ಹೆಚ್ಚಾಗಿ ಇಂಗ್ಲಿಷ್‌ನಲ್ಲೇ ವ್ಯವಹಾರ ನಡೆಸಬಹುದು ಅನ್ನೋ ನಿರ್ಧಾರಕ್ಕೆ ಭಾರತೀಯರಾದ ನಾವು ಬಂದು ಬಿಡುತ್ತೇವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ದೇಶದ ಯಾವುದೇ ಮೂಲೆಗೆ ಹೋದರೂ ಇಂಗ್ಲಿಷ್‌ನಲ್ಲಿ ಮಾತನಾಡುವವರು ಸಿಕ್ಕೇ ಸಿಗುತ್ತಾರೆ. ಏನಿಲ್ಲವೆಂದರೂ ಬಟ್ಲರ್ ಇಂಗ್ಲಿಷ್‌ನಲ್ಲಾದರೂ ಉತ್ತರ ಕೊಡುವ ಪ್ರಯತ್ನ ಮಾಡುತ್ತಾರೆ ಎಲ್ಲರೂ. ಆದರೆ, ವಾಸ್ತವ ಹಾಗಿದೆಯೇ ?

ಹೋಲಿಕೆ ಅಥವಾ ತುಲನೆ ಮಾಡಬೇಕಾಗಿ ಬಂದಾಗ ಸಮೀಪದ ಪ್ರತಿಸ್ಪರ್ಧಿಯ ಕಡೆಗೆ ನೋಡುತ್ತಾರೆ ಎಲ್ಲರೂ. ಹಾಗೆಯೇ ಭಾರತ ಎಂದಾಗ ನೆನಪಾಗೋದು ಚೀನಾ. ಜನಸಂಖ್ಯೆಯಿಂದ ಹಿಡಿದು ಅನೇಕ ವಿಚಾರದಲ್ಲಿ ತುಲನೆ ನಡೆಯುತ್ತಲೇ ಇದೆ. ಅಂತೆಯೇ ಇಂಗ್ಲಿಷ್ ವಿಚಾರದಲ್ಲೂ ಭಾರತಕ್ಕೆ ಚೀನಾ ದೇಶವೇ ಪ್ರತಿಸ್ಪರ್ಧಿ. ಆಶ್ಚರ್ಯವಾಗ್ತಿದೆಯಲ್ಲ.. ಆದ್ರೂ ನಂಬಲೇ ಬೇಕಾದ ಅಂಕಿ ಅಂಶವನ್ನು ಎಜುಕೇಶನ್ ಫಸ್ಟ್ – ಇಂಗ್ಲಿಷ್ ಪ್ರೊಫಿಯನ್ಸಿ ಇಂಡೆಕ್ಸ್ ಬಹಿರಂಗಗೊಳಿಸಿದೆ. ಇಲ್ಲಿ ಭಾರತವನ್ನು ಚೀನಾ ಹಿಂದಿಕ್ಕಿದೆ. ಎರಡೂ ದೇಶಗಳು ಲೋ ಪ್ರೊಫಿಯೆನ್ಸಿ ವಿಭಾಗದಲ್ಲಿದ್ದರೂ, ಚೀನಾ ೨೯ನೇ ಸ್ಥಾನದಲ್ಲಿದೆ. ಭಾರತ ೩೦ನೇ ಸ್ಥಾನದಲ್ಲಿದೆ. ಮಲೇಷ್ಯಾ ೯ನೇ ಸ್ಥಾನದಲ್ಲಿದ್ದು ಹೈ ಪ್ರೊಫಿಯೆನ್ಸಿ ಹೊಂದಿದೆ.

ಇಎಫ್ ಇಪಿಐನ ವರದಿ ಕಡೆ ಗಮನಹರಿಸಿದರೆ, ಒಂದು ಕಡೆ, ಭಾರತ ಯಾಕೆ ಹಿಂದೆ ಬಿತ್ತು ಅನ್ನೋ ಅಂಶ ಉಲ್ಲೇಖವಾಗಿದೆ. ಇಂಗ್ಲಿಷ್ ಭಾಷಾ ಪರಿಣತಿ ಸಂಬಂಧಿಸಿದ ಅಂಕಗಳನ್ನು ಗಮನಿಸದರೆ ತೋರಿಕೆಯ ಪ್ರತಿಷ್ಠೆ ಯಾವತ್ತೂ ಸರಿಯಾಗಿರಲ್ಲ ಅನ್ನೋದು ಸಾಬೀತಾಗಿದೆ. ಇದಕ್ಕೆ ಚೀನಾ ಮತ್ತು ಭಾರತದ ಉದಾಹರಣೆಯೇ ಸಾಕು. ಆಂಗ್ಲರು ಭಾರತವನ್ನು ಆಳಿದ್ದರೂ, ಭಾರತೀಯರು ಮೆಕಾಲೆ ಅನುಮೋದಿತ ಶಿಕ್ಷಣ ಪದ್ಧತಿಯನ್ನೇ ಮುಂದುವರಿಸಿದ್ದರೂ, ಇಂಗ್ಲಿಷ್ ಭಾಷಾ ಪರಿಣತಿಯಲ್ಲಿ ಹಿಂದೆಯೇ ಉಳಿದಿದ್ದಾರೆ. ಆದರೂ ಇಂಗ್ಲಿಷ್ ವ್ಯಾಮೋಹ ಬಿಟ್ಟಿಲ್ಲ.
ಇಷ್ಟೆಲ್ಲಾ ಆದ್ರೂ, ವರದಿಯಲ್ಲಿ ಇನ್ನೊಂದು ಅಂಶವನ್ನೂ ಉಲ್ಲೇಖಿಸಲಾಗಿದೆ. ಬ್ರಿಟಿಷ್ ಕೌನ್ಸಿಲ್ ೨೦೧೦ ನಡೆಸಿದ ಸಮೀಕ್ಷೆ ಪ್ರಕಾರ, ೫೫ ರಿಂದ ೨೫೦ ಮಿಲಿಯನ್ ಜನ ಆಂಗ್ಲಭಾಷೆ ಉಪಯೋಗಿಸುತ್ತಿದ್ದಾರೆ. ಇದೇ ವೇಳೆ ಕ್ಯಾಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ ನಡೆಸಿದ ಸಮೀಕ್ಷೆ ಪ್ರಕಾರ, ಚೀನಾದಲ್ಲಿ ೨೫೦ ರಿಂದ ೩೫೦ ಮಿಲಿಯನ್ ಜನ ಇಂಗ್ಲಿಷ್ ಕಲಿಯುತ್ತಿದ್ದಾರೆ. ಇದರ ಅರ್ಥ, ಚೀನಾದ ಜನ ಇನ್ನೂ ಕಲಿಕೆಯ ಹಂತದಲ್ಲಿದ್ದಾರೆ. ಆಗಲೇ, ಭಾಷಾ ಪರಿಣತಿ ವಿಚಾರದಲ್ಲಿ ಭಾರತವನ್ನು ಹಿಂದಿಕ್ಕಿರುವುದು ಜಾಗತಿಕ ಮಟ್ಟದಲ್ಲಿ ಒಂದು ಸಣ್ಣ ಅಚ್ಚರಿಯನ್ನು ಹುಟ್ಟಿಸಿದೆ.

ಆದರೂ ಒಂದು ಸಮಾಧಾನ. ಈ ವರದಿಗೆ ಬೆನ್ನೆಲುಬಾದ ಸಮೀಕ್ಷೆಯಲ್ಲಿ ಕೇವಲ ೨ ಮಿಲಿಯನ್ ಜನ ಮಾತ್ರ ಪಾಲ್ಗೊಂಡಿದ್ದರು. ಅದು ಕೂಡಾ ಆನ್‌ಲೈನ್ ಪರೀಕ್ಷೆಯನ್ನು ಕಳೆದ ಮೂರು ವರ್ಷ ನಡೆಸಿ ಸಿಕ್ಕ ಫಲಿತಾಂಶ ಇದು.

ಒಟ್ಟಿನಲ್ಲಿ ಭಾರತದ ಮಟ್ಟಿಗೆ ಹೇಳುವುದಾದರೆ, ಜಾಗತಿಕ ವ್ಯವಹಾರಕ್ಕಾಗಿ ಇಂಗ್ಲಿಷ್ ಭಾಷೆ ಬಳುಸುವುದು ಇದೀಗ ಅನಿವಾರ್ಯವಾಗಿದೆ. ಒಂದು ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ ಪರಿಣತಿ ಹೆಚ್ಚಿಸಿಕೊಳ್ಳಲು ನಮ್ಮ ದೇಶದಲ್ಲಿ ಸಾಕಷ್ಟು ಅವಕಾಶಗಳಿವೆ. ಭಾರತದಲ್ಲಿ ೧೫ ಸಾವಿರಕ್ಕೂ ಹೆಚ್ಚು ಆಂಗ್ಲ ಭಾಷೆ ಪತ್ರಿಕೆ, ೧೦೦ಕ್ಕೂ ಹೆಚ್ಚು ಇಂಗ್ಲಿಷ್ ಟಿವಿ ಚಾನೆಲ್‌ಗಳೇ ಇದಕ್ಕೆ ಸಾಕ್ಷಿ..

 

Author : ಉಮೇಶ್ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited