Untitled Document
Sign Up | Login    
ಕಾಫಿ ಬೆಳಗಾರರಿಗೆ ಕೀಟಗಳ ಹತೋಟಿಗೆ ಸಲಹೆ


ಕೀಟಗಳ ಹತೋಟಿ ಕ್ರಮಗಳ ಬಗ್ಗೆ ಕಾಫಿ ಬೆಳಗಾರರಿಗೆ ಇಲ್ಲದೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ.
ಕಾಫಿ ಬಿಳಿಕಾಂಡ ಕೊರಕ:-ಕಾಫಿ ಬೆಳೆಯುವ ಕೆಲವು ಪ್ರದೇಶಗಳಲ್ಲಿ ಸತತವಾಗಿ ಸುರಿದ ಮುಂಗಾರು ಮಳೆಯು ಬಿಡುವು ಕೊಟ್ಟಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಅಧಿಕವಾಗಿ ಸುರಿದ ಮಳೆಯಿಂದ ಕಾಫಿ ಕಾಂಡದ ಒಳಗಡೆ ಬೋರರ್ ಲಾರ್ವಗಳ ಚಟುವಟಿಕೆಯು ಕುಂಠಿತವಾಗಿದ್ದು, ಕೆಲವು ಸತ್ತು ಹೋಗಿರುತ್ತವೆ. ಕೀಟ ಪೀಡಿತ ಗಿಡಗಳನ್ನು ಗುರುತಿಸಿ ತೆಗೆಯಲು ಇದು ಸಕಾಲವಾಗಿರುತ್ತದೆ. ಪ್ರೌಢ ಕೀಟಗಳು ಈಗಾಗಲೇ ಕಾಂಡದಿಂದ ಹೊರಬರಲು ಸಿದ್ಧವಾಗಿರುವುದರಿಂದ ಕೀಟ ಪೀಡಿತ ಗಿಡಗಳನ್ನು ಗುರುತಿಸಿ ತೆಗೆದು ಕೂಡಲೇ ನಾಶ ಪಡಿಸಬೇಕು.

ಇದರಿಂದ ಪ್ರೌಢ ಕೀಟಗಳಿಂದ ಕಾಫಿ ಗಿಡಗಳಿಗೆ ಉಂಟಾಗಬಹುದಾದ ಸಂಭಾವಿತ ಹಾನಿಯನ್ನು ತಪ್ಪಿಸಬಹುದು. ಅಲ್ಲದೆ ಈ ತಿಂಗಳ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ತಿಂಗಳ ಮೊದಲನೆ ವಾರದಲ್ಲಿ ಮೋಹಕ ಬಲೆಗಳನ್ನು (ಫೆರಮೋನ್ ಟ್ರಾಪ್ಸ್) ಅಳವಡಿಸಬಹುದು. ಈ ಮೋಹಕ ಬಲೆಗಳು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ದೊರಕುತ್ತವೆ. ಆಸಕ್ತಿಯುಳ್ಳ ಬೆಳೆಗಾರರು ಸ್ಥಳೀಯ ವಿಸ್ತರಣಾ ವಿಭಾಗದ ಸಂಪರ್ಕಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅವಶ್ಯಕವಾದ ಮೋಹಕ ಬಲೆಗಳಿಗೆ ಬೇಡಿಕೆಯನ್ನು ಸಲ್ಲಿಸಬಹುದು. ಎಕರೆಯೊಂದಕ್ಕೆ 1೦ ಮೋಹಕ ಬಲೆಗಳನ್ನು (ಫೆರಮೋನ್ ಟ್ರಾಪ್ಸ್) ಅಳವಡಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಕಾಫಿ ಕಾಯಿಕೊರಕ:-ಅಧಿಕವಾದ ಮಳೆಯಿಂದಾಗಿ ಕಾಫಿ ಕಾಯಿಕೊರಕದ ಚಟುವಟಿಕೆಯು ಸಾಕಷ್ಟು ಕುಂಠಿತವಾಗಿರುತ್ತದೆ. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಗಿಡಗಳಲ್ಲಿ ಉಳಿದಿರುವ ಹಾಗೂ ಅಕಾಲಿಕ ಕಾಫಿ ಹಣ್ಣುಗಳಲ್ಲಿರುವ ಕೀಟಗಳ ಹರಡುವಿಕೆ ಪ್ರಾರಂಭವಾಗುತ್ತದೆ. ಆದುದರಿಂದ ಈ ತಿಂಗಳಿಂದ ತೋಟದಲ್ಲಿ ಬ್ರೋಕೋ ಟ್ರ್ಯಾಪ್‌ಗಳನ್ನು ಅಳವಡಿಸುವುದರಿಂದ ಕೀಟದ ವಲಸೆಯನ್ನು ತಪ್ಪಿಸಬಹುದು. ಈ ರೀತಿ ಅಳವಡಿಸಿದ ಬ್ರೋಕೋ ಟ್ರ್ಯಾಪ್‌ಗಳನ್ನು ಮುಂದಿನ ಹೂ ಮಳೆ, ಹಿಮ್ಮಳೆ ಬರುವವರೆಗೂ ನಿರ್ವಹಿಸುವುದರಿಂದ ಕಾಫಿ ಕಾಯಿಕೊರಕ ಕೀಟಗೋಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಕಾಫಿ ಹಣ್ಣಿನ ಕೊಯಿಲಿನ ಸಂದರ್ಭದಲ್ಲಿ ಕಾಫಿ ಕಣದ ಸುತ್ತಲೂ ಬ್ರೋಕೋ ಟ್ರ್ಯಾಪ್‌ಗಳನ್ನು ಅಳವಡಿಸಬೇಕು. ಈ ಬ್ರೋಕೋ ಟ್ರ್ಯಾಪ್‌ಗಳು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಬಾಳೆಹೊನ್ನೂರು ಮತ್ತು ಕಾಫಿ ಸಂಶೋಧನಾ ಪ್ರಾಂತೀಯ ಸಂಸ್ಥೆ, ಚೆಟ್ಟಳ್ಳಿಯಲ್ಲಿ ದೊರಕುತ್ತವೆ. ಪ್ರತಿ ಟ್ರ್ಯಾಫ್ ಒಂದರ ಬೆಲೆಯು ( 1೦ ಮಿ.ಲೀ.ಲ್ಯೂರ್ ನೊಂದಿಗೆ) ರೂ.12 ಆಗಿರುತ್ತದೆ. ಈ ಟ್ರ್ಯಾಪ್‌ಗಳನ್ನು 25೦ ಮಿ.ಲೀ.ಲ್ಯೂರ್‌ನೊಂದಿಗೆ 25 ಟ್ರ್ಯಾಪ್‌ಗಳ ಸೆಟ್‌ನಲ್ಲಿ ರೂ.3೦೦/-ಕ್ಕೆ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಈ ಲ್ಯೂರ್ ಪದಾರ್ಥವು ಪ್ರತ್ಯೇಕವಾಗಿ ಲೀಟರೊಂದಕ್ಕೆ ರೂ.೧೦೦/-ಕ್ಕೆ ಸಿಗುತ್ತದೆ. ಕಣದ ಸುತ್ತಲಿನ ಗಿಡಗಳಿಂದ ಕುಯಿಲನ್ನು ಕೊನೆಯಲ್ಲಿ ಮಾಡಬೇಕು.

ಆದಾಗ್ಯೂ ಹಣ್ಣು ಕಾಫಿಯನ್ನು ಆಗಿಂದ್ದಾಗಲೇ ಕುಯಿಲು ಮಾಡಬೇಕು. ಕುಯಿಲು ಮಾಡುವಾಗ ತಾಟುಗಳನ್ನು (ಕುಯಿಲು ಚಾಪೆ) ಬಳಸುವುದು ತುಂಬಾ ಸೂಕ್ತವಾಗಿರುತ್ತದೆ. ಇದರೊಟ್ಟಿಗೆ ಬೆಳೆದಿರುವ ಕಳೆಗಳನ್ನು ಸ್ವಚ್ಚವಾಗಿ ತೆಗೆಯುವುದರಿಂದ ಹನಕಲುಗಳನ್ನು ಹೆರಕಲು ತುಂಬಾ ಸಹಕಾರಿಯಾಗುತ್ತದೆ. ಕುಯಿಲು ಮಾಡುವಾಗ ಯಾವುದೇ ಕಾಫಿಯು ಗಿಡದಲ್ಲಿ ಉಳಿಯದಂತೆ ಎಚ್ಚರಿಕೆ ವಹಿಸಬೇಕು. ಕಾಯಿ ಹಣ್ಣಾದ ಕೂಡಲೇ ಯಾವುದೇ ವಿಳಂಬವಿಲ್ಲದೆ ಕುಯಿಲು ಮಾಡಬೇಕು. ಕುಯಿಲು ಮಾಡುವುದು ವಿಳಂಬವಾದಲ್ಲಿ ಕಾಯಿಕೊರಕದ ಹಾನಿಯ ತೀವ್ರತೆ ಹೆಚ್ಚಾಗುತ್ತದೆ.

 

Author : ಚಂದ್ರಲೇಖಾ ರಾಕೇಶ್

More Articles From Agriculture & Environment

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited