Untitled Document
Sign Up | Login    
ಎಟಿಎಂ ಭದ್ರತೆಗೆ ವೆಚ್ಚದ ನೆಪವೇಕೆ?

ಸಾಂಕೇತಿಕ ಚಿತ್ರ

ಎರಡು ದಿನಗಳ ಹಿಂದೆ ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿತ್ತು ಬೆಂಗಳೂರಿನ ಕಾರ್ಪೊರೇಷನ್‌ ವೃತ್ತದ ಬಳಿ ನಡೆದ ಆ ಪ್ರಕರಣ.ಅಂದು ಬೆಳ್ಳಂಬೆಳಗ್ಗೆ ಹಣ ನಗದೀಕರಿಸಲು ಕಾರ್ಪೊರೇಷನ್‌ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ತೆರಳಿದ ಮಹಿಳೆಯ ಮೇಲೆ ಅನಾಮಿಕನೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ್ದ. ಆ ಮಹಿಳೆ ಕಾರ್ಪೊರೇಷನ್‌ ಬ್ಯಾಂಕಿನ ಉದ್ಯೋಗಿಯೂ ಹೌದು. ಘಟನೆ ನಡೆದ ಕಾರ್ಪೊರೇಷನ್‌ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ಅಂದು ಭದ್ರತಾ ಸಿಬ್ಬಂದಿ ಇರಲಿಲ್ಲ ಹೀಗಾಗಿ ಘಟನೆ ನಡೆದ ಸುಮಾರು ೩ ಗಂಟೆ ಬಳಿಕವಷ್ಟೇ ಎಟಿಎಂ ಕೇಂದ್ರದಿಂದ ಹೊರ ಹರಿದ ರಕ್ತವನ್ನು ಕಂಡು ಶಾಲಾ ಮಕ್ಕಳು ಪೊಲೀಸರ ಗಮನ ಸೆಳೆದಿದ್ದರು. ಹೀಗಾಗಿ ಸದ್ಯಕ್ಕೆ ಮಹಿಳೆಯ ಜೀವ ಉಳಿದಿದೆ. ಈ ಘಟನೆ ಬಳಿಕ ದೇಶಾದ್ಯಂತ ಇರುವ ಎಟಿಎಂಗಳ ಭದ್ರತಾ ವ್ಯವಸ್ಥೆ ಬಗ್ಗೆಯೇ ಚರ್ಚೆ ನಡೆಯುತ್ತಿದೆ.
ಎಷ್ಟೋ ಎಟಿಎಂ ಕೇಂದ್ರಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಿದ್ದಾರೆ. ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಆದರೂ ಇಂಥ ಘಟನೆ ಹೇಗಾಯಿತು ಎಂಬ ಪ್ರಶ್ನೆಯೂ ಎದ್ದಿದೆ. ಭದ್ರತೆ, ಸುರಕ್ಷತಾ ಕ್ರಮಗಳ ಅನುಷ್ಠಾನ ಎಡವಿರುವುದಾದರೂ ಎಲ್ಲಿ? ಬ್ಯಾಂಕ್‌ಗಳು ಮತ್ತು ಪೊಲೀಸರು ಸುರಕ್ಷಾ ಕ್ರಮಗಳ ಬಗ್ಗೆ ನಿಗಾವಹಿಸಿಲ್ಲವೇ ಹಾಗಾದರೆ?

ಎಟಿಎಂ ಕೇಂದ್ರಗಳೆಷ್ಟು?

ದೇಶಾದ್ಯಂತ ಒಟ್ಟು ೧.೨ ಲಕ್ಷದಷ್ಟು ಎಟಿಎಂ ಕೇಂದ್ರಗಳಿವೆ. ಕರ್ನಾಟಕದಲ್ಲಿ ಹೆಚ್ಚು ಕಡಿಮೆ ೧೦ಸಾವಿರದಷ್ಟು ಎಟಿಎಂ ಕೇಂದ್ರಗಳಿದ್ದು, ಬೆಂಗಳೂರು ಮಹಾನಗರವೊಂದರಲ್ಲೇ ೨೫೦೦ಕ್ಕೂ ಹೆಚ್ಚು ಎಟಿಎಂ ಕೇಂದ್ರಗಳಿವೆ. ಬಹುತೇಕ ಎಟಿಎಂಗಳೆಲ್ಲವೂ ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳದ್ದೇ ಆಗಿವೆ. ಇನ್ನು ಉಳಿದಂತೆ, ಬ್ಯಾಂಕೇತರ ಸಂಸ್ಥೆಗಳೂ ಹಿಂದುಳಿದ ಗ್ರಾಮೀಣ ಪ್ರದೇಶದಲ್ಲಿ ಎಟಿಎಂ ಸ್ಥಾಪನೆ ಮಾಡುವುದಕ್ಕೆ ಆರ್‌ಬಿಐ ಅವಕಾಶ ಒದಗಿಸಿದೆ. ಆರ್‌ಬಿಐ ಮಾಹಿತಿ ಪ್ರಕಾರ ಪ್ರತಿ ಎಟಿಎಂ ಯಂತ್ರದಲ್ಲಿ ಪ್ರತಿದಿನ ಸರಾಸರಿ ೧೬೭ ವಹಿವಾಟು(ಹಣ ನಗದೀಕರಣ) ನಡೆಯುತ್ತಿದ್ದು ೪.೮ ಲಕ್ಷ ರೂಪಾಯಿ ನಗದೀಕರಿಸಲ್ಪಡುತ್ತದೆ.

ಸಾಂಕೇತಿಕ ಚಿತ್ರ
ಎಟಿಎಂ ಇಂದಿನ ಅಗತ್ಯ

ಹಣ ನಗದೀಕರಿಸುವುದಕ್ಕೆ ಬ್ಯಾಂಕ್‌ಗಳಲ್ಲಿ ಗ್ರಾಹಕರು ಸರದಿ ನಿಲ್ಲುವುದನ್ನು ಎಟಿಎಂ ಯಂತ್ರಗಳು ತಪ್ಪಿಸಿವೆ. ಅಷ್ಟೇ ಅಲ್ಲ, ಸಣ್ಣ ಸಣ್ಣ ಪ್ರಮಾಣದ ಹಣ ನಗದೀಕರಣಕ್ಕೆ ಬ್ಯಾಂಕ್‌ ಸಿಬ್ಬಂದಿ ಒತ್ತಡ ಅನುಭವಿಸುವುದನ್ನೂ ಇದು ತಪ್ಪಿಸಿದೆ. ಇತ್ತೀಚೆಗೆ ಯುಟಿಲಿಟಿ ಬಿಲ್ ಪಾವತಿ, ಎಲ್‌ಐಸಿ ಪ್ರೀಮಿಯಂ, ಮೊಬೈಲ್‌ ರೀಚಾರ್ಜ್‌ ಮೊದಲಾದ ಕೆಲಸಗಳಿಗೂ ಎಟಿಎಂ ಬಳಕೆಯಾಗುತ್ತಿದೆ. ಆದರೆ, ಈ ಯಂತ್ರ ಸ್ಥಾಪನೆಗೆ ಬ್ಯಾಂಕ್‌ಗಳು ಆರಂಭಿಕ ಬಂಡವಾಳ ಹೂಡಲೇ ಬೇಕು.


ಭದ್ರತೆ, ಸುರಕ್ಷತೆ ವಿಷಯ

ಒಂದು ಯಂತ್ರಕ್ಕೆ ೩ರಿಂದ ೪ ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಅದರ ಸ್ಥಾಪನೆಗೆ ೨-೩ ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದಾದ ಬಳಿಕ ವಿದ್ಯುತ್‌ ಚಾರ್ಜ್‌, ಬಾಡಿಗೆ ಮತ್ತು ನಿರ್ವಹಣೆಗೆ ೧೦ಸಾವಿರದಿಂದ ೫೦ ಸಾವಿರ ರೂ.ಗಳ ತನಕ ವೆಚ್ಚವಾಗುತ್ತದೆ. ಇವುಗಳನ್ನು ಬ್ಯಾಂಕ್‌ಗಳೇ ಭರಿಸಬೇಕು. ಇದಲ್ಲದೇ ಸುರಕ್ಷತೆ ಮತ್ತು ಭದ್ರತೆಗಾಗಿ ಸಿಸಿಟಿವಿ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕ, ಎಟಿಎಂ ಕೇಂದ್ರದೊಳಗೆ ನೇರ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಎಟಿಎಂ ಕಾರ್ಡ್‌ ಬಾಗಿಲಿನ ಬಳಿ ‌ಸ್ವೈಪ್‌ ಮಾಡಿ ಒಳ ಹೋಗುವ ವ್ಯವಸ್ಥೆ ಎಲ್ಲವೂ ಇದೆ. ಈ ನಿಟ್ಟಿನಲ್ಲೂ ಹಲವು ಬ್ಯಾಂಕ್‌ಗಳು ಕ್ರಮಗಳನ್ನು ಅನುಷ್ಠಾನಕ್ಕೆ ತಂದಿವೆ.
ಎಡವಟ್ಟಾಗಿದ್ದೆಲ್ಲಿ?

ಬೆಂಗಳೂರಿನಲ್ಲಿರುವ ೨೫೦೦ಕ್ಕೂ ಅಧಿಕ ಎಟಿಎಂ ಕೇಂದ್ರಗಳ ಪೈಕಿ ೬೦೦ಕ್ಕೂ ಅಧಿಕ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ಇನ್ನು ಕೆಲವು ಎಟಿಎಂ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಿಲ್ಲ. ಇದು ಎಟಿಎಂ ದರೋಡೆ, ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುವುದಕ್ಕೆ ಅನುವು ಮಾಡಿಕೊಟ್ಟಂತಾಗಿದೆ. ಇತ್ತೀಚಿನ ಕೆಲವು ತಿಂಗಳಲ್ಲಿ ಬೆಂಗಳೂರಿನ ಹಲವೆಡೆ ಎಟಿಎಂ ಯಂತ್ರಗಳ ದರೋಡೆ ಯತ್ನದ ಸುದ್ದಿ ಪದೆಪದೇ ವರದಿಯಾಗಿತ್ತು. ಸಿಸಿಟಿವಿ ವ್ಯವಸ್ಥೆ, ಕಾರ್ಡ್‌ ಸ್ವೈಪ್ ಮಾಡಿ ಕೇಂದ್ರದೊಳಕ್ಕೆ ಹೋಗುವ ವ್ಯವಸ್ಥೆ ಇರುವಾಗ ಭದ್ರತಾ ಸಿಬ್ಬಂದಿ ಯಾಕೆ ಎಂಬ ಚಿಂತನೆಯೂ ಬ್ಯಾಂಕ್‌ಗಳ ಆಡಳಿತ ಮಂಡಳಿಯಲ್ಲಿರುವುದು ಸಮಸ್ಯೆಗೆ ಕಾರಣ. ಅಷ್ಟೇ ಅಲ್ಲ, ಇರುವಂತಹ ವ್ಯವಸ್ಥೆಯ ನಿರ್ವಹಣೆ ಸರಿಯಾಗಿಲ್ಲ. ಎಷ್ಟೋ ಎಟಿಎಂ ಕೇಂದ್ರಗಳಲ್ಲಿ ಕಾರ್ಡ್‌ ಸ್ವೈಪ್ ಮಾಡಿ ಒಳ ಹೋಗುವ ವ್ಯವಸ್ಥೆ ಇದ್ದರೂ ಅದು ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೆಡೆ ಸಿಸಿಟಿವಿಗಳೇ ಕೆಲಸ ಮಾಡುತ್ತಿಲ್ಲ.

ಮಾಡಬೇಕಾಗಿರುವುದೇನು?

ಎಟಿಎಂ ಯಂತ್ರಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಬೇಕು.
ಸಿಸಿಟಿವಿ ಸರಿಯಾಗಿ ದೃಶ್ಯಗಳನ್ನು ದಾಖಲಿಸುತ್ತಿದೆಯೇ ಎಂಬುದನ್ನು ವಾರಕ್ಕೊಮ್ಮೆಯಾದರೂ ಖಚಿತಪಡಿಸಿಕೊಳ್ಳಬೇಕು.
ಭದ್ರತಾ ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿಭಾಯಿಸುತ್ತಿದ್ದಾರಾ ಎಂಬುದನ್ನೂ ದೃಢೀಕರಿಸಿಕೊಳ್ಳಬೇಕು.
ಎಟಿಎಂ ಕೇಂದ್ರಗಳ ಬಾಗಿಲುಗಳಲ್ಲಿ ಅಳವಡಿಸಿರುವ ಕಾರ್ಡ್‌ ಸ್ವೈಪ್‌ ಮಾಡುವ ವ್ಯವಸ್ಥೆಯನ್ನೂ ಗಮನಿಸಬೇಕು.
ಹಣ ನಗದೀಕರಿಸಲು ಹೋಗುತ್ತಿರುವವರು ಸುತ್ತ ಮುತ್ತ, ಹಿಂದೆ ಮುಂದೆ ನಡೆಯುವ ವಿದ್ಯಮಾನಗಳನ್ನು ಗಮನಿಸಬೇಕು.

 

Author : ಶಿವಾನುಜ 

More Articles From General

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited