Untitled Document
Sign Up | Login    
ಲಾಲ್ ಬಾಗ್ ಪುಷ್ಪ ಪ್ರದರ್ಶನ ಡಬಲ್ ಸೆಂಚುರಿಗಿನ್ನು ಒಂದು ಬಾಕಿ!

lalbagh

ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರಸಿದ್ಧ ಬೊಟಾನಿಕಲ್ ಗಾರ್ಡನ್ ಲಾಲ್ ಬಾಗ್ ಎರಡು ವರ್ಷ ಹಿಂದಷ್ಟೇ ಶತಮಾನೋತ್ಸವ ಆಚರಿಸಿತ್ತು. ಇದೀಗ ಅಲ್ಲಿ ನಡೆಯುತ್ತಿರುವ ಪುಷ್ಪ ಪ್ರದರ್ಶನವೂ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸುವತ್ತ ಮುನ್ನಡೆದಿದೆ. ಹೌದು.. ಇದೀಗ 199ನೇ ಪುಷ್ಪ ಪ್ರದರ್ಶನ ಆರಂಭವಾಗಿದೆ. ಪ್ರತಿವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರಜಾಪ್ರಭುತ್ವ ದಿನಾಚರಣೆ ವೇಳೆ ಪುಷ್ಪ ಪ್ರದರ್ಶನ ಆಯೋಜಿಸುವ ಪರಿಪಾಠ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ.

ಇತಿಹಾಸ : ಮೊಟ್ಟ ಮೊದಲ ಪುಷ್ಪ ಪ್ರದರ್ಶನ 1840ರಲ್ಲಿ ನಡೆದಿತ್ತು. ಅಗ್ರಿ ಹಾರ್ಟಿಕಲ್ಚರ್ ಸೊಸೈಟಿ ಕಾರ್ಯದರ್ಶಿಯಾಗಿದ್ದ ವಿಲಿಯಂ ನ್ಯೂ ಅಂದು ಲಾಲ್ ಬಾಗ್ ನ ಸೂಪರ್ವೈಸರ್ ಆಗಿದ್ದರು. ಇದಾದ ಬಳಿಕ ಎರಡನೇ ಪುಷ್ಪ ಪ್ರದರ್ಶನ ಆಯೋಜನೆಗೊಂಡಿದ್ದು ಬರೋಬ್ಬರಿ 27 ವರ್ಷಗಳ ನಂತರ ಅಂದರೆ 1867ರಲ್ಲಿ. ಆ ಅವಧಿಯಲ್ಲಿ ಲಾಲ್ ಬಾಗ್ ನ ಕ್ಯುರೇಟರ್ ಆಗಿದ್ದವರು ಗಸ್ಟವ್ ಹರ್ಮನ್ ಕ್ರುಂಬಿಗಲ್. ಇವರು ಬಳಿಕ 1908-944ರ ಅವಧಿಯಲ್ಲಿ ಸುಪರಿಂಟೆಂಡೆಂಟ್ ಆಗಿ ಕೆಲಸ ನಿರ್ವಹಿಸಿದ್ದರು.

1947ರಿಂದೀಚೆಗೆ ಪ್ರತಿವರ್ಷ ಬೇಸಿಗೆ ಪುಷ್ಪ ಪ್ರದರ್ಶನವನ್ನು ಸ್ವಾತಂತ್ರ್ಯ ದಿನಾಚರಣೆ ಆಸುಪಾಸಿನಲ್ಲಿ ಮತ್ತು ಚಳಿಗಾಲದ ಪುಷ್ಪ ಪ್ರದರ್ಶನವನ್ನು ಪ್ರಜಾಪ್ರಭುತ್ವ ದಿನಾಚರಣೆ ಆಸುಪಾಸಿನಲ್ಲಿ ಮೈಸೂರು ಹಾರ್ಟಿಕಲ್ಚರ್ ಸೊಸೈಟಿ ನಡೆಸಿಕೊಂಡು ಬರುತ್ತಿದೆ. ಆರಂಭಿಕ ದಿನಗಳಲ್ಲಿ ಇದು ಅಷ್ಟೊಂದೇನೂ ಪ್ರಸಿದ್ಧಿ ಪಡೆದಿರಲಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಈ ಪುಷ್ಪ ಪ್ರದರ್ಶನದಿಂದ ಆಕರ್ಷಿತರಾದವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇಂದೀಗ ಈ ಪ್ರದರ್ಶನ ಬೃಹತ್ ಕಾರ್ಯಕ್ರಮವಾಗಿಯೇ ಬದಲಾಗಿದೆ. ಲಕ್ಷಾಂತರ ಜನ ಪ್ರದರ್ಶನ ವೀಕ್ಷಿಸಲಾರಂಭಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪುಷ್ಪ ಪ್ರದರ್ಶನಕ್ಕೆ ಆಗಮಿಸುವವರ ಸಂಖ್ಯೆ ಅಂದಾಜು 2 ಲಕ್ಷದಿಂದ 4 ಲಕ್ಷ ಎನ್ನಲಾಗಿದೆ.

ಲಾಲ್ ಬಾಗ್ ವ್ಯಾಪ್ತಿ : ಬೆಂಗಳೂರಿಗರ ಮನಸೆಳೆಯುತ್ತಿರುವ ಲಾಲ್ ಬಾಗ್ 240 ಎಕರೆ ವಿಸ್ತೀರ್ಣ ಹೊಂದಿದೆ. ಇದರಲ್ಲಿ 30 ಎಕರೆಯಷ್ಟು ಜಲಾಶಯ ವ್ಯಾಪಿಸಿದ್ದರೆ, 10 ಎಕರೆ ವ್ಯಾಪ್ತಿಯಲ್ಲಿ ಹಲವು ಸ್ಮಾರಕಗಳಿವೆ. ಇನ್ನೊಂದು 140 ಎಕರೆ ಪ್ರದೇಶದಲ್ಲಿ ಬೊಟಾನಿಕಲ್ ಗಾರ್ಡನ್ ನಿರ್ಮಿಸಲಾಗಿದೆ. ಲಾಲ್ ಬಾಗ್ ಒಳಗಿರುವ ಗಾಜಿನಮನೆಯಲ್ಲಿ ವಿವಿಧ ಆಕಾರದಲ್ಲಿ ಹೂಗಳನ್ನು ಅಲಂಕರಿಸಿ ಇರಿಸುವುದು ಪುಷ್ಪಪ್ರದರ್ಶನದಲ್ಲಿ ಇದುವರೆಗೆ ನಡೆದುಕೊಂಡುಬಂದ ವಾಡಿಕೆ. ಪ್ರತಿ ಪುಷ್ಪ ಪ್ರದರ್ಶನದ ವೇಳೆಯೂ ಒಂದೊಂದು ಥೀಮ್ ಆಧರಿಸಿ ಪುಷ್ಪಗಳ ಅಲಂಕಾರ ಮಾಡಲಾಗುತ್ತದೆ. ಇಂಥ ಪ್ರದರ್ಶನ ಏರ್ಪಡಿಸಿದಾಗ ಕಾನೂನು ಸುವ್ಯವಸ್ಥೆ ಪಾಲನೆಗಾಗಿ 150 ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತದೆ.

ಪುಷ್ಪ ಪ್ರದರ್ಶನದ ವೇಳೆ ಸ್ಟಾಲ್ ಗಳನ್ನು ಹಾಕುವುದಕ್ಕೆ ಅನುಮತಿ ನೀಡುವುದರಿಂದ, ನೋಡಲು ಬಂದವರಿಗೂ ಮತ್ತು ವ್ಯಾಪಾರಿಗಳಿಗೂ ಅನುಕೂಲ ಒದಗಿಸಿದಂತಾಗುತ್ತದೆ.. ಪ್ರತಿ ಪುಷ್ಪ ಪ್ರದರ್ಶನದ ವೇಳೆಯಲ್ಲಿ ಸುಮಾರು 60 ಸ್ಟಾಲ್ ಹಾಕುವುದಕ್ಕೆ ಅನುಮತಿ ನೀಡಲಾಗುತ್ತಿದೆ ಅದೇ ರೀತಿ ಲಾಲ್ ಬಾಗ್ ಗೂ ಆದಾಯ ಲಭಿಸಿದಂತಾಗುತ್ತದೆ ಎನ್ನುತ್ತಾರೆ ಲಾಲ್ ಬಾಗ್ ಗಾರ್ಡನ್ ಉಸ್ತುವಾರಿ ಗಮನಿಸುತ್ತಿರುವ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗುಣವಂತ್ ಜೆ.
ನಗರ ಜೀವನದ ಜಂಜಾಟದ ನಡುವೆ ಮನಸಿಗೊಂದಿಷ್ಟು ಮುದ ನೀಡುವುದು ಪುಷ್ಪಗಳು. ಲಾಲ್ ಬಾಗ್ ಅಂಥ ಪುಷ್ಪಗಳ ಸ್ವರ್ಗ. ವರ್ಷಕ್ಕೆರಡು ಬಾರಿ ಪುಷ್ಪ ಪ್ರದರ್ಶನ ಏರ್ಪಡಿಸುವ ಮೂಲಕ ಬೆಂಗಳೂರಿಗರ ಮನಸ್ಸಿಗೆ ಮುದ ನೀಡುವ ಕೆಲಸವನ್ನು ಲಾಲ್ ಬಾಗ್ ಮಾಡುತ್ತಿರುವುದು ಶ್ಲಾಘನೀಯ ಎನ್ನುತ್ತಾರೆ ಪ್ರತಿ ಪುಷ್ಪ ಪ್ರದರ್ಶನಕ್ಕೂ ಭೇಟಿ ನೀಡುವ ಜಯನಗರ ಕುಮಾರ್.

ಒಟ್ಟಿನಲ್ಲಿ ಲಾಲ್ ಬಾಗ್, ಅಲ್ಲಿನ ಪುಷ್ಪ ಪ್ರದರ್ಶನ ಎಲ್ಲವೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. 199ನೇ ಪುಷ್ಪ ಪ್ರದರ್ಶನ ಈಗ ನಡೆಯುತ್ತಿದ್ದು, ಮುಂದಿನ ಪ್ರದರ್ಶನವೇ 200ನೇಯದ್ದು. ಈ ಐತಿಹಾಸಿಕ ಪ್ರದರ್ಶನ ಸುದೀರ್ಘಕಾಲ ನಡೆಯಲಿ ಎಂಬುದೇ ಎಲ್ಲರ ಹಾರೈಕೆ.

 

Author : ಬೆಂಗಳೂರು ವೇವ್ಸ್ 

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited